ಪುಟ್ಟ ಪುಟ್ಟ ವಿಷಯಗಳು ಬದುಕಿನಲ್ಲಿ ದೊಡ್ಡ ಬದಲಾವಣೆಗಳನ್ನು ತರಬಲ್ಲವು. ಅಂತೆಯೇ ಸಂಬಂಧದಲ್ಲೂ ಕೂಡಾ. ಹತ್ತಿರದವರ ಬಳಿ ಸಾರಿ, ಥ್ಯಾಂಕ್ಸ್ ಇರಬಾರದು ಎನ್ನುತ್ತಾರೆ. ಆದರೆ, ಅವೆರಡೂ ಕೂಡಾ ನಮ್ಮ ಇಗೋವನ್ನು ದೂರವಿರಿಸುವ ತಂತ್ರಗಳು. ಆದಷ್ಟು ಅವನ್ನು ಬಳಸಿ.
ಸಂಗಾತಿಯನ್ನು ಖುಷಿಪಡಿಸಲು ರೊಮ್ಯಾಂಟಿಕ್ ನಡೆಗಳು ಸಾಕು ಅಂತನಿಸಿದರೆ ಸ್ವಲ್ಪ ಯೋಚಿಸಿ. ಇದು ಕೆಲ ಕಾಲವಷ್ಟೇ. ಆದರೆ, ಸಂಬಂಧವೊಂದು ಬಹುಕಾಲ ಉಳಿಯಬೇಕು, ಬೆಳೆಯಬೇಕು ಎಂದರೆ ಇಬ್ಬರೂ ಅದಕ್ಕಾಗಿ ಸ್ವಲ್ಪ ಪ್ರಯತ್ನ ಹಾಕಬೇಕು. ತುಂಬಾ ಸಣ್ಣ ಸಣ್ಣ ನಡೆಗಳು ಕೂಡಾ ದೊಡ್ಡ ಮಟ್ಟದ ಪರಿಣಾಮ ಬೀರಬಲ್ಲವು. ಈ ಸಣ್ಣಪುಟ್ಟ ಸಂಗತಿಗಳತ್ತ ಹೆಚ್ಚು ಗಮನ ವಹಿಸಿ.
ಮಾತಿಗೆ ಸಮಯ ಮಾಡಿಕೊಳ್ಳುವುದು
ಸಂಬಂಧಗಳ ಆರಂಭದಲ್ಲಿ ಇಡೀ ದಿನ ಮಾತು ಮಾತು ಮಾತು...ಆದರೆ ಜೊತೆಗಿರತೊಡಗಿ ವರ್ಷವಾಗುತ್ತಾ ಬಂದಂತೆಲ್ಲ ಮಾತಿಗೆ ಸಮಯವೇ ಇಲ್ಲ ಎಂಬಂತಾಗುತ್ತದೆ. ಆಗ ಇದ್ದ ಸಮಯ ಈಗೇಕಿಲ್ಲ? ಸಮಯವೆನ್ನುವುದು ನೀವು ಯಾವುದಕ್ಕೆ ಮಹತ್ವ ನೀಡುತ್ತೀರಿ ಎಂಬುದನ್ನವಲಂಬಿಸಿದೆ. ಇಷ್ಟಕ್ಕೂ ಇಡೀ ದಿನ ಮುಖ ಕಂಡಾಗೆಲ್ಲ ಮಾತಾಡುತ್ತಿರುತ್ತೀವಲ್ಲ ಎನ್ನಬೇಡಿ, ಪ್ರತಿದಿನದ ಊಟತಿಂಡಿ ವಿಷಯವಲ್ಲ. ಇಬ್ಬರೂ ಕೂಡಿ ಕನಸು ಕಾಣುವುದು, ಯೋಜಿಸುವುದು, ಭಯ, ಯಶಸ್ಸು, ಸೋಲು ಮುಂತಾದುವುಗಳ ಕುರಿತು ಆಪ್ತ ಮಾತುಕತೆಗಾಗಿ ಆಗಾಗ ಟೈಂ ಮಾಡಿಕೊಳ್ಳಿ.
ಬಾತ್‌ಟಬ್ ರೊಮಾನ್ಸ್‌ಗೂ ಮುನ್ನ ಇರಲಿ ಎಚ್ಚರ...
