ದೆಹಲಿಯಲ್ಲಿ ಬರ್ತ್‌ಡೇಗೆ ಅಪರಿಚಿತರನ್ನು ಆಹ್ವಾನಿಸಿದ ಮಹಿಳೆ: ‘ಭಾರತದ ನಿಜವಾದ ಮುಖ ತೋರಿಸಿದ್ದಕ್ಕೆ ಧನ್ಯವಾದ’ ಎಂದ ಜನ್ರು

Published : Nov 24, 2026, 07:36 AM ISTUpdated : Nov 24, 2026, 07:37 AM IST
Foreign solo traveller Delhi

ಸಾರಾಂಶ

Foreign solo traveller Delhi: ಭಾರತಕ್ಕೆ ಬಂದ ಕೇವಲ ಮೂರೇ ದಿನಗಳಲ್ಲಿ ವಿದೇಶಿ ಮಹಿಳೆಯೊಬ್ಬರು ದೆಹಲಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಆನ್‌ಲೈನ್ ಮೂಲಕ ಅಪರಿಚಿತರಿಗೆ ಆಹ್ವಾನ ನೀಡಿದ್ದರು. ಅಷ್ಟಕ್ಕೂ ಆಹ್ವಾನ ನೀಡಿದ ಬಳಿಕ ದೆಹಲಿಯ ಲೋಧಿ ಗಾರ್ಡನ್‌ನಲ್ಲಿ ನಡೆದಿದ್ದಾದರೂ ಏನು? ಮುಂದೆ ಓದಿ...

ಭಾರತಕ್ಕೆ ಭೇಟಿ ನೀಡಿದ ಕೇವಲ ಮೂರೇ ದಿನಗಳಲ್ಲಿ ದೆಹಲಿಯ ಅಪರಿಚಿತರು ವಿದೇಶಿ ಸೋಲೋ ಟ್ರಾವೆಲರ್ (ಏಕಾಂಗಿ ಪ್ರವಾಸಿ) ಒಬ್ಬರ ಹುಟ್ಟುಹಬ್ಬವನ್ನು ಜೀವನದಲ್ಲೇ ಮರೆಯಲಾಗದಂತಹ ಸ್ನೇಹ, ಪ್ರೀತಿ ಮತ್ತು ಆತ್ಮೀಯತೆಯ ಸಂಭ್ರಮವನ್ನಾಗಿ ಪರಿವರ್ತಿಸಿದ್ದಾರೆ. ಅಂತರ್ಜಾಲದ ಮೂಲಕ ನೀಡಿದ ಆಹ್ವಾನಕ್ಕೆ ಸ್ಪಂದಿಸಿ ಹಲವಾರು ಮಂದಿ ದೆಹಲಿಯ ಲೋಧಿ ಗಾರ್ಡನ್‌ನಲ್ಲಿ ಜಮಾಯಿಸಿ ಸಂಭ್ರಮಿಸಿದ ಹೃದಯಸ್ಪರ್ಶಿ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಜೊಯಿ (Zoe) ಎಂಬ ವಿದೇಶಿ ಪ್ರವಾಸಿ ದೆಹಲಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿ, ಸಾಮಾಜಿಕ ಜಾಲತಾಣದ ವಿಡಿಯೋ ಮೂಲಕ ಅಪರಿಚಿತರಿಗೆ ಆಹ್ವಾನ ನೀಡಿದ್ದರು. ಯಾರಾದರೂ ಬರುತ್ತಾರೋ ಇಲ್ಲವೋ ಎಂಬ ಕುತೂಹಲದಲ್ಲಿದ್ದ ಅವರಿಗೆ, ನಿಜವಾಗಿಯೂ ಜನರು ಬಂದು ಸಂಭ್ರಮದಲ್ಲಿ ಭಾಗಿಯಾಗಿದ್ದು ಅಚ್ಚರಿ ಮತ್ತು ಸಂತಸ ತಂದಿತು.

