ಮಲಬದ್ಧತೆ, ಪಿತ್ತ ಓಡಿಸುವ Kokum ಸಾರು!

By Web DeskFirst Published Aug 20, 2019, 4:10 PM IST
Highlights

ಪುನರ್ಪುಳಿ ಅಡಿಗೆಗಳು ರುಚಿಕರವಷ್ಟೇ ಅಲ್ಲ, ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಕೂಡಾ. ಮಾಡಲು ಸುಲಭವಾದ ಎರಡು ರುಚಿಕರ ಪುನರ್ಪುಳಿ ರೆಸಿಪಿಗಳನ್ನಿಲ್ಲಿ ನೀಡಲಾಗಿದೆ. 

ಪುನರ್ಪುಳಿ ಸಾರು ಉಡುಪಿ ಹಾಗೂ ಮಲೆನಾಡು ಭಾಗಗಳಲ್ಲಿ ಜನಪ್ರಿಯ ಅಡಿಗೆ. ತಾಜಾ ಹಾಗೂ ಒಣರೂಪದಲ್ಲಿ ದೊರೆಯುವ ಪುನರ್ಪುಳಿಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಮಲಬದ್ಧತೆ, ಅಜೀರ್ಣ, ಸಂಕಟ, ಪಿತ್ತ, ಮಾರ್ನಿಂಗ್ ಸಿಕ್‌ನೆಸ್, ಶೀತ ಮುಂತಾದ ಸಮಸ್ಯೆಗಳಿಗೆ ತಕ್ಷಣ ರಿಲೀಫ್ ನೀಡುತ್ತದೆ ಪುನರ್ಪುಳಿ.

ಇಂಥ ಸಂದರ್ಭದಲ್ಲಿ ಫಟಾಫಟ್ ಎಂದು ಪುನರ್ಪುಳಿ ಶರಬತ್ತು ಮಾಡಿ ಕುಡಿಯಲಾಗುತ್ತದೆ. ಒಣ ಕೋಕಂನ್ನು ವರ್ಷಗಳ ಕಾಲ ಇಟ್ಟುಕೊಂಡರೂ ಕೆಡುವುದಿಲ್ಲ. ಇದರ ಸಾರು ಹುಳಿ ಹುಳಿ, ಖಾರ, ಸಿಹಿಸಿಹಿಯಾಗಿ ನಾಲಿಗೆಯ ಚಪಲಕ್ಕೆ ಒದಗುತ್ತದೆ.  ರುಚಿ ಹಾಗೂ ಆರೋಗ್ಯ ಎರಡಕ್ಕೂ ಸೈ ಎನಿಸಿಕೊಂಡ ಪುನರ್ಪುಳಿ ಸಾರು ಮಾಡುವುದು ಹೇಗೆ ನೋಡೋಣ.

ಪುನರ್ಪುಳಿ ಸಾರು

ತಯಾರಿ ಸಮಯ- 30 ನಿಮಿಷ

ಕುಕಿಂಗ್ ಸಮಯ- 15 ನಿಮಿಷ

ಸರ್ವಿಂಗ್ಸ್- 3

ಬೇಕಾಗುವ ಸಾಮಗ್ರಿಗಳು:

-4 ಒಣ ಪುನರ್ಪುಳಿ ಅಥವಾ ಅರ್ಧ ಕಪ್ ಕೋಕಂ ಸಿರಪ್

- 2 ಚಮಚ ಕರಿಮೆಣಸಿನ ಕಾಳಿನ ಪುಡಿ (ಇದು ಶೀತಕ್ಕೆ ಒಳ್ಳೆಯದು)

- 1 ಚಮಚ ತುಪ್ಪ

- ಅರ್ಧ ಚಮಚ ಬೆಲ್ಲ

- ಅರ್ಧ ಚಮಚ ಜೀರಿಗೆ

- 1 ಹಸಿಮೆಣಸು

- 10 ಕರಿಬೇವು

- 2 ಚಮಚ ಕೊತ್ತಂಬರಿ ಸೊಪ್ಪು

- ನೀರು

- ಉಪ್ಪು

ಮಾಡುವ ವಿಧಾನ: 

1. ಪುನರ್ಪುಳಿಯನ್ನು ಅರ್ಧ ಗಂಟೆಗಳ ಕಾಲ 1 ಕಪ್ ಬಿಸಿನೀರಿನಲ್ಲಿ ನೆನೆಸಿಡಿ. ಅದು ಮೆತ್ತಗಾದ ಬಳಿಕ ಚೆನ್ನಾಗಿ ಹಿಂಡಿ ರಸ ತೆಗೆಯಿರಿ. 

2. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಹಾಕಿ. ಅದು ಸಿಡಿಯುತ್ತಿದ್ದಂತೆಯೇ ಪುನರ್ಪುಳಿ ರಸವನ್ನು ಬಾಣಲೆಗೆ ಸುರಿದುಬಿಡಿ.

3. ಇನ್ನೊಂದು ಲೋಟ ನೀರು, ಉಪ್ಪು, ಹಸಿಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ. 

