
ನಾಣ್ಯಗಳ ಸಂಗ್ರಹ ಕೆಲವರ ಹವ್ಯಾಸ. ಹಿಂದೆ ಬಳಸ್ತಿದ್ದ ನಾಣ್ಯಗಳಿಂದ ಹಿಡಿದು ಈಗಿನ ನಾಣ್ಯಗಳವರೆಗೆ ವೆರೈಟಿ ನಾಣ್ಯಗಳು ಅವರ ಬಳಿ ಇರುತ್ತವೆ. ಆದ್ರೆ ಕೆಲವರು ಬಂದ ನಾಣ್ಯಗಳನ್ನು ಒಂದುಗೂಡಿಸಿ, ಅದನ್ನು ಕೆಲ ಚಿಲ್ಲರೆ ಅಂಗಡಿಗಳಿಗೆ ನೀಡಿ ನೋಟನ್ನು ಪಡೆಯುತ್ತಾರೆ. ಮತ್ತೆ ಅಪರೂಪಕ್ಕೆ ಎನ್ನುವಂತೆ ಕೆಲವರು ಈ ನಾಣ್ಯಗಳನ್ನು ಸಂಗ್ರಹಿಸಿ, ಅದನ್ನು ತಮ್ಮ ಬಹು ದಿನದ ಕನಸು ಈಡೇರಿಸಲು ಬಳಸಿಕೊಳ್ತಾರೆ.
ಸಾಮಾಜಿಕ ಜಾಲತಾಣ (Social Media ) ದಲ್ಲಿ ಇತ್ತೀಚಿಗೆ ಚಿತ್ರವಿಚಿತ್ರ ಸುದ್ದಿಗಳು, ಜನರು ವೈರಲ್ (Viral) ಆಗೋದನ್ನು ನಾವು ನೋಡಬಹುದು. ಕೆಲ ದಿನಗಳ ಹಿಂದಷ್ಟೆ ತಾಜ್ ಹೊಟೇಲ್ ಗೆ ಯುವಕನೊಬ್ಬ ತನ್ನ ಸ್ಟೈಲ್ ನಲ್ಲಿ ಹೋಗಿ, ಆಹಾರ ಸೇವನೆ ಮಾಡಿ, ನಾಣ್ಯಗಳಲ್ಲಿ ಬಿಲ್ ಪಾವತಿ ಮಾಡಿ ಬಂದಿದ್ದ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಲವರು ಪಾಸಿಟಿವ್ ಕಮೆಂಟ್ ಮಾಡಿದ್ರೆ ಮತ್ತೆ ಕೆಲವರು ಹೊಟೇಲ್ ಸಿಬ್ಬಂದಿಗೆ ಇದ್ರಿಂದ ಬಹಳ ತೊಂದರೆಯಾಗಿದೆ ಎಂದು ಕಮೆಂಟ್ ಮಾಡಿದ್ದರು. ಈಗ ಇಂಥಹದ್ದೇ ಮತ್ತೊಂದು ಸುದ್ದಿ ವೈರಲ್ ಆಗಿದೆ.
ನಾಣ್ಯ (Coin)ದ ಚೀಲ ಹಿಡಿದು ಸ್ಕೂಟರ್ ಖರೀದಿಗೆ ಬಂದ ವ್ಯಕ್ತಿ : ಘಟನೆ ನಡೆದಿರೋದು ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ. ಇಲ್ಲಿನ ವ್ಯಕ್ತಿಯೊಬ್ಬ ಸ್ಕೂಟರ್ (Scooter) ಖರೀದಿಸಿ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾನೆ. ಸ್ಕೂಟರ್ ಖರೀದಿಸೋದು ಈಗ ಮಾಮೂಲು, ಬಹುತೇಕರ ಮನೆಯಲ್ಲಿ ಎರಡು, ಮೂರು ಇರುತ್ತೆ ಅಂತಾ ನೀವು ಕೇಳ್ಬಹುದು. ಆದ್ರೆ ಈತ ವಿಶಿಷ್ಟ ರೀತಿಯಲ್ಲಿ ಹಣವನ್ನು ಪಾವತಿಸಿದ್ದಾನೆ. ಅದೇ ಈ ಸುದ್ದಿಯ ವಿಶೇಷ.
