
ಬೆಂಗಳೂರು (ಮಾ. 12): ನಮ್ಮ ಮಹಿಳೆಯರಿಗೆ ಸುಮ್ಮನೆ ಕೂತು ಗೊತ್ತಿಲ್ಲ. ಟಿ.ವಿ ನೋಡುವಾಗಲೂ ತರಕಾರಿ ಕಟ್ ಮಾಡ್ತಾನೋ, ಸೊಪ್ಪು ಕ್ಲೀನ್ ಮಾಡುತ್ತಲೋ ಇರೋದನ್ನು ಗಮನಿಸಿರಬಹುದು. ಮನೆಯಲ್ಲಿ ಗಂಡನಿಗೆ ಹೆಂಡತಿಯಾಗಿ, ಮಕ್ಕಳಿಗೆ ತಾಯಿಯಾಗಿ, ಅತ್ತೆ ಮಾವಂದಿರಿಗೆ ಸೊಸೆಯಾಗಿ, ಅದರ ಜೊತೆಗೆ ಹೊರಗಿನ ಸಮಾಜದಲ್ಲಿ ಬೇರೆ ಬೇರೆ ಉದ್ಯೋಗಗಳಲ್ಲಿ ಸತತವಾಗಿ ಕಾರ್ಯನಿರತಳಾಗಿದ್ದಾಳೆ.
ಇವೆಲ್ಲದರ ಮಧ್ಯೆ ಮಹಿಳೆಯ ಆರೋಗ್ಯ ದೃಷ್ಟಿಯಿಂದ ನೋಡಿದಾಗ, ಅವಳದೇ ಆದ ಸಮಸ್ಯೆಗಳಿರುತ್ತವೆ. ಸಂತಾನೋತ್ಪತ್ತಿಯ ಚಕ್ರ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಈ ಸಮಯದಲ್ಲಿ ಆಗುವ ಹಾರ್ಮೋನುಗಳ ಏರಿಳಿತದಿಂದ, ಮಹಿಳೆಯ ಭಾವನೆಗಳಲ್ಲಿ, ಆರೋಗ್ಯದಲ್ಲಿ ಕೂಡ ಏರುಪೇರುಗಳಾಗಬಹುದು. ಅಂತೂ ಆಧುನಿಕ ಮಹಿಳೆಯ ಮೇಲಿನ ಜವಾಬ್ದಾರಿ, ಒತ್ತಡ ಹೆಚ್ಚಿನದು. ಇಷ್ಟು ಬಿಡುವು ಇಲ್ಲದ ಕೆಲಸದಲ್ಲಿ, ಪಾತ್ರಗಳಲ್ಲಿ ತನ್ನನ್ನು ತಾನೇ ಮರೆತುಬಿಡುವ ಮಹಿಳೆ, ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾಳೆಯೇ? ಆರೋಗ್ಯ ಎಂದಾಗ ನಾವು ಮಾತನಾಡ ಹೊರಟಿರುವುದು ವ್ಯಾಯಾಮದ ಬಗ್ಗೆ. ದಿನದಲ್ಲಿ ಕೆಲವು ನಿಮಿಷಗಳ ಕಾಲ ಕುಳಿತು ಯೋಚಿಸಲು ಪುರುಸೊತ್ತಿಲ್ಲದಾಗ, ವ್ಯಾಯಾಮಕ್ಕೆ ಎಲ್ಲಿಂದ ಸಮಯ ತರುವುದು ಎನ್ನುವುದು ಹಲವರ ಪ್ರಶ್ನೆ.
ಮನಸ್ಸಿದ್ದರೆ ಮಾರ್ಗ. ವ್ಯಾಯಾಮದಿಂದ ಮಹಿಳೆಗೆ ಆಗುವ ಅನೇಕ ಲಾಭಗಳು ತಿಳಿದಿದ್ದರೆ, ಖಂಡಿತ ಪ್ರತಿಯೊಬ್ಬ ಹೆಣ್ಣು ಮಗಳೂ ದಿನದಲ್ಲಿ ವ್ಯಾಯಾಮಕ್ಕಾಗಿ ಸ್ವಲ್ಪ ಹೊತ್ತಾದರೂ ಮೀಸಲಿಡುತ್ತಾಳೆ.
ವ್ಯಾಯಾಮದಿಂದ ಆಗುವ ಉಪಯೋಗಗಳು
*ನಿಯಮಿತವಾದ ವ್ಯಾಯಾಮ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಿ, ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ. ದಿನವೂ ಮಾಡುವ ಅರ್ಧ ಘಂಟೆಯ ಕ್ಷಿಪ್ರಗತಿಯ ನಡಿಗೆ ದೇಹದಲ್ಲಿನ ‘ಈಸ್ಟ್ರೋಜನ್’ ಹಾರ್ಮೋನ್ ಪ್ರಮಾಣ ಕಡಿಮೆ ಮಾಡುವಲ್ಲಿ ಸಹಾಯಕ. ಇದರಿಂದಾಗಿ ಭವಿಷ್ಯದಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಪ್ರತಿದಿನದ ವ್ಯಾಯಾಮ ಇದನ್ನು ಕೂಡ ತಡೆಗಟ್ಟುತ್ತದೆ.
* ಅತಿ ರಕ್ತದೊತ್ತಡ, ಮಧುಮೇಹ, ಹಾರ್ಟ್ ತೊಂದರೆ ಬರುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ ನಾವು ಮಾಡುವ ದೈಹಿಕ ವ್ಯಾಯಾಮ. ಇಷ್ಟೆಲ್ಲ ಉಪಯೋಗವಿದೆ ಎಂದ ಮೇಲೆ ವ್ಯಾಯಾಮ ಮಾಡಲು ಮೀನಾಮೇಷ ಎಣಿಸಬೇಡಿ. ಇಂದಿನಿಂದಲೇ ಶುರುಮಾಡಿ.
* ದಿನದಲ್ಲಿ ಅರ್ಧಗಂಟೆ ಹೊಂದಿಸುವುದು ಕಷ್ಟ ಎಂದಾದ್ರೆ ಬೆಳಗ್ಗೆ ತಿಂಡಿಯ ಬಳಿಕ, ಮಧ್ಯಾಹ್ನ ಊಟದ ಬಳಿಕ ವ್ಯಾಯಾಮ ಮಾಡಲಾರಂಭಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.