
ಅಯ್ಯೋ ಒಂದು ನಿಮಿಷ ಪುರುಸೊತ್ತಿಲ್ಲ, ಸುಸ್ತು, ಬ್ಯಾಟರಿ ಪೂರ್ತಿ ಡೌನ್ ಆಗಿದೆ ಎಂದು ದಿನಾಂತ್ಯದಲ್ಲಿ ಅನಿಸುತ್ತದೆಯೇ? ಈ ಆಯಾಸವನ್ನೀಗ ಔದ್ಯೋಗಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಲು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ಕೆಲಸದ ಒತ್ತಡವು ಅತಿಯಾದಾಗ, ಅದನ್ನು ಸರಿಯಾಗಿ ನಿಭಾಯಿಸಲು ಸೋತಾಗ ಉಂಟಾಗುವ ಸಮಸ್ಯೆಯೇ ಬಳಲಿಕೆ.
ದೈಹಿಕ ಹಾಗೂ ಮಾನಸಿಕ ದಣಿವು, ಸುಖಾಸುಮ್ಮನೆ ಕಿರಿಕಿರಿಯಾಗುವುದು, ಸಿಟ್ಟು ಬರುವುದು, ಕೆಲಸದ ಕ್ಷಮತೆ ಕಡಿಮೆಯಾಗಿರುವುದು, ದಣಿವಿನಿಂದಾಗಿ ತಲೆನೋವು, ಅಜೀರ್ಣ ಸಮಸ್ಯೆಗಳು, ನಿದ್ರಾಹೀನತೆ, ಕುಡಿತ, ಸಿಗರೇಟ್ ಸೇವನೆ, ಡ್ರಗ್ಸ್‌ನಂಥ ಚಟಗಳನ್ನು ಬೆಳೆಸಿಕೊಂಡಿದ್ದರೆ ಅವು ಅತಿ ಬಳಲಿಕೆಯ ಗುಣಲಕ್ಷಣಗಳು ಎಂದು ಐಸಿಡಿ 11 ಪುಸ್ತಕದಲ್ಲಿ ಹೇಳಲಾಗಿದೆ.
ಫ್ರೀಯಾಗಿದ್ದೇ ಫಿಟ್ ಆಗಿರ್ಬೇಕಾ? ಜಿಮ್, ಜುಂಬಾ ಬಿಟ್ಹಾಕಿ...
ಜನ ಸಾಮಾನ್ಯವಾಗಿ ಈ ಸಮಸ್ಯೆಗೆ ಒತ್ತಡ ಎನ್ನುವುದುಂಟು. ಆದರೆ ಸ್ಟ್ರೆಸ್ಸೇ ಬೇರೆ, ಬಳಲಿಕೆಯೇ ಬೇರೆ ಎನ್ನುತ್ತಿದೆ WHO. ಒತ್ತಡವು ಸಾಮಾನ್ಯ ಸಂಗತಿಯಾಗಿದೆ. ಆದರೆ ದಣಿವು ಎಂಬುದು ನಿರಂತರ ಒತ್ತಡದ ಪರಿಣಾಮವಾಗಿದ್ದು, ಇದನ್ನು ಮನೆಯಲ್ಲೇ ಗುರುತಿಸಿ ಗುಣಪಡಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನೀವು ಅದನ್ನು ಗುರುತಿಸಲಾಗದಷ್ಟು ಬಳಲಿರುತ್ತೀರಿ. ಹಾಗಾಗಿ, ನೀವು ದಣಿವಿನಿಂದ ಬಳಲುತ್ತಿರುವ ಅನುಮಾನವಿದ್ದರೆ ಕೂಡಲೇ ನಿಮ್ಮ ವೈದ್ಯರ ಸಹಾಯ ಪಡೆಯುವುದು ಒಳಿತು. ಅದರ ಹೊರತಾಗಿ ಬೇಗ ಗುಣಮುಖರಾಗಲು ಇನ್ನೇನೇನು ಮಾಡಬಹುದು? ಇಲ್ಲಿದೆ ನೋಡಿ ಟಿಪ್ಸ್...
- ದಣಿವಿನ ಹಾದಿಯಲ್ಲಿ ಇದ್ದೀರಾ ಎಂದು ನಿಮಗನಿಸಿದರೆ, ಒತ್ತಡ ನಿವಾರಣೆಯ ಮಾರ್ಗಗಳನ್ನು ತಕ್ಷಣ ಅನುಸರಿಸಿ. ಧ್ಯಾನ, ವಾಕ್ ಹೋಗುವುದು, ಓದುವುದು, ಗೆಳೆಯರೊಂದಿಗೆ ಕಾಫಿಗೆ ಹೋಗುವುದು ಕೂಡಾ ಸ್ವಲ್ಪ ರಿಲೀಫ್ ನೀಡುತ್ತದೆ. ನಿಮಗೆ ಯಾವುದು ಹೆಚ್ಚು ಸಮಾಧಾನ ನೀಡುತ್ತದೋ ಆ ಹವ್ಯಾಸವನ್ನು ಪ್ರತಿದಿನ ರೂಢಿ ಮಾಡಿಕೊಳ್ಳಿ.
ಸ್ಟಾರ್ ನಟಿಯರ ಸೌಂದರ್ಯದ ಗುಟ್ಟು ಹಕ್ಕಿ ಪಿಕ್ಕೆ...
