ಚಿನ್ನದ ನಾಣ್ಯ ನಿರೀಕ್ಷಿಸಿದ್ದ ಉದ್ಯೋಗಿಗಳಿಗೆ ಸರ್ಪ್ರೈಸ್; ಕಾವ್ಯಾ ಮಾರನ್ ಮದುವೆ ಬೆನ್ನಲ್ಲೇ Sun Group ಉದ್ಯೋಗಿಗಳಿಗೆ ಬಂಪರ್ ಗಿಫ್ಟ್...!

Published : Nov 21, 2026, 12:52 PM IST
Anirudh Ravichander- Kavya Maran

ಸಾರಾಂಶ

ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ವಿವಾಹದ ಹಿನ್ನೆಲೆಯಲ್ಲಿ ಸನ್ ಗ್ರೂಪ್ ಉದ್ಯೋಗಿಗಳಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಗಿದೆ. ಚಿನ್ನದ ಉಂಗುರ, ಚಾಕೊಲೇಟ್ ಒಳಗೊಂಡ ಉಡುಗೊರೆಯ ವಿಡಿಯೋ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು(ನ.21): ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಹಾಗೂ ಸನ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಕಾವ್ಯಾ ಮಾರನ್ ತಮ್ಮ ಮದುವೆ ಆರತಕ್ಷತೆ ಸಂಭ್ರಮಕ್ಕೂ ಮುನ್ನ ಉದ್ಯೋಗಿಗಳ ಮನ ಗೆದ್ದಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗಿನ ವಿವಾಹದ ಹಿನ್ನೆಲೆಯಲ್ಲಿ ಸನ್ ಗ್ರೂಪ್ ಉದ್ಯೋಗಿಗಳಿಗೆ ಕಾವ್ಯಾ ವಿಶೇಷ ಉಡುಗೊರೆ ನೀಡಿದ್ದಾರೆ. ಚಿನ್ನದ ಉಂಗುರಗಳು, ಚಾಕೊಲೇಟ್‌ಗಳು ಮತ್ತು ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಉದ್ಯೋಗಿಗಳಿಗೆ ವಿತರಿಸಿದ್ದಾರೆ ಎಂದು ವರದಿಯಾಗಿದೆ.

ಉಡುಗೊರೆಗಳನ್ನು ವಿತರಿಸುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾವ್ಯಾ ಅವರ ಈ ವಿಶೇಷ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೈರಲ್ ಆಗಿರುವ ವಿಡಿಯೋಗಳಲ್ಲಿ ಉದ್ಯೋಗಿಗಳು ಉಡುಗೊರೆ ಬಾಕ್ಸ್‌ಗಳನ್ನು ತೆರೆದು ನೋಡುವ ದೃಶ್ಯಗಳಿವೆ. ಬಾಕ್ಸ್‌ಗಳಲ್ಲಿ ಮದುವೆಯ ಆಮಂತ್ರಣ ಪತ್ರಿಕೆ, ಚಾಕೊಲೇಟ್‌ಗಳು ಮತ್ತು ಚಿನ್ನದ ಉಂಗುರಗಳಿವೆ. ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ ಉದ್ಯೋಗಿಯೊಬ್ಬರು ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸಿರುವುದು ಕೇಳಿಸುತ್ತದೆ. ತಮಗೆ ಚಿನ್ನದ ನಾಣ್ಯಗಳು ಸಿಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಬಾಕ್ಸ್‌ನಲ್ಲಿ ಚಿನ್ನದ ಉಂಗುರಗಳು ಇದ್ದುದನ್ನು ನೋಡಿ ಅಚ್ಚರಿಯಾಯಿತು ಎಂದು ಅವರು ಹೇಳಿದ್ದಾರೆ.

