ಮನೆಯಲ್ಲಿ ಕೆಲಸ ಮುಗಿಸಿ, ಆಫೀಸ್‌ನಲ್ಲಿ ಕೆಲಸ ಮಾಡುವುದಕ್ಕಿಂತಲೂ ಬೆಂಗಳೂರಿನಂಥ ಊರಿನಲ್ಲಿ ಟ್ರಾವೆಲಿಂಗ್ ಉದ್ಯೋಗಿಗಳನ್ನು ಹೈರಾಣಾಗಿಸುತ್ತದೆ. ಒತ್ತಡವನ್ನು ಹೆಚ್ಚಿಸುವ ಜೀವನಶೈಲಿಯಲ್ಲಿ ರಿಲ್ಯಾಕ್ಸ್ ಆಗೋ ಸಿಂಪಲ್ ಟೆಕ್ನಿಕ್ ಹರ್ಬಲ್ ಬಾತ್. ಏನಿದು?
ಅಯ್ಯೋ, ಸಿಕ್ಕಾಪಟ್ಟೆ ಸುಸ್ತು, ಈ ಕೆಲಸದ ಒತ್ತಡದಲ್ಲಿ ಆಕಾಶ ತಲೆ ಮೇಲೆ ಬಿದ್ದಂತೆ ಅನಿಸುತ್ತಿದೆ, ಚರ್ಮದ ಆರೈಕೆ ಮಾಡಿಕೊಳ್ಳದೆ ಎಷ್ಟು ದಿನಗಳಾದವು, ಮೈಕೈ ಎಲ್ಲ ನೋವು, ನಿದ್ದೆ ಸರಿಯಾಗಿ ಬರ್ತಾ ಇಲ್ಲ ಅಂತ ಒದ್ದಾಡುತ್ತಿದ್ದೀರಾ? ಹಾಗಿದ್ದರೆ, ನಿಮ್ಮನ್ನು ನೀವೇ ಪ್ಯಾಂಪರ್ ಮಾಡಿಕೊಳ್ಳಲು, ಮನಸ್ಸಿಗೊಂದಿಷ್ಟು ಚೈತನ್ಯ ತುಂಬಲು, ದಣಿವು ಓಡಿಸಲು ಸುಲಭದ ವಿಧಾನವೊಂದು ಇಲ್ಲಿದೆ. ಅದೇ ಸ್ಪಾ ಬಾತ್ ಇಲ್ಲವೇ ಹರ್ಬಲ್ ಬಾತ್. ಸಾವಿರಾರು ವರ್ಷಗಳಿಂದಲೂ ಸಾಗಿ ಬಂದಿರುವ ಹರ್ಬಲ್ ಬಾತ್ ನೋವು ನಿವಾರಕವಾಗಿರುವುದಲ್ಲದೆ, ಶೀತ ಗುಣಪಡಿಸಿ, ರಕ್ತ ಸಂಚಲನ ಹೆಚ್ಚಿಸಿ ಮನಸ್ಸು ಹಾಗೂ ದೇಹಕ್ಕೆ ಸಮಾಧಾನ ನೀಡುವುದು. ಗಿಡಮೂಲಿಕೆಗಳ ಔಷಧೀಯ ಗುಣಗಳು ನೀರಿನಲ್ಲಿ ಬೆರೆತು ನಿಮ್ಮ ಆರೈಕೆ ಮಾಡುತ್ತವೆ.
ರೋಸ್ ಬಾತ್
undefined
ಗುಲಾಬಿ ಪರಿಮಳ ಇಷ್ಟ ಪಡದವರಾರು? ಈ ಸುಗಂಧದ ಸೆಳೆತ ಬಹುಷಃ ಯಾವ ರಾಜಕುಮಾರಿಯನ್ನೂ ಬಿಟ್ಟಿಲ್ಲ. ಇದನ್ನು ನಿಮ್ಮ ಸ್ನಾನದ ನೀರಿನಲ್ಲಿ ಬಳಸಿದರೆ ಖಂಡಿತಾ ಕ್ಲಿಯೋಪಾತ್ರ ಫೀಲಿಂಗ್‌ನಲ್ಲಿ ತೇಲಾಡುವಿರಿ. ಈ ಹೂವಿನ ಔಷಧೀಯ ಗುಣಗಳು ಚರ್ಮಕ್ಕೆ ಕಾಂತಿ ನೀಡುವುದಲ್ಲದೆ, ಬೇಸಿಗೆಯಲ್ಲಿ ಉಷ್ಣವನ್ನು ಹೊರಗಳೆದು ಮನಸ್ಸನ್ನು ಶಾಂತಗೊಳಿಸಬಲ್ಲ ಗುಣ ಹೊಂದಿವೆ. ಹೇಗೆ ಬಳಸೋದು ಅಂದ್ರಾ? ಸಿಂಪಲ್, ಒಣಗಿದ ಗುಲಾಬಿ ದಳಗಳು, ಕ್ಯಾಮೋಮೈಲ್ (ಬೀಜದ ಸೇವಂತಿಗೆ) ಹೂವು, ಗ್ರೀನ್ ಟೀ ಎಲೆಗಳು ಹಾಗೂ ಎಸ್ಸೆನ್ಷಿಯಲ್ ಆಯಿಲ್ (ಸೊಪ್ಪಿನ ಎಣ್ಣೆ), ಕಾಯಿ ಹಾಲನ್ನು ಬಿಸಿನೀರಿಗೆ ಸೇರಿಸಿ, ಅದರಲ್ಲಿ ಸುಧೀರ್ಘ ಸ್ನಾನ ಮಾಡಿ.
