ಬೆಂಗಳೂರು... ಎಂಬ ಪದ ಕೇಳಿದಾಗ ಪ್ರತಿಯೊಬ್ಬರ ಮನಸ್ಸಿಗೆ ಬರುವ ಮೊದಲ ಚಿತ್ರಣವೆಂದರೆ ಸಂಚಾರ ದಟ್ಟಣೆ, ಜನದಟ್ಟಣೆಯಿಂದ ಕೂಡಿರುವ ನಗರ . ಆಧುನಿಕತೆಗೆ ಸಮಾನಾರ್ಥಕವಾಗಿರುವ ಈ ನಗರವನ್ನು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಬೆರಗುಗೊಳಿಸುವ ಇಂಥಹ ಬೆಂಗಳೂರು ಸ್ನೇಹಿತರಾದ ವಿಜಯಪ್ರಭು, ರೇವತಿ ಮತ್ತು ಹರಿಪ್ರಿಯಾ ಅವರನ್ನು ಆಕರ್ಷಿಸಿತು. ಆ ನಂತರ ಅವರು ಮಾಡಿದ್ದೇನು? ಮುಂದೆ ಓದಿ...
ಎಲ್ಲರಂತೆ ಈ ಮೂರು ಜನ ಸ್ನೇಹಿತರೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ನಾಲ್ಕು ವರ್ಷಗಳ ಹಿಂದೆ ಭೇಟಿ ನೀಡಿದ್ದರು. ಇಲ್ಲಿನ ಪ್ರಕೃತಿ, ಪರಿಸರ ನೋಡಿ ಮೂಕವಿಸ್ಮಿತರಾದ ಅವರು ಪ್ರಕೃತಿಗೆ ಹತ್ತಿರವಾಗಿ ವಾಸಿಸಲು ಬಯಸಿ, ತಮ್ಮ ಪ್ರೀತಿಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಳಿ ಒಂದು ಸ್ಥಳವನ್ನು ಕಂಡುಕೊಂಡರು.
ನಿರ್ವಹಣೆ ಮತ್ತು ಔಷಧೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಈ ಮೂವರು ಅರಣ್ಯದ ಪಕ್ಕದಲ್ಲಿ ಮೂರು ಪ್ಲಾಟ್‌ಗಳನ್ನು ಖರೀದಿಸಿದರು. ಕಾಡಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಸುಸ್ಥಿರ ಹೋಂಸ್ಟೇಗಳನ್ನು ನಿರ್ಮಿಸುವುದು ಅವರ ಯೋಜನೆಯಾಗಿತ್ತು. ತಮ್ಮ ಕನಸನ್ನು ನನಸಾಗಿಸಲು ಅವರು ವಾಸ್ತುಶಿಲ್ಪಿ ಅನಿರುದ್ಧ ಜಗನ್ನಾಥನ್ ಅವರನ್ನು ಸಂಪರ್ಕಿಸಿದರು.
ಹೇಗಿದೆ ಗೊತ್ತಾ ಹೋಂಸ್ಟೇ?
ದೊಡ್ಡ ಮರಗಳು ಮತ್ತು ಹಸಿರು ಹುಲ್ಲು ಹಾಸುಗಳಿಂದ ಆವೃತವಾದ ಸ್ಥಳದಲ್ಲಿ ಹೋಂಸ್ಟೇ ನಿರ್ಮಾಣ ಪ್ರಾರಂಭವಾಗೇ ಬಿಟ್ಟಿತು. ಅಂದಹಾಗೆ ಈ ಮನೆಗಳನ್ನು ಜನರು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಅನುವು ಮಾಡಿಕೊಡುವ ರೀತಿಯಲ್ಲಿ ಮಣ್ಣನ್ನು ಬಳಸಿ ನಿರ್ಮಿಸಲಾಗಿದೆ.
ಮೂರು ಮನೆಗಳು ನಾಲ್ಕು ಎಕರೆ ಭೂಮಿಯಲ್ಲಿವೆ. ಎರಡು ವರ್ಷಗಳ ನಿರ್ಮಾಣ ಕಾರ್ಯವು 2023 ರ ಮೊದಲಾರ್ಧದಲ್ಲಿ ಪೂರ್ಣಗೊಂಡಿತು. ಮನೆಗಳ ಒಳಾಂಗಣ ವಿನ್ಯಾಸ ಸ್ವಲ್ಪ ಡಿಫರೆಂಟ್ ಆಗಿದೆ. ಹಿಂದಿನ ಕಾಲದಲ್ಲಿ ಮಾಡಿದಂತೆ ಸಿಮೆಂಟ್ ಅನ್ನು ಸಂಪೂರ್ಣವಾಗಿ ಬಳಸಿಲ್ಲ. ಇದಕ್ಕೆ ಕಾಲಕಾಲಕ್ಕೆ ಪ್ಲಾಸ್ಟರ್ ಮಾಡಬೇಕಾಗುತ್ತದೆ. ಆದರೆ ಇದು ಪ್ರಾಯೋಗಿಕವಾಗಿ ಕಷ್ಟಕರವಾದ ಕಾರಣ, ನಿರ್ಮಾಣದಲ್ಲಿ ಐದರಿಂದ ಏಳು ಪ್ರತಿಶತ ಸಿಮೆಂಟ್ ಅನ್ನು ಬಳಸಲಾಗಿದೆಯಂತೆ.
