Latest Videos

ಬದುಕು ಪ್ರಕಾಶಮಾನ-ಹಳ್ಳಿಗಳನ್ನು ಕಟ್ಟುವ ಕಷ್ಟಸುಖ ಪುಸ್ತಕ ಬಿಡುಗಡೆ

By Nirupama K SFirst Published May 19, 2024, 12:54 PM IST
Highlights

ಬೈಫ್ ಸಂಸ್ಥೆಯಲ್ಲಿ ತೊಡಗಿಕೊಂಡು ಗ್ರಾಮಾಭಿವೃದ್ಧಿಯ ಕನಸು ಕಂಡು, ದಶಕಗಳ ಕಾಲ ಅದಕ್ಕೆ ಕಟ್ಟುಬಿದ್ದು, ಸುಸ್ಥಿರ ವಿಕಾಸಕ್ಕೆ ಮಾದರಿಯಾದ ಪ್ರಕಾಶ್ ಭಟ್ ಅವರ ಅನುಭವ 'ಕಥನ- ಹಳ್ಳಿಗಳನ್ನು ಕಟ್ಟುವ ಕಷ್ಟಸುಖ' ಧಾರವಾಡದಲ್ಲಿ ಇವತ್ತು ಬಿಡುಗಡೆ ಆಗುತ್ತಿದೆ. ಅವರ ಸೇವಾಕಥನದ ಒಂದು ಭಾಗ ಇಲ್ಲಿದೆ.

-ಡಾ.ಪ್ರಕಾಶ್‌ ಭಟ್‌

ನಾವು 41 ಜನ, 1980 ಮಾರ್ಚ್‌ನಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯದ ಸ್ನಾತಕರಾದೆವು. ನಮ್ಮ ಡಿಗ್ರಿಯ ಕೊನೆಯ ಹಂತದಲ್ಲಿ ಒಂದು ದಿನ ನಮಗೆ ಕ್ಯಾಂಪಸ್ ಇಂಟರ್‌ವ್ಯೂ. ಆ ದಿನ ನಮ್ಮ ಸಂದರ್ಶನ ಮಾಡಲು ಬಂದವರು ಸಾಮಾನ್ಯರೇನಲ್ಲ, ಗಾಂಧೀಜಿಯವರ ಶಿಷ್ಯರಾಗಿದ್ದ ಡಾ.ಮಣಿಭಾಯಿ ದೇಸಾಯಿ. ಮಣಿಭಾಯಿ ಪುಣೆಯ ಸಮೀಪದ ಉರಳಿಕಾಂಚನ ಎಂಬ ಹಳ್ಳಿಯಲ್ಲಿ ಗ್ರಾಮೀಣಾಭಿವೃದಿಟಛಿಯ ಹೊಸ ಮಾದರಿಯೊಂದನ್ನು ಕಲ್ಪಿಸಿ ನಡೆಸುತ್ತಿದ್ದರು. ಭಾರತೀಯ ಕೃಷಿ ಉದ್ಯೋಗ ಪ್ರತಿಷ್ಠಾನ ಎಂಬುದು ಅವರು ಕಟ್ಟಿದ್ದ ಸಂಸ್ಥೆಯ ಅಂದಿನ ಹೆಸರು, ಸಂಕ್ಷಿಪ್ತವಾಗಿ 'ಬೈಫ್'. ಮುಂದೆ ಅದೇ  'ಬೈಫ್ ಅಭಿವೃದಿಟಛಿ ಸಂಶೋಧನ ಪ್ರತಿಷ್ಠಾನ' ಎಂದು ಹೆಸರಾಯಿತು.