ನಿಮ್ಮದು ಡ್ರೈಸ್ಕಿನ್ ಆಗಿದ್ದಲ್ಲಿ ಈ ಆಹಾರಗಳಿಂದ ದೂರವಿರಿ..
ಚೆಂಡು ಹೂವಿನ ಸ್ನಾನ
ಚೆಂಡು ಹೂವು ಚರ್ಮದ ತೊಂದರೆಗಳನ್ನು ನೀಗಿಸಿ ಮಾಯಿಸ್ಚರೈಸರ್‌ನಂತೆ ಕೆಲಸ ಮಾಡವುದು. ಅರ್ಧ ಕಪ್ ಒಣಗಿದ ಚೆಂಡು ಹೂವಿನೊಂದಿಗೆ ರೋಸ್ ಪೆಟಲ್ಸ್ ಸೇರಿಸಿ, ಲ್ಯಾವೆಂಡರ್ ಎಣ್ಣೆ ಬೆರೆಸಿ. ಇದನ್ನು ಸ್ನಾನದ ನೀರಿನಲ್ಲಿ ಬಳಸಿ. ಚರ್ಮವು ತಂಪಾಗಿ, ಕಾಂತಿಯುತವಾಗಿ ಕಾಣುತ್ತದೆ.
ಕಾಮಕಸ್ತೂರಿ
ಕಾಮಕಸ್ತೂರಿ ಸೊಪ್ಪಿನ ಸುಗಂಧಕ್ಕೆ ನಮ್ಮ ಇಂದ್ರಿಯಗಳನ್ನು ಜಾಗೃತಗೊಳಿಸಿ, ಹೊಸ ಶಕ್ತಿ ನೀಡುವ ಗುಣವಿದೆ. 5-10 ಸೊಪ್ಪನ್ನು ಸ್ನಾನದ ನೀರಿಗೆ ಹಾಕಿ 15 ನಿಮಿಷಗಳ ಬಳಿಕ ಸ್ನಾನ ಮಾಡುವುದರಿಂದ ತುರಿಕೆ, ಉರಿಯಂಥ ಚರ್ಮವ್ಯಾಧಿಗಳೂ ದೂರಾಗುವುವಲ್ಲದೆ, ಫ್ರೆಶ್ ಫೀಲಿಂಗ್ ಕೂಡಾ ಬರುವುದು.
ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹೇರಳವಾಗಿದ್ದು, ಅದು ನಿಮ್ಮ ಚರ್ಮವನ್ನು ಯಂಗ್ ಆಗಿಡಲು ಸಹಾಯ ಮಾಡುತ್ತದೆ. ರ‍್ಯಾಶಸ್ ಹೋಗಲಾಡಿಸಿ, ತ್ವಚೆಗೆ ನವಿರು ಸ್ಪರ್ಶ ನೀಡುತ್ತದೆ. ಗ್ರೀನ್ ಟೀ ಒಣ ಎಲೆಗಳನ್ನು ನೀರಿಗೆ ಹಾಕಿ ಕೆಲ ಕಾಲ ಬಿಟ್ಟು, ನಂತರ ಆ ನೀರಿನಲ್ಲಿ ಸ್ನಾನ ಮಾಡಿ.
ಪುದೀನಾ ಬಾತ್
ಪುದೀನಾ ಸೊಪ್ಪಿನ ಕ್ರಿಮಿನಾಶಕ ಗುಣ ಎಣ್ಣೆ ಚರ್ಮದಿಂದ ಉಂಟಾಗುವ ವ್ಯಾಧಿಗಳ ನಿವಾರಣೆಗೆ ಉತ್ತಮವಾಗಿದೆ. ಅಲ್ಲದೆ ಪುದೀನಾದ ಸುಗಂಧ ಬಹಳ ರಿಫ್ರೆಶಿಂಗ್ ಆಗಿದ್ದು, ಒತ್ತಡ ನಿವಾರಿಸಿ, ಒಳ್ಳೆಯ ನಿದ್ದೆ ತರುವಲ್ಲಿ ಸಹಾಯಕವಾಗಿದೆ. ಪುದೀನಾ ನೆನೆಸಿದ ನೀರಿನಲ್ಲಿ ಅರ್ಧ ನಿಂಬೆ ರಸವನ್ನು ಸೇರಿಸಿ ಸ್ನಾನ ಮಾಡಿ.
ಇವಲ್ಲದೆ ಲವಂಗ, ಕೊತ್ತಂಬರಿ ಸೊಪ್ಪು, ಲ್ಯಾವೆಂಡರ್, ದೊಡ್ಡಪತ್ರೆ, ನೀಲಗಿರಿ, ತುಂಬೆ, ನಿಂಬೆ ಹುಲ್ಲು ಮುಂತಾದ ಹರ್ಬಲ್ ಉತ್ಪನ್ನಗಳನ್ನು ನಿಮ್ಮ ಸ್ನಾನದಲ್ಲಿ ಬಳಸಬಹುದು. ಒಂದು ವೇಳೆ ಇವುಗಳು ಕಸದಂತೆ ಮೈಗಂಟುವುದು ಬೇಡವಾದಲ್ಲಿ, ಗಿಡಮೂಲಿಕೆಗಳನ್ನು ಬಿಸಿನೀರಿನಲ್ಲಿ ಕುದಿಸಿ ಶೋಧಿಸಿ, ಸ್ನಾನದ ನೀರಿಗೆ ಸೇರಿಸಿ ಬಳಸಬಹುದು.