
ಬೀಡಾಡಿ ದನಗಳು ಹಾವಳಿ ನೀಡುತ್ತವೆ ಎಂದು ದೂರ ಓಡಿಸೋರೆ ಜಾಸ್ತಿ ಆದರೆ ತರಕಾರಿ ಮಾರುವ ವ್ಯಾಪಾರಿ ಹಾಗೂ ಬೀಡಾಡಿ ಹಸುವೊಂದರ ಪ್ರೀತಿಯ ಒಡನಾಟ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ Healing Zone ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ.
ವೀಡಿಯೋದಲ್ಲಿ ಕಾಣಿಸುವಂತೆ ಬೀಡಾಡಿ ಹಸುವೊಂದು ತರಕಾರಿ ಮಾರುವವನ ಬಳಿ ಬಂದು ಆತನ ಮುಖದ ಬಳಿ ಮುಖ ತೆಗೆದುಕೊಂಡು ಬಂದು ಪ್ರೀತಿ ಮಾಡುತ್ತದೆ. ತಿನ್ನಲು ಏನಾದರು ನೀಡು ಎಂದು ಮೂಕಭಾಷೆಯಲ್ಲೇ ಕೇಳುತ್ತಿದೆ. ಸಾಮಾನ್ಯವಾಗಿ ಕೆಲ ದನಗಳು ರಸ್ತೆ ಬದಿ ತರಕಾರಿ ಇದ್ದರೆ ಸೀದಾ ತಿನ್ನಲು ಬರುತ್ತವೆ. ಆದರೆ ಈ ಹಸು ಹಾಗಲ್ಲ, ಕಣ್ಣ ಮುಂದೆ ರಾಶಿ ರಾಶಿ ತರಕಾರಿ ಇದ್ದರೂ, ತರಕಾರಿ ವ್ಯಾಪಾರಿ ಆತನ ಕೈಯಾರೆ ನೀಡುವವರೆಗೂ ಕಣ್ಣ ಮುಂದಿರುವ ಯಾವ ತರಕಾರಿಯನ್ನೂ ಅದು ತಿನ್ನುವುದಿಲ್ಲ. ಬಾಯಿ ಬಾರದ ಮೂಕ ಪ್ರಾಣಿಯ ಈ ವರ್ತನೆ ಅನೇಕರನ್ನು ಭಾವುಕಗೊಳಿಸಿದೆ.
ವೀಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬರು ಸಿಹಿ ಕುಂಬಳವನ್ನು ಕತ್ತರಿಸಿ ಗ್ರಾಹಕರೊಬ್ಬರಿಗೆ ನೀಡುತ್ತಿದ್ದಾರೆ. ಅದೇ ವೇಳೆ ಹಸು ಆತನ ಬೆನ್ನಿಗಂಟಿಕೊಂಡೆ ಅಲ್ಲಿ ನಿಂತಿದ್ದು, ಆತನ ಮುಖದ ಬಳಿ ಮುಖ ತೆಗೆದುಕೊಂಡು ಹೋಗಿ ತಿನ್ನಲು ಏನಾದರು ಇದ್ದರೆ ಕೊಡು ಎಂಬಂತೆ ಕೇಳುವಂತಿದೆ ಹಸುವಿನ ವರ್ತನೆ . ಹಸುವಿನ ಈ ಪ್ರೀತಿಪೂರ್ವಕವಾದ ಮನವಿಗೆ ಯಾರ ಹೃದಯ ಕರಗದೇ ಇರದು, ಹಾಗೆಯೇ ಗ್ರಾಹಕನಿಗೆ ತರಕಾರಿ ನೀಡಿದ ನಂತರ ವ್ಯಾಪಾರಿಯೂ ಕೂಡ ಅಲ್ಲಿ ಮಾರಾಟ ಮಾಡಲು ಇಟ್ಟಿದ್ದ ಟೊಮೆಟೋವೊಂದನ್ನು ಹಸುವಿಗೆ ನೀಡಿದ್ದಾನೆ. ಅದು ತಿಂದ ನಂತರ ಮತ್ತೊಂದು ಟೊಮೆಟೋವನ್ನು ನೀಡಿದ್ದು, ಬಳಿಕ ಹಸುವಿನ ಬಳಿ ಏನು ಆತ ಏನೋ ಮಾತನಾಡಿದ್ದಾನೆ. ಅದಕ್ಕೆ ಹಸು ಅತ್ತಿತ್ತ ತಲೆಯಲ್ಲಾಡಿಸುತ್ತದೆ. ಆದರೆ ಆತ ಏನು ಮಾತನಾಡಿದ ಎಂಬುದರ ಆಡಿಯೋ ಈ ವೀಡಿಯೋದಲ್ಲಿ ಇಲ್ಲ.
ಆದರೆ ಇದು ಎಲ್ಲಿ ಯಾವ ಮಾರುಕಟ್ಟೆಯಲ್ಲಿ ನಡೆದ ಘಟನೆ ಎಂಬ ಉಲ್ಲೇಖ ವೀಡಿಯೋದಲ್ಲಿ ಇಲ್ಲ, ಹಸುವಿಗೆ ತರಕಾರಿ ನೀಡಿದ ವ್ಯಕ್ತಿಗೆ ಮಾತ್ರ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ ಹಣದಲ್ಲಿ ಅಲ್ಲ ಹೃದಯದಲ್ಲಿ ಶ್ರೀಮಂತ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ನಾವು ಅಂತಹವರ ಜೊತೆಗೂ ತರಕಾರಿ ಕೊಳ್ಳುವ ವೇಳೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಷ್ಟೊಂದು ತರಕಾರಿ ಇದ್ದರೂ ಅದು ತಾನಾಗೇ ಯಾವುದೇ ತರಕಾರಿಯನ್ನು ತಿನ್ನಲು ಬಂದಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಹಸು ಹಾಗೂ ತರಕಾರಿ ಮಾರಾಟಗಾರನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.