ಗಾಂಧೀಜಿಯವರಲ್ಲಿ ತಾವು ಶಿಷ್ಯತ್ವ ಪಡೆಯಲು ಹೋದ ಸಂದರ್ಭವನ್ನು ಮಣಿಭಾಯಿ ಸ್ವಾರಸ್ಯಕರವಾಗಿ ಹೇಳುತ್ತಿದ್ದರು, ಗಾಂಧೀಜಿ ಮಣಿಭಾಯಿಯನ್ನು ಪ್ರಶ್ನಿಸುತ್ತಾರೆ. 'ಭಾರತ ಯಾಕೆ ಬಡವಾಗಿದೆ', ಗಾಂಧಿಯ ಭೇಟಿಗೆ ಹೋಗುವ ಮೊದಲೇ ಮಣಿಭಾಯಿಗೆ ಯಾರೋ ಹೇಳಿದ್ದರಂತೆ, ಗಾಂಧೀಜಿ ಕೇಳಿದ ಪ್ರಶ್ನೆಗಳನ್ನು ಉತ್ತರಿಸಲು ಹೋಗಬೇಡ. ಅವರೇ ತಮ್ಮ ಪ್ರಶ್ನೆಗೆ ಉತ್ತರ ಹೇಳುತ್ತಾರೆ. ತಾವೇ ಪ್ರಶ್ನೆ ಕೇಳಿ, ತಾವೇ ಉತ್ತರಹೇಳುವುದು ಅವರ ಶೈಲಿ ಎಂದು. ಮಣಿಭಾಯಿ ಉತ್ತರಿಸುವುದಿಲ್ಲ.

ಔತ್ತಮ್ಯದ ಗೀಳಿನಲ್ಲಿ

ಗಾಂಧೀಜಿಯವರೇ ಹೇಳಿದರು, 'ಯಾಕೆಂದರೆ ಭಾರತದ ಹಳ್ಳಿಗಳು ಬಡವಾಗಿವೆ'. ಮತ್ತೆ ಪ್ರಶ್ನೆ, 'ಭಾರತದ ಹಳ್ಳಿಗಳು ಯಾಕೆ ಬಡವಾಗಿವೆ'. ಯಾಕೆಂದರೆ ಹಳ್ಳಿಗರು ಅರೆಕಾಲಿಕ ಉದ್ಯೋಗಿಗಳು, ಅರೆಕಾಲಿಕ, ಉದ್ಯೋಗದ ಸಮಸ್ಯೆ ನಿರುದ್ಯೋಗದ ಸಮಸ್ಯೆಗಿಂತ ಸಂಕೀರ್ಣ'. ಮಣಿಭಾಯಿ ಆಶ್ರಮದ ಪಾಯಿಖಾನೆಯ ಸ್ವಚ್ಛತೆಗೆ ನೇಮಿಸಲ್ಪಟ್ಟರು. ಪಾಯಿಖಾನೆ ಅಂದರೆ ಕೆಳಗಡೆ ಬಕೆಟ್ ಇಡುವ ಮಾದರಿಯದು. ಆ ಬಕೆಟ್ ತುಂಬುತ್ತಿದ್ದಂತೆಯೇ ಅದನ್ನು ಒಯ್ದು ಅದರಲ್ಲಿರುವ ಮಲವನ್ನು ಮಣ್ಣಲ್ಲಿ ಮುಚ್ಚಿ ಗೊಬ್ಬರ ಮಾಡಲು ಹಾಕಿ, ಬಕೆಟ್ ತೊಳೆದು ತಿರುಗಿ ತಂದಿಡುವ ಕೆಲಸ ಮಣಿಭಾಯಿಗೆ. ಎಷ್ಟು ಸ್ವಚ್ಛ ಮಾಡಬೇಕೆಂಬ ಸೂಚನೆಯನ್ನು ಗಾಂಧೀಜಿಯವರೇ ಕೊಡುತ್ತಿದ್ದರಂತೆ. 

