
ಕೆಲವರಿಗೆ ವಯಸ್ಸೇ (Age) ಆಗುವುದಿಲ್ಲ! ಅವರು ವಯಸ್ಸಾಗುವ ಪ್ರಕ್ರಿಯೆಗೇ ಸೆಡ್ಡು (Challenge) ಹೊಡೆಯುತ್ತಿರುವಂತೆ ಭಾಸವಾಗುತ್ತಾರೆ. ನಿವೃತ್ತಿ (Retire) ಯಾದರೂ ಇನ್ನೂ ಐವತ್ತರ ಆಸುಪಾಸು ಇರುವಂತೆ ಭಾಸವಾಗುತ್ತಾರೆ. ಇನ್ನು ಕೆಲವರಂತೂ ನಲ್ವತ್ತಾದರೂ ಇಪ್ಪತ್ತರ ವಯೋಮಾನದ ದೇಹ (Body) ಹಾಗೂ ಮುಖದಲ್ಲಿ ಕಾಂತಿ (Liveliness) ಹೊಂದಿರುತ್ತಾರೆ. “ಇಪ್ಪತ್ತು ವರ್ಷಗಳ ಹಿಂದೆ ಹೇಗಿದ್ದೀರೋ ಹಾಗೆಯೇ ಇದ್ದೀರಿʼ ಎಂಬ ಮೆಚ್ಚುಗೆಗೆ ಅವರು ಪಾತ್ರರಾಗುತ್ತಲೇ ಇರುತ್ತಾರೆ. ಅಷ್ಟಕ್ಕೂ ಅವರು ಹೇಗೆ ಹಾಗಿರುತ್ತಾರೆ ಗೊತ್ತೇ?
ವಯಸ್ಸಾಗುವುದು ಪ್ರಕೃತಿ (Natural) ಸಹಜ ನಿಯಮ. ವಯಸ್ಸು ನಿಲ್ಲುವುದಿಲ್ಲ. ನೋಡುತ್ತ ನೋಡುತ್ತ ದೇಹ ಬೆಳೆಯುತ್ತದೆ, ಮಾಂಸಖಂಡಗಳು ಸಡಿಲವಾಗುತ್ತವೆ, ಮುಖದಲ್ಲಿ ನೆರಿಗೆಗಳು ಕಾಣಿಸುತ್ತವೆ. ಚರ್ಮ (Skin) ಜೋತುಬಿದ್ದಂತೆ ಕಾಣಿಸುತ್ತದೆ. ಇದೆಲ್ಲ ವಯಸ್ಸಾಗುವಿಕೆ (Aging) ಯ ಕಾಮನ್ ಲಕ್ಷಣಗಳು. ಆದರೂ, ಕೆಲವರು ಮಾತ್ರ ಇದಕ್ಕೆ ಅಪವಾದವಾಗಿರುತ್ತಾರೆ.
ಮುಪ್ಪನ್ನು ಹೇಗಾದರೂ ಮುಂದೂಡಬಹುದೇ? ಅಥವಾ ಮುಪ್ಪಾಗುವುದನ್ನೇ ತಡೆಯಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಸಂಶೋಧಕರು ಸಾಕಷ್ಟು ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಅವರ ಪ್ರಯತ್ನ ಯಾವಾಗ ಯಶಸ್ವಿಯಾಗುತ್ತದೆಯೋ ಗೊತ್ತಿಲ್ಲ. ಆಗುತ್ತದೆಯೋ ಇಲ್ಲವೋ ಅದೂ ಗೊತ್ತಿಲ್ಲ. ಹೀಗಾಗಿ, ಅವರ ಪ್ರಯೋಗಗಳಿಗೆ ಕಾಯದೆ ಕೆಲವು ಸರಳ ಸೂತ್ರಗಳನ್ನು ನಾವೇ ಅಳವಡಿಸಿಕೊಂಡು ವಯಸ್ಸಾಗುವಿಕೆಯನ್ನು ಮುಂದೂಡಬಹುದು!
