Latest Videos

Kamala Harris Untold Story: ಕಮಲಾ ಹ್ಯಾರಿಸ್ ಅಸಾಧಾರಣ ಸಾಧನೆ ಚಿತ್ರಣ!

By Kannadaprabha NewsFirst Published Dec 26, 2021, 4:30 PM IST
Highlights

ಬದಲಾಗುತ್ತಿರುವ ಮತ್ತು ಲಿಂಗ ತಾರತಮ್ಯವನ್ನು ತೊರೆದು ಮುನ್ನಡೆಯುತ್ತಿರುವ ಅಮೆರಿಕ ಪ್ರತಿನಿಧಿಯಾಗಿ ಕಾಣಿಸುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಜೀವನದ ಒಂದು ರೋಚಕ ಕಥನ. 
 

ಆಶಾ ಕೃಷ್ಣಸ್ವಾಮಿ

ಒಂದು ಪದದಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ರನ್ನು ನೀವು ಹೇಗೆ ವರ್ಣಿಸುತ್ತೀರಿ? ಅಮೆರಿಕ ಸಂಯುಕ್ತ ಸಂಸ್ಥಾನದ ಉಪಾಧ್ಯಕ್ಷೆ? ಅಸಾಧಾರಣ ಮಹಿಳೆ, ಹೋರಾಟದ ಸಂಕೇತ, ಭರವಸೆ ಪದದ ಸಮಾನಾರ್ಥಕ ಪದ, ಇವರಿಗೆ ಸಾಟಿ ಮತ್ತೊಬ್ಬರಿಲ್ಲ ಎನ್ನಬಹುದಾದ ರಾಜಕಾರಣಿ, ಫೀನಿಕ್ಸ್, ಧೈರ್ಯವಂತೆ, ಕೆಚ್ಚೆದೆಯ ಹೆಣ್ಣು, ಉಗ್ರ ಸ್ತ್ರೀವಾದಿ, ಬುದ್ಧಿವಂತೆ, ಅತ್ಯಾಕರ್ಷಕ, ಕರಿಯರ ಚಾಂಪಿಯನ್, ವಿಶಿಷ್ಟ, ಮೊನಚು, ಸೊಕ್ಕು, ಅಮೆರಿಕದ ಎರಡನೇ ಅತ್ಯಂತ ಶಕ್ತಿಶಾಲಿ ಮಹಿಳೆ ಎನ್ನುತ್ತೀರೇನೋ. ಆದರೆ ನೀವು ಹಿರಿಯ ಪತ್ರಕರ್ತ ಹಾಗೂ ಲೇಖಕ ಚಿದಾನಂದ ರಾಜಘಟ್ಟ ಅವರ ‘ಅದ್ಭುತ ಮಹಿಳೆ- ಕಮಲಾ ಹ್ಯಾರಿಸ್’ ಪುಸ್ತಕ ಓದಿದರೆ, ಮೇಲೆ ಹೇಳಿದ ಎಲ್ಲಾ ಪದಗಳನ್ನು ಬದಿಗೊತ್ತಿ, ‘ಸಾಮಾಜಿಕ ತಡೆಗೋಡೆಗಳನ್ನು ಕೆಡವಿ ಮುನುಗ್ಗಿದ ನೀರೆ’ ಎನ್ನುತ್ತೀರಿ.

