ಬಿಡದೇ Web Series ನೋಡ್ತಿದ್ದೀರಾ? ಎಚ್ಚರ!

By Suvarna NewsFirst Published Sep 2, 2022, 12:37 PM IST
Highlights

ಒಂದೇ ಬಾರಿ ವೆಬ್ ಸರಣಿ ಮುಗಿಸೋ ಆತುರದಲ್ಲಿ ಇರ್ತೀರಾ? ಒಂದಾದ್ಮೇಲೆ ಒಂದು ಸಂಚಿಕೆ ವೀಕ್ಷಣೆ ಮಾಡ್ತೀರಾ? 7 -8 ಗಂಟೆ ಮೊಬೈಲ್ ಹಿಡಿದು ಕುಳಿತುಕೊಳ್ತೀರಾ? ಎಚ್ಚರ.. ಇದೊಂದು ಚಟ. ಇದನ್ನು ಬಿಂಗ್ ವಾಚಿಂಗ್ ಎನ್ನುತ್ತಾರೆ. ಅದರ ಲಕ್ಷಣ ಇಲ್ಲಿದೆ.
 

ಟಿವಿಯಲ್ಲಿ ಬರುವ ಧಾರಾವಾಹಿಯನ್ನು ಮಹಿಳೆಯರು ಕಣ್ಣು ಮಿಟುಕಿಸದೆ ನೋಡ್ತಾರೆಂದು ಆಡಿಕೊಳ್ಳುವ ಪುರುಷರಿದ್ದಾರೆ. ಆದ್ರೆ ಇದೇ ಪುರುಷರು ವೆಬ್ ಸರಣಿಗಳನ್ನು ಕಣ್ಣಿಗೆ ಎಣ್ಣೆ ಬಿಡ್ಕೊಂಡು ನೋಡ್ತಾರೆ. ಬರೀ ಪುರುಷರು ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಎಲ್ಲರೂ ವೆಬ್ ಸರಣಿಗೆ ದಾಸರಾಗ್ತಿದ್ದಾರೆ ಎಂದ್ರೆ ತಪ್ಪಾಗಲಾರದು. ಅಮೆಜಾನ್ ಪ್ರೈಂ, ನೆಟ್ಫ್ಲಿಕ್ಸ್, ವೂಟ್ ಹೀಗೆ ಸಾಕಷ್ಟು ಆನ್ಲೈನ್ ಒಟಿಟಿಗಳು ಈಗ ಲಭ್ಯವಿದೆ. ಅದ್ರಲ್ಲಿ ಸಾಕಷ್ಟು ಕುತೂಹಲಕಾರಿ ವೆಬ್ ಸರಣಿಗಳು ಲಭ್ಯವಿದೆ. ವೆಬ್ ಸರಣಿ ವೀಕ್ಷಣೆ ಮಾಡೋದು ಧಾರಾವಾಹಿ ವೀಕ್ಷಣೆಗಿಂತ ಖತರ್ನಾಕ್ ಅಂದ್ರೆ ತಪ್ಪೇನಿಲ್ಲ.

