ಇಲ್ಲಿ ನೀರಿನ ಪಾತ್ರದೊಳಗೆ ಲಿಂಗಗಳ ಸಮ್ಮೇಳನವೇ ನಡೆದಿದೆ. ಬದಿಯಲ್ಲಿ ವಿಷ್ಣು, ಬ್ರಹ್ಮ, ಲಕ್ಷ್ಮಿ, ರಾಮ, ಹನುಮ, ನಂದಿ ನಿಂತು ನೋಡುತ್ತಾರೆ. ಕಾಂಬೋಡಿಯಾದ ಕೆಬಲ್ ಸ್ಪೀಯನ್‌ನಲ್ಲಿ ಶಿವ ಜಲಕ್ರೀಡೆಯಾಡುತ್ತಾನೆ.
ಹಿಂದೂ ನಂಬಿಕೆಗಳು, ದೇವರು, ದಿಂಡರು ಇತ್ಯಾದಿ ಕುರಿತ ಕುರುಹುಗಳು, ಕಲಾಕೆತ್ತನೆಗಳನ್ನು ನೋಡಲು ಭಾರತಕ್ಕೇ ಬರಬೇಕೆಂದಿಲ್ಲ. ಕಾಂಬೋಡಿಯಾ ಕೂಡಾ ಇಂಥ ಹಲವಾರು ನಂಬಿಕೆಗಳನ್ನು ವ್ಯಕ್ತಪಡಿಸುವ ಪುರಾತನ ಹಿಂದೂ ದೇವಾಲಯಗಳನ್ನು ಹೊಂದಿದೆ. ಅದರಲ್ಲೂ ಕಾಡಿನ ಮಧ್ಯೆ ಹರಿವ ನದಿಯ ಮಧ್ಯದಲ್ಲಿ ಸಾವಿರಾರು ಲಿಂಗಗಳ ಕೆತ್ತನೆ ಹೊತ್ತು ನಿಂತಿರುವ ಕೆಬಲ್ ಸ್ಪಿಯನ್ ಬಹಳ ವಿಶಿಷ್ಠವಾದದ್ದು. ಕಾಂಬೋಡಿಯಾದ ಆಂಕೋರ್‌ನ ಈಶಾನ್ಯದಲ್ಲಿರುವ ಈ ನದಿಯಲ್ಲಿ ಅಡಗಿರುವ ಕಲಾಕುಸುರಿ ಸಾವಿರಾರು ವರ್ಷಗಳಷ್ಟು ಹಳೆಯದೆಂದು ಅಂದಾಜಿಸಲಾಗಿದ್ದು, ಇತ್ತೀಚೆಗೆ ಅಂದರೆ 1969ರಲ್ಲಷ್ಟೇ ಬೆಳಕಿಗೆ ಬಂದಿದ್ದು ವಿಪರ್ಯಾಸ.
ಭಾರತದಲ್ಲಿದ್ದರೂ ಈ ತಾಣಕ್ಕೆ ಭಾರತಿಯರಿಗೆ ಪ್ರವೇಶ ನಿಷೇಧ!
ಏನೇನು ನೋಡಬಹುದು?
ನದಿಯ ಮಧ್ಯದ ಕಲ್ಲುಗಳ ಮೇಲೆ ಶಕ್ತಿ ಹಾಗೂ ಲಿಂಗಗಳ ಸಾಲು ಸಾಲೇ ಕೆತ್ತನೆ ಕಾಣಬಹುದಾಗಿದ್ದು, ಅದು ಶಿವನನ್ನು ಮೆಚ್ಚಿಸುವ ಆರಾಧನೆಯಾಗಿದೆ. ಇನ್ನು, ಎರಡೂ ಬದಿಯ ತಟದ ಕಲ್ಲುಗಳಲ್ಲಿ ಕಮಲದ ಮೇಲೆ ಕುಳಿತ ಬ್ರಹ್ಮ, ಅನಂತಶೇಷನ ಸುಖಾಸನದ ಮೇಲೆ ಮಲಗಿರುವ ವಿಷ್ಣು, ಆತನ ಕಾಲುಗಳನ್ನು ಒತ್ತುತ್ತಿರುವ ಲಕ್ಷ್ಮಿ, ಪ್ರಾಣಿಗಳ ಕೆತ್ತನೆ, ಅದರಲ್ಲೂ ಎತ್ತುಗಳು ಮುಂತಾದವನ್ನು ಕಾಣಬಹುದು. ದಟ್ಟ ಕಾಡಿನ ನಡುವೆ ಝುಳುಝುಳು ನಾದ ಹೊಮ್ಮಿಸಿಕೊಂಡು ಹರಿವ ಜಲರಾಶಿಯು ಇಷ್ಟೆಲ್ಲ ಕಲಾಕುಸುರಿಗಳನ್ನು ಅಡಗಿಸಿಕೊಂಡು ಒಂದು ಅತ್ಯದ್ಭುತ ನಿಸರ್ಗ ಸೌಂದರ್ಯವೇ ನಿರ್ಮಾಣವಾಗಿದ್ದರೂ, ಇಂಥ ತಾಣವೊಂದು ಅದು ಹೇಗೆ ಇಷ್ಟು ವರ್ಷಗಳ ಕಾಲ ಪ್ರವಾಸಿಗರ ಕಣ್ಣಿನಿಂದ ಹೊರಗುಳಿದಿತ್ತು ಎಂದು ಅಚ್ಚರಿಯಾಗದಿರದು.