ಯೋಚನೆಯ ನಡೆ
ಸಂಬಂಧವು ಹಳತಾದ ಮೇಲೆ ದಂಪತಿಯು ಹಲವಾರು ವಿಷಯಗಳನ್ನು ಬೇಕಾಬಿಟ್ಟಿಯಾಗಿ ತೆಗೆದುಕೊಳ್ಳುತ್ತಾರೆ. ಈ ಅಭ್ಯಾಸ ಬಿಡಿ. ನಿಮ್ಮ ಸಂಗಾತಿಯ ಇಷ್ಟಕಷ್ಟಗಳ ಕಡೆ ಸ್ವಲ್ಪ ಎಕ್ಸ್ಟ್ರಾ ಗಮನ ಕೊಡಿ. ಅವರಿಗೆ ಮಲಗುವ ಮುಂಚೆ ಓದುವ ಅಭ್ಯಾಸ ಇದ್ದಲ್ಲಿ ಪುಸ್ತಕಗಳನ್ನು ಕೊಟ್ಟು ಸರ್ಪ್ರೈಸ್ ನೀಡುವುದು, ಪತ್ನಿಗೆ ಮೈಸೂರ್ ಪಾಕ್ ಇಷ್ಟವೆಂದಾದಲ್ಲಿ ಅಪರೂಪಕ್ಕೊಮ್ಮೆ ಮೈಸೂರ್‌ಪಾಕ್ ತಂದು ತಿನ್ನಿಸುವುದು ಮುಂತಾದ ಸಣ್ಣ ಸಣ್ಣ ಖುಷಿ ನೀಡುವ ನಡೆಯನ್ನು ಯೋಚಿಸಿ ಮಾಡಿ.
ಸಾರಿ ಹೇಳುವುದು
ಇದು ಬಹಳ ಸರಳವಾದ ಪದವಾದರೂ, ಬಹಳಷ್ಟು ಜಟಿಲ ಗಾಯಗಳನ್ನೆಲ್ಲ ಗುಣಪಡಿಸುವ ತಾಕತ್ತು ಸಾರಿಗಿದೆ. ನಿಮ್ಮ ಅಹಂಕಾರ ಯಾವತ್ತಿಗೂ ಸೋಲಲಿ. ನಿಮ್ಮ ಕಡೆಯಿಂದ ಏನೇ ತಪ್ಪಿರಲಿ, ಈಗೋ ಬದಿಗಿಟ್ಟು ಸಾರಿ ಕೇಳಿ. ನಿಮ್ಮ ತಪ್ಪಿಲ್ಲದಾಗಲೂ ಕೇಳಿದರೆ, ಮತ್ತೊಬ್ಬರಿಗೆ ಪಶ್ಚಾತ್ತಾಪವಾಗಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಲೂಬಹುದು. ಸೋತು ಗೆಲ್ಲುವ ತಂತ್ರವಿದು.
ಥ್ಯಾಂಕ್ಸ್ ಹೇಳಿ
ಸಂಗಾತಿಯನ್ನು ಸಣ್ಣ ಸಣ್ಣ ವಿಷಯಗಳಿಗೂ ಮನಸ್ಪೂರ್ತಿಯಾಗಿ ಶ್ಲಾಘಿಸಿ. ಸಣ್ಣ ಪುಟ್ಟ ಖುಷಿಗೂ ಧನ್ಯವಾದ ಅರ್ಪಿಸಿ. ಅಪ್ಪುಗೆ ಮತ್ತು ಮುತ್ತಿಗಿರುವ ತಾಕತ್ತು ಅನುಭವದಿಂದ ಅರಿತುಕೊಳ್ಳಿ.