'ಬಕೆಟ್ ತಳದಲ್ಲಿ ನಿನ್ನ ಮುಖ ಕಾಣಬೇಕು'. ಮಣಿಭಾಯಿ ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಗಾಂಧೀಜಿ ಪುಣೆಯ ಸಮೀಪ ಉರುಳಿಕಾಂಚನ್ ಎಂಬಲ್ಲಿ ನಿಸರ್ಗೋಪಚಾರ ಕೇಂದ್ರವೊಂದನ್ನು ಸ್ಥಾಪಿಸಿರುತ್ತಾರೆ. ನಿಸರ್ಗ ಚಿಕಿತ್ಸೆಯ ಪ್ರಯೋಜನವನ್ನು ಬಲವಾಗಿ ಪ್ರತಿಪಾದಿಸಿದವರು ಗಾಂಧಿ. ತಾನು ಹೇಳಿದ್ದನ್ನು ಮಾಡುವ ಗಾಂಧಿ, ಉರುಳಿಯಲ್ಲಿ (ಉರುಳಿ-ಉರುಳಿ ಕಾಂಚನದ ಬಳಕೆಯ ಹೆಸರು) ನಿಸರ್ಗೋಪಚಾರ ಕೇಂದ್ರ ಸ್ಥಾಪಿಸಿ, ಅಲ್ಲೊಬ್ಬ ತರುಣ ಕಾರ್ಯಕರ್ತ ಬೇಕೆಂದು ಯೋಚಿಸಿ, ಮಾಣಿಭಾಯಿಯವರನ್ನು ಕೇಂದ್ರದ ಕೆಲಸಕ್ಕೆ ನಿಯೋಜಿಸುತ್ತಾರೆ. ಮುಂದೆ ಮಣಿಭಾಯಿ ಉರುಳಿಯಲ್ಲಿ ಸಾಧಿಸಿದ್ದು ದೇಶದ ಗ್ರಾಮಾಭಿವೃದ್ಧಿ ಕೆಲಸದ ಐತಿಹಾಸಿಕ ಮಾದರಿಯಾಗುತ್ತದೆ.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಮಣಿಭಾಯಿಯವರು ಅಂದು ನಮ್ಮ ಸಂದರ್ಶನ ನಡೆಸಿದರು. ನಮ್ಮಲ್ಲಿ 26 ಜನರನ್ನು ಆಯ್ಕೆ ಮಾಡಿದರು. ಹಾಗೆ 1980, ಏಪ್ರಿಲ್ 1ರ ದಿನ ನಾವೆಲ್ಲರೂ ಬೈಫ್‌ನ ಉರುಳಿಕಾಂಚನದ ಕ್ಯಾಂಪಸ್‌ನಲ್ಲಿ ತರಬೇತಿಗೆ ಹಾಜರಾದೆವು. ಬೈಫ್‌ನ ಸೆಂಟ್ರಲ್ ರಿಸರ್ಚ್ ಸ್ಟೇಷನ್ ಅದು. ಅಲ್ಲಿ ಬುಲ್ ಮದರ್‌ಫಾರ್ಮ್, ವೀರ್ಯಸಂಗ್ರಹಣೆಗಾಗಿ ಉತ್ಕೃಷ್ಟ ಪೆಡಿಗ್ರಿಯ ಹೋರಿಗಳು, ಮೇವಿನ ತಾಕುಗಳು, ಗೋಬರ್‌ಅನಿಲದ ಪ್ರಯೋಗಗಳು ಇದ್ದವು. ಸುಬಾಬುಲ್ ಗಿಡದ ಬೀಜಗಳನ್ನು ಹವಾಯಿಯಿಂದ ತಂದು ಗಿಡಗಳನ್ನು ಬೆಳೆಸಿ ಮೇವಿನ ಮರವಾಗಿ ಜನಪ್ರಿಯಗೊಳಿಸಲು ಅವುಗಳ ಮೇಲೆ ವಿವಿಧ ಪ್ರಯೋಗಗಳು ಅಲ್ಲಿ ನಡೆದಿದ್ದವು. ಸುಬಾಬುಲ್ ವೇಗವಾಗಿ ಬೆಳೆಯುವ ಗಿಡ. ಅದರ ಹಸುರು ಎಲೆಗಳಲ್ಲಿ ಶೇಕಡಾ 22ರಷ್ಟು ಕ್ರೂಡ್ ಪ್ರೋಟೀನ್ ಇರುತ್ತದೆ. ದನಗಳಿಗೆ ಬೇಕಾದ ಪೌಷ್ಟಿಕ ಅಹಾರ ಹಾಗೂ ಮೇವಿನ ಕೊರತೆ ಇರುವ ಭಾರತದಲ್ಲಿ ಸುಬಾಬುಲ್ ಬಹು ಉಪಯುಕ್ತವಾಗಬಲ್ಲದೆಂದು ಮನಗಂಡು ಮಣಿಭಾಯಿ ಹಾಗೂ ಡಾ. ನಾರಾಯಣ ಹೆಗಡೆ ಸುಬಾಬುಲ್ ಕೃಷಿಗೆ ಹಾಗೂ ಬಳಕೆಗೆ ಮನಸ್ಸು ಮಾಡಿದ್ದರು.