ನೀವೇನಾದರೂ ಕಾಂಬೋಡಿಯಾಕ್ಕೆ ಭೇಟಿ ನೀಡಿದರೆ ಅರ್ಧ ದಿನವನ್ನು ಕೆಬಲ್ ಸ್ಪಿಯನ್‌ಗಾಗಿ ಮೀಸಲಿಡಿ. ಇಲ್ಲಿಗೆ ಹೋಗಲು ನೀವು ದಟ್ಟ ಕಾಡಿನ ನಡುವೆ 1500 ಮೀಟರ್ ನಡೆದೇ ಸಾಗಬೇಕು. ಇದು ಕೂಡಾ ಕೆಬಲ್ ಸ್ಪಿಯನ್ ಭೇಟಿಯನ್ನು ಮತ್ತಷ್ಟು ಮೋಹಕಗೊಳಿಸುತ್ತದೆ. ಬಹಳ ಕಠಿಣ ಹಾದಿಯಲ್ಲದಿದ್ದರೂ, ಯಾವುದೇ ಹೊರಗಿನ ಶಬ್ದಗಳಿಲ್ಲದ ಸಂಪೂರ್ಣ ಕಾಡಿನ ರುಚಿ ನೀಡುವ ಚೆಂದದ ಹಾದಿಯಿದು. ಇಲ್ಲಿ ಯಾವುದೇ ದೇಗುಲವಿಲ್ಲವಾದರೂ, ನೀರು, ನೆಲ, ಮರಗಳು, ಪ್ರಾಣಿಪಕ್ಷಿಗಳ ನಡುವೆ ಕೆಲ ಸಮಯ ಕಳೆಯುವ ಧ್ಯಾನಾವಸ್ಥೆಯ ಅನುಭವ ಅಪರೂಪವಾದುದು. ಇನ್ನು ಸಿಟಿಯಿಂದ ಹೈಕಿಂಗ್ ತಾಣದವರೆಗಿನ ಡ್ರೈವ್ ಕೂಡಾ ಕಾಂಬೋಡಿಯಾದ ಸುಂದರ ಹಳ್ಳಿಗಳು, ಅಲ್ಲಿನ ಜನಜೀವನ, ದೊಡ್ಡ ದೊಡ್ಡ ಭತ್ತದ ಗದ್ದೆಗಳನ್ನು ಕಣ್ಣೆದುರು ಸಾದರಪಡಿಸುತ್ತದೆ.
ಧಾರ್ಮಿಕತೆ, ರಹಸ್ಯದ ಒಡಲು ಯಮುನೇತ್ರಿ ಯಾತ್ರೆ!
11ನೇ ಶತಮಾನದಲ್ಲಿ ಉದಯಾದಿತ್ಯವರ್ಮನ್ II ಆಳ್ವಿಕೆಯಲ್ಲಿ ಈ ಕೆತ್ತನೆಗಳನ್ನು ಮಾಡಲಾಗಿದೆ ಎಂದು ನಂಬಲಾಗಿದೆ. ಇಲ್ಲಿ ನದಿಯ ಇಕ್ಕೆಲಗಳ ಕಲ್ಲುಗಳಲ್ಲಿ ನಿಂತಿರುವ ಹಿಂದೂ ದೇವರು ಹಾಗೂ ಶಿವಲಿಂಗಗಳ ಮೇಲೆ ಹರಿವ ನೀರು, ಈ ದೇವರುಗಳ ಆಶೀರ್ವಾದಕ್ಕೆ ಪಾತ್ರವಾಗುವುದರಿಂದ ಈ ನೀರನ್ನು ತಲೆ ಹಾಗೂ ಮುಖಕ್ಕೆ ಸಿಂಪಡಿಸಿಕೊಳ್ಳುವುದು ನಮ್ಮ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ ಎಂದು ನಂಬಲಾಗುತ್ತದೆ. ಈ ನೀರು ಇಲ್ಲಿಂದ ಆಂಕೋರ್ ನಗರಕ್ಕೆ ಹರಿಯುತ್ತದೆ. ಈ ಸಂದರ್ಭದಲ್ಲಿ ದಾರಿಯಲ್ಲಿ ಸಿಗುವ ಎಲ್ಲ ಹೊಲಗದ್ದೆಗಳನ್ನು ಫಲವತ್ತಾಗಿಸುತ್ತದೆ ಎನ್ನಲಾಗುತ್ತದೆ.
ದೃಷ್ಟಿ ದೋಷ ಸಮಸ್ಯೆ ಬಗೆ ಹರಿಸೋ ನೈನಾದೇವಿ
ಇಲ್ಲಿ ಬುದ್ಧ ಹಾಗೂ ಬೌದ್ಧ ಧರ್ಮಕ್ಕೆ ಸೇರಿದ ಕೆಲವು ಕೆತ್ತನೆಗಳನ್ನೂ ಕಾಣಬಹುದು. ಆದರೆ ಅವು ಲಿಂಗಗಳ ಕೆತ್ತನೆಯಾದ ಶತಮಾನಗಳ ಬಳಿಕ ಕೆತ್ತಲ್ಪಟ್ಟವು ಎಂದು ಊಹಿಸಲಾಗಿದೆ.
ಈ ತಾಣವು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ. ಮಳೆಗಾಲದ ಭೇಟಿಯಾದರೆ ಜಲಪಾತದ ಸೌಂದರ್ಯ ಕೂಡಾ ಕಣ್ಣೆದುರು ಕುಣಿದಾಡುತ್ತದೆ. ಇದಕ್ಕೆ ಹತ್ತಿರದಲ್ಲಿ ನಾಮ್ ಕುಲೆನ್ ನ್ಯಾಷನಲ್ ಪಾರ್ಕ್ ಇದ್ದು ಅಲ್ಲಿಗೆ ಕೂಡಾ ಭೇಟಿ ನೀಡಬಹುದು.