
ಡ್ರ್ಯಾಗನ್ ಫ್ರೂಟ್ (Dragon Fruit ) ನೋಡಲು ಎಷ್ಟು ಆಕರ್ಷಕ (Awesome) ವಾಗಿದೆಯೋ ಅಷ್ಟೇ ಪ್ರಯೋಜನವನ್ನು ಹೊಂದಿದೆ. ಡ್ರ್ಯಾಗನ್ ಹಣ್ಣಿನಲ್ಲಿ ಸಾಕಷ್ಟು ಎಂಟಿಆಕ್ಸಿಡೆಂಟ್, ವಿಟಮಿನ್ ಸಿ, ವಿಟಮಿನ್ ಬಿ, ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಇದೆ. ರುಚಿಯಾಗಿರುವ ಡ್ರ್ಯಾಗನ್ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇದೇ ಕಾರಣಕ್ಕೆ ಡ್ರ್ಯಾಗನ್ ಹಣ್ಣು ಸೇವನೆ ಮಾಡುವಂತೆ ವೈದ್ಯರು ಕೂಡ ಸಲಹೆ ನೀಡ್ತಾರೆ. ಎಲ್ಲರೂ ಇಷ್ಟಪಡುವ ಹಣ್ಣನ್ನು ಬೆಳೆಯೋದು ಸುಲಭವಲ್ಲ. ಇದಕ್ಕೆ ಕೆಲವು ಹವಾಮಾನ (Weather) ದ ಅಗತ್ಯವಿದೆ. ಹಾಗಾಗಿ ಇದನ್ನು ಎಲ್ಲ ಕಡೆ ಬೆಳೆಯಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಹಣ್ಣಿಗೆ ಬೆಲೆ ಹೆಚ್ಚು. ಹಾಗಾಗಿ ಒಂದು ಹಣ್ಣು ಖರೀದಿ ಮಾಡಲು ಗ್ರಾಹಕರು ಮೇಲೆ - ಕೆಳಗೆ ನೋಡ್ಬೇಕು. ಬೆಲೆ ಹೆಚ್ಚು ಎಂಬ ಕಾರಣಕ್ಕೆ ಅನೇಕರು ಈ ಹಣ್ಣನ್ನು ಖರೀದಿಸೋದೆ ಇಲ್ಲ. ದುಬಾರಿ ಎಂಬ ಕಾರಣಕ್ಕೆ ಹಣ್ಣು ಖರೀದಿ ಬಿಟ್ಟಿದ್ದರೆ ಮನೆಯಲ್ಲೇ ಕೆಲ ಟಿಪ್ಸ್ ಬಳಸಿ ನೀವು ಡ್ರ್ಯಾಗನ್ ಹಣ್ಣನ್ನು ಬೆಳೆಯಬಹುದು. ಟೆರೇಸ್ ನಲ್ಲಿ ಇದನ್ನು ಬೆಳೆಸುವ ಜೊತೆಗೆ ಮಾರಾಟ ಕೂಡ ಮಾಡ್ಬಹುದು. ಇಂದು ಮನೆ ಟೆರೇಸ್ ನಲ್ಲಿ ಡ್ರ್ಯಾಗನ್ ಹಣ್ಣನ್ನು ಹೇಗೆ ಬೆಳೆಯೋದು ಎಂಬುದನ್ನು ನಾವಿಂದು ಹೇಳುತ್ತೇವೆ.
ಈ ರೀತಿಯ ಹವಾಮಾನ ಅಗತ್ಯ : ಮೊದಲೇ ಹೇಳಿದಂತೆ ಎಲ್ಲ ವಾತಾವರಣದಲ್ಲಿ ಡ್ರ್ಯಾಗನ್ ಹಣ್ಣು ಬೆಳೆಯೋದಿಲ್ಲ. ಭಾರತದಲ್ಲಿ ಕೆಲವೇ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಅದ್ರಲ್ಲಿ ಕರ್ನಾಟಕ, ಗುಜರಾತ್, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಬೆಳೆಯಲಾಗುತ್ತದೆ. ಈ ವಿಲಕ್ಷಣ ಹಣ್ಣು ಕಳ್ಳಿ ಜಾತಿಯ ಸಸ್ಯವಾಗಿದೆ. ಇದಕ್ಕಾಗಿಯೇ ಇದಕ್ಕೆ ಕಡಿಮೆ ಪ್ರಮಾಣದ ನೀರು ಬೇಕಾಗುತ್ತದೆ. ಇದನ್ನು ಬೆಳೆಯಲು ಉಷ್ಣವಲಯದ ಹವಾಮಾನ ಅಗತ್ಯವಿದೆ. ಅಂದರೆ, 25 ಡಿಗ್ರಿಯಿಂದ 35 ಡಿಗ್ರಿ ತಾಪಮಾನವನ್ನು ಈ ಸಸ್ಯಕ್ಕೆ ಹೆಚ್ಚು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಇದನ್ನು ಬೆಳೆಯಲು ಸಲಹೆ ನೀಡಲಾಗುತ್ತದೆ.
