ಆರೇಳು ವರ್ಷಕ್ಕೆ ಬರೋ ಹಲ್ಲು ಸೊಟ್‌ಸೊಟ್ಟಗೆ ಯಾಕಿರತ್ತೆ?

By Suvarna Web Desk  |  First Published Mar 10, 2018, 6:03 PM IST

ಮೇಲಿನ ದವಡೆಯ ಮುಂಭಾಗದ ಬಾಚಿ ಹಲ್ಲುಗಳು ಹುಟ್ಟುವಾಗ ಸಾಮಾನ್ಯವಾಗಿ ದೊಡ್ಡದಾಗುತ್ತದೆ ಮತ್ತು ಎರಡು ಹಲ್ಲುಗಳು ನಡುವೆ ಜಾಗ ಬಿಟ್ಟುಕೊಂಡು ನೋಡಲು ಅಷ್ಟೊಂದು  ಸಹ್ಯವಾಗಿರುವುದಿಲ್ಲ. 7ರಿಂದ 11 ವರ್ಷಗಳ ಅವಧಿಯಲ್ಲಿ ಈ ರೀತಿ ಕಾಣಿಸಿಕೊಳ್ಳುವುದು ಸಹಜ. ಈ ಹಲ್ಲುಗಳ ಮತ್ತಷ್ಟು ಮಾಹಿತಿ ನಿಮಗಾಗಿ....


- ಡಾ. ಮುರಲೀ ಮೋಹನ್ ಚೂಂತಾರು

ಸಾಮಾನ್ಯವಾಗಿ ಮನುಷ್ಯನಿಗೆ ಎರಡು ರೀತಿಯ ಹಲ್ಲುಗಳಿರುತ್ತದೆ. ಹುಟ್ಟಿದ 6 ತಿಂಗಳಿಗೆ ಬರುವ ಹಾಲು ಹಲ್ಲು ಮೊದಲನೆಯದು. ಸುಮಾರು 24 ರಿಂದ 32 ತಿಂಗಳವರೆಗೆ ಹಾಲು ಹಲ್ಲುಗಳು ಮೂಡುತ್ತವೆ.  ಒಟ್ಟು 20 ಹಾಲು ಹಲ್ಲುಗಳು ಇದ್ದು 7ನೇ ವರ್ಷಕ್ಕೆ ಶಾಶ್ವತ ಹುಟ್ಟಲು ಆರಂಭವಾಗುತ್ತದೆ. 7ರಿಂದ 12ನೇ ವರ್ಷದವರೆಗಿನ ಈ ಅವಧಿಯನ್ನು ಮಿಕ್ಸ್‌ಡ್ ದಂತವಾಸ್ಥೆ ಎಂದು ಕರೆಯುತ್ತಾರೆ. ಯಾಕೆಂದರೆ  ಈ ಅವಧಿಯಲ್ಲಿ ಬಾಯಿಯಲ್ಲಿ ಹಾಲು ಹಲ್ಲುಗಳು ಮತ್ತು ಶಾಶ್ವತ ಹಲ್ಲುಗಳು ಇರುತ್ತದೆ. ಆಡು ಭಾಷೆಯಲ್ಲಿ ಹೇಳುವುದಾದರೆ 10 ವರ್ಷದ ಹೊತ್ತಿಗೆ 10 ಹಾಲು ಹಲ್ಲು ಬಿದ್ದು ಹೋಗಿ 10 ಶಾಶ್ವತ ಹಲ್ಲುಗಳು ಮತ್ತು 10 ಹಾಲು ಹಲ್ಲುಗಳು ಇರುತ್ತವೆ. ಹೆಚ್ಚಾಗಿ ೧೨ನೇ ವಯಸ್ಸಿಗೆ ಎಲ್ಲಾ ಹಾಲು ಹಲ್ಲುಗಳು ಬಿದ್ದು ಹೋಗುವುದು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತದೆ.