ಒಂದೇ ರೀತಿ ಕಾಣುತ್ತದೆಯಷ್ಟೇ...
ಹೊರಗಿನಿಂದ ಅವು ಒಂದೇ ರೀತಿ ಕಾಣಬಹುದಾದರೂ ಮೂರು ಮನೆಗಳಲ್ಲಿ ಹಲವು ವ್ಯತ್ಯಾಸಗಳಿವೆ ಎರಡು ಮನೆಗಳು ಒಂದೇ ಅಂತಸ್ತಿನದ್ದಾಗಿದ್ದು ಮೂರನೇ ಮನೆ ಎರಡು ಮಹಡಿಗಳನ್ನು ಹೊಂದಿದೆ. ಸಾಕಷ್ಟು ಗಾಳಿ ಬೀಸುವಂತೆ ನಿರ್ಮಾಣ ಮಾಡಲಾಗಿದೆ. ಒಳಗೆ ಸಾಕಷ್ಟು ಸೂರ್ಯನ ಬೆಳಕು ಬೀಳುವಂತೆ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ. ಸೌರ ಫಲಕಗಳು ಮತ್ತು ಮಳೆನೀರು ಕೊಯ್ಲು ಸೌಲಭ್ಯಗಳಂತಹ ಇತರ ಸುಸ್ಥಿರ ಸೌಲಭ್ಯಗಳನ್ನು ಸಹ ಹೊಂದಿದೆ. ಹೀಗೆ ಸುಸ್ಥಿರ ಜೀವನ ನಡೆಸಲು ಬೇಕಾದ ಎಲ್ಲಾ ಅಂಶಗಳನ್ನು ಇಲ್ಲಿ ಸಂಯೋಜಿಸಲಾಗಿದೆ. ಅಂದಹಾಗೆ ಇದನ್ನು ಬಾಡಿಗೆಗೆ ನೀಡಲು ಈ ಮೂವರು ನಿರ್ಧರಿಸಿದ್ದರು.
ಹೋಂಸ್ಟೇ ಮುಂಭಾಗದ ಅಂಗಳ ವಿಶಿಷ್ಟ ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯಲ್ಲಿದೆ. ಇಲ್ಲಿ ಸಂಜೆ ವಿಶ್ರಾಂತಿ ಸಹ ಪಡೆಯಬಹುದು. ಒಟ್ಟಾರೆ ಮಣ್ಣನ್ನು ಪ್ರಮುಖ ಅಂಶವಾಗಿಟ್ಟುಕೊಂಡು, ಜಾಗಗಳಲ್ಲಿ ಕಲ್ಲು ತುಂಬಿಸಿ ನಿರ್ಮಿಸಲಾಗಿದೆ. ಛಾವಣಿಯಲ್ಲಿ ಉಕ್ಕು ಮತ್ತು ಕಾಂಕ್ರೀಟ್ ಬಳಕೆಯನ್ನು ಸಹ ತೆಗೆದುಹಾಕಲಾಗಿದೆ. ಈ ಫಾರ್ಮ್‌ಸ್ಟೇ ಅರಣ್ಯದ ಸಮೀಪವಿರುವುದರಿಂದ ಸಾಕಷ್ಟು ತಂಪಾದ ಗಾಳಿ ಬರುತ್ತದೆ. ಹಲವಾರು ಕಿಟಕಿಗಳು ಗಾಳಿಯನ್ನು ಒಳಗೆ ಬಿಡುತ್ತವೆಯಾದರೂ ಗ್ರಾಹಕರು ಚಳಿ ಹೆಚ್ಚಾದಾಗ ಹೆಚ್ಚಿನ ಸಮಯ ಅವುಗಳನ್ನು ಮುಚ್ಚಲು ಬಯಸುತ್ತಾರೆ. ಎಸಿಗಳು ಯಾವಾಗಲೂ ಸ್ವಿಚ್ ಆಫ್ ಆಗಿರುತ್ತವೆ. ಛಾವಣಿಯಲ್ಲಿರುವ ಸ್ಕೈಲೈಟ್‌ಗಳು ಸಹ ಬೆಳಕು ಮತ್ತು ಗಾಳಿಯನ್ನು ಒಳಗೆ ಬಿಡುತ್ತವೆ. ಆದರೆ ಮಣ್ಣಿನ ಬ್ಲಾಕ್‌ಗಳು ಮನೆಗೆ ತಮ್ಮದೇ ಆದ ತಂಪಾಗಿಸುವ ಸಾಮರ್ಥ್ಯವನ್ನು ನೀಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.