Home Garden : ಕೈತೋಟದಲ್ಲಿರುವ ಬೀನ್ಸ್ ಎಲೆಗಳು ಹಳದಿಯಾಗ್ತಿದ್ದರೆ ಈ ಟಿಪ್ಸ್ ಬಳಸಿ
ಬಾಲ್ಕನಿಯಲ್ಲಿ ಡ್ರ್ಯಾಗನ್ ಹಣ್ಣನ್ನು ಹೀಗೆ ಬೆಳೆಯಿರಿ : ಈಗಾಗಲೇ ಬಾಲ್ಕನಿಯಲ್ಲಿ ಡ್ರ್ಯಾಗನ್ ಫ್ರೂಟ್ಸ್ ಬೆಳೆದ ಬೆಳೆಗಾರರ ಪ್ರಕಾರ, ಬೀಜ ಹಾಕಿದ್ರೆ ಈ ಬೆಳೆ ಬರಲು ಸುಮಾರು 3 ವರ್ಷಗಳು ಬೇಕಾಗುತ್ತವೆ. ಟೆರೇಸ್ ಅಥವಾ ಬಾಲ್ಕನಿಯಲ್ಲಿ ಇದನ್ನು ಬೆಳೆಯಲು ನಿಮಗೆ ಮಡಕೆ, ಕೆಂಪು ಮಣ್ಣು, ಕೊಕೊಪೆಟ್, ಕಾಂಪೋಸ್ಟ್ ಮತ್ತು ಮರಳಿನ ಅಗತ್ಯವಿದೆ. ಮಡಿಕೆಯಲ್ಲಿ ಕೆಂಪು ಮಣ್ಣು, ಕೊಕೊಪೆಟ್, ಕಾಂಪೋಸ್ಟ್ ಮತ್ತು ಮರಳನ್ನು ಹಾಕಿ. ಇದರ ನಂತ್ರ ಡ್ರ್ಯಾಗನ್ ಹಣ್ಣಿನ ಬಿಜವನ್ನು ಹಾಕಬೇಕು. ಅಥವಾ ಅದರ ಕಳ್ಳಿಯನ್ನು ನೆಡಬೇಕು. ಬೇಗ ಫಲ ಬೇಕೆನ್ನುವವರು ನರ್ಸರಿಯಿಂದ ಗಿಡವನ್ನು ತಂದು ಬೆಳೆಸುವುದು ಒಳ್ಳೆಯದು. ಡ್ರ್ಯಾಗನ್ ಗಿಡವಿರುವ ಕುಂಡವನ್ನು ಸೂರ್ಯನ ಬೆಳಕು ಬರುವ ಸ್ಥಳದಲ್ಲಿ ಇರಿಸಬೇಕು. ಡ್ರ್ಯಾಗನ್ ಸಸ್ಯಕ್ಕೆ ಸೂರ್ಯನ ಬೆಳಕು, ಶಾಖ ಚೆನ್ನಾಗಿ ಸಿಗಬೇಕು. ಹೆಚ್ಚು ಉಷ್ಣತೆಯಿದ್ದಲ್ಲಿ ಗಿಡ ಬೇಗ ಬೆಳೆಯುತ್ತದೆ.
Gardening Tips: ಕೀಟಗಳಿಂದ ಗಿಡ ರಕ್ಷಿಸಲು ಇಲ್ಲಿವೆ ನೈಸರ್ಗಿಕ ಮದ್ದು!
ಡ್ರ್ಯಾಗನ್ ಗಿಡ ಬೆಳೆಯಲು ಪ್ರಾರಂಭಿಸಿದಾಗ, ಅದಕ್ಕೆ ಬೆಂಬಲ ಬೇಕಾಗುತ್ತದೆ. ಹಾಗಾಗಿ ಮಡಿಕೆಯೊಳಗೆ ಒಂದು ಗಟ್ಟಿಯಾದ ಕೋಲನ್ನು ಹಾಕಿ, ಗಿಡಕ್ಕೆ ಕಟ್ಟಬೇಕು. ಇದರಿಂದ ಗಿಡ ಕೆಳಗೆ ಬಾಗುವುದಿಲ್ಲ. ಹಾಗೆ ಗಿಡ ಹಾಳಾಗುವುದಿಲ್ಲ.
ಡ್ರ್ಯಾಗನ್ ಗಿಡವನ್ನು ನೀವು ದೊಡ್ಡ ಮಟ್ಟದಲ್ಲಿ ಬೆಳೆಸಲು ಇಚ್ಛಿಸುತ್ತೀರಿ ಎಂದಾದ್ರೆ ಹೆಚ್ಚು ಗಿಡಗಳನ್ನು ನೆಡಬೇಕು. ಆಗ ನೀವು ಸ್ವಂತ ಸೇವನೆ ಮಾಡುವುದಲ್ಲದೆ ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆಗೆ ಮಾರಾಟ ಮಾಡಿ, ಆದಾಯ ಗಳಿಸಬಹುದು. ಡ್ರ್ಯಾಗನ್ ಹಣ್ಣಿನಲ್ಲಿ ಅನೇಕ ವಿಧಗಳಿವೆ. ಅದ್ರಲ್ಲಿ ಕೆಂಪು ತಿರುಳಿನೊಂದಿಗೆ ಕೆಂಪು ಹಣ್ಣು, ಬಿಳಿ ತಿರುಳಿನೊಂದಿಗೆ ಕೆಂಪು ಹಣ್ಣು ಹಾಗೂ ಬಿಳಿ ತಿರುಳಿನೊಂದಿಗೆ ಹಳದಿ ಹಣ್ಣು ಹೆಚ್ಚು ಪ್ರಸಿದ್ಧಿ ಪಡೆದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.