ಸುಬಾಬುಲ್ ಸೊಪ್ಪನ್ನು ದನಗಳಿಗೆ ತಿನ್ನಿಸುವಲ್ಲಿ ಒಂದು ಸಮಸ್ಯೆ ಇತ್ತು. ಅದರ ಎಲೆಗಳಲ್ಲಿ ಮೈಮೊಸಿನ್ ಎಂಬ ವಿಷಕಾರಿಯಾದ, ಪ್ರೋಟೀನ್ ಅಲ್ಲದ ಅಮಿನೋ ಆಸಿಡ್ ಇದ್ದು, ಅದು ದನಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ಕುರಿತು ವರದಿಗಳಿದ್ದವು. ಒಟ್ಟೂ ಆಹಾರದ ಮೂರರಲ್ಲಿ ಒಂದು ಪಾಲನ್ನು ಮೀರದಂತೆ ಸುಬಾಬುಲ್ ಎಲೆಗಳನ್ನು ದನಗಳಿಗೆ ಸುರಕ್ಷಿತವಾಗಿ ಮೇಯಿಸಬಹುದೆಂದು ಬೈಫಿನ ಪ್ರಯೋಗಗಳು ಸಾಬೀತುಪಡಿಸಿದವು. ಉರುಳಿಕಾಂಚನದ ತರಬೇತಿಯ ನಂತರ ನಾನು ಜಾನುವಾರು ಸಂವರ್ಧನ ಕೇಂದ್ರಗಳಲ್ಲಿ ಸುಮಾರು ೮-೯ ವರ್ಷಗಳ ಕಾಲ ಕೆಲಸ ನಿರ್ವಹಿಸಿದೆ. ಮೂಡಲಗಿ, ಯಲ್ಲಾಪುರ, ಉಮಚಗಿ ಶಿರಸಿ, ಪುತ್ತೂರು ಹೀಗೆ ಹಲವು ಊರುಗಳಲ್ಲಿ ಜಾನುವಾರು ಸಂವರ್ಧನೆಯ ಹಾಗೂ ಕಾರ್ಯಕ್ರಮದ ಉಸ್ತುವಾರಿಯ ಕೆಲಸ ಮಾಡಿದೆ. ನನ್ನ ಜೊತೆಯಲ್ಲಿ ಬೈಫ್ ಸೇರಿದ ಸಹಪಾಠಿಗಳೆಲ್ಲ ಒಂದೆರಡು ವರ್ಷಗಳಲ್ಲಿ ಕರ್ನಾಟಕ ಸರ್ಕಾರದ ಕೆಲಸ ಸಿಗುತ್ತಿದ್ದಂತೆಯೆ ಬೈಫ್ ತೊರೆದರು. ನಾನು ಸರ್ಕಾರಿ ನೌಕರಿ ಬೇಡವೆಂದೂ ಗ್ರಾಮೀಣಾಭಿವೃದ್ಧಿ ಮುಂದುವರಿಯಬೇಕೆಂದೂ ನಿರ್ಧರಿಸಿದ್ದೆ. ಆರ್ಥಿಕ ಭದ್ರತೆ ಹಾಗೂ ಸರ್ಕಾರಿ ಅಧಿಕಾರಗಳನ್ನು ನಿರಾಕರಿಸಲು ಮನಸ್ಸು ಮಾಡಿದೆ. ನನ್ನ ವ್ಯಕ್ತಿತ್ವಕ್ಕೆ ಸರ್ಕಾರಿ ಕೆಲಸ ಬೇಡವೆಂದು ಅನಿಸಿತು. 

