ಚಿನ್ನವನ್ನು ಇಷ್ಟಪಡದವರು ಯಾರಾದರೂ ಇರುತ್ತಾರೆಯೇ ಎಂದರೆ ಸ್ವಲ್ಪ ಯೋಚಿಸಬೇಕಾದ ವಿಷಯವೇ. ಪುರುಷರ ವಿಷಯ ಪಕ್ಕಕ್ಕಿಟ್ಟರೆ, ಮಹಿಳೆಯರಿಗೆ ಚಿನ್ನದ ಮೇಲೆ ಎಷ್ಟು ವ್ಯಾಮೋಹವಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮದುವೆಯಿರಲಿ, ಹಬ್ಬವಿರಲಿ ಅಥವಾ ಕಷ್ಟಕಾಲದಲ್ಲಿ ಆಸರೆಯಾಗುವ ಆಸ್ತಿಯಾಗಿರಲಿ.. ನಮಗೆ ಮೊದಲು ನೆನಪಾಗುವುದೇ ಬಂಗಾರ. ಆದರೆ ನಾವು ಅಂಗಡಿಗೆ ಹೋಗಿ ಕೊಳ್ಳುವ ಆ ಹೊಳೆಯುವ ಚಿನ್ನ ಅಷ್ಟು ಸುಲಭವಾಗಿ ನಮ್ಮ ಕೈ ಸೇರುವುದಿಲ್ಲ, ಅದರ ಹಿಂದೆ ದೊಡ್ಡ ಕಥೆಯೇ ಇದೆ ಎಂಬುದು ಕೆಲವರಿಗೆ ಮಾತ್ರ ತಿಳಿದಿರುವ ಸತ್ಯ.
ಸಾಮಾನ್ಯವಾಗಿ ನಮಗೆ ಸಿಗುವ ಚಿನ್ನದಲ್ಲಿ ಹೆಚ್ಚಿನ ಭಾಗವು ಭೂಮಿಯ ಆಳದಿಂದಲೇ ಬರುತ್ತದೆ. ಚಿನ್ನವಿರುವ ಬಂಡೆಗಳನ್ನು ಗುರುತಿಸಿ, ಅಲ್ಲಿ ದೊಡ್ಡ ದೊಡ್ಡ ಸುರಂಗಗಳು ಅಥವಾ ಗುಂಡಿಗಳನ್ನು ತೋಡಲಾಗುತ್ತದೆ. ಆ ಕಲ್ಲುಗಳನ್ನು ಹೊರಗೆ ತಂದು, ಪುಡಿ ಮಾಡಿ, ಕೆಲವು ರಾಸಾಯನಿಕಗಳನ್ನು (ಕೆಮಿಕಲ್ಸ್) ಬೆರೆಸಿ ಅದರಿಂದ ಅಪ್ಪಟ ಚಿನ್ನವನ್ನು ಬೇರ್ಪಡಿಸಲಾಗುತ್ತದೆ.
ಅದೇ ರೀತಿ ಕೆಲವು ನದಿಗಳು ಬೆಟ್ಟ-ಗುಡ್ಡಗಳು ಮತ್ತು ಚಿನ್ನದ ಗಣಿಗಳಿರುವ ಪ್ರದೇಶಗಳ ಮೂಲಕ ಹರಿಯುತ್ತವೆ. ನೀರಿನ ರಭಸಕ್ಕೆ ಆ ಕಲ್ಲುಗಳು ಸವೆದು, ಸಣ್ಣ ಸಣ್ಣ ಚಿನ್ನದ ಕಣಗಳು ನೀರಿನಲ್ಲಿ ಕೊಚ್ಚಿಕೊಂಡು ಬಂದು ನದಿಯ ದಡದಲ್ಲಿರುವ ಮರಳಿನಲ್ಲಿ ಸೇರಿಕೊಳ್ಳುತ್ತವೆ. ಅಲ್ಲಿನ ಸ್ಥಳೀಯರು ಜರಡಿ ರೀತಿಯ ತಟ್ಟೆಗಳಿಂದ ಮರಳನ್ನು ತೊಳೆದು, ಆ ಚಿನ್ನದ ಕಣಗಳನ್ನು ಆರಿಸಿಕೊಳ್ಳುತ್ತಾರೆ. ಈ ರೀತಿಯಾಗಿ ಭಾರತದ ಕೆಲವು ನದಿಗಳ ಮರಳಿನಲ್ಲಿ ಚಿನ್ನದ ಕಣಗಳು ಸಿಗುತ್ತವೆ. ಅಷ್ಟಕ್ಕೂ ಯಾವ ನದಿಗಳಲ್ಲಿ ಚಿನ್ನ ಸಿಗುತ್ತದೆ? ಮರಳಿನಿಂದ ಅದನ್ನು ಹೇಗೆ ಹೊರತೆಗೆಯುತ್ತಾರೆ ಎಂಬುದನ್ನು ತಿಳಿಯೋಣ..
ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಮೂಲಕ ಹರಿಯುವ ಸ್ವರ್ಣರೇಖಾ ನದಿಯು ಚಿನ್ನದ ಕಣಗಳಿಗೆ ಪ್ರಸಿದ್ಧಿಯಾಗಿದೆ. 'ಸ್ವರ್ಣರೇಖಾ' ಎಂದರೆ ಬಂಗಾರದ ರೇಖೆ ಎಂದರ್ಥ. ಈ ನದಿಗೆ ಆ ಹೆಸರು ಬರಲು ಕೂಡ ಇಲ್ಲಿನ ಮರಳಿನಲ್ಲಿ ಸಿಗುವ ಚಿನ್ನದ ಕಣಗಳೇ ಕಾರಣ ಎಂದು ಹೇಳಲಾಗುತ್ತದೆ. ಈ ನದಿಯ ಮರಳಿನಲ್ಲಿ ಸಣ್ಣ ಸಣ್ಣ ಚಿನ್ನದ ಕಣಗಳು ಕಂಡುಬರುತ್ತವೆ. ಸ್ಥಳೀಯವಾಗಿ ವಾಸಿಸುವ ಕೆಲವು ಜನರು ತಲೆತಲಾಂತರಗಳಿಂದ ನದಿಯ ಮರಳನ್ನು ಸಂಗ್ರಹಿಸಿ, ಚಿನ್ನದ ಕಣಗಳನ್ನು ಬೇರ್ಪಡಿಸಿ ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ.
ಒಡಿಶಾದ ಸುಂದರ್‌ಗಢ್ ಜಿಲ್ಲೆಯಲ್ಲಿ ಹರಿಯುವ ಇಬ್ ನದಿ ಕೂಡ ಚಿನ್ನದ ಕಣಗಳು ಸಿಗುವ ನದಿಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ಈ ನದಿಯ ಮರಳಿನಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಚಿನ್ನದ ಕಣಗಳು ಕಾಣಸಿಗುತ್ತವೆ. ಆದರೆ ಇಲ್ಲಿ ಚಿನ್ನವು ಬಹಳ ಕಡಿಮೆ ಪ್ರಮಾಣದಲ್ಲಿ ಲಭ್ಯವಾಗುತ್ತದೆ.
ಒಡಿಶಾದಲ್ಲಿ ಹರಿಯುವ ಮಹಾನದಿಯನ್ನು ಸಹ ಚಿನ್ನದ ಕುರುಹುಗಳಿರುವ ನದಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.
ಗಂಗಾ ನದಿಯ ಉಪನದಿಯಾದ 'ಸೋನ್ ನದಿ' (Son River) ಒಡಲಿನಲ್ಲಿಯೂ ಚಿನ್ನದ ಕಣಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ಮಧ್ಯಪ್ರದೇಶದ ಅಮರಕಂಟಕ್ ಪ್ರದೇಶದಲ್ಲಿ ಹುಟ್ಟುವ ಈ ನದಿಯ ಮರಳಿನಲ್ಲಿ ಬಂಗಾರದ ಕಣಗಳಿರುತ್ತವೆ ಎಂಬುದು ಸ್ಥಳೀಯರ ನಂಬಿಕೆ.
ಅರುಣಾಚಲ ಪ್ರದೇಶದಲ್ಲಿ ಹರಿಯುವ 'ಲೋಹಿತ್ ನದಿ' (Lohit River) ಮರಳಿನಲ್ಲಿಯೂ ಚಿನ್ನದ ನಿಕ್ಷೇಪಗಳಿವೆ ಎಂದು ತಜ್ಞರು ಹೇಳುತ್ತಾರೆ. ಇದನ್ನು ಸ್ಥಳೀಯರು 'ಬ್ಲಡ್ ರಿವರ್' ಎಂದೂ ಕರೆಯುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.