Tap to resize

Latest Videos

ಏನಿದು ಅಗ್ಲಿ ಡಕ್ಲಿಂಗ್ ಹಂತ?: 

ಮೇಲಿನ ದವಡೆಯ ಮುಂಭಾಗದ ಬಾಚಿ ಹಲ್ಲುಗಳು ಹುಟ್ಟುವಾಗ ಸಾಮಾನ್ಯವಾಗಿ ದೊಡ್ಡದಾಗುತ್ತದೆ ಮತ್ತು ಎರಡು ಹಲ್ಲುಗಳು ನಡುವೆ ಜಾಗ ಬಿಟ್ಟುಕೊಂಡು ನೋಡಲು ಅಷ್ಟೊಂದು  ಸಹ್ಯವಾಗಿರುವುದಿಲ್ಲ. 7ರಿಂದ 11 ವರ್ಷಗಳ ಅವಧಿಯಲ್ಲಿ ಈ ರೀತಿ ಕಾಣಿಸಿಕೊಳ್ಳುವುದು ಸಹಜ. ಸಾಮಾನ್ಯವಾಗಿ ಹೆತ್ತವರು ಈ ಹಂತದಲ್ಲಿ ಆತಂಕಗೊಳ್ಳುತ್ತಾರೆ. ಹಾಲು ಹಲ್ಲಿಗೆ ಹೋಲಿಸಿದಾಗ ಈ ಹಲ್ಲುಗಳು ದೊಡ್ಡದಾಗಿರುತ್ತದೆ ಮತ್ತು ನೋಡಲು ಅಷ್ಟೊಂದು ಚಂದವಿರುವುದಿಲ್ಲ. ಈ ಹಲ್ಲುಗಳು ಕಚ್ಚುವ ಭಾಗದಲ್ಲಿ ನೇರವಾಗಿರದೇ ಮಾಮಿಲಾನ್ ಎಂಬ ಆಕೃತಿಗಳು ಕಂಡು ಬಂದು ಹಲ್ಲಿನ ಅಂದವನ್ನು ಹಾಳುಗೆಡುವುತ್ತದೆ. ಮೇಲಿನ ದವಡೆಯ ಒಳಭಾಗದಲ್ಲಿರುವ ಕೋರೆ ಹಲ್ಲುಗಳು ಹುಟ್ಟುವಾಗ ತನ್ನ ಪಕ್ಕದ ಎರಡನೇ ಬಾಚಿ ಹಲ್ಲುಗಳ ಬೇರಿನ ಮೇಲೆ ಒತ್ತಡ ಹಾಕುತ್ತದೆ ಮತ್ತು ಹಲ್ಲುಗಳು ದೇಹದ ಮಧ್ಯಭಾಗದಿಂದ ಎರಡೂ ಕಡೆಗೆ ವಾಲುವಂತೆ ಮಾಡುತ್ತದೆ.

ಈ ಕಾರಣದಿಂದಲೇ ಮೇಲಿನ ದವಡೆಯ ಬಾಚಿ ಹಲ್ಲುಗಳ ನಡುವೆ ಅಸಹ್ಯವಾಗಿ ಜಾಗ ಹುಟ್ಟಿಕೊಂಡು ನೋಡಲು ಹಿತವಾಗಿರುವುದಿಲ್ಲ. ಬಾತುಮರಿಗಳು ನಡೆದಾಡುವಂಥ ಹಲ್ಲು! : ಆಂಗ್ಲ ಭಾಷೆಯಲ್ಲಿ 'ಅಗ್ಲಿ ಡಕ್ಲಿಂಗ್ ಹಂತ' ಎಂದು ಬಿ.ಹೆಚ್ ಬ್ರಾಡ್‌ಬೆಂಟ್ ಎಂಬಾತ 1937ರಲ್ಲಿ ನಾಮಕರಣ ಮಾಡಿದ. ಬಾತುಕೋಳಿಗಳ ಮರಿಗಳು ಹುಟ್ಟಿದ ಬಳಿಕ ನಡೆದಾಡುವಾಗ ನೇರವಾಗಿ ನಡೆಯದೆ, ಓರೆಕೋರೆಯಾಗಿ ವಾಲಿಕೊಂಡು ನಡೆಯುವುದಕ್ಕೆ ಈ ಹಲ್ಲಿನ ಬೆಳವಣಿಗೆಯ ಹಂತವನ್ನು ಹೋಲಿಕೆ ಮಾಡಿ ಈ ರೀತಿ 'ಅಗ್ಲಿ ಡಕ್ಲಿಂಗ್ ಹಂತ' ಎಂದು ಹೇಳಲಾಗಿದೆ. 