ನವೆಂಬರ್ 25ರಂದು ವಿಶೇಷ ಭೋಜನದ ಆಮಂತ್ರಣ

ಉಡುಗೊರೆ ಬಾಕ್ಸ್‌ನಲ್ಲಿದ್ದ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನವೆಂಬರ್ 25ರಂದು ಮಧ್ಯಾಹ್ನದ ಭೋಜನದ ಕಾರ್ಯಕ್ರಮದ ಉಲ್ಲೇಖವಿದೆ. ಇದು ಸನ್ ಗ್ರೂಪ್ ಉದ್ಯೋಗಿಗಳಿಗಾಗಿ ಪ್ರತ್ಯೇಕವಾಗಿ ಆಯೋಜಿಸಿರುವ ಕಾರ್ಯಕ್ರಮವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನೊಂದೆಡೆ, ಅನಿರುದ್ಧ್ ಮತ್ತು ಕಾವ್ಯಾ ಅವರ ಮದುವೆಯ ಆರತಕ್ಷತೆ ನವೆಂಬರ್ 21ರಂದು ಚೆನ್ನೈನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ಗ್ರೀಸ್‌ನಲ್ಲಿ ಅದ್ಧೂರಿಯಾಗಿ ನಡೆದ ಅನಿರುದ್ಧ್-ಕಾವ್ಯಾ ವಿವಾಹ

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹಮಾಲಕಿ ಕಾವ್ಯಾ ಮಾರನ್ ನವೆಂಬರ್ 11ರಂದು ಗ್ರೀಸ್‌ನಲ್ಲಿ ನಡೆದ ಸುಂದರ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಸ್ವಾಭಿಮಾನಿ ವಿವಾಹ ಪದ್ಧತಿಯನ್ನು (Self-Respect Marriage) ಅನುಸರಿಸಿದೆ ಎಂದು ವರದಿಯಾಗಿದೆ. ಈ ಪದ್ಧತಿಯಲ್ಲಿ ಮದುವೆಗೆ ಪುರೋಹಿತರ ಅಗತ್ಯವಿಲ್ಲ. ಸಪ್ತಪದಿಯಂತಹ ಸಾಂಪ್ರದಾಯಿಕ ವಿಧಿವಿಧಾನಗಳೂ ಕಡ್ಡಾಯವಲ್ಲ.

ಈ ಸಂಪ್ರದಾಯದ ಪ್ರಕಾರ, ವಧು-ವರರು ಪರಸ್ಪರ ಒಪ್ಪಿಕೊಂಡು ಪತಿ-ಪತ್ನಿಯರಾಗಿ ಸ್ವೀಕರಿಸುವುದಾಗಿ ಘೋಷಿಸಬಹುದು. ಸಂಬಂಧಿಕರು, ಸ್ನೇಹಿತರು ಅಥವಾ ಇತರರ ಸಮ್ಮುಖದಲ್ಲಿ ಹಾರ ಅಥವಾ ಉಂಗುರಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ವಿವಾಹವನ್ನು ನೆರವೇರಿಸಬಹುದು.

ಇಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ?

ವಿಶಿಷ್ಟ ರೀತಿಯಲ್ಲಿ ವಿವಾಹವಾದ ನವಜೋಡಿ ಇಂದು, ನವೆಂಬರ್ 21ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಆಯೋಜಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಕ್ರಿಕೆಟ್, ಸಿನಿಮಾ, ಉದ್ಯಮ ಮತ್ತು ರಾಜಕೀಯ ಕ್ಷೇತ್ರಗಳ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆಯಿದೆ. ಮದುವೆ ಸಂಭ್ರಮದ ನಡುವೆಯೇ ಉದ್ಯೋಗಿಗಳಿಗೆ ಕಾವ್ಯಾ ಮಾರನ್ ನೀಡಿರುವ ವಿಶೇಷ ಉಡುಗೊರೆಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಮ್ಮ ಮೂಗು ಸಾವಿರಾರು ವಾಸನೆಗಳನ್ನು ಹೇಗೆ ಗುರುತಿಸುತ್ತದೆ? ಹಳೆಯ ನೆನಪುಗಳಿಗೂ ಇದಕ್ಕೂ ಹೇಗೆ ಲಿಂಕ್?
40 ಕೆಜಿ ಚಿನ್ನದ ಒಡತಿ ಈ ಸುಂದರಿ! ಪ್ರತಿ ವರ್ಷ ಗಂಡ ಕೊಡಿಸ್ತಾರೆ 3 ಕೆಜಿ ಬಂಗಾರ, ಯಾರೀಕೆ?