ಸಾಂಪ್ರದಾಯಿಕ ಅಯ್ಯಂಗಾರಿ ಬ್ರಾಹ್ಮಣರ ಮದುವೆಯಲ್ಲಿ ಅನ್ನಕ್ಕೆ ಬಡಿಸುವ ಆ ಘಮ ಘಮ ಎನ್ನುವ ರುಚಿ ರುಚಿಯಾದ ಸಾರಿಗೆ ಸರಿಸಾಟಿ ಇನ್ನೊಂದಿರಲಾರದು. ಹಪ್ಪಳ ಸಂಡಿಗೆಯೊಂದಿಗೆ ಬಿಸಿ ಬಿಸಿ ಹೊಗೆಯಾಡುವ ಸಾರನ್ನು ಸವಿಯುವ ಮಜವೇ ಬೇರೆ.
ಸಾರ್ ಸಾರ್ ಸಾರ್ ಎನ್ನುತ್ತಾ ಅಡುಗೆ ಬಡಿಸುವವರು ವೇಗವಾಗಿ ಬಾಳೆಲೆಯ ಮಧ್ಯದಲ್ಲಿ ಅನ್ನದಲ್ಲಿ ಗುಳಿ ಬಿದ್ದ ಜಾಗಕ್ಕೆ , ಬಿಸಿ ಬಿಸಿ ಹೊಗೆಯಾಡುವ, ಘಮ ಘಮ ಮೂಗಿಗೆ ಬಡಿಯುವ ಸಾರನ್ನು ಹಾಕಿಕೊಂಡು ಹೋಗುತ್ತಿದ್ದರೆ, ಸುಡು ಸುಡುವನ್ನು ತಪ್ಪಿಸಿಕೊಳ್ಳುತ್ತಾ ಅದರ ಮೇಲಾಡುವ ಬೆರಳುಗಳು ಅನ್ನಕ್ಕೂ ಸಾರಿಗೂ ಮದುವೆ ಮಾಡಿಸಿ ಗಂಟಲಿಗಿಳಿದೇ ಬಿಡುತ್ತವೆ.
ಆಹಾ! ಇದು ಸಾರಿನ ಜೊತೆ ಟೇಸ್ಟ್ ಬಡ್‌ಗಳ ಸರಸವಲ್ಲದೆ ಮತ್ತೇನು? ದಕ್ಷಿಣ ಭಾರತದ ಅಡಿಗೆ ಎಂದರೆ ಸಾರು ಇರಲೇಬೇಕು. ಅದರಲ್ಲೂ ತಮಿಳರ ಕಲ್ಯಾಣ ರಸಂ ನಾಲಿಗೆಯ ಟೇಸ್ಟ್‌ಬಡ್‌ಗಳನ್ನು ರಮಿಸಿ ರಸ ತರಿಸದೆ ಇರದು. ಸಾಮಾನ್ಯವಾಗಿ ಬ್ರಾಹ್ಮಣರ ಮದುವೆ ಸಮಾರಂಭದಲ್ಲಿ ತಯಾರಿಸುವ ಪದಾರ್ಥಗಳು ಬೆಳ್ಳುಳ್ಳಿ ಈರುಳ್ಳಿ ಮುಕ್ತವಾಗಿರುತ್ತವೆಂಬುದು ನಿಮಗೂ ಗೊತ್ತು. ಹಾಗಿದ್ದರೂ ಈ ನೀರು ನೀರು ಸಾರು ಇಷ್ಟು ರುಚಿಕರ ಹೇಗೆ? ಇದನ್ನು ಮಾಡುವ ವಿಧಾನವೇನು ಕೇಳಿದಿರಾ? ಇದರ ರುಚಿಯ ದೊಡ್ಡ ಗುಟ್ಟೆಂದರೆ ತಾಜಾ ಸಾರಿನ ಪುಡಿ.
