
-ಡಾ.ಕೆ.ಎಸ್. ಪವಿತ್ರ
ನಾನೆಂದೂ ಕವಿತೆ ಬರೆಯಲೇ ಇಲ್ಲ! ಬರೆಯುವುದು ಬಿಡಿ, ಸಾಹಿತ್ಯದ ಅತ್ಯುತ್ತಮ ಪ್ರಕಾರ ಕಾವ್ಯ ಎಂದು ಯಾರೇ ಬಡಿದುಕೊಂಡರೂ, ‘ಕೈಗೆಟುಕದ ದ್ರಾಕ್ಷಿ ಹುಳಿ’ ಎಂಬಂತೆ ಕಾವ್ಯದ ಓದಿನಲ್ಲಿಯೂ ನಾನು ಸ್ವಲ್ಪ ಹಿಂದೆಯೇ. ಹದಿನಾರರ ಹರೆಯದಲ್ಲಿ ಕತ್ತೆಯೂ ಸುಂದರವಾಗಿ ಕಾಣುತ್ತದಂತೆ! ಹಾಗೆಯೇ ಎಂಥವರೂ ‘ಸ್ವೀಟ್ ಸಿಕ್ಸ್‌ಟೀನ್’ ಆದಾಗ ಕವನ ಬರೆಯುತ್ತಾರಂತೆ. ಆದರೆ ನನಗೆ ಮಾತ್ರ 16ರ ಸಿಹಿ ವಯಸ್ಸಿನಲ್ಲಿಯೂ ಸಿಕ್ಕಾಪಟ್ಟೆಕಥೆ-ಕಾದಂಬರಿ ಓದುವುದು ಅಭ್ಯಾಸವಾಗಿತ್ತೇ ಹೊರತು ಕವಿತೆ ಓದಿದ್ದು ಕಡಿಮೆಯೇ. ಶಾಲೆಯ ಓದಿನಲ್ಲಿ ಪದ್ಯಗಳನ್ನು ಓದಬೇಕಾಗಿತ್ತಷ್ಟೆ. ಆದರೆ ಯಾವುದರ ರುಚಿಯನ್ನೂ ಹಾಳು ಮಾಡಿ, ಆಸಕ್ತಿ ಹೋಗಿಸಬೇಕೆಂದರೆ ಅದನ್ನು ಪಠ್ಯಪುಸ್ತಕದೊಳಗೆ ಸೇರಿಸಬೇಕು ಎನ್ನುವಂತೆ ಎಂಥೆಂಥಾ ಕವಿಗಳ ಪದ್ಯಗಳೇ ಆದರೂ ಅದನ್ನು ಬಾಯಿಪಾಠ ಮಾಡಿ, ಪ್ರಶ್ನೆ-ಉತ್ತರ ಬರೆಯಿರಿ ಎಂದಾಕ್ಷಣ ಕವಿತೆಯ ರಸ ಎಲ್ಲ ಸೋರಿ ಹೋಗಿಬಿಡುತ್ತಿತ್ತು! ಹಾಗಾಗಿ ಪುಸ್ತಕಗಳನ್ನು ಕೊಂಡು ಓದುವ ಚಟವಿರುವ ನಾನು ಕೊಳ್ಳುತ್ತಿದ್ದದ್ದು ಮಾತ್ರ ಕಾದಂಬರಿ-ಕಥೆ ಪುಸ್ತಕಗಳನ್ನೇ!
