ನಾವು ಸುಖವಾಗಿದ್ದಾಗ, ಯಾವತ್ತಾದರೂ, ನಿಮ್ಮನ್ನು ನೆನಪಿಸಿಕೊಂಡಿದ್ದೇವೆಯೇ ಎಂದು ಯೋಚಿಸಿದರೆ ನಾವೆಷ್ಟುಕೃತಘ್ನರು ಅನ್ನುವುದು ನಮಗೇ ಗೊತ್ತಾಗುತ್ತದೆ. ಸಂಕಟದಿಂದ ಹೊರಬಂದ ಮೇಲಾದರೂ ನೆನಪಿಸಿಕೊಳ್ಳುತ್ತೇವೆಯೇ ಎಂದರೆ ಅಲ್ಲೂ ನಮ್ಮ ಉತ್ತರ ನೆಗೆಟಿವ್.
ನಾವು ಸುಖವಾಗಿದ್ದಾಗ, ಯಾವತ್ತಾದರೂ, ನಿಮ್ಮನ್ನು ನೆನಪಿಸಿಕೊಂಡಿದ್ದೇವೆಯೇ ಎಂದು ಯೋಚಿಸಿದರೆ ನಾವೆಷ್ಟುಕೃತಘ್ನರು ಅನ್ನುವುದು ನಮಗೇ ಗೊತ್ತಾಗುತ್ತದೆ. ಸಂಕಟದಿಂದ ಹೊರಬಂದ ಮೇಲಾದರೂ ನೆನಪಿಸಿಕೊಳ್ಳುತ್ತೇವೆಯೇ ಎಂದರೆ ಅಲ್ಲೂ ನಮ್ಮ ಉತ್ತರ ನೆಗೆಟಿವ್. ಸಂಕಟ ಬಂದಾಗ ಡಾಕ್ಟರ್ ವೆಂಕಟರಮಣ ಅನ್ನುವುದು ನಮ್ಮ ನಂಬಿಕೆ. ಆದರೆ ನಮ್ಮ ಸುಖದ ಬದುಕಿಗೆ ನೀವೇ ಕಾರಣ ಅನ್ನುವುದನ್ನು ನಾವು ಮರೆತಿರುತ್ತೇವೆ. ಸೈನಿಕ ಮತ್ತು ವೈದ್ಯ- ಇಬ್ಬರೂ ನಮಗೆ ಆರೋಗ್ಯ ಮತ್ತು ಸ್ವಾತಂತ್ರ್ಯ ಅಪಹರಣ ಆಗದಂತೆ ಕಾಯುತ್ತಿರುತ್ತಾರೆ. ಅಂಥ ವೈದ್ಯೋ ನಾರಾಯಣೋ ಹರಿ- ಎಂಬ ಗೌರವಕ್ಕೆ ಪಾತ್ರರಾದ ಎಲ್ಲ ವೈದ್ಯರಿಗೂ ನಮಸ್ಕಾರ.
ಸಲಾಮ್ ಡಾಕ್ಟರ್ಸ್
ಗೊತ್ತಿರುವ ಕಾಯಿಲೆಗೆ ಔಷಧಿ ಕೊಡುವುದು ಒಂದು ರೀತಿ. ಕಾಯಿಲೆಯೇ ಗೊತ್ತಿಲ್ಲದೇ ಇದ್ದಾಗ ಬದುಕಿಸಲು ಹೋರಾಡುವುದು ಅದಕ್ಕಿಂತ ಶ್ರೇಷ್ಠವಾದ ಕೈಂಕರ್ಯ. ಅಷ್ಟಕ್ಕೂ ನಾವಾದರೂ ನಮ್ಮ ದೇಹವನ್ನು ನಿಮಗಿಂತ ಚೆನ್ನಾಗಿ ನೋಡಿಕೊಂಡಿದ್ದೇವೆಯೇ ಎಂದು ಕೇಳಿದರೆ ಉತ್ತರ ಮತ್ತೆ ನೆಗೆಟಿವ್. ನಮ್ಮ ದೇಹದ ಬಗ್ಗೆ ನಿಮಗಿರುವಷ್ಟುಕಾಳಜಿಯೂ ನಮಗಿಲ್ಲ. ನೀವು ಮಾಡಬೇಡ ಅಂದದ್ದನ್ನೆಲ್ಲ ನಾವು ಮಾಡುತ್ತೇವೆ. ಏನಾದರೂ ಆದರೆ ನಿಮ್ಮನ್ನು ದೂರುತ್ತೇವೆ. ನೀವು ಮುಗುಳುನಗುತ್ತಾ ನಾವೇ ಮಾಡಿದ ತಪ್ಪಿನಿಂದ ಕೆಟ್ಟನಮ್ಮ ಮನಸ್ಸು ಮತ್ತು ಶರೀರವನ್ನು ರಿಪೇರಿ ಮಾಡಲು ಹೊರಡುತ್ತೀರಿ.