ತಯಾರಿ ಸಮಯ: 10 ನಿಮಿಷಗಳು
ಕುಕಿಂಗ್ ಸಮಯ : 20 ನಿಮಿಷಗಳು
ಸರ್ವಿಂಗ್ಸ್: 4
ಮಸಾಲೆಗೆ ಬೇಕಾಗುವ ಸಾಮಗ್ರಿಗಳು:
1 ಚಮಚ ತೊಗರಿ ಬೇಳೆ, 1 ಚಮಚ ಕೊತ್ತಂಬರಿ ಬೀಜ, ½ ಚಮಚ ಜೀರಿಗೆ, 1 ಚಮಚ ಮೆಣಸಿನಕಾಳು, 2 ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವು
ಸಾರಿನ ಸಾಮಗ್ರಿಗಳು:
1 ಟೊಮ್ಯಾಟೋ, ಹೋಳುಗಳಾಗಿ ಹೆಚ್ಚಿಕೊಂಡಿದ್ದು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ್ದು, ½ ಚಮಚ ಅರಿಶಿನ, ½ ಚಮಚ ಬೆಲ್ಲ, 1 ½ ಚಮಚ ಉಪ್ಪು, 1 ಕಪ್ ಹುಣಸೆ ರಸ, 6 ಲೋಟ ನೀರು, 1 ಕಪ್ ತೊಗರಿಬೇಳೆ ಬೇಯಿಸಿಟ್ಟುಕೊಂಡಿದ್ದು, ಸ್ವಲ್ಪ ಕರಿಬೇವು
ಮಳೆಗಾಲವನ್ನು ಬೆಚ್ಚಗಾಗಿಸುವ ಚೈನೀಸ್ ಆಲೂ ರೆಸಿಪಿಗಳು!
ಒಗ್ಗರಣೆಗೆ:
1 ಚಮಚ ತುಪ್ಪ, 1 ಚಮಚ ಸಾಸಿವೆ, ಇಂಗು ಚಿಟಿಕೆ, 1 ಒಣಮೆಣಸು, ಸ್ವಲ್ಪ ಕರಿಬೇವಿನ ಎಲೆಗಳು
ಮಾಡುವ ವಿಧಾನ:
- ರಸಂ ಪೌಡರ್
- ಬಾಣಲೆಯಲ್ಲಿ ತೊಗರಿಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಪೆಪ್ಪರ್, ಒಣಮೆಣಸು ಹಾಗೂ ಕರಿಬೇವಿನ ಎಲೆಗಳನ್ನು ಚೆನ್ನಾಗಿ ಒಣವಾಗಿ ಹುರಿದುಕೊಳ್ಳಿ. ಮಸಾಲೆ ಪರಿಮಣ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ.
ದೊಡ್ಡ ಪಾತ್ರೆಯಲ್ಲಿ ಟೊಮ್ಯಾಟೋ, ಕರಿಬೇವು, ಅರಿಶಿನ, ಬೆಲ್ಲ, ಉಪ್ಪು, ಹುಣಸೆರಸ, 3 ಲೋಟ ನೀರು ಹಾಕಿ. ತಟ್ಟೆ ಮುಚ್ಚಿಟ್ಟು 15 ನಿಮಿಷಗಳ ಕಾಲ ಬೇಯಿಸಿ. ಇದಕ್ಕೆ ಬೇಯಿಸಿದ ತೊಗರಿಬೇಳೆ ಹಾಗೂ 3 ಲೋಟ ನೀರು ಸೇರಿಸಿ. ಚೆನ್ನಾಗಿ ಕಲಸಿ, ರುಚಿಯನ್ನು ಹೊಂದಿಸಿ. ಎರಡು ನಿಮಿಷ ನೊರೆ ಬರುವವರೆಗೆ ಕುದಿಸಿ. ಇದಕ್ಕೆ ಕಲ್ಯಾಣ ರಸಂ ಪೌಡರ್, ಅರ್ಧ ಚಮಚ ಉಪ್ಪು ಸೇರಿಸಿ ಚೆನ್ನಾಗಿ ಸೌಟಾಡಿಸಿ. ಮತ್ತೆರಡು ನಿಮಿಷ ಕುದಿಸಿ. ಸ್ಟೌ ಆರಿಸಿ. ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿ ಮಾಡಿ ಸಾಸಿವೆ, ಇಂಗು, ಒಣಮೆಣಸು ಹಾಗೂ ಕರಿಬೇವಿನ ಸೊಪ್ಪನ್ನು ಚಟಪಟ ಸದ್ದು ನಿಲ್ಲುವವರೆಗೆ ಹಿಡಿದು, ಬಳಿಕ ಇದನ್ನು ಸಾರಿಗೆ ಸುರಿಯಿರಿ. ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಮೇಲಿನಿಂದ ಹಾಕಿ. ಬಿಸಿ ಬಿಸಿಯಾದ ಅನ್ನದೊಂದಿಗೆ ಕಲಸಿ ಸವಿಯಿರಿ.