ದವಡೆಯಲ್ಲಿ ಹುಟ್ಟುವ ಮೂರನೇ ದವಡೆ ಹಲ್ಲುಗಳಿಗೆ ಸಾಮಾನ್ಯವಾಗಿ ವಿವೇಕದ ಹಲ್ಲು ಅರ್ಥಾತ್ ವಿಸ್ಡಮ್ ಟೂತ್ ಎಂದು ಹೆಸರು. ಈ ಹಲ್ಲು 17 ರಿಂದ 21 ವರ್ಷಗಳ ನಡುವೆ ಮೂಡುತ್ತದೆ. ಬುದ್ಧಿಶಕ್ತು ಅಥವಾ ವಿವೇಕ ಮೂಡುವ ಸಮಯದಲ್ಲಿ ಈ ಮೂರನೇ ದವಡೆ ಹಲ್ಲು ಹುಟ್ಟುವುದರಿಂದ ಇದಕ್ಕೆ ವಿವೇಕದ ಹಲ್ಲು ಎಂಬ ಅನ್ವರ್ಥನಾಮ.ಆದರೆ ಹಲ್ಲಿಗೂ ಬುದ್ಧಿವಂತಿಕೆಗೂ ಸಂಬಂಧವಿಲ್ಲ.
- ಡಾ. ಮುರಳಿ ಮೋಹನ ಚೂಂತಾರು
ದವಡೆಯಲ್ಲಿ ಹುಟ್ಟುವ ಮೂರನೇ ದವಡೆ ಹಲ್ಲುಗಳಿಗೆ ಸಾಮಾನ್ಯವಾಗಿ ವಿವೇಕದ ಹಲ್ಲು ಅರ್ಥಾತ್ ವಿಸ್ಡಮ್ ಟೂತ್ ಎಂದು ಹೆಸರು. ಈ ಹಲ್ಲು 17 ರಿಂದ 21 ವರ್ಷಗಳ ನಡುವೆ ಮೂಡುತ್ತದೆ. ಬುದ್ಧಿಶಕ್ತು ಅಥವಾ ವಿವೇಕ ಮೂಡುವ ಸಮಯದಲ್ಲಿ ಈ ಮೂರನೇ ದವಡೆ ಹಲ್ಲು ಹುಟ್ಟುವುದರಿಂದ ಇದಕ್ಕೆ ವಿವೇಕದ ಹಲ್ಲು ಎಂಬ ಅನ್ವರ್ಥನಾಮ.ಆದರೆ ಹಲ್ಲಿಗೂ ಬುದ್ಧಿವಂತಿಕೆಗೂ ಸಂಬಂಧವಿಲ್ಲ.
ಪೂರ್ವಜರು ಸೇವಿಸುತ್ತಿದ್ದ ನಾರುಯುಕ್ತ, ಗೆಡ್ಡೆಗೆಣಸು ಮತ್ತು ಕಚ್ಚಾ ಪದಾರ್ಥಗಳು ಹಲ್ಲು ಮತ್ತು ದವಡೆಗಳ ಬೆಳವಣಿಗೆಗೆ ಸಹಕಾರಿಯಾಗಿರುತ್ತಿತ್ತು. ದವಡೆಗಳು ಪರಿಪೂರ್ಣ ಬೆಳವಣಿಗೆ ಹೊಂದಿ, ಮೂರನೇ ದವಡೆ ಹಲ್ಲು ಬರಲು ಸಾಕಷ್ಟು ಜಾಗ ದವಡೆಯೊಳಗೆ ನಿರ್ಮಾಣವಾಗುತ್ತಿತ್ತು.ಆ ಕಾರಣದಿಂದಲೇ ಹಿಂದಿನ ಕಾಲದಲ್ಲಿ ದವಡೆ ಹಲ್ಲು ಮೂಡುವಾಗ, ನೋವು ಉಂಟಾಗುತ್ತಿರಲಿಲ್ಲ. ಆದರೆ ಇಂದಿನ ಜೀವನಶೈಲಿ ದವಡೆಯ ಬೆಳವಣಿಗೆಗೆ ಪೂರಕವಾಗಿಲ್ಲ. ಇದರಿಂದ ಮೂರನೇ ದವಡೆ ಹಲ್ಲು ಮೂಡುವ ಸಮಯದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತೆ. ನಮ್ಮ ಪೂರ್ವಜರಿಗೆ 32 ಹಲ್ಲು ಸರಿಯಾಗಿ ಮೂಡಿ ಬರುತ್ತಿತ್ತು. ಆದರೆ ಈಗಿನ ಜನಾಂಗದ ಮಕ್ಕಳಿಗೆ ಕೇವಲ 28 ಹಲ್ಲು ಬರುತ್ತಿದೆ. ನಾಲ್ಕು ಮೂರನೇ ದವಡೆ ಹಲ್ಲು (ಎರಡು ಮೇಲಿನ ದವಡೆಯಲ್ಲಿ ಮತ್ತುಎರಡು ಕೆಳಗಿನ ದವಡೆಯಲ್ಲಿ) ಈಗೀಗ ಯುವಜನರಲ್ಲಿ ಮೂಡುವುದೇ ಇಲ್ಲ.
ವಿಸ್ಡಮ್ ಹಲ್ಲಿನ ಸಮಸ್ಯೆಗೆ ಕಾರಣ
1 ದವಡೆಯ ಬೆಳವಣಿಗೆ ಕಡಿಮೆ ಇದ್ದಲ್ಲಿ ಅಥವಾ ಮುಂದಿನ ಹಲ್ಲುಗಳ ಬೆಳವಣಿಗೆ ಹೆಚ್ಚಿದ್ದು ಆ ಸ್ಥಾನದಲ್ಲಿ ವ್ಯತ್ಯಾಸವಾಗುವುದರಿಂದ ಬುದ್ದಿ ಹಲ್ಲು ಹುಟ್ಟದಿರಬಹುದು. ಹುಟ್ಟಿದರೂ ವಕ್ರವಾಗಿ ಬೆಳೆಯಬಹುದು.
2 ಹಲ್ಲು ದವಡೆಯ ಮೂಳೆಯೊಳಗೆ ಭದ್ರವಾಗಿ ಸೇರಿಕೊಂಡಿರಬಹುದು.ದವಡೆ ಬೆಳವಣಿಗೆ ಅಸಮರ್ಥವಾಗಿರುವುದೇ ಇದಕ್ಕೆ ಮೂಲ ಕಾರಣ.ಈ ರೀತಿ ಬೆಳವಣಿಗೆ ಹೆಚ್ಚಾಗಿ ಮೇಲ್ದವಡೆಗಿಂತ ಕೆಳಗಿನ ದವಡೆಯಲ್ಲಿ ಕಂಡು ಬರುತ್ತದೆ.ಈ ರೀತಿ ಅಡ್ಡವಾಗಿ ಹುಟ್ಟಿದ ಉಳಿದ ದಂತ ಪಂಕ್ತಿಯ ಮಟ್ಟಕ್ಕೆ ಸಮನಾಗಿ ಇರದಿರುವುದರಿಂದ ಆ ಹಲ್ಲಿನ ಮೇಲಿರುವ ವಸಡು ಮತ್ತು ಹಲ್ಲಿನ ಕಿರೀಟದ ನಡುವೆ ಜಾಗವುಂಟಾಗಿ,ಅಲ್ಲಿ ಆಹಾರ ಪದಾರ್ಥ ಸೇರಿಕೊಂಡು ಕೊಳೆಯಬಹುದು ಅಥವಾ ಬಾಯಿ ವಾಸನೆ ಬರಬಹುದು.ಇಂತಹ ಜಾಗದಲ್ಲಿ ಬ್ಯಾಕ್ಟೀರಿಯಗಳು ಸೇರಿಕೊಂಡು ಅವುಗಳ ಸಂಖ್ಯೆ ವರ್ಧಿಸಿ ಕೀವು
ತುಂಬಿಕೊಳ್ಳಬಹುದು.ಈ ಹಂತದಲ್ಲಿ ರೋಗಿಗಳಿಗೆ ವಿಪರೀತ ಹಲ್ಲು ನೋವು, ಬಾಯಿ ತೆರೆಯಲಾಗದಂತ ಸ್ಥಿತಿ ಮತ್ತು ಜ್ವರ ಬರುವ ಸಾಧ್ಯತೆಯೂ ಇದೆ.ಈ ಸ್ಥಿತಿಯನ್ನು ದಂತ ವೈದ್ಯಕೀಯ ಭಾಷೆಯಲ್ಲಿ ಪೆರಿಕೊರನೈಟಿಸ್ ಎನ್ನುತ್ತಾರೆ. ಈ ಹಂತದಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕ ಮೂರನೇ ದವಡೆ ಹಲ್ಲನ್ನು ತೆಗೆಸಿಕೊಳ್ಳಬೇಕು.
