
ಎಂಥಾ ಆಹಾರ ಬೇಕು ಹಸುಳೆ ಕಂದಮ್ಮನಿಗೆ?
೬ ತಿಂಗಳವರೆಗೆ ತಾಯ ಹಾಲೇ ‘ಮಾತಾಮೃತ’. ನಂತರ ಮಕ್ಕಳಲ್ಲಿ ವಿವಿಧ ಕಿಣ್ವಗಳು ಸ್ರಾವವಾಗಲು ಆರಂಭವಾಗುತ್ತವೆ. ಜೊತೆಗೆ ಮಗುವು ಸದೃಢವಾಗಿ ತಲೆ ಎತ್ತುವ ಹಂತವಿದು. ಇದು ಘನಾಹಾರ ನೀಡಲು ಯೋಗ್ಯ ಸಮಯ. ತಾಯಿ ಹಾಲಿನ ಜೊತೆಗೆ, ದೇಶೀ ತಳಿಯ ಹಾಲಿನ ಜೊತೆಗೆ
ತಯಾರಿಸಿದ ರಾಗಿ ಗಂಜಿ, ರಾಗಿ, ಅಕ್ಕಿ, ಗೋಧಿ, ಹೆಸರು ಇತ್ಯಾದಿಗಳಿಂದ ತಯಾರಿಸಿದ ಮಕ್ಕಳ ದ್ರವಾಹಾರ (ಪಾರಿಜ್) ಅಥವಾ ‘ಮಕ್ಕಳ ಮಣ್ಣಿ’ ಆಹಾರ ರೂಪದಲ್ಲಿ ನೀಡುವುದು ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಒಂದು ಪರಂಪರೆಯಾಗಿಯೇ ಬೆಳೆದು ಬಂದಿದೆ.
ಮಗುವಿನ ಆರಂಭಿಕ ಆಹಾರ ಹೀಗಿರಲಿ
೧. ಮೊದಲು ಮಕ್ಕಳಿಗೆ ಏಕದಳ ಧಾನ್ಯದ ಆಹಾರ ಅಥವಾ ಹಣ್ಣಿನ ಅಥವಾ ಸುಲಭವಾಗಿ ಜೀರ್ಣಿಸುವಂತಹ ತರಕಾರಿಯ ಆಹಾರವನ್ನು ನೀಡಿ ಆರಂಭಿಸಬೇಕು. ಸೇಬು ಹಾಗೂ ಒಣದ್ರಾಕ್ಷಿಯ ಮಿಶ್ರಣ ಸೇವನೆಗೆ ಹಿತಕರ. ಸಿಪ್ಪೆ ತೆಗೆದ ಸೇಬುವನ್ನು ಸಣ್ಣಗೆ ಹೆಚ್ಚಿ ನೀರಲ್ಲಿ ಕುದಿಯುವ ನೀರಿನಲ್ಲಿ ಹಾಕಬೇಕು. ಅದರೊಂದಿಗೆ ಚೆನ್ನಾಗಿ ತೊಳೆದ ಒಣದ್ರಾಕ್ಷೆಯನ್ನು ಬೆರೆಸಿ ಕುದಿಸಿ, ಬೆಂದ ನಂತರ ಎರಡನ್ನೂ ಮಸೆದು ಮಿಶ್ರ ಮಾಡಿ ೧-೨ ಚಮಚದಷ್ಟು ನೀಡಬೇಕು.