4. ಈ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. ಅರ್ಧ ಚಮಚ ಬೆಲ್ಲ ಸೇರಿಸಿ ಮಿಕ್ಸ್ ಮಾಡಿ.

5. ಮೇಲಿನಿಂದ ಕೊತ್ತಂಬರಿ ಸೊಪ್ಪು ಹಾಗೂ ಪೆಪ್ಪರ್ ಪೌಡರ್ ಹಾಕಿ ಗೊಟಾಯಿಸಿ ಇನ್ನೊಂದು ರೌಂಡ್ ಕುದಿಸಿ. 

6. ಬಿಸಿಯಿದ್ದಾಗಲೇ ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನಿ ಇಲ್ಲವೇ ಲೋಟಕ್ಕೆ ಹಾಕಿ ಕುಡಿದರೂ ಚೆನ್ನಾಗಿರುತ್ತದೆ. 

ರಸಂ ಸ್ವಲ್ಪ ಹುಳಿ ಇದ್ದರೆ ಇಷ್ಟವಾಗುತ್ತದೆ ಎನ್ನುವವರು ಸ್ವಲ್ಪ ಹುಣಸೆರಸ ಸೇರಿಸಬಹುದು. 

ಮುರುಗನ ಹುಳಿ ಎಂದರೆ ಮೂಗು ಮುರಿ ಬೇಡಿ, ಹಲವು ಕಾಯಿಲೆಗಳಿಗೆ ಮದ್ದಿದು

ಕೋಕಂ ಕಡಿ

ಕೊಂಕಣ, ಪುಣೆ ಹಾಗೂ ಗೋವಾದ ಜನಪ್ರಿಯ ಅಡಿಗೆ ಪದಾರ್ಥ ಕೋಕಂ ಕಡಿ. ಮಾಡುವುದು ಸುಲಭ, ತಿನ್ನಲು ಬಲು ರುಚಿ. ಸಂಪೂರ್ಣ ಕೊಲೆಸ್ಟೆರಾಲ್ ರಹಿತವಾದ ಕೋಕಂನಲ್ಲಿ ಫೈಬರ್ ಅಧಿಕ. ಆದ್ದರಿಂದ ಇದು ಹೃದಯಕ್ಕೂ ಒಳ್ಳೆಯದು.

ತಯಾರಿ ಸಮಯ: 30 ನಿಮಿಷ

ಕುಕಿಂಗ್ ಟೈಂ: 5 ನಿಮಿಷ

ಸರ್ವಿಂಗ್ಸ್: 4

ಬೇಕಾಗುವ ಸಾಮಗ್ರಿಗಳು: 

- 8 ಪುನರ್ಪುಳಿ

- 2 ಕಪ್ ನೀರು

- 2 ಚಮಚ ಎಣ್ಣೆ

- 1 ಚಮಚ ಜೀರಿಗೆ

- 10 ಕರಿಬೇವಿನ ಎಲೆಗಳು

- 3 ಬೆಳ್ಳುಳ್ಳಿ ಎಸಳು ಸಣ್ಣಗೆ ಹೆಚ್ಚಿದ್ದು

- 2 ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು

- 2 ಕಪ್ ದಪ್ಪ ಕಾಯಿಹಾಲು

- ಉಪ್ಪು

- ಕಾಲು ಚಮಚ ಪೆಪ್ಪರ್

- ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: 

1. ಮೊದಲಿಗೆ ಅರ್ಧ ಗಂಟೆಗಳ ಕಾಲ ಪುನರ್ಪುಳಿಯನ್ನು ಬಿಸಿನೀರಿನಲ್ಲಿ ನೆನೆಸಿಡಿ. ನಂತರ ರಸ ಹಿಂಡಿ ತೆಗೆದು ಬದಿಗಿಡಿ.

2. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ ಸಿಡಿಸಿ. ಇದಕ್ಕೆ ಕರಿಬೇವಿನ ಎಲೆಗಳು, ಬೆಳ್ಳುಳ್ಳಿ ಹಾಗೂ ಹಸಿಮೆಣಸು ಸೇರಿಸಿ. ಚೆನ್ನಾಗಿ ಹುರಿಯಿರಿ. 

3. ಇದಕ್ಕೆ ಕೋಕಂ ರಸವನ್ನು ಹಾಕಿ ಕುದಿಯಲು ಬಿಡಿ.

4. ನಂತರ ಕಾಯಿಹಾಲನ್ನು ಸೇರಿಸಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ ಉಪ್ಪು ಸೇರಿಸಿ. ಮತ್ತೆರಡು ನಿಮಿಷ ಕುದಿಸಿ.

5. ಇದಕ್ಕೆ ಕೊತ್ತಂಬರಿ ಸೊಪ್ಪು, ಪೆಪ್ಪರ್ ಪೌಡರ್ ಹಾಕಿ ಮಿಕ್ಸ್ ಮಾಡಿ. ಅನ್ನದೊಂದಿಗೆ ಕಲೆಸಿ ತಿನ್ನಲು ಇದು ಬಹಳ ರುಚಿಯಾಗಿರುತ್ತದೆ. 


 

click me!