ಮೊಹಮ್ಮದ್ ಸೈದುಲ್ ಹೊಕ್ ಎಂಬ ವ್ಯಕ್ತಿ ಸ್ಕೂಟಿ ಖರೀದಿ ಮಾಡಿದ್ದಾನೆ. ಆತ ಶೋ ರೂಮ್ ಗೆ ನಾಣ್ಯಗಳನ್ನು ನೀಡಿ ಸ್ಕೂಟರ್ ಖರೀದಿ ಮಾಡಿದ್ದಾನೆ. ಮೊಹಮ್ಮದ್ ಸೈದುಲ್ ಹೊಕ್ ಗವಾಹಟಿಯಲ್ಲಿ ಒಂದು ಸಣ್ಣ ಅಂಗಡಿಯನ್ನು ಹೊಂದಿದ್ದಾನೆ. ಹೊಸ ಸ್ಕೂಟರ್ ಖರೀದಿಸಲು ವರ್ಷಗಳಿಂದ ಹಣವನ್ನು ಕೂಡಿಹಾಕಿದ್ದಾನೆ. ಮೊಹಮ್ಮದ್ ಸೈದುಲ್ ಹೊಕ್ ಪ್ರಕಾರ, ಕಳೆದ ಐದು ಆರು ವರ್ಷಗಳಿಂದ 1, 2, 5 ಮತ್ತು 10 ರೂಪಾಯಿಗಳ ನಾಣ್ಯಗಳನ್ನು ಕೂಡಿ ಹಾಕಿದ್ದಾನಂತೆ.
ಸೈದುಲ್ ಹೊಕ್ ವೀಡಿಯೊವನ್ನು ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸೈದುಲ್, ಶೋರೂಮ್‌ಗೆ ನಾಣ್ಯಗಳ ಚೀಲವನ್ನು ಕೊಂಡೊಯ್ಯುತ್ತಿರುವುದನ್ನು ನೀವು ನೋಡ್ಬಹುದು. ಜಾರ್‌ನಲ್ಲಿ ಸಂಗ್ರಹಿಸಿಟ್ಟಿದ್ದ ನಾಣ್ಯಗಳನ್ನು ಸೈದುಲ್, ಶೋರೂಮಿಗೆ ನೀಡ್ತಾನೆ. ಶೋರೂಮಿನವರು ಎಲ್ಲ ನಾಣ್ಯಗಳನ್ನು ಜೋಡಿಸಿ, ಲೆಕ್ಕ ಹಾಕ್ತಿರೋದನ್ನು ನೀವು ನೋಡ್ಬಹುದು. ಸೈದುಲ್ ಕೂಡ ನಾಣ್ಯ ಎಣಿಕೆಗೆ ನೆರವಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಸೈದುಲ್, ಒಂದಲ್ಲ ಎರಡಲ್ಲ ಒಂದು ಸ್ಕೂಟರ್ ಖರೀದಿಗೆ ಅಗತ್ಯವಿದ್ದ ಹಣವನ್ನೆಲ್ಲ ನಾಣ್ಯಗಳಲ್ಲಿ ಪಾವತಿ ಮಾಡಿದ್ದಾನೆ. ಸೈದುಲ್ ಸುಮಾರು 90 ಸಾವಿರ ರೂಪಾಯಿ ಮೌಲ್ಯದ ನಾಣ್ಯಗಳನ್ನು ಶೋರೂಮ್ ಗೆ ನೀಡಿದ್ದಾನೆ ಎನ್ನಲಾಗಿದೆ.
ದರ್ರಾಂಗ್ ಜಿಲ್ಲೆಯ ಸಿಪಾಜರ್ ಪ್ರದೇಶದ ನಿವಾಸಿ ಎಂಡಿ ಸೈದುಲ್ ಹೊಕ್ ಅವರು ಉಳಿಸಿದ ನಾಣ್ಯಗಳ ಚೀಲದೊಂದಿಗೆ ಸ್ಕೂಟರ್ ಅನ್ನು ಖರೀದಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಎಎನ್ ಐ ವೀಡಿಯೊವನ್ನು ಹಂಚಿಕೊಂಡಿದೆ.
ಶೋ ರೂಮ್ ಮಾಲೀಕರು ಹೇಳಿದ್ದೇನು? : ಸೈದುಲ್ ನಾಣ್ಯಗಳ ಜೊತೆ ಸ್ಕೂಟರ್ ಖರೀದಿಗೆ ಬಂದಿದ್ದಾನೆ ಎಂಬ ಸುದ್ದಿ ತಿಳಿತು. ನಾನು ಇಷ್ಟು ದಿನ ಮಾಧ್ಯಮಗಳಲ್ಲಿ ಇಂಥ ಸುದ್ದಿ ಕೇಳಿದ್ದೆ. ಇಂದು ನಮ್ಮ ಶೋ ರೂಮಿನಲ್ಲಿಯೇ ಇಂಥ ಘಟನೆ ನಡೆದಿದೆ. ನನಗೆ ಸೈದುಲ್ ಸುದ್ದಿ ಕೇಳಿ ಖುಷಿಯಾಯ್ತು. ಸೈದುಲ್ ಶೀಘ್ರದಲ್ಲಿಯೇ ಕಾರು ಖರೀದಿ ಮಾಡ್ಲಿ ಎಂದು ನಾನು ಆಶಿಸ್ತೇನೆ ಎಂದು ಶೋ ರೂಮ್ ಮಾಲೀಕರು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.