ಊಟದ ರುಚಿ ಹೆಚ್ಚಿಸುವ ಸ್ಪೈಸಿ ಮಾವಿನಕಾಯಿ ಚಟ್ನಿ ಮಾಡುವ ವಿಧಾನ; ಕೇವಲ 10 ನಿಮಿಷದಲ್ಲಿ ರೆಡಿ!

Published : Nov 27, 2026, 10:48 PM IST
spicy mango chutney

ಸಾರಾಂಶ

ಊಟದ ರುಚಿ ಹೆಚ್ಚಿಸುವ ಖಾರ ಖಾರವಾದ ಸ್ಪೈಸಿ ಮಾವಿನಕಾಯಿ ಚಟ್ನಿಯನ್ನು ಕೇವಲ 10 ನಿಮಿಷಗಳಲ್ಲಿ ಮನೆಯಲ್ಲೇ ಮಾಡುವುದು ಹೇಗೆ? ಸರಳ ಪದಾರ್ಥಗಳೊಂದಿಗೆ ರುಚಿಕರ ಚಟ್ನಿ ತಯಾರಿಸುವ ಹಂತ-ಹಂತದ ಸುಲಭ ವಿಧಾನ ಇಲ್ಲಿದೆ.

ಊಟದ ರುಚಿ ಹೆಚ್ಚಿಸಲು, ಇನ್ನು ಎರಡು ತುತ್ತು ಹೆಚ್ಚು ಹೋಗ ಬೇಕೆಂದರೆ, ಅದಕ್ಕೆ ಉಪ್ಪಿನ ಕಾಯಿಯೇ ಮದ್ದು. ಅದರೊಂದಿಗೆ ಅದೇ ರೀತಿ ಈ ಚಟ್ನಿಯೂ ಇದೀಗ ಹೆಸರು ವಾಸಿಯಾಗಿದೆ. ಅದರಲ್ಲಿ ಎರಡೂ ಮಾತಿಲ್ಲ. ಹಾಗಾದರೆ, ರುಚಿ ಹೆಚ್ಚಿಸಲು ಕೊಂಚ ಖಾರದ ಸ್ಪೈಸಿ ಮಾವಿನ ಕಾಯಿ ಚೆಟ್ನಿ ಮಾಡುವುದೇಗೆ? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ. ಒಂದು ಮಧ್ಯಮ ಗಾತ್ರದ ಹಸಿ (ಹುಳಿ) ಮಾವಿನಕಾಯಿ ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ ಅಥವಾ ತುರಿದಿಟ್ಟುಕೊಳ್ಳಿ. 5-6 ಒಣ ಮೆಣಸಿನಕಾಯಿ, 4-5 ಬೆಳ್ಳುಳ್ಳಿ ಎಸಳು, 1 ಟೀ ಚಮಚ ಜೀರಿಗೆ, ಅರ್ಧ ಕಪ್ ತೆಂಗಿನಕಾಯಿ ತುರಿ (ಬೇಕಿದ್ದರೆ), ಒಂದು ಸಣ್ಣ ತುಂಡು ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸಿದ್ಧಪಡಿಸಿಟ್ಟುಕೊಳ್ಳಿ.

ಹುರಿಯುವ ಹಂತ!

ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ, ಅದಕ್ಕೆ ಒಣ ಮೆಣಸಿನಕಾಯಿ ಮತ್ತು ಜೀರಿಗೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಮೆಣಸಿನಕಾಯಿ ಗರಿಗರಿಯಾದ ನಂತರ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ 30 ಸೆಕೆಂಡ್ ಫ್ರೈ ಮಾಡಿ ಸ್ಟವ್ ಆರಿಸಿ. ಹುರಿದ ಮಿಶ್ರಣವನ್ನು ತಣ್ಣಗಾಗಲು ಬಿಡಿ. ತದನಂತರ ಮಿಕ್ಸಿಗೆ ಹಾಕಬೇಕು. ಅದರ ನಂತರ ಕಾರ್ಯ ವಿಧಾನ ಮುಂದೆ ನೋಡೋಣ ಬನ್ನಿ.

ರುಬ್ಬುವ ಹಂತ!