ಪಾರ್ಟಿಗೂ ಮುನ್ನ ಜೊಯಿ ಉತ್ಸಾಹ

ಸಾಮಾಜಿಕ ಜಾಲತಾಣ ಬಳಕೆದಾರರ ಸಲಹೆಯಂತೆ ಜೊಯಿ ದೆಹಲಿಯ ಲೋಧಿ ಗಾರ್ಡನ್‌ನಲ್ಲಿ ಪಾರ್ಟಿ ಆಯೋಜಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ತಮ್ಮ ಉತ್ಸಾಹ ಹಂಚಿಕೊಂಡಿದ್ದ ಅವರು, "ಎಷ್ಟು ಜನ ಬರುತ್ತಾರೆ ಅಥವಾ ಯಾರಾದರೂ ಬರುತ್ತಾರೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ. ಆದರೆ ಸುಮಾರು 200 ಜನ ಬರುವುದಾಗಿ ಆರ್‌ಎಸ್‌ವಿಪಿ (RSVP) ಮಾಡಿದ್ದು, ಅದರಲ್ಲಿ 30 ಮಂದಿ ಖಂಡಿತ ಬರುವುದಾಗಿ ತಿಳಿಸಿದ್ದಾರೆ. ನನ್ನ ಪಾಲಿಗೆ ಇದೇ ದೊಡ್ಡ ಬರ್ತ್‌ಡೇ ಪಾರ್ಟಿ. ಸ್ನ್ಯಾಕ್ಸ್ ಮತ್ತು ಕೇಕ್ ಎಲ್ಲವೂ ಸಿದ್ಧವಾಗಿದೆ" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದರು.

ನಿರೀಕ್ಷೆಗೂ ಮೀರಿದ ಸಂಭ್ರಮ ಮತ್ತು ಉಡುಗೊರೆಗಳ ಮಹಾಪೂರ

ಜೊಯಿ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲೋಧಿ ಗಾರ್ಡನ್‌ಗೆ ಆಗಮಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. "ನೀವು ನವದೆಹಲಿಯ ಇಡೀ ನಗರವನ್ನೇ ನಿಮ್ಮ ಬರ್ತ್‌ಡೇ ಪಾರ್ಟಿಗೆ ಆಹ್ವಾನಿಸಿದಾಗ ಹೀಗಾಗುತ್ತದೆ (ಭಾರತದಲ್ಲಿ ಇದು ನನ್ನ ಮೂರನೇ ದಿನ ಅಷ್ಟೇ)" ಎಂದು ಅವರು ತಮ್ಮ ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.

ಪಾರ್ಟಿಗೆ ಬಂದ ಅಪರಿಚಿತರು ಬರಿಗೈಯಲ್ಲಿ ಬರದೆ ಜೊಯಿಗಾಗಿ ಹಲವಾರು ಉಡುಗೊರೆಗಳನ್ನು ತಂದಿದ್ದರು. ಬಣ್ಣಬಣ್ಣದ ಹೂಗುಚ್ಛಗಳು, ಬರ್ತ್‌ಡೇ ಕೇಕ್‌ಗಳು, ಡೋನಟ್ಸ್, ಭಾರತೀಯ ಸಿಹಿತಿಂಡಿಗಳು, ಸಮೋಸಾ ಹಾಗೂ ಮನೆಯಲ್ಲೇ ತಯಾರಿಸಿದ ಖಾದ್ಯಗಳನ್ನು ತಂದು ಜೊಯಿ ಅವರ ವಿಶೇಷ ದಿನವನ್ನು ಮತ್ತಷ್ಟು ಸ್ಮರಣೀಯವಾಗಿಸಿದರು.

ಕೇವಲ ಕೇಕ್ ಕತ್ತರಿಸುವುದು ಮತ್ತು ಉಡುಗೊರೆ ನೀಡುವುದಕ್ಕಷ್ಟೇ ಈ ಸಂಭ್ರಮ ಸೀಮಿತವಾಗಿರಲಿಲ್ಲ. ಪಾರ್ಟಿಯಲ್ಲಿ ಸೇರಿದ್ದವರು ಮಚಾ (Matcha) ಪಾನೀಯ ತಯಾರಿಸುತ್ತಾ, ಪರಸ್ಪರ ಹರಟೆ ಹೊಡೆಯುತ್ತಾ, ಭಾರತದ ಸಾಂಪ್ರದಾಯಿಕ ಆಟವಾದ ‘ಖೋ-ಖೋ’ ಸೇರಿದಂತೆ ಹಲವು ಆಟಗಳನ್ನು ಆಡಿ ನಲಿದರು. ಆನ್‌ಲೈನ್ ಮೂಲಕ ಪರಿಚಯವಾದ ಅಪರಿಚಿತರೆಲ್ಲರೂ ಒಟ್ಟಾಗಿ ನಗುತ್ತಾ ಸುಂದರ ಕ್ಷಣಗಳನ್ನು ಕಳೆದರು.