 ಸುಮಾರು ೩೨೦ ಪುಟಗಳ ಪುಸ್ತಕ. ಹಾರ್ಪರ್ ಕಾಲಿನ್ಸ್ ಇಂಡಿಯಾ ಪ್ರಕಟಣೆ. ಕಮಲಾ ಹ್ಯಾರಿಸ್ ಜೀವನ ಮತ್ತು ಕಾರ್ಯಗಳನ್ನು ಸಮಗ್ರವಾಗಿ ನಿರೂಪಿಸುವ ಮೂಲಕ ಈ ಪುಸ್ತಕ ಆ ವ್ಯಕ್ತಿಯನ್ನೇ ತೆರೆದ ಪುಸ್ತಕವನ್ನಾಗಿಸಿದೆ. ಇಂಟರ್‌ನೆಟ್ ಜಾಲಾಡಿದರೆ ಅಲ್ಲಿ ಕಮಲಾ ಬಗ್ಗೆ ನೂರಾರು ವಿಡಿಯೋಗಳು ಸಿಗುತ್ತವೆ. ಈಗಾಗಲೇ ಅವರ ಕುರಿತು ಐದು ಪುಸ್ತಕಗಳು ಬಂದಿವೆ. ಅವರೇ ಮೂರು ಪುಸ್ತಕ ಬರೆದಿದ್ದಾರೆ. ಹಾಗಾದರೆ ರಾಜಘಟ್ಟ ಅವರ ಪುಸ್ತಕದ ವಿಶೇಷತೆ ಏನು? 
ಮೊದಲನೆಯದು, ಲೇಖಕರು ಅಮೆರಿಕದ ರಾಜಕೀಯವನ್ನು ಅರೆದು ಕುಡಿದಿದ್ದಾರೆ. ವರ್ಣಭೇದ ನೀತಿಯನ್ನು ಯಾವುದೇ ಪೂರ್ವಗ್ರಹವಿಲ್ಲದೇ ವಿಶ್ಲೇಷಿಸಬಲ್ಲರು. ಪುರುಷರದ್ದೇ ಪಾರಮ್ಯವಿರುವ ರಾಜಕೀಯದಲ್ಲಿ ಮಹಿಳೆಯರ ಹೋರಾಟ, ಅದೆಲ್ಲಕ್ಕಿಂತ ಮಿಗಿಲಾಗಿ ಯಾವುದಕ್ಕೂ ಜಗ್ಗದ ಮಹಿಳೆಯರ ಬಗ್ಗೆ ಅವರಿಗಿರುವ ಗೌರವ ಮತ್ತು ಅಭಿಮಾನ ನೀವು ಈ ಪುಸ್ತಕವನ್ನು ಕೈಗೆತ್ತಿಕೊಳ್ಳಲು ಮೊದಲ ಕಾರಣ. ಈ ಪುಸ್ತಕದಲ್ಲಿ ಲೇಖಕರು ಆಕೆಯ ಜೀವನವನ್ನು ಕಾಗದದ ಮೇಲೆ ಬರೀ ಭಟ್ಟಿ ಇಳಿಸಿಲ್ಲ, ಬದಲಿಗೆ ಅರ್ಥಗರ್ಭಿತ ಪದಪುಂಜಗಳನ್ನು ಜೋಡಿಸಿ ಆಕೆಯ ಬದುಕಿನ ಪ್ರತಿ ಹೆಜ್ಜೆಗುರುತುಗಳಿಗೂ ಅಕ್ಷರದ ರೂಪ ಕೊಟ್ಟು ಕಮಲಾರ ಇಡೀ ಬದುಕನ್ನೇ ಮರುಸೃಷ್ಟಿ ಮಾಡಿದ್ದಾರೆ. ಗೋಜಲುಗಳ ನೆರಳಲ್ಲೇ ನಡೆದು ಯುಎಸ್‌ನ ಅತ್ಯುನ್ನತ ಕಚೇರಿಯ ಉನ್ನತ ಸ್ಥಾನ ಅಲಂಕರಿಸಿರುವ ಮೊದಲ ಕಪ್ಪುವರ್ಣೀಯ ಮಹಿಳೆಯ ಯಶೋಗಾಥೆಯನ್ನು ಲೇಖಕರು ಚಿತ್ರಿಸಿರುವ ಪರಿ ಅನನ್ಯ.

ಪುಸ್ತಕದ ಮೊದಲ ಅಧ್ಯಾಯವು ರೀತಿ ರಿವಾಜುಗಳನ್ನು ಎಡಗಾಲಲ್ಲಿ ಒದ್ದು ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಡೊನಾಲ್ಡ್ ಟ್ರಂಪ್, ೨೦೨೧ರಲ್ಲಿ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅಧಿಕಾರಕ್ಕೆ ಬರಲು ದಾರಿ ಮಾಡಿಕೊಟ್ಟ ವಿಷಯಗಳನ್ನು ಒಳಗೊಂಡಿದೆ. ಕಮಲಾ ಹ್ಯಾರಿಸ್ ಜೀವನವನ್ನು ಸೆರೆಹಿಡಿಯುವುದು ಅಥವಾ ಆಕೆಯನ್ನು ವ್ಯಾಖ್ಯಾನಿಸುವುದು ಸುಲಭದ ಮಾತಲ್ಲ, ಏಕೆಂದರೆ ಆಕೆ ಅಂತಿಂಥ ಹೆಣ್ಣಲ್ಲ, ಕೆಚ್ಚೆದೆಯ ಗಟ್ಟಿಗಿತ್ತಿ.