ಸಲಾಮ್ ಡಾಕ್ಟರ್ಸ್
undefined
ಯಾರಿಗೆ ಗೊತ್ತಿತ್ತು ಇಂಥದ್ದೊಂದು ಗುರುತಿಲ್ಲದ ಕಾಯಿಲೆ ನಮ್ಮೊಳಗೆ ಬಂದು ಸೇರಿಕೊಳ್ಳುತ್ತದೆಂದು. ಪರಮಶತ್ರುವಿನಂತೆ ಅವಿತು ಕೂತು ಒಬ್ಬೊಬ್ಬರನ್ನೇ ಮುಗಿಸಲು ಹೊಂಚು ಹಾಕುತ್ತದೆಂದು. ಎಲ್ಲರನ್ನೂ ಸಮಾನವಾಗಿ ನೋಡುವುದು ರೋಗ ಮತ್ತು ಸಾವು. ಅದಕ್ಕೆ ಮನುಷ್ಯರೆಲ್ಲರೂ ಒಂದೇ. ವೈದ್ಯರನ್ನೂ ಸಾಮಾನ್ಯರನ್ನೂ ಪ್ರತಿಭಾವಂತರನ್ನೂ ಅದು ಕುರುಡುಗಣ್ಣಿಂದ ನೋಡುತ್ತದೆ. ಬೇಟೆಯಾಡುತ್ತದೆ. ಅಂಥ ಹೊತ್ತಲ್ಲಿ ಯಾರೂ ಅದರ ಕಣ್ಣಿಗೆ ಬೀಳಲು ಇಚ್ಛಿಸುವುದಿಲ್ಲ. ಆದರೆ ನೀವು ಅದರ ಜತೆಗೇ ಇದ್ದುಬಿಟ್ಟಿರಿ. ಅದನ್ನು ಎದುರಿಸಿ ನಿಂತು ಮನುಕುಲದ ರಕ್ಷಣೆಗೆ ಕಟಿಬದ್ಧರಾಗಿ ನಿಂತಿರಿ. ನಿನ್ನ ಸಂಕಟವನ್ನು ವಾಸಿ ಮಾಡುವುದು ಮೊದಲ ಕೆಲಸ ಎಂದಿರಿ. ನನಗೇನೇ ಆದರೂ ಲೆಕ್ಕಿಸುವುದಿಲ್ಲ ಎಂದು ಪಣ ತೊಟ್ಟಿರಿ.