ಅಪರಿಚಿತರಿಂದ ಸಿಕ್ಕ ಈ ಅಭೂತಪೂರ್ವ ಪ್ರೀತಿ ಮತ್ತು ಪ್ರತಿಕ್ರಿಯೆಯಿಂದ ಭಾವುಕರಾದ ಜೊಯಿ, "ಇದು ನನ್ನ ಜೀವನದ ಅತ್ಯುತ್ತಮ ದಿನ" ಎಂದು ಸಂತಸದಿಂದ ಉದ್ಗರಿಸಿದರು. ಅಲ್ಲದೆ, "ಐ ಲವ್ ಯೂ ದೆಹಲಿ !!!!!!!!!!!!" ಎಂದು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ಜೊಯಿ ಅವರ ಈ ಹುಟ್ಟುಹಬ್ಬದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಪಾರ್ಟಿಯಲ್ಲಿ ಪಾಲ್ಗೊಂಡು ವಿದೇಶಿ ಪ್ರವಾಸಿಯ ದಿನವನ್ನು ಸುಂದರಗೊಳಿಸಿದ ದೆಹಲಿ ಜನರನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

"ನನಗೆ ಅಳು ಬರುತ್ತಿದೆ, ಇದು ತುಂಬಾ ಸುಂದರವಾಗಿದೆ" ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

"ಹುಟ್ಟುಹಬ್ಬದ ಶುಭಾಶಯಗಳು! ಇದನ್ನು ನೋಡಿ ತುಂಬಾ ಖುಷಿಯಾಯಿತು, ನನಗೆ ನನ್ನ ಮನೆ ನೆನಪಾಗುತ್ತಿದೆ. ಯಾವುದೇ ಕಾರಣವಿಲ್ಲದೆ ನಾವು ಎಲ್ಲರನ್ನೂ ಹೀಗೆ ಅಪ್ಪಿಕೊಳ್ಳುತ್ತೇವೆ ಎಂಬುದೇ ಭಾರತೀಯರಾಗಿರುವುದರ ಅತ್ಯುತ್ತಮ ಭಾಗ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

"ಭಾರತದ ನಿಜವಾದ ಮುಖವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ಉಳಿದ ದಿನಗಳನ್ನು ಆನಂದಿಸಿ ಮತ್ತು ಸಾಕಷ್ಟು ನೆನಪುಗಳನ್ನು ಕೊಂಡೊಯ್ಯಿರಿ" ಎಂದು ಇನ್ನೊಬ್ಬರು ಹಾರೈಸಿದ್ದಾರೆ.

"ನಾನು ನೋಡಿದ ಅತ್ಯಂತ ಸುಂದರ ದೃಶ್ಯಗಳಲ್ಲಿ ಇದೂ ಒಂದು", "ಇದು ಮಾನವೀಯತೆಯ ಮೇಲಿನ ನಂಬಿಕೆಯನ್ನು ಮರಳಿ ತರುವಂತಿದೆ" ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತ್ರಿಶಾ ರಾಜಕೀಯಕ್ಕೆ ವೇದಿಕೆ ಮಾಡಿಕೊಟ್ಟ ಫ್ಯಾನ್ಸ್‌! ಸಿಎಂ ವಿಜಯ್ ಜೊತೆ 'ಕೈಜೋಡಿಸಿ; ಎಂದಿದ್ದಕ್ಕೆ ನಟಿ ಹೇಳಿದ್ದೇನು?
Nath Design: ಸಿಂಪಲ್ ಲುಕ್‌ಗೆ ರಾಯಲ್ ಟಚ್; ಗಮನ ಸೆಳೆಯುತ್ತಿವೆ ಈ ಮೂಗುತಿ ಡಿಸೈನ್‌ಗಳು!