ಕಮಲಾ ಹ್ಯಾರಿಸ್ ಹೆಸರಿನೊಂದಿಗೆ ಹಲವು ಮೊದಲುಗಳು ಸೇರಿಕೊಂಡಿವೆ. ೨೦೧೦ರಲ್ಲಿ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ ಮೊದಲ ಆಫ್ರಿಕನ್ -ಅಮೆರಿಕನ್ ಮಹಿಳೆ. ೨೦೧೬ರಲ್ಲಿ ಯುಎಸ್ ಸೆನೆಟ್‌ಗೆ ಆಯ್ಕೆಯಾದ ಇಂಡೋ-ಅಮೆರಿಕನ್ ಮಹಿಳೆ. ಉಪಾಧ್ಯಕ್ಷ ಹುದ್ದೆಗೇರಿದ ಹೋವರ್ಡ್ ವಿಶ್ವವಿದ್ಯಾನಿಲಯ (ಕಪ್ಪು ವರ್ಣೀಯರ ವಿವಿ)ದ ಮೊದಲ ಪದವೀಧರೆ. ಅಮೆರಿಕದಲ್ಲಿ ಉಪಾಧ್ಯಕ್ಷೆಯಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಸಹ ಕಮಲಾರದ್ದು. ಫೋರ್ಬ್-೨೦೨೧ರ ರ‌್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಅತ್ಯಂತ ಶಕ್ತಿಶಾಲಿ ಮಹಿಳೆಯಾಗಿ ಹೊರಹೊಮ್ಮಿದ್ದು ಕಡಿಮೆ ಸಾಧನೆಯಲ್ಲ.

US President; ಕಮಲಾ ಹ್ಯಾರಿಸ್‌ಗೆ ಅಧಿಕಾರ ಹಸ್ತಾಂತರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್!