ಸಲಾಮ್ ಡಾಕ್ಟರ್ಸ್
ಜೀವನದಲ್ಲೊಂದು ಅತಿ ವಿಷಾದಕರ ಘಟ್ಟಬರುತ್ತದೆ. ಆಗ ಯಾರೂ ನಮ್ಮ ಜತೆ ಇರುವುದಿಲ್ಲ. ಯಾರೂ ನಮ್ಮ ಕೈ ಹಿಡಿಯುವುದಿಲ್ಲ. ಯಾರೂ ಹತ್ತಿರ ಬರುವುದಿಲ್ಲ. ಅಂಥದ್ದೊಂದು ಸ್ಥಿತಿಯನ್ನು ಊಹಿಸುವುದಕ್ಕೆ ಕೂಡ ಕಷ್ಟ. ಯಾರಿಗೂ ಬರಬಾರದು ಅಂಥಾ ಸನ್ನಿವೇಶಗಳು ಈಗ ಅನೇಕರಿಗೆ ಬಂದು ಬಿಟ್ಟಿದೆ. ಯಾರು ಯಾರನ್ನೂ ದೂರುವ ಹಾಗಿಲ್ಲ. ಆ ನೋವನ್ನು ಸಹಿಸುವಂತೆಯೂ ಇಲ್ಲ. ಅಂಥಾ ವೇಳೆಯಲ್ಲಿ ಯಾರಾದರೊಬ್ಬರು ಬೇಕಿತ್ತು. ದೇವರಂತೆ ನೋಡುವವರು, ದೇವರಂತೆ ಸಲಹುವವರು, ದೇವರಂತೆ ಧೈರ್ಯ ತುಂಬುವವರು. ಆ ಸಮಯದಲ್ಲಿ ದೇವರಂತೆ ನಿಂತು ನಿಮ್ಮ ಜೀವವನ್ನು ನಮಗಾಗಿ ಪಣಕ್ಕಿಟ್ಟುಬಿಟ್ಟಿರಿ. ಕೊರೋನಾ ಇದೆ ಎಂದು ಎಲ್ಲರೂ ಅಂಜುತ್ತಾ ದೂರ ಇರಬೇಕಾದರೆ ನೀವು ಇಡೀ ದಿನ ಏಪ್ರನ್ ತೊಟ್ಟು, ಮಾಸ್ಕ್ ಧರಿಸಿ ಕೊರೋನಾ ಪಾಸಿಟಿವ್ ಮಂದಿಗೆ ಕರುಣಾಳು ಬೆಳಕಾದಿರಿ. ಧೈರ್ಯ ತುಂಬಿದಿರಿ. ಇವತ್ತು ಕೊರೋನಾ ಇರುವವರಿಗಿಂತ ಕೊರೋನಾದಿಂದ ಪಾರಾಗಿ ಬಂದವರ ಸಂಖ್ಯೆ ಹೆಚ್ಚಿದೆ ಎಂದರೆ ಅದಕ್ಕೆ ಕಾರಣ ನೀವೇ
ಸಲಾಮ್ ಡಾಕ್ಟರ್ಸ್
ಸುಖವಾಗಿದ್ದ ಬೀದಿಯಲ್ಲಿ ಯಾರೋ ಒಬ್ಬರಿಗೆ ಕೊರೋನಾ ಬಂತು. ಅಲ್ಲಿಯವರೆಗೆ ತೀರಾ ಸಹಜವಾಗಿದ್ದ ಜನಜೀವನ ಇದ್ದಕ್ಕಿದ್ದಂತೆ ಬದಲಾಯಿತು. ಎಲ್ಲರೂ ಭಯಪಡತೊಡಗಿದರು. ಮನೆಯಲ್ಲೇ ಇರತೊಡಗಿದರು. ಕೊರೋನಾ ಪಾಸಿಟಿವ್ ಇದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಯಲ್ಲಿ ಅವರ ಜತೆ ಯಾರೂ ಇರಲಿಲ್ಲ. ಅವರ ಮನೆಯಾಕೆ ಅಳುತ್ತಿದ್ದರು. ಆಗ ಅಲ್ಲಿದ್ದ ಡಾಕ್ಟ್ರು ನಾವಿದ್ದೇವಮ್ಮಾ, ಹೆದರದಿರಿ ಎಂದು ಹೇಳಿ ಹೊರಟಿದ್ದನ್ನು ಆ ತಾಯಿ ನೆನೆಸಿಕೊಳ್ಳುತ್ತಾರೆ. ಮನೆಯವರಿಗೆ ಧೈರ್ಯ ತುಂಬುವ ಕೆಲಸ ಮಾಡಿ ಕಣ್ಣು ತುಂಬುವಂತೆ ಮಾಡಿದಿರಿ. ನೀವು ವೈದ್ಯರಷ್ಟೇ ಅಲ್ಲ, ಆ ಕ್ಷಣಕ್ಕೆ ಬಂಧುವೂ ಆದಿರಿ.