ಸಾಮಾನ್ಯವಾಗಿ ವೆಬ್ ಸರಣಿ (Web Series) ಗಳು ಒಂದು ಸಂಚಿಕೆ ನೋಡಿದ ನಂತ್ರ ಮುಂದಿನ ಸಂಚಿಕೆ (Episode) ಬಗ್ಗೆ ಕುತೂಹಲವಿರುತ್ತದೆ. ಕಣ್ಮುಂದೆ ಎಲ್ಲ ಸಂಚಿಕೆ ಇರುವ ಕಾರಣ ನೋಡದೆ ಇರಲು ಮನಸ್ಸಾಗೋದಿಲ್ಲ. ಒಂದೇ ದಿನ ಎಲ್ಲ ಸಂಚಿಕೆ ವೀಕ್ಷಿಸುವ ಪ್ಲಾನ್ ಮಾಡ್ತಾರೆ ಜನರು. ಸಾಮಾನ್ಯವಾಗಿ ಒಂದು ವೆಬ್ ಸರಣಿ ನೋಡಿ ಮುಗಿಸಲು ಸುಮಾರು 9 ಗಂಟೆ ಬೇಕಾಗುತ್ತದೆ. ನಿರಂತರ ವೆಬ್ ಸರಣಿ ವೀಕ್ಷಣೆಯನ್ನು ಬಿಂಜ್ ವಾಚಿಂಗ್ (Binge Watching) ಎಂದು ಕರೆಯಲಾಗುತ್ತದೆ. ಈ ಬಿಂಜ್ ವಾಚಿಂಗ್ ತುಂಬಾ ಅಪಾಯಕಾರಿ ಎಂಬುದು ಸಾಬೀತಾಗಿದೆ. ಜನರು ತಮ್ಮ ನೆಚ್ಚಿನ ಧಾರಾವಾಹಿ ಅಥವಾ ವೆಬ್‌ಸರಣಿಯ ಒಂದೇ ದಿನದಲ್ಲಿ ವೀಕ್ಷಿಸಲು ಏಕೆ ಬಯಸುತ್ತಾರೆ, ಅದರ ಕಾರಣವೇನು ಮತ್ತು ಅದರ ಅಡ್ಡಪರಿಣಾಮಗಳೇನು ಎಂಬುದನ್ನು ನಾವಿಂದು ಹೇಳ್ತೇವೆ.

ವೆಬ್ ಸರಣಿ ವೀಕ್ಷಣೆ ಮಾಡೋದು ಒಂದು ಚಟ (Addiction)? : ಹೌದು, ವೆಬ್ ಸರಣಿ ವೀಕ್ಷಣೆ ಮಾಡೋದು ಒಂದು ಚಟ ಎಂದ್ರೆ ತಪ್ಪಾಗಲಾರದು. ಇದಕ್ಕೆ ಕಾರಣ ಡೋಪೊಮೈನ್. ನಮ್ಮ ಮೆದುಳಿನಲ್ಲಿ ಉತ್ಪತ್ತಿಯಾಗುವ ರಾಸಾಯನ ಡೋಪೊಮೈನ್. ನಮಗೆ ಇಷ್ಟವಾಗುವ ಅಥವಾ ಸಂತೋಷ ನೀಡುವ ಕೆಲಸ ಮಾಡಿದಾಗ ಡೋಪೊಮೈನ್ ಉತ್ಪತ್ತಿಯಾಗುತ್ತದೆ. ಇದು ಮತ್ತೆ ಮತ್ತೆ ಅದೇ ಕೆಲಸವನ್ನು ಮಾಡುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತದೆ. 

ವೆಬ್ ಸರಣಿ ವೀಕ್ಷಣೆಯಿಂದಾಗುವ ನಷ್ಟವೇನು ? : ವೆಬ್ ಸರಣಿ ನೋಡೋದು ನಮ್ಮಿಷ್ಟ. ನಾವು ಅದನ್ನು ನೋಡಿದ್ರೆ ನಿಮಗೇನು ಅಂತಾ ನೀವು ಕೇಳ್ಬಹುದು. ಆದ್ರೆ ವೆಬ್ ಸರಣಿ ವೀಕ್ಷಣೆ ಮಾಡೋದ್ರಿಂದ ನಿಮಗೆ ಸಾಕಷ್ಟು ನಷ್ಟವಿದೆ ಎನ್ನುತ್ತಾರೆ ತಜ್ಞರು. ಇದ್ರ ಬಗ್ಗೆ ಅಧ್ಯಯನ ಕೂಡ ನಡೆದಿದೆ. ಟಿವಿಯಲ್ಲಿ ಅಥವಾ ಮೊಬೈಲ್ ನಲ್ಲಿ ನೀವು ವೆಬ್ ಸರಣಿ ವೀಕ್ಷಣೆ ಮಾಡ್ತಿದ್ದರೆ ಅದು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ನೆನಪಿನ ಶಕ್ತಿ ಮೇಲೆ ಅಡ್ಡಪರಿಣಾಮ ಬೀರುತ್ತದೆ.  ವೆಬ್ ಸರಣಿ ವೀಕ್ಷಣೆ ಮಾಡೋದ್ರಿಂದ ಮೆಮೊರಿ ದುರ್ಬಲಗೊಳ್ಳುವುದಲ್ಲದೆ ನಿದ್ರಾಹೀನತೆಯ ಸಮಸ್ಯೆ ಕಾಡುತ್ತದೆ. ಇದು ಜನರಲ್ಲಿ ಆಲಸ್ಯವನ್ನುಂಟು ಮಾಡುತ್ತದೆ. ಹಾಗೆ ಆಯಾಸಕ್ಕೂ ಕಾರಣವಾಗುತ್ತದೆ. ಒಂದೇ ಸಮನೆ ಟಿವಿ ಅಥವಾ ಮೊಬೈಲ್ ವೀಕ್ಷಣೆ ಮಾಡಿದ್ರೆ  ಕಣ್ಣುಗಳ ಮೇಲೂ ಇದು ಕೆಟ್ಟ ಪರಿಣಾಮ ಬೀರುತ್ತದೆ. ಇವತ್ತು, ನಾಳೆ ಹೀಗೆ ಪ್ರತಿ ದಿನ ವೆಬ್ ಸಂಚಿಕೆ ವೀಕ್ಷಣೆ ಮಾಡುವ ಜನರು ಅದು ಮುಗಿದ ಮೇಲೆ ಖಾಲಿತನ ಅನುಭವಿಸ್ತಾರೆ. ಇದು ಖಿನ್ನತೆಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. 