ಕಾನೂನು ಪದವಿ ಪಡೆದ ಸ್ವಲ್ಪ ಸಮಯದ ನಂತರ ಕ್ಯಾಲಿಫೋರ್ನಿಯಾದಲ್ಲಿ ವಕೀಲೆಯಾಗಿ ಕಮಲಾ ಕೆಲಸ ಪ್ರಾರಂಭಿಸುತ್ತಾರೆ. ನಂತರ ಸ್ಯಾನ್‌ಫ್ರಾನ್ಸಿಸ್ಕೋ ನಗರದಲ್ಲಿ ಮಕ್ಕಳ ನಿರ್ಲಕ್ಷ್ಯ ಹಾಗೂ ದುರುಪಯೋಗದ ಘಟನೆಗಳನ್ನು ಕುರಿತು ತನಿಖೆ ನಡೆಸುತ್ತಾರೆ. ಸ್ಯಾನ್‌ಫ್ರಾನ್ಸಿಸ್ಕೋ ನಗರದ ಇತಿಹಾಸದಲ್ಲೇ ಮೊದಲ ಮಹಿಳಾ ಅಟಾರ್ನಿ ಜನರಲ್ ಆಗಿದ್ದರು ಎಂಬುದು ಕೂಡ ಅವರ ಹೆಗ್ಗಳಿಕೆ. ನಂತರ ಕ್ಯಾಲಿಫೋರ್ನಿಯಾದ ಮೊದಲ ಚುನಾಯಿತ ಅಟಾರ್ನಿ ಜನರಲ್ ಆಗಿ ಸಹ ಅವರು ಆಯ್ಕೆಯಾಗುತ್ತಾರೆ. ೨೦೧೯ರಲ್ಲಿ ಮೊದಲ ಬಾರಿಗೆ ಡೆಮಾಕ್ರೆಟ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ನಂತರ ಹಿಂದೆ ಸರಿಯುತ್ತಾರೆ. ಕೊನೆಗೆ ೨೦೨೦ರಲ್ಲಿ ಜೋ ಬೈಡನ್ ಸರ್ಕಾರದ ಉಪಾಧ್ಯಕ್ಷೆಯಾಗಿ ಶ್ವೇತಭವನಕ್ಕೆ ತೆರಳುತ್ತಾರೆ. ಅಮೆರಿಕದಲ್ಲಿ ಅಸಾಧಾರಣ ಮಹಿಳೆಗೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಈ ಐತಿಹಾಸಿಕ ಘಟನೆ ಸಾಕ್ಷಿಯಾಗುತ್ತದೆ. ಕೊರೋನಾ ಸಾಂಕ್ರಾಮಿಕದಂತಹ ಭಯಾನಕ ಕಾಲದಲ್ಲಿ ಕಮಲಾ ಅಧಿಕಾರಕ್ಕೆ ಬರುತ್ತಾರೆ.
ಯುನೈಟೆಡ್ ಸ್ಟೇಟ್ಸ್‌ನಂತಹ ಪೂರ್ವಗ್ರಹ ಪೀಡಿತ ಸಮಾಜದಲ್ಲಿ ಮಹಿಳೆಯನ್ನು ಎರಡನೇ ದರ್ಜೆಯ ಪ್ರಜೆಯಾಗಿ ಪರಿಗಣಿಸಲಾಗಿದೆ, ಅದರಲ್ಲೂ ವಿಶೇಷವಾಗಿ ರಾಜಕೀಯ ಕ್ಷೇತ್ರದಲ್ಲಿ. ಆದಾಗ್ಯೂ ಇಲ್ಲಿ ಮಹತ್ವಾಕಾಂಕ್ಷೆಯುಳ್ಳ ಕಪ್ಪುವರ್ಣೀಯ ಮಹಿಳೆಯ ಜೀವನ ಮತ್ತು ಹೋರಾಟವನ್ನು ಲೇಖಕರು ಚಿತ್ರಿಸುವಲ್ಲಿ ಉದಾರತೆ ತೋರಿದ್ದಾರೆ. 

