
‘ಮಕ್ಕಳಿರಲವ್ವಾ ಮನೆ ತುಂಬಾ’ ಗಾದೆ ಬದಲಾಗಿ, ಮಕ್ಕಳೊಂದೇ ಇರಲೆಂಬ ಕಾಲದಲ್ಲಿದ್ದೇವೆ. ಈ ನಿಯಂತ್ರಣ ನಡುವೆ ಬಂಜೆತನವೆಂಬ ಮಹಾನ್ ಪಿಡುಗೂ ಆವರಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಆಗಿದ್ದರೂ ಈ ಸಮಸ್ಯೆಗೆ ಸಂಪೂರ್ಣ ಉತ್ತರ ಕಂಡುಕೊಳ್ಳುವ ಬದಲು, ಪರ್ಯಾಯ ಮಾರ್ಗಗಳನ್ನೇ ಅನುಸರಿಸಲಾಗುತ್ತಿದೆ. ಕೃತಕ ವೀರ್ಯಧಾರಣೆ, ಪರ ವೀರ್ಯಧಾರಣೆ, ಕೃತಕ ಗರ್ಭಧಾರಣೆ, ಪ್ರನಾಳಶಿಶು ಮುಂತಾದ ಅಸ್ವಾಭಾವಿಕ ಮಾರ್ಗಗಳನ್ನು ಕಂಡುಹಿಡಿದು ಪುರುಷರ ಬಂಜೆತನ ನಿವಾರಿಸಲು ವೀರ್ಯಾಣು ಬ್ಯಾಂಕ್ ಸ್ಥಾಪಿಸಿದೆ!
ದಂಪತಿ ಯಾವುದೇ ಗರ್ಭನಿರೋಧಕ ವಿಧಾನ ಅನುಸರಿಸದೆ ಮುಕ್ತವಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿ, ಒಂದು ವರ್ಷದ ಬಳಿಕವೂ ಮಕ್ಕಳಾಗದಿದ್ದರೆ ಆ ಸ್ಥಿತಿಗೆ ‘ಪ್ರಾಥಮಿಕ ಬಂಜೆತನ’ ಕಾಡುತ್ತಿದೆ ಎಂದರ್ಥ.
ಪುರುಷರ ಬಂಜೆತನಕ್ಕೆ ಕಾರಣ: ಹೈಬ್ರಿಡ್ ಆಹಾರ, ಬದಲಾದ ಜೀವನಶೈಲಿ, ಮಲಿನ ವಾತಾವರಣ ಪುರುಷರ ಬಂಜೆತನಕ್ಕೆ ಮುಖ್ಯ ಕಾರಣ. ಶುಕ್ರವಹ ನಾಳಗಳಲ್ಲಿ ಅಡೆತಡೆಗಳು, ಸೋಂಕು ಮತ್ತು ಲೈಂಗಿಕ ಸಾಂಕ್ರಾಮಿಕ ರೋಗಗಳು, ವೆರಿಕೋಸಿಲ್, ಹಾರ್ಮೋನುಗಳ ವ್ಯತ್ಯಾಸ, ವೃಷಣಗಳ ಕಾಯಿಲೆಗಳು, ಬೊಜ್ಜು, ಒತ್ತಡ, ಧೂಮಪಾನ, ಮದ್ಯಪಾನ, ಹೆಚ್ಚು ಔಷ ಸೇವನೆ, ಅಪೌಷ್ಟಿಕತೆ, ತೂಕ ಕಡಿಮೆ ಇರುವುದು, ವಯಸ್ಸಾಗುವಿಕೆ ಮತ್ತು ಹೆಚ್ಚು ಮೊಬೈಲ್ ಬಳಕೆ- ಇವು ಕೂಡ ಕಾರಣಗಳೇ. 1 ಮಿ.ಲೀ. ವೀರ್ಯದಲ್ಲಿ ಶುಕ್ರಾಣುಗಳ ಸಂಖ್ಯೆ 20 ಮಿಲಿಯನ್ನುಗಿಂತ ಕಡಿಮೆ ಇದ್ದರೆ ಆ ಸ್ಥಿತಿಗೆ ‘ಒಲಿಗೋಸ್ಪರ್ಮಿಯಾ’ ಎನ್ನುವರು. ಇದು ಅನೇಕರಿಗೆ ಕಾಡುತ್ತಿದೆ.
ವೃಷ್ಯ ವಿಜ್ಞಾನದ ಪರಿಹಾರ: ವೀರ್ಯ (ಶುಕ್ರ) ಧಾತುವನ್ನು ಕಾಪಾಡಿಕೊಳ್ಳಲು ಮತ್ತು ಅದನ್ನು ಪುಷ್ಟಿಗೊಳಿಸಲು ಆಯುರ್ವೇದದ ವೃಷ್ಯ ವಿಜ್ಞಾನದಲ್ಲಿ ಹಲವು ಸಲಹೆಗಳಿವೆ. ಯೋಗ ವಿಜ್ಞಾನದಿಂದಲೂ ಶುಕ್ರಾಣು ಸ್ವಾಸ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಪ್ರಾಣಾಯಾಮ, ಅನುಲೋಮ, ವಿಲೋಮ ಮತ್ತು ಕಪಾಲಬಾತಿಯನ್ನು ಮತ್ತು ಹಲಾಸನ, ಸರ್ವಾಂಗಾಸನದಿಂದಲೂ ಶುಕ್ರಾಣುಗಳನ್ನು ಹೆಚ್ಚಿಸಿಕೊಳ್ಳಬಹುದು.