ಸ್ಟೈಲಿಶ್ ಆಗಿ ಕಾಣಲು Color Lense ಬಳಸ್ತೀರಾ? ಸ್ವಲ್ಪ ಹುಷಾರು

ವೆಬ್ ಸರಣಿ ಚಟದಿಂದ ಬಿಡುಗಡೆ ಹೇಗೆ? (Quit Addiction) : ವೆಬ್ ಸರಣಿ ಕೂಡ ಒಂದು ರೀತಿ ಮನರಂಜನೆಯಾಗಿದೆ. ಅದರ ವೀಕ್ಷಣೆಯನ್ನು ಸಂಪೂರ್ಣ ಬಿಡಬೇಕಾಗಿಲ್ಲ. ನೀವು ಬಿಂಗ್ ವಾಚಿಂಗ್ ಚಟಕ್ಕೆ ಅಂಟಿಕೊಳ್ತಿದ್ದೀರಿ ಎನ್ನಿಸಿದ್ರೆ ಸರಣಿ ವೀಕ್ಷಣೆ ಕಡಿಮೆ ಮಾಡ್ತಾ ಬನ್ನಿ. ಒಂದೇ ಬಾರಿ ಎಲ್ಲ ಸರಣಿ ವೀಕ್ಷಣೆ ಮಾಡ್ಬೇಡಿ. ಮಧ್ಯ ವಿರಾಮ ತೆಗೆದುಕೊಳ್ಳಿ. 

ಮೇಕಪ್ ರಿಮೂವರ್ ಇಲ್ಲದೆ ಮ್ಯಾಟ್ ಲಿಪ್ ಸ್ಟಿಕ್ ಹೀಗೂ ತೆಗೆಯಬಹುದು!

ಡೋಪೊಮೈನ್ (Dopamine) ಬಿಡುಗಡೆಯಾಗಿ ರಾತ್ರಿ ನಿದ್ರೆ ಬರದಿರಬಹುದು. ಹಾಗಾಗಿ ರಾತ್ರಿ (Night) ಅಷ್ಟಾಗಿ ವೆಬ್ ಸರಣಿ ವೀಕ್ಷಣೆ ಮಾಡಲು ಹೋಗ್ಬೇಡಿ. ವೆಬ್ ಸರಣಿ ವೀಕ್ಷಣೆಗೆ ಸಮಯ ನಿಗದಿಪಡಿಸಿಕೊಳ್ಳಿ. ಎಷ್ಟೇ ಆಸಕ್ತಿದಾಯಕ ವಿಷ್ಯವಾಗಿದ್ದರೂ ಸಮಯ ಮುಗಿದ್ಮೇಲೆ ಟಿವಿ ಅಥವಾ ಮೊಬೈಲ್ ಆಫ್ ಮಾಡಿ. 

click me!