ಐ ಲವ್ ಯೂ ಹೇಳಿ
ಹೌದು, ಇನ್ನೂ ನೀವೇನು ಹೈಸ್ಕೂಲ್ ಪ್ರೇಮಿಗಳಲ್ಲ. ಹಾಗಂತ ಇರುವ ಪ್ರೀತಿ ಹೇಳುತ್ತಿದ್ದರೆ ಖರ್ಚಾಗಿ ಹೋಗುವುದಿಲ್ಲವಲ್ಲ! ಆಗಾಗ ಆಫೀಸ್ ಬ್ಯಾಗಿನಲ್ಲೋ, ಬೆಡ್ ಮೇಲೋ ಎಲ್ಲಾದರೂ ಸರಿ, ಸಂಗಾತಿಗೆ ಸಿಗುವ ಹಾಗೆ ಒಂದು ಐ ಲವ್ ಯೂ ಅಥವಾ ಐ ಮಿಸ್ ಯೂ ನೋಟ್‌ಗಳನ್ನು ಬರೆದಿಟ್ಟರೆ ಅದರ ಮ್ಯಾಜಿಕ್ಕೇ ಬೇರೆ. ಇದು ಸುಲಭ, ಸರಳ, ಹಾಗೂ ಫ್ರೀ. ಹಾಗೂ ಸಂಗಾತಿಯ ಮುಖದಲ್ಲಿ ನಗೆ ತರಿಸುವ ಸಿಂಪಲ್ ವಿಧಾನ.
ಅವನ ಕಣ್ಣಿಗೆ ಬಿದ್ದ ಇವಳು, ಮನಸ್ಸಿನಲ್ಲಿ ನಿಲ್ಲದ ತಳಮಳ!
ದಿನ ಹೇಗಿತ್ತು ವಿಚಾರಿಸಿ
ಸಂಬಂಧಿಕರಿಗೆ ಕೇಳುವಂಥ ಕುಶಲೋಪರಿಯಲ್ಲ, ಪ್ರತಿದಿನ ಇಬ್ಬರೂ ಆಫೀಸ್‌ನಿಂದ ಮರಳಿದ ಬಳಿಕ ಒಬ್ಬರಿಗೊಬ್ಬರು ದಿನ ಹೇಗಿತ್ತು, ಅಂದು ಏನಾದರೂ ವಿಶೇಷ ಘಟಿಸಿತೇ ಮುಂತಾಗಿ ವಿಚಾರಿಸಿ. ಒಬ್ಬರು ಮಾತನಾಡುವಾಗ ಅದರ ಬಗ್ಗೆ ಆಸಕ್ತಿ ತೋರಿಸಿ.
ಫೋನ್ ದೂರವಿರಿಸಿ
ಇಬ್ಬರೂ ಒಟ್ಟಿಗಿರುವ ಸಮಯ ಸಿಕ್ಕಾಗೆಲ್ಲ ನಿಮ್ಮ ಫೋನ್ ಆದಷ್ಟು ಟೇಬಲ್ ಮೇಲೋ, ಹಾಸಿಗೆಯ ಮೇಲೋ ಬಿದ್ದಿರಲಿ. ನಿನಗಿಂತ ನನಗೆ ಫೋನೇ ಹೆಚ್ಚು, ಫೇಸ್ಬುಕ್, ವಾಟ್ಸಾಪ್, ಶಾಪಿಂಗ್ ಆ್ಯಪ್‌ಗಳೇ ಅಚ್ಚುಮೆಚ್ಚು ಎನ್ನುವಂಥ ಸಂದೇಶ ರವಾನಿಸಬೇಡಿ.
ಒಂದೇ ಸಮಯಕ್ಕೆ ಮಲಗಿ
ಒಂದೇ ಸಮಯಕ್ಕೆ ಮಲಗುವುದು ಇಬ್ಬರಿಗೂ ಕಂಫರ್ಟ್ ನೀಡುತ್ತದೆ. ಅದರಲ್ಲೂ ಬ್ಯುಸಿ ಕಪಲ್ ನೀವಾಗಿದ್ದರೆ, ರಾತ್ರಿ ಮಲಗಿದ ವೇಳೆಯಷ್ಟೇ ನಿಮ್ಮಿಬ್ಬರ ಪಾಲಿಗೆ ಒಟ್ಟಿಗೇ ಸಿಗುತ್ತಿರುತ್ತದೆ. ಹೀಗಾಗಿ, ಒಂದೇ ಸಮಯಕ್ಕೆ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಇಬ್ಬರ ನಡುವಿನ ಕನೆಕ್ಷನ್ನನ್ನು ಕೂಡಾ ಹೆಚ್ಚಿಸುತ್ತದೆ.