ಮಿಕ್ಸಿ ಜಾರ್‌ಗೆ ಹೆಚ್ಚಿದ ಮಾವಿನಕಾಯಿ ತುಂಡುಗಳು, ತಣ್ಣಗಾದ ಮೆಣಸಿನಕಾಯಿ-ಬೆಳ್ಳುಳ್ಳಿ ಮಿಶ್ರಣ, ತೆಂಗಿನಕಾಯಿ ತುರಿ, ಸಣ್ಣ ತುಂಡು ಬೆಲ್ಲ ಮತ್ತು ಉಪ್ಪು ಹಾಕಿ. ನೀರು ಹಾಕದೆ (ಅಗತ್ಯವಿದ್ದರೆ ಕೇವಲ 1-2 ಚಮಚ ನೀರು ಸೇರಿಸಿ) ತರಿತರಿಯಾಗಿ ರುಬ್ಬಿಕೊಳ್ಳಿ. ನುಣ್ಣಗೆ ಪೇಸ್ಟ್ ಮಾಡುವುದಕ್ಕಿಂತ ಸ್ವಲ್ಪ ತರಿತರಿಯಾಗಿದ್ದರೆ ರುಚಿ ಹೆಚ್ಚು. ಸಣ್ಣ ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ, ಸಾಸಿವೆ, ಉದ್ದಿನಬೇಳೆ, ಕರಿಬೇವು ಮತ್ತು ಚಿಟಿಕೆ ಇಂಗು ಹಾಕಿ ಸಿಡಿಸಿ. ಬಿಸಿ ಒಗ್ಗರಣೆಯನ್ನು ರುಬ್ಬಿದ ಚಟ್ನಿಯ ಮೇಲೆ ಸುರಿದು ಚೆನ್ನಾಗಿ ಕಲಸಿ. ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಹಾಕಿ ಈ ಚಟ್ನಿಯೊಂದಿಗೆ ಕಲಸಿ ತಿಂದರೆ ಅಥವಾ ದೋಸೆ, ರೊಟ್ಟಿ ಜೊತೆ ಸವಿದರೆ ಅದ್ಭುತವಾಗಿರುತ್ತದೆ.

ಸಂಗ್ರಹಿಸಿಡುವುದೇಗೆ?

ಈ ಚಟ್ನಿಯನ್ನು ರುಬ್ಬುವಾಗ ನೀರು ಬಳಸದೆ ತಯಾರಿಸಿದರೆ, ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ 4 ರಿಂದ 5 ದಿನಗಳವರೆಗೆ ಕೆಡದಂತೆ ತಾಜಾವಾಗಿರುತ್ತದೆ. ಪ್ರಯಾಣದ ಸಮಯದಲ್ಲೂ ಚಪಾತಿ ಅಥವಾ ರೊಟ್ಟಿಯ ಜೊತೆ ಕೊಂಡೊಯ್ಯಲು ಇದು ಉತ್ತಮ. ನಿಮಗೆ ಸಮಯವಿಲ್ಲದಿದ್ದರೆ ಅಥವಾ ಹಸಿ ರುಚಿ ಇಷ್ಟವಾದರೆ, ಮೆಣಸಿನಕಾಯಿಯನ್ನು ಹುರಿಯದೆ ಹಸಿಯಾಗಿಯೇ (ಕೇವಲ ಹಸಿ ಮೆಣಸಿನಕಾಯಿ, ಕಾಯಿತುರಿ, ಮಾವಿನಕಾಯಿ ಮತ್ತು ಉಪ್ಪು ಹಾಕಿ) ರುಬ್ಬಿಕೊಂಡು ಮೇಲಿಂದ ಒಗ್ಗರಣೆ ಕೊಟ್ಟರೂ ಸಖತ್ ರುಚಿಯಾಗಿರುತ್ತದೆ.

ಆರೋಗ್ಯದ ಪ್ರಯೋಜನ!

ಹಸಿ ಮಾವಿನಕಾಯಿಯಲ್ಲಿ ವಿಟಮಿನ್ 'ಸಿ' ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತದೆ. ಮಾವಿನಕಾಯಿ ಅತಿಯಾಗಿ ಹುಳಿಯಾಗಿದ್ದರೆ ಸ್ವಲ್ಪ ಬೆಲ್ಲದ ಪ್ರಮಾಣವನ್ನು ಹೆಚ್ಚಿಸಿ. ಒಂದುವೇಳೆ ಮಾವಿನಕಾಯಿ ಸಿಹಿಯಾಗಿದ್ದರೆ ಅರ್ಧ ಚಮಚ ನಿಂಬೆರಸ ಅಥವಾ ಸ್ವಲ್ಪ ಹುಣಸೆಹಣ್ಣು ಸೇರಿಸಿದರೆ ಚಟ್ನಿಯ ಖಾರ-ಹುಳಿ ರುಚಿ ಸರಿಯಾಗಿ ಹೊಂದಿಕೊಳ್ಳುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪರ್ಫೆಕ್ಟ್‌ ಅವರೆಕಾಳು ಉಪ್ಪಿಟ್ಟು ಮಾಡಲು ಈ ಟಿಪ್ಸ್ ಫಾಲೋ ಮಾಡಿ Hitikida Avarekalu
ಮಸಾಲೆ ರುಬ್ಬುವ ಕೆಲಸವೇ ಇಲ್ಲ.. ಕುಕ್ಕರ್‌ನಲ್ಲಿ ಕ್ಷಣಾರ್ಧದಲ್ಲಿ ಮಾಡಿ ರುಚಿರುಚಿಯಾದ ಎಗ್ ಕರಿ