ಮಕ್ಕಳು ಆಸೆಪಡುವುದನ್ನೆಲ್ಲ ಒದಗಿಸುವುದು ಪಾಲಕರ ಪರಿಪಾಠ. ಅದರಲ್ಲೂ ಊಟ-ತಿಂಡಿ ವಿಚಾರದಲ್ಲಿ ಇನ್ನಷ್ಟು ಕಾಳಜಿ ವಹಿಸುತ್ತಾರೆ. ಆದರೆ, ಮಕ್ಕಳು ಆಸೆಪಡುತ್ತಾರೆಂದು ಇಲ್ಲಸಲ್ಲದ ತಿಂಡಿಗಳನ್ನು ನೀಡುತ್ತ ಬಂದರೆ ತೊಂದರೆ ತಪ್ಪಿದ್ದಲ್ಲ. ಏಕೆಂದರೆ, ಬಾಲ್ಯಕಾಲದ ಆಹಾರ ಪದ್ಧತಿ ವ್ಯಕ್ತಿಯ ಜೀವನದುದ್ದಕ್ಕೂ ಪರಿಣಾಮ ಬೀರುತ್ತದೆ.
“ನಮ್ಮ ಮನೆಯಲ್ಲಿ ಊಟಕ್ಕೆ ನಂಜಿಕೊಳ್ಳಲು ಏನಾದರೊಂದು ಕುರುಕಲು (Fried) ತಿಂಡಿ ಬೇಕೇ ಬೇಕು. ಹೇಗೂ ಮನೆಯಲ್ಲೇ ಮಾಡೋದಲ್ವಾ? ಏನೂ ಸಮಸ್ಯೆಯಿಲ್ಲ. ವಾರಕ್ಕೆ ಮೂರ್ನಾಲ್ಕು ದಿನವಾದರೂ ಏನಾದರೂ ಸಿಹಿ ತಿಂಡಿ (Sweet) ಮಾಡುವುದೂ ಅತಿ ಸಾಮಾನ್ಯ. ಮಕ್ಕಳಿಗೆ ಜಾಮೂನ್ ಎಂದರೆ ಭಾರೀ ಇಷ್ಟ’ ಎಂದು ಅನೇಕ ಅಮ್ಮಂದಿರು (Mother) ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಕೇಳಿರುತ್ತೇವೆ. ಮಕ್ಕಳು ಕೇಳಿದ ಆಹಾರವನ್ನು ಮಾಡಿಕೊಡುತ್ತೇನೆ ಎನ್ನುವುದು ಕೆಲವು ಅಮ್ಮಂದಿರಿಗೆ ಹೆಮ್ಮೆಯ ಸಂಗತಿ. “ಬಯಸಿದ್ದನ್ನು ನೀಡಿಬಿಟ್ಟರೆ ಏನೂ ಸಮಸ್ಯೆಯಿಲ್ಲ. ಹೇಗೂ ಮನೆಯಲ್ಲೇ ಮಾಡಿಕೊಡ್ತೀನಲ್ಲ?..’ ಎನ್ನುವ ಸಮರ್ಥನೆ ಬೇರೆ.
ಮನೆಯಲ್ಲೇ ಮಾಡುವ ತಿಂಡಿಗಳಾದರೂ ಸರಿ, ಹೊರಗಿನ ತಿಂಡಿಗಳಾದರೂ ಸರಿ. ಮಕ್ಕಳು ಸಾಮಾನ್ಯವಾಗಿ ಅಪೇಕ್ಷಿಸುವ ಕರಿದ ಹಾಗೂ ಸಿಹಿ ತಿನಿಸುಗಳನ್ನು ಹೆಚ್ಚು ನೀಡುವುದು ಸರಿಯಲ್ಲ ಎನ್ನುವುದು ಇನ್ನೂ ಅನೇಕ ಪಾಲಕರು ಹಾಗೂ ಅಜ್ಜಿಯರಿಗೆ ಗೊತ್ತಿಲ್ಲ.
Healthy Eating Tips: ವೀಕೆಂಡ್‌ಗಳಲ್ಲಿ ಬೇಕಾಬಿಟ್ಟಿ ತಿನ್ನೋದಕ್ಕೆ ಬ್ರೇಕ್ ಹಾಕೋದು ಹೇಗೆ..?
ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ಮಕ್ಕಳ ಆರಂಭಿಕ ಜೀವನದ ಆಹಾರ ಪದ್ಧತಿ (Eating Habit) ಅವರ ಜೀವನದುದ್ದಕ್ಕೂ ಪರಿಣಾಮ ಬೀರುತ್ತಿರುತ್ತದೆ. ಬಾಲ್ಯ (Childhood) ದಲ್ಲಿ ಯಾವುದೇ ಆಹಾರ ಸೇವನೆ ಮಾಡಿದರೂ ಪರವಾಗಿಲ್ಲ ಎನ್ನುವುದು ನಮ್ಮೆಲ್ಲರ ಸಾಮಾನ್ಯ ನಂಬಿಕೆ. ಆದರೆ, ಈ ನಂಬಿಕೆಯನ್ನು ಈ ಅಧ್ಯಯನ (Study) ಬುಡಮೇಲು ಮಾಡುತ್ತದೆ. ಏಕೆಂದರೆ, ಬಾಲ್ಯಕಾಲದಲ್ಲಿ ತಿನ್ನುವ ಆಹಾರ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ, ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಮಕ್ಕಳು ಇಷ್ಟಪಡುತ್ತಾರೆಂದು ಅಧಿಕ ಕೊಬ್ಬು (Fat) ಮತ್ತು ಸಕ್ಕರೆಯುಕ್ತ (Sugar) ಆಹಾರವನ್ನು ಅವರಿಗೆ ನೀಡುತ್ತ ಬಂದರೆ ಅವರ ದೇಹದ ಸೂಕ್ಷ್ಮಾಣು ಜೀವಜಾಲ (Microbiome) ವೇ ಬದಲಾಗಿ ಹೋಗುತ್ತದೆ ಎನ್ನುವುದು ಆಘಾತಕಾರಿ. ಕ್ಯಾಲಿಫೋರ್ನಿಯಾ (California) ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನವು ಇದನ್ನು ಬಹಿರಂಗಪಡಿಸಿದೆ.
ತಮ್ಮ ಬಾಲ್ಯ ಜೀವನದಲ್ಲಿ ಹೆಚ್ಚು ಕೊಬ್ಬು ಮತ್ತು ಸಕ್ಕರೆಯುಕ್ತ ಆಹಾರ ಸೇವನೆ ಮಾಡಿದ ಮಕ್ಕಳ ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ(Bacteria) ಗಳ ವೈವಿಧ್ಯತೆ (Diversity) ಕಡಿಮೆಯಾಗುತ್ತದೆ. ಬ್ಯಾಕ್ಟೀರಿಯಾ ಸಂಖ್ಯೆಯಲ್ಲಿ ವಿಪರೀತ ಕುಸಿತವುಂಟಾಗುವ ಜತೆಗೆ, ಕೆಲವು ರೀತಿಯ ಬ್ಯಾಕ್ಟೀರಿಯಾಗಳು ಸಂಪೂರ್ಣವಾಗಿ ನಾಶವಾಗಿಬಿಡುತ್ತವೆ.
ಬಾಲ್ಯಕಾಲದ ಆಹಾರ ಚೆನ್ನಾಗಿದ್ದರೆ ಮಾತ್ರ ಬ್ಯಾಕ್ಟೀರಿಯಾಗಳ ಪ್ರಮಾಣ ಅಧಿಕವಾಗಿರುತ್ತದೆ ಹಾಗೂ ವೈವಿಧ್ಯಮಯ ಬ್ಯಾಕ್ಟೀರಿಯಾಗಳು ಕರುಳು ಮತ್ತು ಯಕೃತ್ತಿನಲ್ಲಿ ನೆಲೆಯಾಗುತ್ತವೆ. ಆಗ ಒಂದೇ ಮಾದರಿಯ ಬ್ಯಾಕ್ಟೀರಿಯಾಗಳು ವೃದ್ಧಿಯಾಗುವುದಿಲ್ಲ.