ಹೀಗಿದ್ದರೂ, ಕವಿತೆಯ ಬಗೆಗೆ ನನಗಿದ್ದದ್ದು ಒಂಥರಾ ನಿಗೂಢ- ರಹಸ್ಯಮಯ ವಸ್ತುವಿನ ಬಗೆಗಿರುವಂತಹ ಆಕರ್ಷಣೆಯೇ ಹೊರತು, ನಿರಾಸಕ್ತಿಯಲ್ಲ! ಹಾಗಾಗಿಯೇ ಇರಬೇಕು, ನೃತ್ಯಕ್ಕೆ ಹೊಸತೇನಾದರೂ ಮಾಡಬೇಕು ಎಂದೆನಿಸಿದಾಗ ಮನಸ್ಸು ಎಳೆದದ್ದು ಕನ್ನಡ ಕವಿತೆಗಳ ಕಡೆಗೆ. ಇದ್ದಕ್ಕಿದ್ದಂತೆ ‘ಮ್ಯಾಜಿಕ್’! ಕವಿತೆ ಓದಿಕೊಳ್ಳುವುದು, ಹಾಡಿಕೊಳ್ಳುವುದು, ಅದರಲ್ಲಿ ವಿವಿಧ ಅರ್ಥಗಳನ್ನು ಹುಡುಕುವುದು ಒಂದು ಸ್ವಾರಸ್ಯಕರ ಆಟದಂತೆ ಎನಿಸಿಹೋಯ್ತು!
ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ
ಕವಿತೆಯೊಂದಕ್ಕೆ ಅದೆಷ್ಟುಅರ್ಥಗಳು ಸಾಧ್ಯವಿತ್ತು! ನೃತ್ಯದ ಚಲನೆ-ಕಣ್ಣೋಟ-ಹಸ್ತಗಳಿಗಿರುವ ಹಲವು ಅರ್ಥಗಳನ್ನು ಹೊರಹೊಮ್ಮಿಸುವ ಸಾಮರ್ಥ್ಯ, ಕವಿತೆಯ ಒಂದು ಸಾಲು/ಪದದಲ್ಲೂ ಇರುತ್ತಿತ್ತು. ಕ್ರಮೇಣ ಹಳೆಗನ್ನಡ-ಹೊಸಗನ್ನಡ-ಆಧುನಿಕ ಕವಿತೆಗಳು, ಹನಿಗವನಗಳು, ‘ಫೇಸ್‌ಬುಕ್ ಪೊಯೆಟ್ರಿ’ ಎಲ್ಲವೂ ಬೇರೆ ಬೇರೆ ರುಚಿಯ ಅಡಿಗೆಗಳಂತೆ ರುಚಿಸತೊಡಗಿದವು. ಈಗ ನೋಡಿದ್ರೆ ‘ವಿಶ್ವ ಕಾವ್ಯ ದಿನ’! ವರ್ಲ್ಡ್ ಪೊಯೆಟ್ರಿ ಡೇ! ಯುನೆಸ್ಕೋ 21 ಮಾಚ್‌ರ್ ಅನ್ನು ‘ಕಾವ್ಯದ ದಿನ’ ಎಂದೇ ಘೋಷಿಸಿ ಬಿಟ್ಟಿದೆ!
ಆಗಲೇ ನನಗನ್ನಿಸಿದ್ದು ಕಾವ್ಯ ಓದಲಾಗಲೀ, ಬರೆಯಲಾಗಲೀ, ನಾವು ಕವಿಗಳೋ, ಸಾಹಿತ್ಯ ವಿಮರ್ಶಕರೋ ಆಗಬೇಕಿಲ್ಲ; ನಮ್ಮ ಸಂತೋಷಕ್ಕಾಗಿ ಕಾವ್ಯ ಬರೆಯುವುದೂ/ ಓದುವುದೂ ಸಾಧ್ಯವಾಗಬೇಕು ಎಂದು. ಪ್ರತಿನಿತ್ಯ ಮಾನಸಿಕ ಸಮಸ್ಯೆಗಳಿಂದ ನನ್ನ ಬಳಿ ಬರುವ ಬಹು ಜನರನ್ನು