
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಗಾದೆಯೊಂದಿದೆ. ದೂರದಲ್ಲಿ ಬೆಟ್ಟ ಸುಂದರವಾಗಿಯೇ ಕಾಣುತ್ತೆ. ಅದ್ರ ಹತ್ತಿರ ಹೋಗಿ ನೋಡಿದಾಗ ಮಾತ್ರ ಅದ್ರಲ್ಲಿರುವ ಕಲ್ಲು, ಮುಳ್ಳುಗಳು ಕಾಣೋದು ಎಂಬುದು ಇದರ ಅರ್ಥ. ನಾವು ಬಹುತೇಕರನ್ನು ದೂರದಿಂದಲೇ ನೋಡಿರ್ತೇವೆ. ಅದನ್ನೇ ಸತ್ಯ (Truth) ವೆಂದು ನಂಬ್ತೇವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ (Social Media) ಗಳ ಬಳಕೆ ಹೆಚ್ಚಾಗಿದೆ. ಜನರು ವಾಟ್ಸ್ ಅಪ್ (Whats Up), ಫೇಸ್ಬುಕ್ (Facebook) ಗಳಲ್ಲಿ ಸುಂದರ ಕ್ಷಣಗಳ ಫೋಟೋ (Photo) ವನ್ನು ಹಂಚಿಕೊಳ್ತಾರೆ. ಇಲ್ಲವೆ ಖುಷಿಯ ಘಟನೆಗಳನ್ನು ಹಂಚಿಕೊಳ್ತಾರೆ. ಅದನ್ನು ನೋಡುವ ನಾವು ಅವರಿಗೆ ಕಷ್ಟವೇ ಇಲ್ಲ ಎಂಬ ಭಾವನೆಗೆ ಬಂದು ಬಿಡ್ತೇವೆ. ಬರೀ ಸಾಮಾಜಿಕ ಜಾಲತಾಣ ಮಾತ್ರವಲ್ಲ ಹತ್ತಿರದಿಂದ ನೋಡುವ ಸಂಬಂಧಿಕರು, ಸ್ನೇಹಿತರ ಖುಷಿ ನೋಡಿ ಅಸೂಯೆ (Jealousy) ಪಡುವವರೇ ಹೆಚ್ಚು. ನಮ್ಮನ್ನು ಇತರರಿಗೆ ಹೋಲಿಕೆ (Comparison) ಮಾಡಿಕೊಂಡು ಅಸೂಯೆಪಡುವವರ ಸಂಖ್ಯೆ ಸಾಕಷ್ಟಿದೆ. ಹೋಲಿಕೆ ಮಾಡುವುದು ಹೆಚ್ಚಿನ ಜನರಲ್ಲಿ ನಡೆಯುವ ನೈಸರ್ಗಿಕ ಪ್ರಕ್ರಿಯೆ. ಇತರರಿಗೆ ನಮ್ಮನ್ನು ಹೋಲಿಸಿಕೊಳ್ಳುವುದರಿಂದ ನಮಗೇ ಹಾನಿ ಎಂಬ ಸತ್ಯ ಅನೇಕರಿಗೆ ತಿಳಿದಿಲ್ಲ. ಇತರರನ್ನು ನಮಗೆ ಹೋಲಿಕೆ ಮಾಡಿಕೊಂಡ್ರೆ ಅಸೂಯೆ ಜೊತೆಗೆ ನಕಾರಾತ್ಮಕ (Negative) ಆಲೋಚನೆಗಳು ಸಹ ನಮ್ಮ ಮನಸ್ಸಿನಲ್ಲಿ ಪ್ರಾರಂಭವಾಗುತ್ತವೆ. ಈ ಹೋಲಿಕೆ ಹೋದ್ರೆ ಅಸೂಯೆ ಹೋಗಲು ಸಾಧ್ಯ. ಕೆಲವೊಂದು ಬದಲಾವಣೆ ಮೂಲಕ ನಾವು ಈ ಹೋಲಿಕೆ ಹಾಗೂ ಅಸೂಯೆಗೆ ಮುಕ್ತಿ ನೀಡ್ಬಹುದು.
ಸ್ವಯಂ ಹೋಲಿಕೆ : ನಿಮ್ಮನ್ನು ಬೇರೆಯವರಿಗೆ ಹೋಲಿಕೆ ಮಾಡುವುದನ್ನು ಬಿಡಿ. ನಿಮಗೆ ನಿಮ್ಮನ್ನೇ ಹೋಲಿಕೆ ಮಾಡಿಕೊಳ್ಳಿ. ಆಗ ನಿಮ್ಮ ನ್ಯೂನ್ಯತೆಗಳು ಹಾಗೂ ದೋಷಗಳು ನಿಮಗೆ ತಿಳಿಯುತ್ತವೆ. ಆಗ ಹೊಸ ಸವಾಲುಗಳನ್ನು ಎದುರಿಸಲು ನಿಮಗೆ ಸಹಾಯವಾಗುತ್ತದೆ. ಬೇರೆಯವರನ್ನು ಹೋಲಿಕೆ ಮಾಡಿಕೊಂಡು ಮನಸ್ಸಿನ ಶಾಂತಿ (Peace Of Mind ) ಕೆಡಿಸಿಕೊಳ್ಳುವುದು ತಪ್ಪುತ್ತದೆ.