ಸಲಾಮ್ ಡಾಕ್ಟರ್ಸ್
ವೈದ್ಯರಿಗೇ ಕೊರೋನಾ ಅನ್ನುವ ಸುದ್ದಿ ಬಂತು. ವೈದ್ಯರ ಬಳಿಗೆ ಹೋಗಲು ರೋಗಿಗಳು ಭಯಪಟ್ಟರು. ಆದರೆ ರೋಗಿಗಳ ಬಳಿಗೆ ಹೋಗಲು ಆರೋಗ್ಯವಂತರಾದ ವೈದ್ಯರು ಹೆದರಲಿಲ್ಲ. ಆಕ್ಷೇಪ, ತಕರಾರು, ಅವಮಾನ ಎಲ್ಲವನ್ನೂ ಬದಿಗಿಟ್ಟು ಪ್ರಾಣ ಉಳಿಸುವುದೇ ಏಕೈಕ ಕರ್ತವ್ಯ ಎಂಬಂತೆ ನೀವು ನಡೆದುಕೊಂಡಿರಿ. ನಾವೆಲ್ಲ ಮನೆಯೊಳಗಿದ್ದರೆ ನೀವು ಕ್ಲಿನಿಕ್ ತೆರೆದಿರಿ. ನೂರಾರು ಮಂದಿಗೆ ಸಮಾಧಾನ ಹೇಳಿದಿರಿ. ಧನ್ವಂತರಿಯಂತೆ ಕಣ್ಮುಂದೆ ಇದ್ದಿರಿ. ಅಂಜಬೇಡ ಎಂದಿರಿ. ಕಾಪಾಡಿದಿರಿ.
ಸಲಾಮ್ ಡಾಕ್ಟರ್ಸ್
ಆಗಾಗ ಪತ್ರಿಕೆಗಳಲ್ಲಿ, ಸೋಷಲ್ ಮೀಡಿಯಾಗಳಲ್ಲಿ ಮನೆಯಲ್ಲಿ ಮಕ್ಕಳಿಂದ ದೂರ ನಿಂತ ಕೊರೋನಾ ವಾರಿಯರ್ಸ್ ಫೋಟೋಗಳು ಬಂದವು. ಆಗಲೇ ನಮಗೆ ನಿಮ್ಮ ಕಷ್ಟಗಳು ತಟ್ಟಿದ್ದು. ತಮ್ಮವರು ಹತ್ತಿರವಿದ್ದರೂ ಅವರಿಂದ ದೂರ ನಿಲ್ಲುವ ನೋವು ಯಾರಿಗೂ ಬರಬಾರದು. ಆದರೂ ನೀವು ಕಷ್ಟಪಟ್ಟು ಸಹಿಸಿಕೊಂಡು ಮನೆಗೆ ಹೋದರೂ ನಿಮ್ಮ ಮಗಳಿಂದ ದೂರ ನಿಂತಿರಿ. ಹೊರಗಡೆ ಊಟ ಮಾಡಿದಿರಿ. ಯಾರಿಗಾಗಿಯೋ ನಿಮ್ಮ ಖುಷಿಯನ್ನು ತ್ಯಾಗ ಮಾಡಿದಿರಿ. ಬೇರೆ ಕೋಣೆಯಲ್ಲಿ ಮೂರು ತಿಂಗಳ ಕಾಲ ಮಲಗಿ, ನಿಮ್ಮ ಪ್ರೀತಿಪಾತ್ರರಿಂದ ದೂರವಿದ್ದು ಸೇವೆ ಮಾಡಿದಿರಿ. ಇದಕ್ಕೆ ನಾವೇನು ಕೊಡಬಲ್ಲೆವು ಹೇಳಿ.