ನೋಡುವಾಗ ನನಗೆ ವಿಲಿಯಮ್ ಸಿಗ್‌ಹಾರ್ಚ್ ಎಂಬ ಕವಿ ತೆರೆದ ‘ಪೊಯೆಟ್ರಿ ಫಾರ್ಮಸಿ’ಯ ನೆನಪಾಗುತ್ತದೆ. ಆಧುನಿಕವಾದ ತಂತ್ರಜ್ಞಾನದ ಜಗತ್ತಿನಲ್ಲಿರುವ ನಾವು ಒಬ್ಬರಿಂದ ಒಬ್ಬರು ತುಂಬ ಹತ್ತಿರವಿರುವಂತೆ ಭಾಸವಾದರೂ, ನಿಜವಾಗಿ ಒಂಟಿಯಾಗಿ, ಒಬ್ಬರು ಮತ್ತೊಬ್ಬರಿಂದ ಬಹು ದೂರವಿದ್ದೇವೆ. ಇಂತಹ ಸಂದರ್ಭದಲ್ಲಿ ಮನಸ್ಸುಗಳನ್ನು ಬೆಸೆಯಲು ವಿಲಿಯಮ್ ಸಿಗ್‌ಹಾರ್ಚ್ ನೀಡುವುದು ಶತಮಾನಗಳಷ್ಟುಹಳೆಯ ‘ಕಾವ್ಯ’ದ ಮದ್ದುಗಳನ್ನು! (ಅಂದಹಾಗೆ ಮೊದಲ ಪದ್ಯ ಹುಟ್ಟಿದ್ದು 4,000 ವರ್ಷಗಳ ಹಿಂದೆ ಬ್ಯಾಬಿಲೋನ್‌ನಲ್ಲಂತೆ; ಕ್ರಿ.ಪೂ. 18ನೇ ಶತಮಾನದಲ್ಲಿ ‘ಗಿಲ್ಗಮೇಶ್ ಮಹಾ ಕಾವ್ಯ’ ದಾಖಲಿತ ಕಾವ್ಯದ ಬರೆಹವಂತೆ).
ಅಳೆಯುವವರ ಕಥೆ ಬೆಳಕಿಗೆ ತರುತ್ತಿರುವೆ : ಗಜಾನನ ಶರ್ಮಾ
ಸಿಗ್‌ಹಾರ್ಚ್ ಕೊಡುವ ಕಾವ್ಯದ ಮದ್ದುಗಳು ಹೇಗಿರುತ್ತವೆ? ಭಾವಕ್ಕೊಂದು ಕಾವ್ಯ-ಸಮಸ್ಯೆಗೊಂದು ಕವನ. ಸಾಮಾಜಿಕ ಮಾಧ್ಯಮಗಳ ತುಂಬಾ ಮೊಬೈಲ್‌ನಲ್ಲೇ ಓಡಾಡುವ ನಾವು, ನಿಜವಾಗಿ ‘ನಾವಾಗಿರದ’ ಕಾಲ್ಪನಿಕ ಚಿತ್ರಣವನ್ನು ಹೊತ್ತುಕೊಂಡು ತಿರುಗಾಡುತ್ತೇವೆ. ಆದ್ದರಿಂದ ಒಂಟಿತನ ಹಿಂದೆಂದಿಗಿಂತ ಇಂದು ಬಲು ಹೆಚ್ಚು. ಸಿಗ್‌ಹಾರ್ಚ್ ಪ್ರಕಾರ ಮಾನವ ಅನುಭವಿಸುವ ಪ್ರತಿ ಆತಂಕ-ಬೇಸರ-ಸಂತಸಕ್ಕೂ ಜಗತ್ತಿನ ಯಾವುದೋ ಎಡೆಯಲ್ಲಿ ಕವಿತೆಯೊಂದು ಕುಳಿತಿದೆ. ನಮ್ಮ ನೋವು-ಬೇಸರದ ಸಮಯದಲ್ಲಿ ನಾವು ಅದನ್ನು ಹುಡುಕಲು ಸಾಧ್ಯವಾಯಿತು ಎನ್ನಿ ಅದು ‘ಕೈಯೊಂದು ಹೊರ ಬಂದು ನಿಮ್ಮ ಕೈ ಹಿಡಿದು ಮುನ್ನಡೆಸಿದಂತೆ!’.