ಹೌದು, ಕೆಲವು ಅಧ್ಯಯನಗಳು ಹೇಳುವಂತೆ, ದೇಹವನ್ನು ಸದೃಢ(Fit) ವಾಗಿಟ್ಟುಕೊಳ್ಳುವುದು, ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳುವುದು, ದೇಹಕ್ಕೆ ಅಗತ್ಯವಿರುವಷ್ಟು ವ್ಯಾಯಾಮ (Exersice) ಮಾಡುವ ಮೂಲಕ ಮುಪ್ಪನ್ನು ಸ್ವಲ್ಪ ಲೇಟಾಗಿ ಬರಮಾಡಿಕೊಳ್ಳಬಹುದು.
Health Tips: ಇನ್ನೊಬ್ಬರ ಮೇಲೆ ರೇಗುವ ಮುನ್ನ ನಿದ್ರೆ ಸರಿ ಮಾಡಿದ್ದೀರಾ ಯೋಚಿಸಿ..
ಚಟುವಟಿಕೆ(Activity) ಯಿಂದ ಕೂಡಿರುವುದು, ಚೆನ್ನಾಗಿ ನಿದ್ರೆ (Sleep) ಮಾಡುವುದು, ಉತ್ತಮ ಆಹಾರ ಪದ್ಧತಿ (Food Style) ಅನುಸರಿಸುವುದರಿಂದ ವೃದ್ಧಾಪ್ಯ (Old Age) ಬೇಗ ಬರುವುದಿಲ್ಲ ಎನ್ನುವುದನ್ನು ಸಾಕಷ್ಟು ಅಧ್ಯಯನಗಳು ಪುರಸ್ಕರಿಸಿವೆ.
ದೈಹಿಕ ಚಟುವಟಿಕೆ
ಚಟುವಟಿಕೆಯಿಂದ ಕೂಡಿದ್ದರೆ, ಕ್ರಿಯಾಶೀಲವಾಗಿದ್ದರೆ ಮನಸ್ಸಿಗೆ ಬೋರಾಗುವುದಿಲ್ಲ. ನಿಯಮಿತ ವ್ಯಾಯಾಮದಿಂದ ಮಾಂಸಖಂಡಗಳು ಹಾಗೂ ಜೀವಕೋಶಗಳು ಒತ್ತಡ ಕಳೆದುಕೊಂಡು ಹಗುರವಾಗುತ್ತವೆ. ಹೀಗಾಗಿ, ಯೌವನದಿಂದಲೇ ನಿಯಮಿತ ವ್ಯಾಯಾಮ ಮಾಡುವುದನ್ನು ರೂಢಿಸಿಕೊಂಡರೆ ವಯಸ್ಸಾಗುವಿಕೆ ನಿಧಾನವಾಗುತ್ತದೆ.
ಉತ್ತಮ ಆಹಾರ ಪದ್ಧತಿ ಇರಲಿ
ಕ್ಯಾಲರಿ ಕಡಿಮೆ ಇರುವ, ಪೌಷ್ಟಿಕಾಂಶ ಹೆಚ್ಚಾಗಿರುವ ಆಹಾರ ದೇಹಕ್ಕೆ ಬೇಕಾಗುತ್ತದೆ. ಇಂತಹ ಆಹಾರ ಪದ್ಧತಿಯಿಂದ ಕರುಳಿನಲ್ಲಿರುವ ಬ್ಯಾಕ್ಟೀರಿಯಾ ಸಮೂಹ ಚೆನ್ನಾಗಿರುತ್ತದೆ. ಬ್ಯಾಕ್ಟೀರಿಯಾ ಸಮೂಹ ಚೆನ್ನಾಗಿದ್ದಾಗ ಮುಪ್ಪು ಮುಂದೂಡಲ್ಪಡುತ್ತದೆ ಎಂದಿವೆ ಹಲವು ಅಧ್ಯಯನಗಳು. ಕಡಿಮೆ ಆಹಾರ ಸೇವನೆ ಮಾಡುವುದು ಸಹ ಅತ್ಯುತ್ತಮ ಅಭ್ಯಾಸ. ಹೆಚ್ಚು ಆಹಾರ ತೆಗೆದುಕೊಳ್ಳುವುದು ಇಂದಿನ ಬಹುತೇಕ ಎಲ್ಲರ ಸಮಸ್ಯೆಯಾಗಿದ್ದು, ಇದರಿಂದ ಬೇಗ ವಯಸ್ಸಾಗುವಿಕೆಯ ಪ್ರಕ್ರಿಯೆ ಆರಂಭವಾಗುತ್ತದೆ. ವಾರಕ್ಕೊಮ್ಮೆ ಉಪವಾಸ ಮಾಡುವುದರಿಂದಲೂ ಜೀವಕೋಶಗಳಿಗೆ ಹೊಸ ಚೈತನ್ಯ ದೊರೆಯುತ್ತದೆ.
