ರಾಜನ ಗಾಂಭೀರ್ಯ, ರಾಣಿಯ ವೈಯ್ಯಾರ, ರೋರರ್‌ನ ಭೋರ್ಗರೆತ, ರಾಕೆಟ್‌ನ ಸಿಡಿಲಿನ ಧಾರೆ ಎಲ್ಲವನ್ನೂ ಕಲಸು ಮೇಲೋಗರ ಮಾಡಿ, ಜೋಗಕ್ಕೆ ಇದೀಗ ಪ್ರಕೃತಿ ತನ್ನದೇ ಹೊಸ ರೂಪವೊಂದನ್ನು ನೀಡಿದೆ.
ಗೋಪಾಲ ಯಡಗೆರೆ
ಶಾಂತತೆಯನ್ನು ಕಳೆದುಕೊಂಡ ಶರಾವತಿಯ ಧುಮ್ಮಿಕ್ಕುವ ಆರ್ಭಟಕ್ಕೆ ಜೋಗ ಭೋರ್ಗರೆಯುತ್ತಿದೆ. ಮಂಜಿನ ಮುಸುಕಿನ ನಡುವೆ ಹೊಸ ಅವತಾರವೊಂದು ಅಲ್ಲಿ ಮೈದಳೆದಿದೆ. ಜೋಗ ಎಂದರೆ ಹೀಗೂ ಇರಬಹುದೇ ಎಂದು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ಬೆಂಗಳೂರಿನ ಪಕ್ಕದಲ್ಲೇ ಇದೆ ಮಿನಿ ಜೋಗ ಜಲಪಾತ!
ಅಪರೂಪದ ದೃಶ್ಯ ಜೋಗದಲ್ಲೀಗ ಮೈದಳೆದಿದೆ. ಸಾಮಾನ್ಯವಾಗಿ ಲಿಂಗನಮಕ್ಕಿ ತುಂಬುವುದೂ ಮಳೆಗಾಲ ಮುಗಿಯುವುದೂ ಬಹುತೇಕ ಒಂದೇ ಕಾಲದಲ್ಲಿ ನಡೆದು ಬಿಡುತ್ತದೆ. ಹೀಗಾಗಿ ಜೋಗದಲ್ಲಿ ಜಲ ವೈಭವ ಸೃಷ್ಟಿಯಾಗುವುದೇ ಅಪರೂಪ.
ಈ ಬಾರಿ ಲಿಂಗನಮಕ್ಕಿ ತುಂಬಿದ ಬಳಿಕವೂ ವರ್ಷಧಾರೆ ಮುಂದುವರಿದಿದ್ದು, ಇದರಿಂದಾಗಿ ಜೋಗ ಜಲಪಾತಕ್ಕೆ ಜಲಾಶಯದಿಂದಲೇ ಸುಮಾರು 50 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಲಿಂಗನಮಕ್ಕಿಯಿಂದ ಜಲಪಾತದವರೆಗಿನ ಸುಮಾರು 12 ಕಿ. ಮೀ. ದೂರದವರೆಗೆ ಶರಾವತಿಗೆ ಸೇರಿಕೊಳ್ಳುವ ಉಪ ನದಿ, ಮಳೆ ನೀರು, ಒರತೆ ನೀರು ಎಲ್ಲವೂ ಸೇರಿ ಇನ್ನೂ ಹತ್ತು ಸಾವಿರ ಕ್ಯುಸೆಕ್ ಜೊತೆಯಾಗುತ್ತದೆ. ಈ ಎಲ್ಲ ನೀರೂ ಜೋಗದಲ್ಲಿ ಧುಮ್ಮಿಕ್ಕುವಾಗ ಪ್ರಕೃತಿಗೇ ಹೊಸ ಭಾಷ್ಯ ಬರೆದಂತಿರುತ್ತದೆ.
ಎಂಥಾ ಸೌಂದರ್ಯ ನೋಡು..ನಮ್ಮ ಕರುನಾಡ ಬೀಡು...
ಈಗ ಜೋಗ ಜಲಪಾತದ ಕವಲುಗಳೆಲ್ಲವೂ ಒಂದೇ ಆದಂತೆ ಅನಿಸುವ ಹೊತ್ತು. ಆಗಾಗ್ಗೆ ಸರಿಯುವ ಮಂಜಿನ ನಡುವೆ ಕಾಣಿಸಿಕೊಳ್ಳುವ ಜೋಗದ ಅಗಾಧ ಸಿರಿ ಅನಾವರಣಗೊಳ್ಳುವಾಗ ಮೈ ಜುಮ್ಮೆನಿಸದೆ ಇರದು. ಇದನ್ನು ಕಣ್ ತುಂಬಿಸಿಕೊಳ್ಳಲು ಇದೀಗ ರಾಜ್ಯದ ವಿವಿಧ ಕಡೆಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜೋಗಕ್ಕೆ ಮಜಾ ಬಂದಿದೆ!