ಇದಪ್ಪಾ ಫ್ಯಾಮಿಲಿ: 70 ಜನಕ್ಕೆ ಒಂದೇ ಮನೆ, ಒಂದೇ ಒಲೆ, ಒಂದು ಹೊತ್ತಿಗೆ 300 ರೊಟ್ಟಿ, 10 ಲೀಟರ್ ಚಹಾ!

By Suvarna Web DeskFirst Published Feb 28, 2017, 4:35 AM IST
Highlights

ಈ ಮನೆಗೆ 84 ವರ್ಷದ ಅಜ್ಜಿ ಎಲ್ಲಮ್ಮ ಅವರೇ ಹೈಕಮಾಂಡ್‌. ಅವರ ಮಾತೇ ಇಲ್ಲಿ ಆದೇಶ. ಅವರ ಆದೇಶ ಮೀರಿ ಏನೂ ನಡೆಯುವುದೇ ಇಲ್ಲ.

ವರದಿ: ಮಲ್ಲಿಕಾರ್ಜುನ ಕರಿಯಪ್ಪನವರ, ಕನ್ನಡಪ್ರಭ

ಹುಬ್ಬಳ್ಳಿ: ಇನ್ನೊಬ್ಬರು ಹೊಟ್ಟೆಕಿಚ್ಚುಪಡುವಂತಹ ಕೆಲಸ, ಕೈತುಂಬಾ ಸಂಬಳ, ಮನೆಯಲ್ಲಿ ದಂಪತಿಗಳಿಬ್ಬರೇ ಇದ್ದರೂ ಹೊಂದಾಣಿಕೆ ಕಾಣದೇ ವಿಚ್ಛೇದನ ಪಡೆಯುವರು ಈ ಕುಟುಂಬ ವನ್ನು ನೋಡಬೇಕು. ಅಜ್ಜಿಯೊಬ್ಬಳ ಆಡಳಿತದಲ್ಲಿ ಅಷ್ಟೂಜೀವಗಳು ನೆಮ್ಮದಿಯಿಂದ ಬದುಕುವು­ದನ್ನು ಕಂಡರೆ ಅವರಿಗೆ ಹೊಂದಾಣಿಕೆಯ ಪಾಠ ಮನವರಿಕೆಯಾಗಬಹುದು. 

ಇದು ಗ್ರಾಮವೊಂದರ ಕುಟುಂಬದ ಕತೆಯಲ್ಲ. ಬದಲಾಗಿ ರಾಜ್ಯದ ಎರಡನೇ ಅತಿ ದೊಡ್ಡ ನಗರ ಹುಬ್ಬಳ್ಳಿಯಲ್ಲಿ ಮನೆಯೊಂದರ ವಾಸ್ತವ ಚಿತ್ರಣ. ಇದು ಶಿರಕೋಳ ಕುಟುಂಬ. ಈ ಕುಟುಂಬ ಸದಸ್ಯರ ಸಂಖ್ಯೆ 70. ಹುಬ್ಬಳ್ಳಿ ಮಹಾನಗರದ ಮನೆಯೊಂದರಲ್ಲಿ ಇಂಥ­ದ್ದೊಂದು ಅವಿಭಕ್ತ ಕುಟುಂಬವಿದೆ. ನಗರದ ಕಾಯಿನ್‌ ರಸ್ತೆಯ ಬಾನಿ ಓಣಿಯಲ್ಲಿರುವ ಉಪ್ಪಾರ ಸಮಾಜದ ಈ ಕುಟುಂಬ, ನಗರ ಪ್ರದೇಶದಲ್ಲೂ ನೆಮ್ಮದಿಯಿಂದ ಬದುಕುತ್ತಿರುವ ಅವಿಭಕ್ತ ಕುಟುಂಬವೊಂದರ ಸಹಬಾಳ್ವೆ ಕತೆ ಹೇಳುತ್ತದೆ. 

ಕಷ್ಟವೇ ಒಗ್ಗಟ್ಟಿನ ಗುಟ್ಟು: ಶಿರಕೋಳ ಎಂಬ ಗ್ರಾಮದ ಗುರಪ್ಪ ಮತ್ತು ಎಲ್ಲಮ್ಮ ದಂಪತಿ ಈ ಕುಟುಂಬದ ರೂವಾರಿಗಳು. 60ರ ದಶಕದಲ್ಲಿ ತೀವ್ರ ಬರಗಾಲ ಆವರಿಸಿತ್ತು. ಬದುಕು ದುಸ್ತರವಾಗಿ ಬಸ್‌'ಗೆ ಹಣವಿಲ್ಲದೆ, ಈ ದಂಪತಿ ಮಕ್ಕಳ ಸಮೇತ ಹುಬ್ಬಳ್ಳಿಗೆ ನಡೆದುಕೊಂಡು ಬಂದರು. 

ಆರಂಭದಲ್ಲಿ ಅದೆಷ್ಟೋ ದಿನ ಉಪವಾಸ ಕಳೆದಿದ್ದಿದೆ. ಮಕ್ಕಳು ಬೆಳೆದಂತೆ, ಹಮಾಲಿ ಕೆಲಸ ಆರಂಭಿಸಿದರು. ಆನಂತರ ಬಾಡಿಗೆ ಬಂಡಿ ಓಡಿಸುತ್ತಿದ್ದರು. ಮಕ್ಕಳಲ್ಲಿ ದೊಡ್ಡವರಾದ ಈಶ್ವರ ಮತ್ತು ಬಸವರಾಜ ಲಾರಿ ಚಾಲಕರಾಗಿಯೇ 8 ವರ್ಷಗಳವರೆಗೆ ದುಡಿದಿದ್ದಾರೆ. 22 ಲಾರಿಗಳನ್ನು ಕೊಂಡು ದೆಹಲಿ ಮತ್ತು ಕನ್ಯಾಕುಮಾರಿವರೆಗೆ ಬಾಡಿಗೆ ಬಿಟ್ಟಿದ್ದಾರೆ. ಮನೆಯಲ್ಲಿಯೇ ಟೈರ್‌ ಮತ್ತು ಟ್ಯೂಬ್‌'ಗಳ ಅಂಗಡಿ ಆರಂಭಿಸಿದ್ದಾರೆ. ಈಗ ತಾಡಪತ್ರಿ ಗಲ್ಲಿಯಲ್ಲಿ ಟೈರ್‌ ಅಂಗಡಿ ನಡೆಯುತ್ತಿದೆ.