ಚೆನ್ನಾಗಿ ನಿದ್ರೆ ಮಾಡಿ
ಉತ್ತಮ ನಿದ್ರೆ ಆರೋಗ್ಯದ ಮೂಲ. ನಿದ್ರೆ ಇಲ್ಲವಾದರೆ ಆರೋಗ್ಯ ಸಮಸ್ಯೆಗಳು ಒಂದಾದ ಮೇಲೆ ಒಂದರಂತೆ ಶುರುವಾಗುತ್ತವೆ. ಉತ್ತಮ ನಿದ್ರೆ ಮಾಡಿದಾಗ ಮಿದುಳಿನಲ್ಲಿರುವ ಗ್ರೇ ಮ್ಯಾಟರ್ ಎನ್ನುವ ಭಾಗ ವೃದ್ಧಿಯಾಗುತ್ತದೆ. ನಿದ್ರೆ ಕಡಿಮೆಯಾದರೆ ಈ ಭಾಗ ಕುಸಿಯುತ್ತದೆ. ಇದರಿಂದ ಸ್ಮರಣೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಉತ್ತಮ ನಿದ್ರೆ ಮಾಡುವ ಅಭ್ಯಾಸವುಳ್ಳವರಿಗೆ ಬೇಗ ವೃದ್ಧಾಪ್ಯ ಬರಲಾರದು.
ಹೃದಯ(Heart)ದ ಬಗೆಗಿರಲಿ ಕಾಳಜಿ
ಹೃದಯವನ್ನು ಚೆನ್ನಾಗಿಟ್ಟುಕೊಂಡರೆ ಹಾಗೂ ಹೃದಯದ ಆರೋಗ್ಯಕ್ಕೆ ಪೂರಕವಾದ ಆಹಾರ ಸೇವನೆ ಮಾಡಿದರೆ ವಯಸ್ಸಾಗುವಿಕೆ ಮುಂದಕ್ಕೆ ಹೋಗುತ್ತವೆ ಎನ್ನುತ್ತವೆ ಅಧ್ಯಯನಗಳು.
ಬಾಯಿ (Mouth) ಆರೋಗ್ಯ ಮುಖ್ಯ
ಬಾಯಿಗೂ, ಮುಪ್ಪಿಗೂ ಏನು ಸಂಬಂಧ ಎನ್ನಿಸಬಹುದು. ಬಾಯಿಯ ಆರೋಗ್ಯ ಚೆನ್ನಾಗಿದ್ದರೆ ಕರುಳು ಸಹ ಸುಸ್ಥಿತಿಯಲ್ಲಿರುತ್ತದೆ. ಕರುಳು ಚೆನ್ನಾಗಿದ್ದರೆ ದೀರ್ಘಾಯುಷ್ಯ ಗ್ಯಾರಂಟಿ. ಕರುಳಿನ ಬ್ಯಾಕ್ಟೀರಿಯಾ ಸಮೂಹ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರುಳಿಗೂ ಬಾಯಿಗೂ ನೇರ ಸಂಬಂಧ ಇರುವುದರಿಂದ ಬಾಯಿಯ ಆರೋಗ್ಯದ ಕಡೆ ಗಮನವಹಿಸಬೇಕು. ಕರುಳು ಚೆನ್ನಾಗಿದ್ದರೆ ಜೀವಿತಾವಧಿ ಸಹ ಹೆಚ್ಚುತ್ತದೆ. ಅಲ್ಲದೆ, ವಯಸ್ಸಾದಂತೆ ಕಾಣುವ ಮರೆವಿನ ಕಾಯಿಲೆಯೂ ಇರುವುದಿಲ್ಲ ಎನ್ನಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.