ಆರ್ಡರ್‌ ಮಾಡಿದ್ದ ಸೂಪ್‌ನಲ್ಲಿ ದಂಪತಿಗೆ ಸಿಕ್ತು ಇಲಿ: ವಿಡಿಯೋ ವೈರಲ್

By Anusha Kb  |  First Published Mar 19, 2023, 2:31 PM IST

ಅಮೆರಿಕಾದಲ್ಲಿ ಮಹಿಳೆಯೊಬ್ಬರಿಗೆ ಸೂಪ್‌ನಲ್ಲಿ ಇಲಿ ಸಿಕ್ಕಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ರೆಸ್ಟೋರೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.  


ನ್ಯೂಯಾರ್ಕ್‌:  ಇತ್ತೀಚೆಗೆ ಆರ್ಡರ್ ಮಾಡಿದ ಆಹಾರದಲ್ಲಿ ಹುಳ ಹುಪ್ಪಟೆ, ಪ್ರಾಣಿಗಳು ಸಿಗುತ್ತಿರುವ ಪ್ರಕರಣಗಳು ಹೆಚ್ಚು ಹೆಚ್ಚು ಕೇಳಿ ಬರುತ್ತಿವೆ.  ಸಸ್ಯಹಾರಿಗಳು ಮಾಡಿದ ಆರ್ಡರ್‌ನಲ್ಲಿ ಮಾಂಸದ ತುಂಡು ಸಿಗುವುದು, ಆರ್ಡರ್‌ ಮಾಡಿದ ಆಹಾರದಲ್ಲಿ ಹಲ್ಲಿ ಜಿರಳೆ ಕಾಣಿಸಿಕೊಂಡಂತಹ ಹಲವು ಪ್ರಕರಣಗಳು ನಡೆದಿವೆ. ಈಗ ಅಮೆರಿಕಾದಲ್ಲಿ ಮಹಿಳೆಯೊಬ್ಬರಿಗೆ ಸೂಪ್‌ನಲ್ಲಿ ಇಲಿ ಸಿಕ್ಕಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ರೆಸ್ಟೋರೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.  ಅವರು ಈ ವಿಚಾರವನ್ನು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದ್ದು, ನೆಟ್ಟಿಗರು ಕೂಡ ರೆಸ್ಟೋರೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪಾರ್ಸೆಲ್ ಬಂದಿರುವ ದನದ ಮಾಂಸ, ಅನ್ನ ಹಾಗೂ ತರಕಾರಿ ಸೂಪ್‌ನ ಬಾಕ್ಸ್‌ನಲ್ಲಿ ಇಲಿಯೊಂದು ಕಾಣುತ್ತಿದ್ದು, ಇದರ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ.  ಯುನೈಟೆಡ್ ಸ್ಟೇಟ್ಸ್‌ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಕೊರಿಯಾಟೌನ್ ರೆಸ್ಟೋರೆಂಟ್ ಗ್ಯಾಮಿಯೋಕ್‌ನಿಂದ ತರಿಸಿದ ಆಹಾರ ಪಾರ್ಸೆಲ್‌ನಲ್ಲಿ ಈ ಅವಾಂತರ ಕಂಡು ಬಂದಿದ್ದು, ಈಗ ಮಹಿಳೆ ಈ ರೆಸ್ಟೋರೆಂಟ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಕಳೆದ ಬುಧವಾರ (ಮಾ.15) ಈ ಘಟನೆ ನಡೆದಿದ್ದು, ಘಟನೆಯ ನಂತರ ಆರೋಗ್ಯ ಮತ್ತು ಮಾನಸಿಕ ನೈರ್ಮಲ್ಯ ಇಲಾಖೆಯು ರೆಸ್ಟೋರೆಂಟ್ ಅನ್ನು ಮುಚ್ಚಿದೆ. ನ್ಯೂಯಾರ್ಕ್ ಸಿಟಿಯ ಯಾವುದೇ  ರೆಸ್ಟೋರೆಂಟ್ ಮೆನುವಿನಲ್ಲಿ ಇಲಿಗಳ ಖಾದ್ಯ ನೀಡುವ ಅವಕಾಶವಿಲ್ಲ. ನಾವು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಮೇಯರ್ ಎರಿಕ್ ಆಡಮ್ಸ್ (Eric Adams) ಅವರ ವಕ್ತಾರ ಫ್ಯಾಬಿಯನ್ ಲೆವಿ ಅಲ್ಲಿನ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

Latest Videos

undefined

ಏರ್ ಇಂಡಿಯಾದ ಆಹಾರದಲ್ಲಿ ಸಿಕ್ತು ಇರುವೆ, ಯಪ್ಪಾ..ಯಾವಾಗ್ಲೂ ಇದೇ ಗೋಳಾ..


ಯುನಿಸ್ ಎಲ್ ಲೀ ಎಂಬ ಮಹಿಳೆ ಈ ವಿಚಾರವನ್ನು Instagram ನಲ್ಲಿ ಹೇಳಿಕೊಂಡಿದ್ದಾರೆ. ನಾನು ಕಾನೂನು ಸಲಹೆಯನ್ನು ಪಡೆದ ನಂತರ, ನನ್ನ ಪತಿ ಮತ್ತು ನಾನು ಈಗ ವಾರಾಂತ್ಯದಲ್ಲಿ ನಮಗೆ ಎದುರಾದ  ಅಸಹ್ಯಕರ ವಿಚಾರವನ್ನು ಹಂಚಿಕೊಳ್ಳಲು  ಬಯಸುವೆ.  ನಾವು ಕೆ-ಟೌನ್‌ನಲ್ಲಿರುವ ಗಮ್ಮಿಯೋಕ್ ಎಂಬ ಪ್ರಸಿದ್ಧ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡಿದ್ದೆವು.  ನಂತರ ನಡೆದ ಘಟನೆಗೆ ಸಂಬಂಧಿಸಿದಂತೆ ಹಾಗೂ ಈ ವಿಚಾರದಲ್ಲಿ ಜನರಿಗೆ ಅರಿವು ಮೂಡಿಸಲು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ. 