೨. ರಾಗಿಮಣ್ಣಿ: ರಾಗಿಯನ್ನು ೮-೧೦ ಗಂಟೆ ನೀರಲ್ಲಿ ನೆನೆಸಿ. ಬಳಿಕ ತೊಳೆದು ಮೊಳಕೆ ಬರಿಸಿ ಬಾಗಿಸಿ ಪುಡಿ ಮಾಡಿ ಇಡಬೇಕು. ೧-೨ ಚಮಚದಷ್ಟು ರಾಗಿ ಹಿಟ್ಟನ್ನು ಹುರಿದು, ಆರಿದ ಬಳಿಕ ತಣ್ಣಗಿನ ಹಾಲು ಅಥವಾ ನೀರಿನಲ್ಲಿ ಗಂಟು ಕಟ್ಟದಂತೆ ಕರಗಿಸಿ, ತದ ನಂತರ ಮತ್ತೆ ಹಾಲು ಬೆರೆಸಿ ಕುದಿಸಿ ಗಂಜಿಯ ಹದಕ್ಕೆ ತರಬೇಕು. ಇದಕ್ಕೆ ಚಿಟಿಕೆ ಉಪ್ಪು ಸೇರಿಸಿ ಒಂದು ಬಾರಿ ನೀಡಲು (೧ ಚಮಚ-೨ ಚಮಚ) ಆರಂಭಿಸಬೇಕು. ಇನ್ನೊಂದು ಬಾರಿ ನೀಡುವಾಗ ಬೆಲ್ಲ ಮತ್ತು ಹನಿ ತುಪ್ಪ ಬೆರೆಸಿ ನೀಡಬೇಕು. ಕ್ರಮೇಣ ಬಳಸಬಹುದಾದ ಆಹಾರ ಪ್ರಕಾರ ಇದಕ್ಕೆ ಗೋಧಿ, ಹೆಸರು, ಬಾದಾಮಿ, ಇತ್ಯಾದಿ ಏಕದಳ ಮತ್ತು ದ್ವಿದಳ ಧಾನ್ಯ ಬೆರೆಸಿ ಪೌಷ್ಠಿಕ ಮಣ್ಣಿ ಮಾಡಿ ನೀಡಬೇಕು.
೩. ಮಣ್ಣಿ ನೀಡುವಾಗ ಅದಕ್ಕೆ ಹಣ್ಣಿನ ರಸ ಅಥವಾ ತೊಗರಿ ಬೇಳೆಯ ತಿಳಿಸಾರು ಬೆರೆಸಿ ನೀಡಬೇಕು. ತಾಯಿ ಹಾಲಿನಲ್ಲಿ ಇರುವ ವಿಟಮಿನ್ ಸಿ ಯ ಅಂಶ ಆರು ತಿಂಗಳ ಮಗುವಿಗೆ ಸಾಲದು. ಅಂತೆಯೇ ಸಿಹಿ ಕಿತ್ತಳೆಯ ರಸವನ್ನು ನೀರಿನೊಂದಿಗೆ ಬೆರೆಸಿ೧-೨ ಚಮಚದಷ್ಟು ದಿನದ ಉಳಿದ ಸಮಯದಲ್ಲಿ ನೀಡಿದರೆ ಹಿತಕರ.
ಮಕ್ಕಳಿಗೆ ಆಹಾರ ನೀಡುವಾಗ ಚಿನ್ನದ, ಬೆಳ್ಳಿಯ ಪಾತ್ರೆಯಾದರೆ ಉತ್ತಮ. ಶುದ್ಧವಾದ ಪರಿಸರದಲ್ಲಿ, ಶಾಂತ ವಾತಾವರಣದಲ್ಲಿ ಮಗುವನ್ನು ಮಡಿಲಲ್ಲಿ ಕುಳ್ಳಿರಿಸಿ ಆಹಾರ ನೀಡುವುದು ಅವಶ್ಯ. ಮಕ್ಕಳು ಸೇವಿಸುವ ಆಹಾರ ಪ್ರಕಾರವನ್ನು ಆಧರಿಸಿ, ಕ್ಷೀರದ (ಹಾಲು ಮಾತ್ರ ಸೇವಿಸುವ ಕಾಲ) ಕ್ಷೀರಾನ್ನದ (ಹಾಲು ಮತ್ತು ಅನ್ನದಂಥ ಘನ ಪದಾರ್ಥ ಸೇವಿಸುವ ಕಾಲ) ಹಾಗೂ ಅನ್ನದ / ಅನ್ನದಂಥಹ ಘನ ಆಹಾರ ಸೇವಿಸುವ ಕಾಲ ಎಂದು ಮಕ್ಕಳ ವಯಸ್ಸನ್ನು ವರ್ಗೀಕರಿಸಲಾಗುತ್ತದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.