ಸಲಾಮ್ ಡಾಕ್ಟರ್ಸ್
ನಾವು ಮಾಸ್ಕ್ ಹಾಕಿದರೆ ಉಸಿರುಕಟ್ಟುತ್ತದೆ ಅನ್ನುತ್ತೇವೆ. ಸಾಧಾರಣ ಮಾಸ್ಕ್ ಹಾಕಿಕೊಂಡರೂ ಶಪಿಸುತ್ತಿರುತ್ತೇವೆ. ಯಾರಿಗೂ ಕಾಣದಂತೆ ಮಾಸ್ಕ್ ಕತ್ತಿಗೆ ಸರಿಸಿ ಕೂರುತ್ತೇವೆ. ಆದರೆ ನೀವು ದಿನದ 24 ಗಂಟೆ ಪಿಪಿಐ ಧರಿಸಿಕೊಂಡು ನಿಲ್ಲುತ್ತೀರಿ. ನೀವು ಸರಿಯಾಗಿ ಉಸಿರಾಡುತ್ತೀರಾ ಡಾಕ್ಟರ್ ಅಂತ ನಾವು ಕೇಳಲಿಲ್ಲ. ದಿನದಿನವೂ ಕ್ಷಣವೂ ಕೃತಕವಾದ ಆವರಣದಲ್ಲಿ ಬದುಕುವ ಅನಿವಾರ್ಯತೆಗೆ ನೀವು ಒಗ್ಗಿಕೊಂಡು ಬಿಟ್ಟಿದ್ದೀರಿ. ಅದೂ ನಿಮಗಾಗಿ ಅಲ್ಲ. ಇನ್ನೊಬ್ಬರಿಗಾಗಿ. ಇದನ್ನೆಲ್ಲಾ ನೋಡಿದ ಮೇಲೂ ನಿಮ್ಮನ್ನು ಮೆಚ್ಚಿಕೊಳ್ಳದೇ ಇರಲು ಹೇಗೆ ಸಾಧ್ಯ?
ಸಲಾಮ್ ಡಾಕ್ಟರ್ಸ್
ಈ ಜಗತ್ತಿನ ಪ್ರತಿಯೊಬ್ಬರನ್ನು ನಿಯಂತ್ರಿಸುವುದು ಭಯ. ಭಯವಿಲ್ಲದೆ ಹೋಗಿದ್ದರೆ ಈ ಜಗತ್ತು ಹೀಗೆ ಇರುತ್ತಿರಲಿಲ್ಲ. ಭಯ ಗೆದ್ದವನು ಋುಷಿ. ಭಯ ಗೆದ್ದವನು ದೇವರು. ಇಡೀ ಕೊರೋನಾ ಭಯದಲ್ಲಿ ಇರುವಾಗ ನೀವು ಮಾತ್ರ ಆ ಭಯವನ್ನು ಗೆದ್ದು ಆಸ್ಪತ್ರೆಗೆ ತಣ್ಣಗೆ ನಡೆದು ಹೋದಿರಿ. ಕೊರೋನಾ ಪಾಸಿಟಿವ್ ಇದ್ದವರು ಗುಣಮುಖರಾಗಿ ಮನೆಗೆ ಹೊರಟು ನಿಂತಾಗ ದೇವರಂತೆ ನಕ್ಕು ಬಿಟ್ಟಿರಿ. ಹೆಗಲ ಮೇಲೆ ಕೈ ಹಾಕಿ, ಬೆನ್ತಟ್ಟಿಮುಗುಳುನಕ್ಕು ಮನೆಗೆ ಕಳುಹಿಸಿಕೊಟ್ಟಿರಿ.
ಇದಕ್ಕೇ ಕೃತಜ್ಞತೆ ಎಂಬ ಪದ ಸಣ್ಣದು. ಧನ್ಯವಾದ ಎಂದರೆ ಕಿರಿದು, ಕೈ ಮುಗಿದರೆ ಸಾಲದು.
ಸಲಾಮ್ ಡಾಕ್ಟರ್ಸ್.