ನಂತರ ಅವರು ಸೂಪ್‌ನಲ್ಲಿ ಇಲಿ ಇರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತುಂಬಾ ಅಸಹ್ಯಕರವಾಗಿದೆ. ನಮ್ಮ ಸೂಪ್‌ನಲ್ಲಿ ಸತ್ತ ಇಲಿ ಇದೆ ಎಂದು ಲೀ ವಿಡಿಯೋದಲ್ಲಿ ಹೇಳಿದೆ.  ನಾವು ಒಂದು ದಶಕದಿಂದ ಈ ರೆಸ್ಟೋರೆಂಟ್‌ಗೆ ಹೋಗುತ್ತಿದ್ದೇವೆ ಮತ್ತು ನಾವು ಏಷ್ಯನ್ ಆಹಾರ ಪದ್ಧತಿ (Asian Food style) ಮತ್ತು ಸಂಸ್ಕೃತಿಯ ಹೆಮ್ಮೆಯ ಬೆಂಬಲಿಗರಾಗಿದ್ದೇವೆ. ಈ ಘಟನೆಯನ್ನು ನಾವು ಜನಾಂಗೀಯ ದ್ವೇಷ ಅಥವಾ ಪೂರ್ವಾಗ್ರಹವನ್ನು ಉತ್ತೇಜಿಸಲು ಇಲ್ಲಿ ಹೇಳಿಕೊಂಡಿದ್ದಲ್ಲ. ಈ ಬಗ್ಗೆ ತಿಳಿಸಲು ಹೇಳಿಕೊಂಡಿದ್ದಾಗಿ ಅವರು ಬರೆದುಕೊಂಡಿದ್ದಾರೆ. 

ವಿಮಾನದಲ್ಲಿ ವಿತರಿಸಿದ ಆಹಾರದಲ್ಲಿ ಕೂದಲು ಪತ್ತೆ, ಸಂಸದೆಯ ಟ್ವೀಟ್‌ ವೈರಲ್

ಇವರ ಪೋಸ್ಟ್‌ಗೆ ಗ್ಯಾಮೀಯಕ್ ರೆಸ್ಟೋರೆಂಟ್ ಕೂಡ ಪ್ರತಿಕ್ರಿಯಿಸಿದ್ದು,  ಈ ಪರಿಸ್ಥಿತಿಗಾಗಿ ನಾವು ವಿಷಾದಿಸುತ್ತೇವೆ. ಎಸ್‌ಎನ್‌ಎಸ್‌ನಲ್ಲಿ ಪೋಸ್ಟ್ ಮಾಡಿರುವ ವಿಚಾರ ಸತ್ಯವಲ್ಲ. ಹಲವಾರು ವರ್ಷಗಳಿಂದ ಸೋಂಕು ನಿವಾರಕ ಕಂಪನಿಯಿಂದ ಪ್ರತಿ ಎರಡು ವಾರಗಳಿಗೊಮ್ಮೆ ನಮ್ಮ ರೆಸ್ಟೋರೆಂಟ್ ಅನ್ನು ನಾವು ನಿಯಮಿತವಾಗಿ ಪರಿಶೀಲಿಸುತ್ತಿದ್ದೇವೆ. ಇಲ್ಲಿ ಇಲಿಗಳ ಯಾವುದೇ ಕುರುಹುಗಳಿಲ್ಲ. ಅವರು ಹಣಕ್ಕಾಗಿ ಒತ್ತಾಯಿಸಿ ಬೆದರಿಕೆ ಹಾಕಿದ್ದು, ನಾವು ನಿರಾಕರಿಸಿದ್ದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಈ ರೀತಿ ಮಾಡಲು ಮುಂದಾಗಿದ್ದಾರೆ. ಅವರ ವಿರುದ್ಧ ನಾವು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದೇವೆ ಎಂದು ರೆಸ್ಟೋರೆಂಟ್ ಹೇಳಿದೆ. 

ಅಲ್ಲದೇ ರೆಸ್ಟೋರೆಂಟ್ ಮಾರ್ಚ್ 15 ರ ವಿಡಿಯೋವನ್ನು ಕೂಡ ಪೋಸ್ಟ್ ಮಾಡಿದ್ದು, ಆದರೆ ಅದರಲ್ಲಿ ರೆಕಾರ್ಡ್ ಆದ ದಿನಾಂಕವಿಲ್ಲ. ಉಬರ್ ಇಟ್ಸ್ ಮೂಲಕ ದಂಪತಿ ಈ ಆಹಾರವನ್ನು ಆರ್ಡರ್ ಮಾಡಿದ್ದರು ಎಂದು ತಿಳಿದು ಬಂದಿದೆ. 

 
 
 
 
 
 
 
 
 
 
 
 
 
 
 

A post shared by Eunice L Lee (@eunichiban)

 

 
 
 
 
 
 
 
 
 
 
 
 
 
 
 

A post shared by Gammeeok (@gammeeok_ny_nj)

 

click me!