ಶುಕ್ರಾಣು ಹೆಚ್ಚಳಕ್ಕೆ ಔಷಧ: ಇಂಥ ಔಷಗಳ ಗುಂಪಿಗೆ ಶುಕ್ರಜನನ ಅಥವಾ ಶುಕ್ರಲ ಎಂದು ಕರೆಯುವರು. ಶುಕ್ರವು ತಂಪು, ಜಿಡ್ಡು, ಸಿಹಿ ನುಣುಪು ಗುಣಗಳಿಂದ ದ್ರವರೂಪದಲ್ಲಿರುತ್ತದೆ. ಯಾವ ಔಷಗಳಲ್ಲಿ ಮತ್ತು ಆಹಾರದಲ್ಲಿ ಈ ಗುಣಗಳಿರುತ್ತವೆಯೋ ಅವೆಲ್ಲವೂ ಶುಕ್ರವನ್ನು ಹೆಚ್ಚಿಸುವವು. ಬಾಳೇಹಣ್ಣು, ಬಾದಾಮಿ, ತುಪ್ಪ, ಹಾಲು, ಮಾವಿನ ಹಣ್ಣು, ಒಣದ್ರಾಕ್ಷಿ, ಖರ್ಜೂರ, ಶಿವನಿಹಣ್ಣು, ಪೇರಲೆ ಹಣ್ಣು, ಚಳ್ಳೆಹಣ್ಣು, ದೊಡ್ಡಯಲಚಿ ಹಣ್ಣು, ಹಲಸಿನ ಹಣ್ಣು, ರಕ್ತಶಾಲಿ (ಕೆಂಪಕ್ಕಿ) ಗೋ, ಉದ್ದು, ಸೂಪ್, ಕೋಳಿ ಮತ್ತು ಗುಬ್ಬಿಯ ಮಾಂಸ ಶುಕ್ರವೃದ್ಧಿಗೆ ಉತ್ತಮವಾದವುಗಳು.
ಎಳ್ಳು, ನುಗ್ಗೆ, ಈರುಳ್ಳಿ, ಬೆಳ್ಳುಳ್ಳಿ, ಜೀವಂತಿ (ಸಿಹಿಹಾಲೆ), ಹಾಲುಗುಂಬಳ ಗಡ್ಡೆ, ವರಾಹಿಕಂದ, ಅಶ್ವಗಂಧ, ಯಷ್ಟಿಮಧು, ಬೆಟ್ಟದನೆಲ್ಲಿ, ನೆಗ್ಗಿಲುಮುಳ್ಳು, ನಸುಗುನ್ನಿ ಬೀಜ, ಕೊಳವಂಕ ಸೊಪ್ಪಿನ ಬೀಜ, ಶಿಲಾಜಿತು, ಹಿಪ್ಪಲಿ, ನೆಲತಾಟ ಗಡ್ಡೆ, ಪುರುಷ ರತ್ನದಂತ ಮೂಲಿಕೆಗಳು ಶುಕ್ರಾಣು ಸಂಖ್ಯೆಯನ್ನು ಹೆಚ್ಚಿಸುತ್ತವೆ.
ವೀರ್ಯ ಪರೀಕ್ಷೆಯಲ್ಲಿ ಏನಿರಬೇಕು?
ಬಂಜೆತನಕ್ಕೆ ತುತ್ತಾಗಿರುವ ಪುರುಷರು ವೀರ್ಯ ಪರೀಕ್ಷೆ (ಸೆಮನ್ ಅನಾಲಿಸಿಸ್) ಮಾಡಿಸಿಕೊಳ್ಳುವುದು ಅನಿವಾರ್ಯ. ವಿಶ್ವ ಆರೋಗ್ಯ ಸಂಸ್ಥೆಯು 2010ರಲ್ಲಿ ವೀರ್ಯ ಪರೀಕ್ಷೆಯ ಲಿತಾಂಶಗಳ ಹಿಂದಿನ ಮಾನದಂಡಗಳನ್ನು ಬದಲಿಸಿಕೊಂಡು ಹೊಸ ಪ್ರಮಾಣಗಳನ್ನು ತಿಳಿಸಿದೆ. ವೀರ್ಯವನ್ನು ಪರೀಕ್ಷಿಸಿದ ರಿಪೋರ್ಟ್ ಈ ಕೆಳಗಿನ ಅಂಕಿ ಅಂಶಗಳಿಗೆ ಸಮಾನಾಗಿರಬೇಕು, ಇಲ್ಲವೇ ಅದಕ್ಕಿಂತ ಹೆಚ್ಚಿದ್ದರೆ ಅದು ಪ್ರಾಕೃತ ಎಂದು ಪರಿಗಣಿಸಬಹುದು.
ವೀರ್ಯದ ಪ್ರಮಾಣ - 1.5 ಎಂ.ಎಲ್
ಆಮ್ಲತೆ (ಪಿ.ಹೆಚ್)- 7.2 ಹೆಚ್ಚು
ವೀರ್ಯಾಣುಗಳ ಸಂಖ್ಯೆ- 15 ಮಿಲಿಯನ್/ ಎಂ.ಎಲ್
ವೀರ್ಯಾಣುಗಳ ಚಲನೆ- 40 %
ವೀರ್ಯಾಣು ಸ್ವರೂಪ- 5 %
- ಡಾ. ಎಂ. ನಾಗೇಂದ್ರ ಆಚಾರ್ಯ (ಡಾಕ್ಟ್ರಮಾತು,(ಕನ್ನಡ ಪ್ರಭ))
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.