ಈಗ ತಿರುಗಿ ನೋಡಿದರೆ ಅದೊಂದು ದೈವಿಕ ನಿರ್ಣಯವೆನಿಸುತ್ತದೆ. ನಾನು ಪ್ರಾಮಾಣಿಕವಾಗಿರಬೇಕು, ನನ್ನಿಂದ ಸಮಾಜಕ್ಕೆ ಒಳಿತಾಗಬೇಕು
ಎನ್ನುವ ವಿಚಾರ ನನ್ನ ಕಾಲೇಜು ದಿನಗಳಲ್ಲೇ ಮನಸ್ಸಿನಲ್ಲಿ ಹರಳುಗಟ್ಟಿತ್ತು. ಮಣಿಭಾಯಿಯವರ ನಿಸ್ವಾರ್ಥ ಮಾದರಿ ಅದನ್ನು
ಇನ್ನಷ್ಟು ಗಟ್ಟಿ ಮಾಡಿತು. ತೊಂಬತ್ತರ ದಶಕದ ಪ್ರಾರಂಭದಲ್ಲಿಯೇ ನಾನು ಪಶುವೈದ್ಯಕೀಯದ ತಳಿ ಅಭಿವೃದಿಟಛಿಯ ಕೆಲಸಗಳನ್ನು ಮೀರಿ ಕೆಲಸ ಮಾಡುವ ಅವಕಾಶ ದೊರಕಿತು. ಭೈಫ್ ಸಂಸ್ಥೆಯು ಕರ್ನಾಟಕದಲ್ಲಿ ಪ್ರಾರಂಭಿಸಿದ ಕೃಷಿ ಅರಣ್ಯ ಕಾರ್ಯಕ್ರಮದಲ್ಲಿ ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಕೆಲಸದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನನಗೆ ನೀಡಲಾಗಿತ್ತು. 

ಅಂದಿನ ಧಾರವಾಡ (ಈಗ ಹಾವೇರಿ) ಜಿಲ್ಲೆಯ ಕನವಳ್ಳಿ ಹಾಗೂ ಉತ್ತರ ಕನ್ನಡದ ಮುಂಡಗೋಡಿನ ತಮ್ಯಾನಕೊಪ್ಪ ಎನ್ನುವ ಲಂಬಾಣಿ ತಾಂಡಾ ಈ ಯೋಜನೆಯ ಕಾರ್ಯಕ್ಷೇತ್ರಗಳು. ಅವುಗಳನ್ನು ಬ್ಲಾಕ್‌ಗಳು ಎಂದು ಗುರುತಿಸಿ ಪ್ರತಿಯೊಂದು ಬ್ಲಾಕ್‌ನಲ್ಲಿ ನೂರು ಕುಟುಂಬಗಳೊಂದಿಗೆ ಕೆಲಸ ಮಾಡುವುದು ಯೋಜನೆಯ ಉದ್ದೇಶ. ಪ್ರತಿ ಕುಟುಂಬದ ಜಮೀನಿನಲ್ಲಿ ಕೃಷಿಯೊಂದಿಗೆ ಹಣ್ಣಿನ ಗಿಡಗಳು ಹಾಗೂ ಅರಣ್ಯ ಗಿಡಗಳನ್ನು ನೆಟ್ಟು, ಕೃಷಿ ಅರಣ್ಯ ಬೇಸಾಯ ಕೈಗೊಂಡು ಅವರು ತಮ್ಮ ಆದಾಯವನ್ನು ಸುಸ್ಥಿರವಾಗಿ ಹೆಚ್ಚಿಸಿಕೊಳ್ಳಲು ಬೇಕಾಗುವಂತೆ ಮಾಡಲು ಯೋಜನೆ ತಯಾರಿಸಲಾಯಿತು. ಈ ಯೋಜನೆ ಹಲವಾರು ಆಂತರಿಕ ಹಾಗೂ ಬಾಹ್ಯ ತೊಡಕುಗಳನ್ನು ಎದುರಿಸುತ್ತ 1995ರಲ್ಲಿ ಮುಗಿಯಿತು. ಅಷ್ಟರೊಳಗೆ, 1992ರಲ್ಲಿ ಮಣಿಭಾಯಿಯವರು ನಮ್ಮನ್ನಗಲಿದರು.

click me!