ಮೂರು ದೇಶದ ಮಗಳು
ಕಮಲಾ ಹ್ಯಾರಿಸ್ ತಂದೆ ಡೊನಾಲ್ಡ್ ಹ್ಯಾರಿಸ್ ಜಮೈಕಾದವರು. ತಾಯಿ ಶ್ಯಾಮಲಾ ಗೋಪಾಲನ್ ಭಾರತದವರು. ವಿಜ್ಞಾನಿ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತೆ ಆಗಿದ್ದ ಕಮಲಾ ತಾಯಿ, ತಮ್ಮ ವೃತ್ತಿಜೀವನದ ಪ್ರತಿ ಹಂತದಲ್ಲೂ ಯುಎಸ್‌ನಲ್ಲಿ ಅಸ್ತಿತ್ವಕ್ಕಾಗಿ ಹೋರಾಡಬೇಕಾಯಿತು. ಅಮೆರಿಕದಲ್ಲಿ ೧೯೬೦ರ ಸಮಯದಲ್ಲಿ ಕಮಲಾ ಮತ್ತು ಮಾಯಾ ಎಂಬ ಇಬ್ಬರೂ ಹೆಣ್ಣುಮಕ್ಕಳನ್ನು ಸಿಂಗಲ್ ಪೇರೆಂಟ್ ಆಗಿ ನೋಡಿಕೊಳ್ಳುವುದು ಶ್ಯಾಮಲಾಗೆ ಸುಲಭವಾಗಿರಲಿಲ್ಲ. ನಿಸ್ಸಂದೇಹವಾಗಿ ಕಮಲಾ ತಾಯಿಯಂತೆ ಕಲ್ಲುಮುಳ್ಳಿನ ಹಾದಿಯಲ್ಲೇ ನಡೆದವರು. ಶ್ಯಾಮಲಾ ಸಂಪ್ರದಾಯಸ್ಥ ತಮಿಳು ಬ್ರಾಹ್ಮಣ ಕುಟುಂಬದಿಂದ ಸ್ವತಂತ್ರ ಎನ್‌ಆರ್‌ಐ ಆಗಿ, ಅಲ್ಲಿಂದ ಅಮೆರಿಕನ್ ಪ್ರಜೆಯಾಗಿ ರೂಪುಗೊಂಡಿದ್ದನ್ನು ಲೇಖಕರು ಎಳೆಎಳೆಯಾಗಿ ಚಿತ್ರಿಸಿದ್ದಾರೆ. ಶ್ಯಾಮಲಾ ತಮ್ಮಿಬ್ಬರು ಹೆಣ್ಣುಮಕ್ಕಳಿಗೆ ತಮ್ಮ ಸಾಂಸ್ಕೃತಿಕ ಗುರುತನ್ನು ಉಳಿಸಿಕೊಳ್ಳುವ ಸಲುವಾಗಿ ಭಾರತೀಯ ಪೌರಾಣಿಕ ಹೆಸರುಗಳನ್ನು ಇಟ್ಟಿದ್ದೇನೆಂದು ಒಮ್ಮೆ ಹೇಳಿಕೊಂಡಿದ್ದರು. ಕಮಲ ಕೆಸರಿನಲ್ಲಿ ಬೆಳೆಯುತ್ತದೆ ಹಾಗೂ ಶುದ್ಧತೆಯ ಸಂಕೇತವಾಗಿದೆ. ಕಮಲಾ ೨೦೨೦ರ ಚುನಾವಣಾ ಪ್ರಚಾರದುದ್ದಕ್ಕೂ ರಾಜಕೀಯ ಕೆಸರೆರಚಾಟಕ್ಕೆ ಒಳಗಾದಾಗ ಅದು ಸ್ಪಷ್ಟವಾಯಿತು. ಅಂದಹಾಗೆ ಕಮಲಾ ಅಯ್ಯರ್ ಹ್ಯಾರಿಸ್ ಆಗಿದ್ದ ಕಮಲಾ, ಕಮಲಾ ದೇವಿ ಹ್ಯಾರಿಸ್ ಆಗಿ ಬದಲಾದರು. ಮನೆಯ ಆಧಾರಸ್ತಂಭವಾಗಿದ್ದ ತಾಯಿ ೨೦೦೯ರಲ್ಲಿ ಕ್ಯಾನ್ಸರ್‌ನಿಂದ ತೀರಿಕೊಂಡಾಗ ಕಮಲಾರ ಹಾದಿ ಮತ್ತಷ್ಟು ಕಠಿಣವಾಯ್ತು. ಅಮೆರಿಕದ ಬಿಳಿಯನ್ನರು ಕಮಲಾರನ್ನು ಫಾರಿನರ್, ಆ್ಯಂಕರ್ ಬೇಬಿ (ಅಮೆರಿಕದಲ್ಲಿ ವಲಸಿಗರ ಮಕ್ಕಳನ್ನು ಕರೆಯುವ ಅವಹೇಳನಕಾರಿ ಪದಗಳು) ಎಂದೆಲ್ಲಾ ಹೀಯಾಳಿಸಿದರು. ಟ್ರಂಪ್ ಕಮಲಾರನ್ನು ಬೇಕಂತಲೇ ಯಾವಾಗಲೂ ‘ಕಮೀಲಾ’ ಎಂದು ತಪ್ಪಾಗಿಯೇ ಕರೆಯುತ್ತಿದ್ದರು. ಉದ್ದೇಶಪೂರ್ವಕವಾಗಿಯೇ ಕೆಲವು ಬಲಪಂಥಿಯರು, ಟೀವಿ ನಿರೂಪಕರು, ರೇಡಿಯೋ ಜಾಕಿಗಳು, ಟ್ರೋಲರ್‌ಗಳು ಕಮಲಾ ಹೆಸರನ್ನು ತಪ್ಪಾಗಿ ಉಚ್ಚರಿಸುತ್ತಿದ್ದರು. ಲೇಖಕ ರಾಜಘಟ್ಟ ಪ್ರಕಾರ, ಕಮಲಾ ಸಂಕೋಚವಿಲ್ಲದೇ ತಾನು ಕಪ್ಪು ಎಂದೇ ಹೇಳಿಕೊಳ್ಳುತ್ತಿದ್ದರು.

