ಮೊಡವೆ ಸಮಸ್ಯೆಗೆ ಕರಿಬೇವೆಂಬ ಮದ್ದು..

By Web DeskFirst Published Sep 19, 2019, 4:34 PM IST
Highlights

ಭಾರತೀಯ ಆಂಟಿಗಳಿಗೆ ತರಕಾರಿ ಜೊತೆಗೆ ನಾಲ್ಕು ಮೆಣಸಿನಕಾಯಿ, ಸ್ವಲ್ಪ ಕರಿಬೇವನ್ನು ಫ್ರೀಯಾಗಿ ತರುವ ಅಭ್ಯಾಸ. ಮುಂದಿನ ಬಾರಿ ಹೀಗೆ ತರುವಾಗ ಸ್ವಲ್ಪ ಹೆಚ್ಚೇ ಕರಿಬೇವು ತನ್ನಿ. ಏಕೆಂದರೆ ಕರಿಬೇವಿನ ಮಾಸ್ಕ್ ಟ್ರೈ ಮಾಡಬೇಕಲ್ಲ...

ಕರಿಬೇವು ನಮ್ಮ ಆಹಾರಕ್ಕೆ ಹೊಸ ಫ್ಲೇವರ್ ಕೊಡುತ್ತದೆ. ಆ್ಯಂಟಿ ಮೈಕ್ರೋಬಿಯಲ್ ಗುಣ ಹೊಂದಿರುವ ಇದು ವಿಟಮಿನ್ ಎ ಹಾಗೂ ಸಿಯನ್ನು ಕೂಡಾ ಹೊಂದಿದ್ದು ಇವು ಚರ್ಮದ ಕಾಂತಿ ಹಾಗೂ ಆರೋಗ್ಯ ಕಾಪಾಡುತ್ತವೆ. ಇದರಲ್ಲಿ ಐರನ್ ಕೂಡಾ ಹೇರಳವಾಗಿದ್ದು, ವೀಕ್‌ನೆಸ್‌ನಿಂದ ಬಳಲುವವರಿಗೆ ಒಳ್ಳೆಯದು. ಕರಿಬೇವಿನ ಕುರಿತ ಇನ್ನೊಂದು ಖುಷಿ ಎಂದರೆ ಮನೆಯಲ್ಲೇ ಸುಲಭವಾಗಿ ಇದನ್ನು ಬೆಳೆಯಬಹುದು. ಇದಿಷ್ಟೇ ಅಲ್ಲ, ಮೊಡವೆ ಸಮಸ್ಯೆ ಇರುವವರಿಗೆ ಕರಿಬೇವು ವರದಾನ. ನಮ್ಮ ಮುಖದ ರೋಮದ ಬುಡದಲ್ಲಿ ಅತಿಯಾಗಿ ಎಣ್ಣೆ ಹಾಗೂ ಕೊಳೆ ಕುಳಿತಾಗ ಮೊಡವೆಗಳಾಗುತ್ತವೆ. ಬ್ಯಾಕ್ಟೀರಿಯಾ ಕೂಡಾ ಇದರ ಹಿಂದೆ ಕೆಲಸ ಮಾಡುತ್ತದೆ. ಹೀಗೆ ಸಾಮಾನ್ಯವಾಗಿ ಆಗುವ ಮೊಡವೆಗಳಿಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು. ಅವುಗಳಲ್ಲಿ ಕರಿಬೇವಿನ ಫೇಸ್ ಮಾಸ್ಕ್ ಕೂಡಾ ಒಂದು. 

ಅರಿಶಿನ ಮತ್ತು ಕರಿಬೇವು
ಐದರಿಂದ ಆರು ಕರಿಬೇವಿನ ಎಲೆಗಳನ್ನು ಮಿಕ್ಸಿಗೆ ಹಾಕಿ ಅದಕ್ಕೆ ಚಿಟಿಕೆ ಅರಿಶಿನ ಹಾಗೂ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮೊಡವೆಯಾದ ಭಾಗಕ್ಕೆ ಅಥವಾ ಪೂರ್ತಿ ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. 