3 ಮೂರನೇ ದವಡೆ ಹಲ್ಲಿನಿಂದ ಉಂಟಾಗುವ ರೋಗವನ್ನು ನಿರ್ಲಕ್ಷಿಸಿದರೆ ಕೆಳಗಿನ ದವಡೆಯ ಮೂಳೆಗಳಿಗೆ ಅಥವಾ ಗಂಟಲಿನ ಪದರಗಳಿಗೆ ಕೀವು ಹರಡಿ ಬಾವು ಉಂಟಾಗಬಹುದು. ಈ ಹಂತದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಮಾರಣಾಂತಿಕ ಪರಿಣಾಮ ಉಂಟಾಗುತ್ತದೆ.
4.ದವಡೆಯ ಒಳಗೆ ಹುದುಗಿಸಿಕೊಂಡ ಹಲ್ಲು, ದವಡೆಯ ಒಳಗಿನ ನರಗಳ ಮೇಲೆ ಒತ್ತಡ ಉಂಟು ಮಾಡಬಹುದು. ಕಿವಿನೋವು, ಕುತ್ತಿಗೆ ನೋವು, ತಲೆನೋವಿಗೆ ಕಾರಣವಾಗಬಹುದು. ಎರಡನೇ ದವಡೆ ಹಲ್ಲಿನ ಹಿಂಭಾಗಕ್ಕೆ ಹಾನಿ ಮಾಡಿ, ದಂತಕ್ಷಯ ಉಂಟಾಗಬಹುದು.
5 ಕೆಲವೊಮ್ಮೆ ಹುದುಗಿಹೋದ ದವಡೆಹಲ್ಲುಗಳ ಸುತ್ತ ಮಾಂಸದಗಡ್ಡೆ ಬೆಳೆದು ದವಡೆ ಕರಗಿ ದವಡೆ ಮುರಿತವಾಗುತ್ತದೆ. ಇದನ್ನು ಶಸ್ತ್ರ ಚಿಕಿತ್ಸೆಯಿಂದ ತೆಗೆಸಬೇಕಾಗಬಹುದು.
ಒಟ್ಟಿನಲ್ಲಿ ಮೂರನೇ ದವಡೆ ಹಲ್ಲು ಅಥವಾ ವಿವೇಕದ ಹಲ್ಲನ್ನು ಸೂಕ್ತ ಸಮಯದಲ್ಲಿ ತೆಗೆಸಿಕೊಳ್ಳುವುದೇ ವಿವೇಕವಂತರ ಲಕ್ಷಣ ಎಂದರೂ ತಪ್ಪಲ್ಲ. ಇದರಿಂದ ಬುದ್ಧಿ, ವಿವೇಕ ಕಡಿಮೆ ಯಾಗುತ್ತವೆ ಅನ್ನೋದೆಲ್ಲ ಮೂಢನಂಬಿಕೆ.