- ಆಯಾಸದಿಂದ ಬಳಲುವಾಗ ಜನರ ನಿದ್ರೆಯಲ್ಲಿ ಏರುಪೇರಾಗುತ್ತದೆ. ಮೊದಲೇ ಝರ್ಜರಿತವಾದ ಮನಸ್ಸು, ದೇಹ ನಿದ್ರೆ ಸಾಲದೇ ಮತ್ತಷ್ಟು ಬಳಲುತ್ತದೆ. ಹೀಗಾಗಿ, ಕನಿಷ್ಠ 6 ಗಂಟೆಗಳ ತಡೆರಹಿತ ನಿದ್ರೆಗಾಗಿ, ಮನಸ್ಸನ್ನು ಸಿದ್ಧಗೊಳಿಸಿಕೊಳ್ಳುವುದು ಅಭ್ಯಾಸ ಮಾಡಿಕೊಳ್ಳಿ. ಮಲಗುವ ಮುನ್ನ ಓದುವುದು, ಟೆಕ್ನಾಲಜಿಯಿಂದ ದೂರ ಇರುವುದು, ಸಣ್ಣದೊಂದು ಮಸಾಜ್ ಮಾಡಿಸಿಕೊಳ್ಳುವುದು, ಹಿತ ಮಿತ ಆಹಾರ ಸೇವನೆ, ಧ್ಯಾನದಂಥ ಅಭ್ಯಾಸಗಳು ಉತ್ತಮ ನಿದ್ರೆಗೆ ಸಹಕಾರಿ.
- ಆಯಾಸದಿಂದ ನಿಮ್ಮ ಬದುಕು ನಿಯಂತ್ರಣ ತಪ್ಪಿದೆ, ತಲೆ ಗೊಂದಲಗಳ ಕಲಸುಮೇಲೋಗರವಾಗಿದೆ ಎನಿಸಿದರೆ ಅದನ್ನು ಹಾದಿಗೆ ತರಲು ಸುಲಭ ವಿಧಾನ ಎಂದರೆ ಪೆನ್ನು ಪೇಪರ್ ತೆಗೆದುಕೊಂಡು ನಿಮ್ಮನ್ನು ಕಾಡುತ್ತಿರುವ ವಿಷಯಗಳನ್ನೆಲ್ಲ ಬರೆದಿಡಿ. ಇದರಿಂದ ಯೋಚನೆಗಳ ಬಗ್ಗೆ ನಿಮಗೊಂದು ಸ್ಪಷ್ಟತೆ ಸಿಗುತ್ತದೆ. ಹೀಗಾಗಿ, ಪದೇ ಪದೆ ಅದನ್ನೇ ಯೋಚಿಸಿ ಚಿಂತಿಸಬೇಕಿಲ್ಲ, ಬದಲಿಗೆ ಪರಿಹಾರದೆಡೆ ಗಮನ ಹರಿಸಲು ಸಹಾಯವಾಗುತ್ತದೆ.
ಮಕ್ಕಳ ಬೆರಳು ಚೀಪೋ ಅಭ್ಯಾಸ ಬಿಡಿಸೋಕೆ ಹೀಗ್ ಮಾಡಿ!
- ಜನರನ್ನು ಭೇಟಿಯಾಗಿ ಅವರೊಂದಿಗೆ ಹೆಚ್ಚು ಬೆರೆಯುವುದು ಅತ್ಯುತ್ತಮ ಔಷಧದಂತೆ ಕೆಲಸ ಮಾಡುತ್ತದೆ. ನಿಮಗೆ ಹತ್ತಿರದವರೊಂದಿಗೆ ನಿಮ್ಮ ಬದುಕಿನಲ್ಲಿ ಏನೇನಾಗುತ್ತಿದೆ ಎಂಬುದನ್ನು ಹಂಚಿಕೊಳ್ಳಿ. ಕೆಲಸವೇ ಬದುಕಾದಾಗ ದಣಿವು ಆಗುವುದು ಸಹಜ. ಇಂಥ ಸಂದರ್ಭದಲ್ಲಿ ನಾವೇ ಎಚ್ಚೆತ್ತುಕೊಂಡು ಬದುಕಿನಲ್ಲಿ ಸಂಬಂಧಗಳಿಗೆ ಮಹತ್ವ ನೀಡಿ ಸಮಯ ಮಾಡಿಕೊಳ್ಳಬೇಕು.
- ಕೆಲವು ಬಾರಿ ಆಫೀಸಿನಲ್ಲಿ ಹೇಳಿದ್ದೆಲ್ಲವನ್ನೂ ತಲೆಯ ಮೇಲೆ ಹಾಕಿಕೊಂಡು ಮೊದಲೇ ಲೋಡ್ ಆಗಿರುವ ಗಾಡಿಗೆ ಮತ್ತಷ್ಟು ಹೇರಿಟ್ಟಂತೆ ಮಾಡಿಕೊಳ್ಳುತ್ತೇವೆ. ಇದು ನಮ್ಮದೇ ತಪ್ಪು. ಸೂಕ್ತ ಸಂದರ್ಭಗಳಲ್ಲಿ ಇಲ್ಲ ಎಂಬುದನ್ನು ಕಲಿತುಕೊಳ್ಳಬೇಕು. HR ಬಳಿ ಅಥವಾ ಸೀನಿಯರ್ ಬಳಿ ನಿಮ್ಮಿಂದ ಇಷ್ಟು ಮಾತ್ರ ಕೆಲಸ ತೆಗೆದುಕೊಳ್ಳಲು ಸಾಧ್ಯ ಎಂಬುದನ್ನು ನಯವಾಗಿ ಮಾತನಾಡಿ ತಿಳಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.