ಅರಿಶಿನ ಕೂಡಾ ಆ್ಯಂಟಿಬ್ಯಾಕ್ಟೀರಿಯಲ್ ಆಗಿದ್ದು, ಕರಿಬೇವಿನೊಂದಿಗೆ ಮಿಕ್ಸ್ ಮಾಡಿದಾಗ ಪರಿಣಾಮಕಾರಿಯಾಗಿ ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ತೊಲಗಿಸಿ ಕೊಳೆ, ಎಣ್ಣೆ ತೆಗೆಯುತ್ತದೆ. 

ಕರಿಬೇವು, ಮೆಂತ್ಯೆ ಹಾಗೂ ರೋಸ್ ಮಾಸ್ಕ್
8ರಿಂದ 10 ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಮೆಂತ್ಯೆ ಹಾಗೂ 1 ಚಮಚ ರೋಸ್ ವಾಟರ್ ಸೇರಿಸಿ.  ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಮುಖದ ಮೇಲೆ ಎಲ್ಲ ಕಡೆ ಸಮನಾಗಿ ಹರಡುವಂತೆ ಈ ಪೇಸ್ಟನ್ನು ಹಚ್ಚಿಕೊಂಡು 20 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ತೊಳೆದು ತೆಗೆಯಿರಿ. ವಾರದಲ್ಲಿ 3 ದಿನ ಇದನ್ನು ಮಾಡಿ, ಫಲಿತಾಂಶ ಕಂಡುಕೊಳ್ಳಿ. 

ರೋಸ್ ವಾಟರ್ ನಿಮ್ಮ ತ್ವಚೆ ಪಿಎಚ್ ಮಟ್ಟ ಕಾಪಾಡಲು ಸಹಾಯ ಮಾಡುತ್ತದಾದರೆ, ಮೆಂತ್ಯೆ ಉತ್ತಮ ಆ್ಯಂಟಿ ಆಕ್ಸಿಡೆಂಟ್. ಇವನ್ನು ಕರಿಬೇವಿನೊಂದಿಗೆ ಸೇರಿಸಿದಾಗ ನಿಸ್ಂಶಯವಾಗಿ ಒಂದು ಪವರ್‌ಫುಲ್ ಮಾಸ್ಕ್ ರೆಡಿಯಾಗುತ್ತದೆ.

ಹೀಗ್ ಮಾಡಿದ್ರೆ ಬ್ಯೂಟಿ ಕ್ವೀನ್ ಆಗ್ತೀರಿ

ಕರಿಬೇವು ಹಾಗೂ ನಿಂಬೆಯ ಮಾಸ್ಕ್
ಐದರಿಂದ ಆರು ಕರಿಬೇವಿನ ಎಲೆಗಳು ಹಾಗೂ ಅರ್ಧ ಚಮಚ ನಿಂಬೆರಸ ಸೇರಿಸಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಿ. ವಾರಕ್ಕೊಮ್ಮೆ ಇದನ್ನು ಮುಖಕ್ಕೆ ಹಚ್ಚಿ. 
ನಿಂಬೆಹಣ್ಣು ತನ್ನ ಬ್ಲೀಚಿಂಗ್ ಹಾಗೂ ಆ್ಯಂಟಿ ಆಕ್ಸಿಡೆಂಟ್ ಗುಣಗಳಿಗೆ ಫೇಮಸ್. ಇದನ್ನು ಕರಿಬೇವಿನೊಂದಿಗೆ ಸೇರಿಸಿದಾಗ ಚರ್ಮವು ಕಾಂತಿ ಪಡೆಯುವುದರೊಂದಿಗೆ ಮೊಡವೆಗಳಿಂದಲೂ ಮುಕ್ತಿ  ಪಡೆಯುತ್ತದೆ. 