ಹೀಗೆ ಕನ್ನಡ ಕವಿತೆಗಳ ನೃತ್ಯ-ಉಪನ್ಯಾಸ ನಡೆಯುವಾಗ ಒಬ್ಬ ಮಹಿಳೆ ಕೇಳಿದ ಪ್ರಶ್ನೆ ನೆನಪಾಗುತ್ತದೆ. ‘ಕವಿತೆಯನ್ನು ಕವಿ ಬರೆದಾಗ ಆತ ಹೇಳಲು ಬಯಸಿದ್ದು ಏನು ಎಂಬುದು ಹೇಗೆ ಗೊತ್ತಾಗುತ್ತದೆ? ಒಂದೊಮ್ಮೆ ಅದನ್ನು ನಾವು ತಪ್ಪಾಗಿ ಅರ್ಥೈಸಿದರೆ?!’. ಕವಿ ಮಿದುಳು-ಮನಸ್ಸುಗಳ ಒಳಗೆ, ಬಹುಕಾಲ ಅಡಗಿ ಕುಳಿತಿರುವ ಕವಿತೆಯನ್ನು ಮಾತು-ಬರೆಹಗಳ ಮೂಲಕ ಹೊರಹಾಕಿದ ತಕ್ಷಣ ಅದು ಅವನದಾಗಿ ಉಳಿಯುವುದಿಲ್ಲ. ಅದರ ಅರ್ಥ ಇಂತದ್ದು ಎಂದು ಹೇಳಲಾಗದಿರುವುದೇ ಅದರ ಸೌಂದರ್ಯಕ್ಕೆ ಕಾರಣ! ನಾನಾ ಅರ್ಥಗಳು ಸಾಧ್ಯವಿದೆ ಎಂಬುದೇ ಅದರ ಶಕ್ತಿ. ಆದ್ದರಿಂದ ಕವಿತೆಯೊಂದನ್ನು ಅರ್ಥ ಮಾಡಿಕೊಳ್ಳುವಾಗ, ಓದುವಾಗ ಸರಿ-ತಪ್ಪುಗಳ ಭಯ ಬದಿಗಿಡುವುದೇ ಸೂಕ್ತ. ನಮ್ಮ ಈ ಹೊತ್ತಿನ ಮನಃಸ್ಥಿತಿ, ಯಾವುದೇ ಕವಿತೆಯ ಓದಿನ ಮೇಲೆ ತನ್ನ ಪ್ರಭಾವ ಬೀರಿ, ಆ ಕವಿತೆ ನಮಗೆ ನೀಡುವ ಅರ್ಥವನ್ನು ನಿರ್ಧರಿಸುತ್ತದೆ ಎಂಬುದು ಗಮನಾರ್ಹ. ಇಂಗ್ಲಿಷ್ ಕವಿ ಡೇವಿಡ್ ವೈಟ್ ಹೇಳುವ ಹಾಗೆ ಆ ಕ್ಷಣದಲ್ಲಿ ‘ಕವಿತೆ ಓದುವುದು ಮೊದಲ ಬಾರಿಗೆ ಜಗತ್ತು ಹುಡುಕಿಕೊಂಡು ಬಂದು ನಮ್ಮನ್ನು ಕಂಡ ಭಾವ’.
ಕವಿತೆ-ಕಾವ್ಯದ ಬಗ್ಗೆ ನನಗೆ ಮೊದಲಿದ್ದ ನಿರ್ಲಕ್ಷ್ಯ-ಅರ್ಥವಾಗದೆಂಬ ಭಯಗಳು ಈಗಿಲ್ಲ. ಕವಿತೆ ನನಗೀಗ ಹತ್ತಿರದ ಗೆಳತಿ. ನನ್ನ ನೃತ್ಯಕ್ಕೆ ಜೊತೆ ಬಿಡದ ಸಂಗಾತಿ. ಆಧುನಿಕ ಜಗತ್ತಿನ ಒಂಟಿತನದ ಬದುಕಿನಲ್ಲಿ, ಮೊಬೈಲ್ ತೆರೆಯ ಮೇಲೆ ಆಗಾಗ ಇಣುಕುವ ಕವಿತೆ ಎಂಬ ‘ಆಪ್ತಸಖಿ’ ನನ್ನೊಳಗನ್ನು ಹುಡುಕುತ್ತಾಳೆ. ಬೇಸರ-ಆತಂಕ-ದುಃಖಗಳನ್ನು ಹೊರಗೆಳೆಯುತ್ತಾಳೆ. ‘ಆಹಾ’ ಎಂಬ ಅನುಭವ ನೀಡುತ್ತಾಳೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.