ಬಾಯಿಗೆ ರುಚಿ, ದೇಹಕ್ಕೆ ಹಿತ ನೀಡುವ ಬಸಳೆ-ಅಲಸಂದೆ ಕಾಳು ಸಾಂಬಾರ್

By Suvarna NewsFirst Published Jan 20, 2020, 12:42 PM IST
Highlights

ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿದೆ.ಅದರಂತೆ ಮನೆಯಲ್ಲೇ ಸುಲಭವಾಗಿ ಬೆಳೆಯಬಹುದಾದ ಬಸಲೆ ಸೊಪ್ಪೆಂದರೆ ಅನೇಕರಿಗೆ ತಾತ್ಸಾರ. ಆದರೆ, ಈ ಸೊಪ್ಪು ಅನೇಕ ಪೋಷಕಾಂಶಗಳ ಆಗರವಾಗಿದ್ದು,ಆರೋಗ್ಯವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಬಸಳೆ ಸೊಪ್ಪಿನೊಂದಿಗೆ ಅಲಸಂದೆ ಕಾಳುಗಳನ್ನು ಸೇರಿಸಿ ತಯಾರಿಸಿದ ಸಾಂಬಾರಿನ ರುಚಿ ನಾಲಿಗೆಗೆ ಹಿಡಿಸುವ ಜೊತೆಗೆ ದೇಹಕ್ಕೂ ಹಿತಕಾರಿ. 

ಬಸಳೆ ಸೊಪ್ಪೆಂದರೆ ಕೆಲವರಿಗೆ ಅಸಡ್ಡೆ. ಆದರೆ,ಈ ಸೊಪ್ಪು ಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ಜೀವಸತ್ತ್ವ ಎ, ಬಿ, ಕಬ್ಬಿಣಾಂಶ, ಪೋಟ್ಯಾಷಿಯಂಗಳು ಹೆಚ್ಚಿನ ಪ್ರಮಾಣದಲ್ಲಿವೆ.ಇದು ಕಡಿಮೆ ಕ್ಯಾಲೋರಿ ಹೊಂದಿದ್ದು,ನಾರಿನಂಶ ಹೆಚ್ಚಿರುವ ಕಾರಣ ಮಲಬದ್ಧತೆಯನ್ನು ದೂರ ಮಾಡಬಲ್ಲದು.ಇನ್ನು ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುವ ಕಾರಣ ಗರ್ಭಿಣಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತಹೀನತೆ ದೂರವಾಗುತ್ತದೆ. ಬಸಳೆಯಲ್ಲಿ ಬಿ ಕಾಂಪ್ಲೆಕ್ಸ್ ಕೂಡ ಇದ್ದು, ನರಗಳ ಆರೋಗ್ಯಕ್ಕೆ ಉತ್ತಮವಾಗಿದೆ.ಬಸಳೆ ಮೂಳೆ ಹಾಗೂ ಹಲ್ಲುಗಳಿಗೆ ಬಲ ನೀಡುತ್ತದೆ.ಕಣ್ಣಿನ ಉರಿ ಕಡಿಮೆ ಮಾಡುತ್ತದೆ.ಮೂತ್ರನಾಳದ ಸೋಂಕು ನಿವಾರಣೆಗೂ ನೆರವು ನೀಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.ಬಸಳೆಯ ನಿಯಮಿತ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.ವಾರಕ್ಕೆ ಕನಿಷ್ಠ 2-3 ಬಾರಿಯಾದರೂ ಬಸಳೆ ಸೊಪ್ಪನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ಹೇಳಲಾಗುತ್ತದೆ. ಕರಾವಳಿ ಭಾಗದಲ್ಲಿ ಬಸಳೆ ಸೊಪ್ಪನ್ನು ಪ್ರತಿ ಮನೆಯಲ್ಲೂ ಬೆಳೆಯುವ ಜೊತೆಗೆ ಅದರಿಂದ ವಿವಿಧ ಖಾದ್ಯಗಳನ್ನು ಕೂಡ ಸಿದ್ಧಪಡಿಸುತ್ತಾರೆ.ಇವುಗಳಲ್ಲಿ ಬಸಳೆ ಸೊಪ್ಪಿನ ಸಾರು ತುಂಬಾ ಜನಪ್ರಿಯ.ಅಲಸಂದೆ ಕಾಳು ಹಾಕಿ ಬಸಳೆ ಸೊಪ್ಪಿನ ಸಾರು ಸಿದ್ಧಪಡಿಸುವುದು ಹೇಗೆ? ನೋಡೋಣ ಬನ್ನಿ.

ಟೇಸ್ಟಿ ಆ್ಯಂಡ್ ಸ್ಪೈಸಿ ಚಿಕನ್ ಗೀ ರೋಸ್ಟ್ ರೆಸಿಪಿ!

ಮಾಡಲು ಬೇಕಾಗುವ ಸಮಯ: 45 ನಿಮಿಷ

ಬೇಕಾಗುವ ಸಾಮಗ್ರಿಗಳು:
• ಬಸಳೆ ಸೊಪ್ಪು (ದಂಟು ಇರಬೇಕು)-ಒಂದು ಕಟ್ಟು
• ನೆನೆ ಹಾಕಿದ ಅಲಸಂದೆ ಕಾಳು-1 ಕಪ್
• ಕೆಂಪು ಮೆಣಸು-8-10
• ಕೊತ್ತಂಬರಿ ಬೀಜ-1 ಟೇಬಲ್ ಚಮಚ
• ಜೀರಿಗೆ-1 ಟೀ ಚಮಚ
• ಸಾಸಿವೆ-1/4 ಟೀ ಚಮಚ
• ಅರಿಶಿಣ-1/2 ಟೇಬಲ್ ಚಮಚ
•  ಬೆಲ್ಲ-ಚಿಕ್ಕ ತುಂಡು
• ಟೊಮ್ಯಾಟೋ (ಮಧ್ಯಮ ಗಾತ್ರ)-2
• ಈರುಳ್ಳಿ (ಮಧ್ಯಮ ಗಾತ್ರ)-1
•  ಬೆಳ್ಳುಳ್ಳಿ-3 ಎಸಳು
•  ಕಾಯಿ ತುರಿ-1 ಕಪ್
•  ಎಣ್ಣೆ-2 ಟೀ ಚಮಚ
•  ಉಪ್ಪು-ರುಚಿಗೆ ತಕ್ಕಷ್ಟು