ಕೆಸರಿನಲ್ಲಿ ಬೆಳೆದ ಕಮಲ
ಮಹಿಳೆಯ ಮನೋಸ್ಥೈರ್ಯವನ್ನು ಕುಗ್ಗಿಸುವ ಸರಳ ಮತ್ತು ಅಗ್ಗದ ವಿಧಾನವೆಂದರೆ ಆಕೆಯ ಚಾರಿತ್ರ್ಯಹರಣ ಮಾಡುವುದು. ಇದನ್ನೇ ಟ್ರಂಪ್ ಮತ್ತವರ ಹಿಂಬಾಲಕರು ಸಹ ಮಾಡಿದ್ದು. ಟ್ರಂಪ್ ಕಮಲಾರನ್ನು ಕಮ್ಯುನಿಸ್ಟ್, ವಿದೇಶಿ ಆಕ್ರಮಣಕಾರರು ಎಂದೆಲ್ಲಾ ಟೀಕಿಸಿದರು. ವಿಮರ್ಶಕರು ಸಹ ಆಕೆಯ ಮಹತ್ವಾಕಾಂಕ್ಷೆಯ ಮನೋಭಾವವನ್ನು ಸ್ವೀಕರಿಸಲಿಲ್ಲ. ಕೆಲವು ಧಾರ್ಮಿಕ ಮುಖಂಡರು ಆಕೆಯ ಮೇಲೆ ತುಂಬಾ ತುಚ್ಛ ಮಾತುಗಳಿಂದ ದಾಳಿ ಮಾಡಿದರು. 
ಬೈಡನ್‌ನಂತಹ ಪ್ರಜಾಪ್ರಭುತ್ವವಾದಿ ವ್ಯಕ್ತಿ ಉಪಾಧ್ಯಕ್ಷೆಯಾಗಿ ಕಮಲಾ ಅವರನ್ನೇ ಯಾಕೆ ಆಯ್ಕೆ ಮಾಡಿದರು ಎಂಬ ಪ್ರಶ್ನೆ ಪದೇ ಪದೆ ಮುನ್ನಲೆಗೆ ಬರುತ್ತದೆ. ಅದಕ್ಕೆ ಕಾರಣ ಕಮಲಾಗಿದ್ದ ಶಾಸಕಾಂಗ, ಕಾರ್ಯಾಂಗ ಮತ್ತು ರಾಜಕೀಯ ಅನುಭವ. ಗೆಲ್ಲುವ ಸಾಮರ್ಥ್ಯವೇ ಆಕೆಯ ದೊಡ್ಡ ಆಸ್ತಿಯಾಗಿತ್ತು. ಇದೇ ಆಕೆಯನ್ನು ಉನ್ನತ ರಾಜಕಾರಣಿಯಾಗಿ ಮಾಡಿತು.

ಭಾರತದ ಸ್ಥಿತಿ ಹೃದಯವಿದ್ರಾವಕ, ನೆರವು ನೀಡ್ತೇವೆ: ಕಮಲಾ!

ಕಮಲಾರದ್ದು ಬಹುಮುಖಿ ವ್ಯಕ್ತಿತ್ವ ಎಂಬುದನ್ನು ಈ ಪುಸ್ತಕ ತೆರೆದಿಡುತ್ತದೆ. ಆಕೆಯಲ್ಲಿ ಹಲವು ಆಸಕ್ತಿದಾಯಕ ವಿಚಾರಗಳಿದ್ದವು. ಅಡುಗೆ ಮಾಡುವುದು, ಹಾಡುವುದು, ಕುಡಿಯುವುದು, ಪಾರ್ಟಿ ಮಾಡುವುದು ಅವರಿಗೆ ಉಲ್ಲಾಸ ತರುವ ವಿಷಯಗಳಾಗಿದ್ದವು. ಇಡ್ಲಿ ಸಾಂಬಾರ್ ಜೊತೆಗೆ ಕಮಲಾ ಚಿಕನ್ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ೨೦೧೪ರಲ್ಲಿ ಮದುವೆಯಾಗುವ ಮೊದಲೇ ಅವರು ಅಡುಗೆ ಕಲಿತಿದ್ದರು. ಆಕೆ ಎಷ್ಟು ಪ್ರಾಮಾಣಿಕಳು ಎಂದರೆ ಕಾಲೇಜು ದಿನಗಳಲ್ಲಿ ತಾನು ಸಿಗರೇಟು ಸೇದಲು ಯತ್ನಿಸಿದ್ದನ್ನು ಹೇಳಿಕೊಳ್ಳುವಷ್ಟು. ಕಮಲಾ ತಮ್ಮ ಆಯ್ಕೆಗಳ ಬಗ್ಗೆಯಾಗಲಿ, ಜೀವನಶೈಲಿ ಅಥವಾ ತನ್ನ ವರ್ತನೆ ಬಗ್ಗೆಯಾಗಲಿ ಯಾರೊಂದಿಗೂ ಹೊಂದಿಕೆ ಮಾಡಿಕೊಂಡವಳಲ್ಲ, ಎಂದೂ ಯಾರಲ್ಲೂ ಕ್ಷಮೆ ಕೇಳಿದವಳಲ್ಲ.