ಕರಿಬೇವು ಹಾಗೂ ಮುಲ್ತಾನಿ ಮಿಟ್ಟಿ
ಸ್ವಲ್ಪ ಕರಿಬೇವಿನ ಸೊಪ್ಪನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಎರಡು ಚಮಚ ಈ ಪುಡಿಯನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಮುಲ್ತಾನಿ ಮಿಟ್ಟಿ ಹಾಗೂ ಕೆಲವು ಹನಿ ರೋಸ್ ವಾಟರ್ ಸೇರಿಸಿ. ಇವುಗಳನ್ನು ಚೆನ್ನಾಗಿ ಕಲಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕತ್ತು ಹಾಗೂ ಮುಖಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ತೊಳೆದು ತೆಗೆಯಿರಿ. ಮುಲ್ತಾನಿ ಮಿಟ್ಟಿಯು ಚರ್ಮದಿಂದ ಅತಿಯಾದ ಎಣ್ಣೆ ಹೀರಿ ತೆಗೆಯುತ್ತದೆ. ರೋಸ್ ವಾಟರ್ ನೈಸರ್ಗಿಕವಾದ ಟೋನರ್. ಈ ಮೂರೂ ಸೇರಿದಾಗ ಮೊಡವೆಗಳು ಹೋಗುವ ಜೊತೆಗೆ ಸುಕ್ಕು ಕಡಿಮೆಯಾಗಿ ಚರ್ಮ ಕಾಂತಿ ಪಡೆಯುತ್ತದೆ.

ಸೌಂದರ್ಯಕ್ಕೆ ವಿನೆಗರ್

ಕರಿಬೇವು ಹಾಗೂ ಹಾಲು
ಯಾವುದೇ ಗಾಯ, ಉರಿ, ಕೀಟ ಕಚ್ಚಿದ್ದು ಹಾಗೂ ಗುಳ್ಳೆಗಳಿದ್ದರೆ ಅವನ್ನು ಹೋಗಲಾಡಿಸಲು ಹಾಲಿನಲ್ಲಿ ಸ್ವಲ್ಪ ಕರಿಬೇವಿನ ಎಲೆಗಳನ್ನು ಚೆನ್ನಾಗಿ ಕುದಿಸಿ. ಇದು ತಣ್ಣಗಾದ ಬಳಿಕ ಸಮಸ್ಯೆಯಿದ್ದಲ್ಲಿ ಹಚ್ಚಿ. ಹಾಲು ಗಾಯ ಗುಣಪಡಿಸುವ ಜೊತೆಗೆ, ಅಲರ್ಜಿ ನಿಯಂತ್ರಣಕ್ಕೆ ತಂದು ಚರ್ಮಕ್ಕೆ ಸಮಾಧಾನ ನೀಡುತ್ತದೆ.

ಕರಿಬೇವು ಹಾಗೂ ಬೆಣ್ಣೆಹಣ್ಣು ಅಥವಾ ಆಲಿವ್ ಆಯಿಲ್
ಚರ್ಮ ಒರಟೊರಟಾಗಿದ್ದರೆ ಈ ರೆಸಿಪಿ ಟ್ರೈ ಮಾಡಿ. ಏಕೆಂದರೆ ಸ್ಮೂತ್ ಆದ ಚರ್ಮವು ಆರೋಗ್ಯವಂತಿಕೆಯ ಲಕ್ಷಣ. ನಮ್ಮ ದೈನಂದಿನ ಚಟುವಟಿಕೆಗಳ ಮಧ್ಯೆ ಚರ್ಮ ಕೊಳೆ ಕಸ ಸೇರಿ ಒರಟಾಗುತ್ತದೆ. ಈ ರೆಸಿಪಿಯಿಂದ ನೀವು ಮಾಯಿಶ್ಚರ್ ಹಾಗೇ ಉಳಿಸಿಕೊಳ್ಳಬಹುದು. ಹೀಗ್ ಮಾಡಿ... ಎರಡ ಚಮಚ ಕರಿಬೇವು ಸೊಪ್ಪಿಗೆ ಅರ್ಧ ಬಟ್ಟಲು ವರ್ಜಿನ್ ಆಲಿವ್ ಆಯಿಲ್ ಅಥವಾ ಬೆಣ್ಣೆಹಣ್ಣಿನ ತಿರುಳನ್ನು ಸೇರಿಸಿ ಚೆನ್ನಾಗಿ ಕಲೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆಯ ಬಳಿಕ ತೊಳೆಯಿರಿ. ಆಲಿವ್ ಆಯಿಲ್ ಹಾಗೂ ಅವಕಾಡೋ ಎರಡರಲ್ಲೂ ಮಾಯಿಶ್ಚರೈಸಿಂಗ್ ಅಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಚರ್ಮವನ್ನು ರಿಲ್ಯಾಕ್ಸ್ ಮಾಡುತ್ತವೆ.

click me!