ಸಿಂಪಲ್ಲಾಗೊಂದು ವೆಜ್ ಕಟ್ಲೇಟ್

ಮಾಡುವ ವಿಧಾನ:
- ಬಸಳೆ ಎಲೆಗಳನ್ನು ದಂಟಿನಿಂದ ಬಿಡಿಸಿ. 
- ಈಗ ದಂಟನ್ನು ತೋರುಬೆರಳಷ್ಟು ಉದ್ದವಿರುವಂತೆ ಕತ್ತರಿಸಿ ಒಂದು ಪಾತ್ರೆಗೆ ಹಾಕಿ. ಆ ಬಳಿಕ ನೀರು ಹಾಕಿ ಚೆನ್ನಾಗಿ ತೊಳೆಯಿರಿ.
- ಬಸಳೆ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ. ಆ ಬಳಿಕ ಹಚ್ಚಿ ಇನ್ನೊಂದು ಪಾತ್ರೆಗೆ ಹಾಕಿ. 
-  ಕುಕ್ಕರ್‍ಗೆ ಬಸಳೆ ದಂಟುಗಳನ್ನು ಮಾತ್ರ ಹಾಕಿ ಅದು ಬೇಯಲು ಅಗತ್ಯವಿರುವಷ್ಟು ನೀರು ಮತ್ತು ಉಪ್ಪು ಸೇರಿಸಿ 2 ಸೀಟಿ ಬರುವ ತನಕ ಬೇಯಿಸಿ ಇನ್ನೊಂದು ಪಾತ್ರೆಗೆ ವರ್ಗಾಯಿಸಿ.
- 3-4 ಗಂಟೆಗಳ ಕಾಲ ನೆನೆಸಿಟ್ಟ ಅಲಸಂದೆಕಾಳುಗಳನ್ನು ಕುಕ್ಕರ್‍ಗೆ ಹಾಕಿ ಸ್ವಲ್ಪ ಉಪ್ಪು ಸೇರಿಸಿ 2 ಸೀಟಿ ಬರುವ ತನಕ ಬೇಯಿಸಿ.

ಡ್ರೈ ಕ್ಯಾಬೇಜ್‌ ಮಂಚೂರಿಯನ್‌ ಮನೆಯಲ್ಲೇ ಮಾಡಿ!

- ಪ್ಯಾನ್ ಅನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಈರುಳ್ಳಿ ಹಾಗೂ ಜಜ್ಜಿದ ಬೆಳ್ಳುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಫ್ರೈ ಮಾಡಿದ ಬಳಿಕ ಪುಟ್ಟ ಪ್ಲೇಟ್‍ಗೆ ವರ್ಗಾಯಿಸಿ ಬದಿಗಿರಿಸಿ. 
- ಈಗ ಅದೇ ಪ್ಯಾನ್‍ಗೆ ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ ಹಾಕಿ 2 ನಿಮಿಷ ಹುರಿಯಿರಿ. ಬಳಿಕ ಇದಕ್ಕೆ ಕೆಂಪುಮೆಣಸು ಹಾಕಿ ಸ್ವಲ್ಪ ಸಮಯ ಹುರಿಯಿರಿ. ನಂತರ ತೆಂಗಿನಕಾಯಿ ತುರಿ ಸೇರಿಸಿ ಸ್ವಲ್ಪ ಸಮಯ ಕೈಯಾಡಿಸಿದ ಬಳಿಕ ಸ್ಟೌವ್‍ನಿಂದ ಇಳಿಸಿ. ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ವರ್ಗಾಯಿಸಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
- ಈಗ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ತೊಳೆದ ಬಸಳೆ ಸೊಪ್ಪು, ಕತ್ತರಿಸಿದ ಟೊಮ್ಯಾಟೋ, ಅರಿಶಿಣ, ಬೆಲ್ಲ, ಸ್ವಲ್ಪ ಉಪ್ಪು ಹಾಗೂ ನೀರು ಸೇರಿಸಿ (ಜಾಸ್ತಿ ಉಪ್ಪು ಹಾಕಬೇಡಿ. ಏಕೆಂದರೆ ಬಸಳೆ ದಂಟುಗಳನ್ನು ಬೇಯಿಸುವಾಗ ಕೂಡ ಉಪ್ಪು ಹಾಕಿರುತ್ತೇವೆ.) ಬೇಯಿಸಿ. ಬಸಳೆ ಸೊಪ್ಪು ಶೇ.80ರಷ್ಟು ಬೆಂದ ಬಳಿಕ ಬೇಯಿಸಿಟ್ಟುಕೊಂಡಿರುವ ದಂಟು, ಅವರೆಕಾಳು ಹಾಗೂ ರುಬ್ಬಿಟ್ಟುಕೊಂಡಿರುವ ಮಸಾಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಬೇಯಿಸಿ. ಉಪ್ಪು ಅಗತ್ಯವಿದ್ದರೆ ಸೇರಿಸಿ.


 

click me!