ಮನುಷ್ಯನ ಕರುಳಿ(Gut) ನಲ್ಲಿ ಅನೇಕ ರೀತಿಯ ಫಂಗಿ, ವೈರಸ್, ಬ್ಯಾಕ್ಟೀರಿಯಾಗಳು ನೆಲೆಸಿರುತ್ತವೆ. ಇವೆಲ್ಲ ಪರಾವಲಂಬಿ ಜೀವಿಗಳು. ಇವುಗಳಲ್ಲಿ ಬಹುತೇಕ ಎಲ್ಲವೂ ಉಪಕಾರಿಗಳಾಗಿವೆ. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖವಾಗಿವೆ. ಇವು ಆಹಾರವನ್ನು ಜೀರ್ಣ ಮಾಡಿ ಸಂಶ್ಲೇಷಿಸುತ್ತವೆ. ಆರೋಗ್ಯವಂತ ಕರುಳಿನಲ್ಲಿ ರೋಗಕಾರಕ ಬ್ಯಾಕ್ಟೀರಿಯಾ ಮತ್ತು ಉಪಯುಕ್ತ ಜೀವಿಗಳ ನಡುವೆ ಸಮತೋಲನವಿರುತ್ತದೆ. ಆದರೆ, ಈ ಸಮತೋಲನಕ್ಕೆ ಭಂಗವಾದಾಗ ಒಂದೇ ಮಾದರಿಯ ಬ್ಯಾಕ್ಟೀರಿಯಾ ಸಂಖ್ಯೆ ವೃದ್ಧಿಯಾಗುತ್ತದೆ. ಆಗ ರೋಗ ನಿರೋಧಕ ಶಕ್ತಿ ಕುಂದಿ, ದೇಹ ರೋಗಪೀಡಿತವಾಗುತ್ತದೆ.
ಕರುಳಿನಲ್ಲಿ ಒಂದೇ ಮಾದರಿಯ ಬ್ಯಾಕ್ಟೀರಿಯಾ ವೃದ್ಧಿಯಾಗುವುದಕ್ಕೆ ಮೂರು ಮುಖ್ಯ ಕಾರಣಗಳನ್ನು ಗುರುತಿಸಲಾಗಿದೆ. ಅವು, ಅತಿಯಾದ ಆ್ಯಂಟಿಬಯೋಟಿಕ್ಸ್ ಬಳಕೆ, ದೀರ್ಘಕಾಲದ ಅನಾರೋಗ್ಯ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ.
Health Tips: ಮೆದುಳು ಶಾರ್ಪ್ ಆಗಿರಬೇಕಾ ? ಈ ಆಹಾರ ಮಿಸ್ ಮಾಡ್ಕೊಬೇಡಿ
ಅಧಿಕ ಕೊಬ್ಬು ಹಾಗೂ ಸಕ್ಕರೆಯುಕ್ತ ಆಹಾರ ಸೇವನೆ ಮಾಡಿದವರ ಕರುಳಿನಲ್ಲಿ ಕಾರ್ಬೋಹೈಡ್ರೇಟ್ಸ್ ಅನ್ನು ಚಯಾಪಚಯ ಕ್ರಿಯೆಗೆ ಒಳಪಡಿಸುವ ಬ್ಯಾಕ್ಟೀರಿಯಾ ಪ್ರಮಾಣ ಕಡಿಮೆಯಾಗಿರುವುದು ಸಹ ಈ ಅಧ್ಯಯನದಲ್ಲಿ ಪತ್ತೆಯಾಗಿದೆ.
ಹಾಗಿದ್ದರೆ, ಕರುಳಿನಲ್ಲಿ ಬ್ಯಾಕ್ಟೀರಿಯಾ ಸಂಖ್ಯೆಯನ್ನು ವೃದ್ಧಿಸಲು ಏನು ಮಾಡಬೇಕು ಎನ್ನುವ ಪ್ರಶ್ನೆ ಇಲ್ಲಿ ಸರಳವಾಗಿ ಮೂಡುತ್ತದೆ. ದೈಹಿಕ ಚಟುವಟಿಕೆ (Physical Activity) ನಡೆಸಿದರೆ ಬ್ಯಾಕ್ಟೀರಿಯಾ ಸಂಖ್ಯೆ ವೃದ್ಧಿಯಾಗಿ ಸಕ್ರಿಯವಾಗಿರುತ್ತವೆ. ನಿಯಮಿತವಾದ ದೈಹಿಕ ಚಟುವಟಿಕೆಯಿಂದ ಆರೋಗ್ಯಕರ ಬ್ಯಾಕ್ಟೀರಿಯಾ ಹೆಚ್ಚಾಗುವುದು ಕಂಡುಬಂದಿದೆ.