ಆನಂತರ 1983ರಲ್ಲಿ ಕಾಯಿನ್‌ ರಸ್ತೆಯಲ್ಲಿ ಮಿರ್ಚಿ ಅಂಗಡಿ ಆರಂಭಿಸಿದರು. ಈ ಮನೆಯ ಕಟ್ಟಡ ಸಾಮಗ್ರಿ ಮಾರಾಟ ಮಾಡುವ ಸ್ಟೀಲ್‌, ಸಿಮೆಂಟ್‌ನ ಅಂಗಡಿ, ಹೋಟೆಲ್‌, ಬಾರ್‌, ಎರಡು ಜೆಲ್ಲಿ ಕ್ರಷರ್‌ಗಳು ಸೇರಿದಂತೆ ಅನೇಕ ವ್ಯವಹಾರಗಳನ್ನು ಆರಂಭಿಸಿದ್ದಾರೆ. ಅಲ್ಲದೆ ಶಿರಕೋಳದಲ್ಲಿ 20 ಎಕರೆ ಜಮೀನನ್ನು ಉಳುಮೆ ಮಾಡುತ್ತಾರೆ. ಅಷ್ಟೊಂದು ಕಷ್ಟಪಟ್ಟು ಬಂದ ಕುಟುಂಬದ ಹಿನ್ನೆಲೆ ತಿಳಿದ ಯಾರಿಗೆ ತಾನೇ ವಿಭಕ್ತ ಕುಟುಂಬದ ಮನಸ್ಸಾಗುತ್ತದೆ ಹೇಳಿ!

ಅಜ್ಜಿಯ ಆದೇಶವೇ ಅಂತಿಮ: ಈ ಮನೆಗೆ 84 ವರ್ಷದ ಅಜ್ಜಿ ಎಲ್ಲಮ್ಮ ಅವರೇ ಹೈಕಮಾಂಡ್‌. ಅವರ ಮಾತೇ ಇಲ್ಲಿ ಆದೇಶ. ಅವರ ಆದೇಶ ಮೀರಿ ಏನೂ ನಡೆಯುವುದೇ ಇಲ್ಲ. 

ಅಷ್ಟೊಂದು ಜನರು ಯಾರು?
ಎಲ್ಲಮ್ಮ ಮತ್ತು ಗುರಪ್ಪ ದಂಪತಿಗೆ ಆರು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು. ಇವರಲ್ಲಿ ಗಂಡು ಮಕ್ಕಳಾದ ಈಶ್ವರ, ವಿರೂಪಾಕ್ಷ, ಪರಮೇಶ್ವರ, ಬಸವರಾಜು, ಸುಬ್ರಹ್ಮಣ್ಯ ಹಾಗೂ ವಜ್ರಮುನಿ, ಅವರ ಪತ್ನಿಯರು ಹಾಗೂ ಎಲ್ಲರ ಮಕ್ಕಳು, ಮತ್ತು ಅವರ ಮಕ್ಕಳು ಈ ಮನೆಯಲ್ಲಿ ವಾಸವಾಗಿದ್ದಾರೆ. ಹೆಣ್ಣುಮಕ್ಕಳು ಸಹ ಹುಬ್ಬಳ್ಳಿಯಲ್ಲೇ ವಾಸವಾಗಿದ್ದಾರೆ. 

ಅತಿಥಿ ದೇವೋಭವ: ಈ ಕುಟುಂಬದಲ್ಲಿ ನಿತ್ಯ 7 ಗಂಟೆ ಹೊತ್ತಿಗೆ ರೊಟ್ಟಿಯೇ ತಿಂಡಿ, ಕನಿಷ್ಠ 200-300 ರೊಟ್ಟಿಗಳು ನಿತ್ಯ ಈ ಮನೆಯಲ್ಲಿ ಖರ್ಚಾಗುತ್ತದೆ. ಒಮ್ಮೆ ಚಹಾ ಮಾಡಿದರೆ 10 ಲೀಟರ್‌ನಷ್ಟುಸಿದ್ಧಗೊಳ್ಳುತ್ತದೆ. ಸುಮಾರು 50ರಿಂದ 60 ಸಂಬಂಧಿಕರು ಅವರ ಮನೆಗೆ ಬರುತ್ತಾರೆ. ಎಲ್ಲರಿಗೂ ‘ಎಡಿ ಮಾಡ್ರಿ' ಎಂದೇ ಹೇಳುತ್ತಾರೆ. ಮನೆಯಲ್ಲಿ ನಿತ್ಯ ದಾಸೋಹ ನಡೆಯುತ್ತಲೇ ಇರುತ್ತದೆ. ಎಲ್ಲರಿಗೂ ಸಮನಾಗಿಯೇ ಬಡಿಸುವುದು ಈ ಮನೆಯ ಪದ್ಧತಿ.

(epaper.kannadaprabha.in)

click me!