ಇದನ್ನೂ ಓದಿ: HEALTH TIPS : ಯೋಗ ಮಾಡುವ ಮೊದಲು ಸಮಯದ ಬಗ್ಗೆ ತಿಳಿಯಿರಿ
ಸಾಮಾಜಿಕ ಮಾಧ್ಯಮ ಬಗ್ಗೆ ಹೆಚ್ಚಿ ಒಲವು ಬೇಡ : ಮೊದಲೇ ಹೇಳಿದಂತೆ ಸಾಮಾಜಿಕ ಜಾಲತಾಣದಲ್ಲಿ ಬರುವುದೆಲ್ಲ ಸತ್ಯವಲ್ಲ. ಸ್ನೇಹಿತರು ನಗುವಿನ ಫೋಟೋ ಹಾಕಿರಬಹುದು ಆದ್ರೆ ಮನಸ್ಸಿನಲ್ಲಿ ಸಾಕಷ್ಟ ನೋವಿರಬಹುದು. ಅದು ನಿಮ್ಮ ಅರಿವಿಗೆ ಬಂದಿರುವುದಿಲ್ಲ. ನೀವು ಅವರು ಸಂತೋಷವಾಗಿದ್ದಾರೆ, ನಾನ್ಯಾಕಿಲ್ಲ ಎಂದು ಆಲೋಚನೆ ಮಾಡುತ್ತ ವಿನಃ ಕಾಲಹರಣ ಮಾಡ್ತೀರಿ. ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ತೀರಿ. ಅಷ್ಟೇ ಅಲ್ಲ ಅವರ ಬಗ್ಗೆ ಅಸೂಯೆಪಟ್ಟುಕೊಳ್ತೀರಿ. ಅದ್ರ ಬದಲು ಫೋಟೋ, ವಿಡಿಯೋ ನೋಡಿ ಅದನ್ನು ಅಲ್ಲಿಯೇ ಬಿಡಿ. ಇಲ್ಲವೆ ಸಾಮಾಜಿಕ ಜಾಲತಾಣದ ಬಳಕೆಯನ್ನೇ ಕಡಿಮೆ ಮಾಡಿ. ಇದ್ರಿಂದ ನಿಮ್ಮ ಮನಸ್ಸು ಗೊಂದಲಕ್ಕೀಡಾಗುವುದಿಲ್ಲ. ಶಾಂತಿ ಕದಡುವುದಿಲ್ಲ. ಹೋಲಿಕೆ ಮಾಡುವುದು ತಪ್ಪುತ್ತದೆ.
ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ : ಬೇರೆಯವರಿಗೆ ಹೋಲಿಕೆ ಮಾಡಿಕೊಂಡ್ರೆ ಮನಸ್ಸು ಕುಗ್ಗುತ್ತದೆ. ನಕಾರಾತ್ಮಕ ಭಾವನೆ ಮೂಡುತ್ತದೆ. ನಿಮ್ಮ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಹೋಲಿಕೆ ಬಿಟ್ಟು ನಿಮ್ಮನ್ನು ನೀವು ಪ್ರೇರೇಪಿಸಿಕೊಳ್ಳಿ. ಹೋಲಿಕೆ ಮಾಡಬಾರದು ಎಂಬ ನಿರ್ಧಾರ ತೆಗೆದುಕೊಳ್ಳಿ. ಅದರಂತೆ ನಡೆದುಕೊಳ್ಳಿ.
ಇದನ್ನೂ ಓದಿ: 30ವರ್ಷ ವಯಸ್ಸಿನ ಬಳಿಕ ಗೆಳೆಯರನ್ನು ಕಳೆದುಕೊಳ್ಳಲು ಕಾರಣವೇನು?
ಸದಾ ಬ್ಯುಸಿಯಾಗಿರಿ : ಖಾಲಿ ಮನಸ್ಸಿನಲ್ಲಿ ಕೊಳಕು ತುಂಬಿಕೊಳ್ಳೋದು ಹೆಚ್ಚು. ಹಾಗಾಗಿ ಖಾಲಿ ಕುಳಿತು ವ್ಯರ್ಥ ಸಮಯ ಹಾಳ್ಮಾಡ್ಬೇಡಿ. ಸದಾ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿಯಾಗಿರಿ. ಹೊಸ ಹೊಸ ಕೆಲಸ ಕಲಿಯಲು ಪ್ರಯತ್ನಿಸಿ. ನಿಮ್ಮ ಹಳೆ ಹವ್ಯಾಸವನ್ನು ಮತ್ತೆ ಶುರು ಮಾಡಿ. ಓದು, ಡಾನ್ಸ್, ವ್ಯಾಯಾಮ ಹೀಗೆ ನಿಮ್ಮ ಮನಸ್ಸಿಗೆ ಸಂತೋಷ ನೀಡುವ ಕೆಲಸವನ್ನು ಸದಾ ಮಾಡಿ. ಆಗ ಮನಸ್ಸು ಉಲ್ಲಾಸಗೊಳ್ಳುತ್ತದೆ. ಇದ್ರಿಂದ ಹೋಲಿಕೆ ಕಡಿಮೆಯಾಗುತ್ತದೆ. ಅಸೂಯೆ ಮಾಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.