ಆತಂಕ ಪಡೋದು ಬೇಡ: 

ಸುಂದರವಾದ ಚಿಕ್ಕದಾದ ಹಾಲುಬಣ್ಣದ ಹಲ್ಲುಗಳು ಬಿದ್ದು ಹೋಗಿ ದೊಡ್ಡದಾದ ಶಾಶ್ವತ ಹಲ್ಲುಗಳು ಬಂದಾಗ ಹೆತ್ತವರು ಆತಂಕ ಗೊಳ್ಳುವುದು ಸಹಜ. ಇದೊಂದು ತಾತ್ಕಾಲಿಕವಾದ ಬೆಳವಣಿಗೆಯ ಹಂತ, ಹೆತ್ತವರು ಆತಂಕಕ್ಕೊಳಗಾಗಬಾರದು. ಇದು ತನ್ನಿಂತಾನೇ ಸರಿಯಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ.

12ಕ್ಕೆ ಸರಿಹೋಗುತ್ತೆ: 

ಕೋರೆ ಹಲ್ಲುಗಳು ಹುಟ್ಟಿದ ಬಳಿಕ (12 ವರ್ಷದ ಹೊತ್ತಿಗೆ) ಈ ಬಾಚಿಹಲ್ಲುಗಳ ನಡುವಿನ ಜಾಗ ಮುಚ್ಚಿಕೊಂಡು ಸುಂದರವಾಗಿ ಕಾಣುತ್ತದೆ. ಈ ಹಂತಕ್ಕೆ ಯಾವುದೇ ರೀತಿಯ ಚಿಕಿತ್ಸೆ ಅಗತ್ಯವಿಲ್ಲ. 11ರಿಂದ 12 ವರ್ಷದಲ್ಲಿ ಕೋರೆ ಹಲ್ಲು ಬಂದ ಬಳಿಕವೂ, ಬಾಚಿ ಹಲ್ಲುಗಳ ನಡುವೆ ಜಾಗ ತುಂಬಿಕೊಳ್ಳದಿದ್ದಲ್ಲಿ, ಕ್ಷಕಿರಣ ತೆಗೆದು ಹೆಚ್ಚವರಿ ಹಲ್ಲು ಇದೆಯೇ ಎಂದು ಖಾತರಿಗೊಳಿಸತಕ್ಕದ್ದು. ಸಾಮಾನ್ಯವಾಗಿ 100ರಲ್ಲಿ 90 ಮಕ್ಕಳಲ್ಲಿ ಇದು ತನ್ನಿಂತಾನೇ ಸರಿಯಾಗುತ್ತದೆ. ಶೇ.10 ಮಕ್ಕಳಲ್ಲಿ ಇತರ ಕಾರಣ ಗಳಿಂದ ಎರಡು ಬಾಚಿ ಹಲ್ಲುಗಳ ನಡುವೆ ಜಾಗ ಉಳಿದು ಬಿಡುತ್ತದೆ. ಇದಕ್ಕೆ ದಂತವೈದ್ಯದಲ್ಲಿ ಚಿಕಿತ್ಸೆ ಇದೆ.  
 

click me!