ಕೊನೆಯದಾಗಿ, ಪ್ರಪಂಚದ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾಗಿರುವ ಅಮೆರಿಕದಲ್ಲಿ ಓರ್ವ ಮಹಿಳೆ ಅದರಲ್ಲೂ ನಿರ್ದಿಷ್ಟವಾಗಿ ಕಪ್ಪು ಜನಾಂಗೀಯ ಮಹಿಳೆ ಪ್ರಭಾವ ಬೀರುವುದು ಎಷ್ಟು ಸುಲಭ ಅಥವಾ ಎಷ್ಟು ಕಷ್ಟ ಎಂಬುದು ಪ್ರಶ್ನೆ. ಲೇಖಕರ ಪ್ರಕಾರ ಮಹಿಳಾ ಪರಿವೀಕ್ಷಕರು ಕೂಡ ಮಹಿಳೆಯೊಬ್ಬರು ಅಧಿಕಾರಕ್ಕೆ ಬರುವ ವಿಚಾರವನ್ನು ಅರಗಿಸಿಕೊಳ್ಳಲು ತಯಾರಿಲ್ಲ. ಇದೀಗ ಅಮೆರಿಕಾ ಕಂದು ಆಗುತ್ತಾ ಸಾಗಿದೆ ಮತ್ತು ಲಿಂಗಸಮಾನತೆಯತ್ತ ಸಾಗುತ್ತಿದೆ. ಈ ಬದಲಾವಣೆಯನ್ನು ಒತ್ತಾಯಪೂರ್ವಕವಾಗಿಯೇ ಆದರೂ ಒಪ್ಪಿಕೊಳ್ಳಲೇ ಬೇಕಾದ ಅಮೆರಿಕಾದ ಪ್ರತಿನಿಧಿಯಾಗಿ ಕಮಲಾ ಹ್ಯಾರಿಸ್ ಕಾಣುತ್ತಾರೆ. ಕಮಲಾ ಹ್ಯಾರಿಸ್‌ಗೆ ಇನ್ನೂ ೫೭ರ ಹರೆಯ, ಸಾರ್ವಜನಿಕ ಜೀವನದಲ್ಲಿ ಬಹುದೂರ ಸಾಗಬೇಕಿದೆ. ಒಟ್ಟಾರೆ ನೀವು ಈ ಪುಸ್ತಕದ ಕೊನೆಯ ಅಧ್ಯಾಯವನ್ನು ಓದಿ ಪುಸ್ತಕ ಮುಚ್ಚಿಡುವ ಹೊತ್ತಿಗೆ ಪ್ರಪಂಚದಾದ್ಯಂತ ಮಹಿಳೆಯರ ಪಾಡು ಒಂದೇ ಎಂಬ ಕಟುವಾಸ್ತವ ನಿಮ್ಮ ಅರಿವಿಗೆ ಬಂದಿರುತ್ತದೆ.
(ಆಶಾ ಕೃಷ್ಣಸ್ವಾಮಿ ಬರೆದಿರುವ ಇಂಗ್ಲಿಷ್ ಬರಹದ ಸಂಕ್ಷಿಪ್ತ ಕನ್ನಡ ರೂಪ: ರಂಜಿತಾ)

click me!