ಅಮೆಜಾನ್‌ನಲ್ಲಿ ಹೆಚ್ಚು ದಿನಸಿ ಆರ್ಡರ್ ಮಾಡಿದ್ದೇ ತಪ್ಪಾಯ್ತಾ? ಗ್ರಾಹಕನ ಮೇಲೆ ಕೂಗಾಡಿದ ಡೆಲಿವರಿ ಬಾಯ್!

Published : Nov 18, 2026, 08:57 AM IST
Amazon Delivery Agent Scolds Customer for Placing a Large Grocery Order

ಸಾರಾಂಶ

ಬೆಂಗಳೂರಿನಲ್ಲಿ ಅಮೆಜಾನ್ ಮೂಲಕ 16 ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದ ಗ್ರಾಹಕನ ಮೇಲೆ ಡೆಲಿವರಿ ಏಜೆಂಟ್ ಕೂಗಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ವಸ್ತುಗಳನ್ನು ನೆಲಕ್ಕೆ ಎಸೆದು, ಕೆಲವು ಉತ್ಪನ್ನಗಳನ್ನು ಡೆಲಿವರಿ ಮಾಡದೆ ಹೋಗಿದ್ದಾನೆ ಎಂದು ಗ್ರಾಹಕ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಮೆಜಾನ್‌ನಲ್ಲಿ ಹೆಚ್ಚು ದಿನಸಿ ಆರ್ಡರ್ ಮಾಡಿದ್ದೇ ತಪ್ಪಾಯ್ತಾ? ಗ್ರಾಹಕನ ಮೇಲೆ ಗರಂ ಆದ ಡೆಲಿವರಿ ಬಾಯ್!

ಆನ್‌ಲೈನ್‌ನಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡುವುದು ಈಗ ಸಾಮಾನ್ಯವಾಗಿದೆ. ಬೇಕಾದ ವಸ್ತುಗಳನ್ನು ಮೊಬೈಲ್‌ನಲ್ಲೇ ಆಯ್ಕೆ ಮಾಡಿ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಆದರೆ ಇದೇ ಆನ್‌ಲೈನ್ ಶಾಪಿಂಗ್ ಈಗ ಗ್ರಾಹಕರೊಬ್ಬರಿಗೆ ವಿಚಿತ್ರ ಅನುಭವ ನೀಡಿದೆ. ಅಮೆಜಾನ್‌ನಲ್ಲಿ ಹೆಚ್ಚು ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದಕ್ಕೆ ಡೆಲಿವರಿ ಏಜೆಂಟ್ ಗ್ರಾಹಕನ ಮೇಲೆ ಕೂಗಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಆರ್ಡರ್ ಮಾಡಿದ್ದ ಕೆಲವು ವಸ್ತುಗಳನ್ನು ನೀಡದೆಯೇ ಹೋಗಿದ್ದಾನೆ ಎಂದು ಗ್ರಾಹಕ ದೂರಿದ್ದಾನೆ.

16 ವಸ್ತುಗಳ ಆರ್ಡರ್‌ಗೆ ಡೆಲಿವರಿ ಏಜೆಂಟ್ ಗರಂ!

ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದೆ. ಗ್ರಾಹಕರೊಬ್ಬರು ತಮ್ಮ ಮನೆಯ ತಿಂಗಳ ದಿನಸಿ ಖರೀದಿಯ ಭಾಗವಾಗಿ ಅಮೆಜಾನ್ ಮಿನಿಟ್ಸ್ ಮೂಲಕ ಸುಮಾರು 16 ವಸ್ತುಗಳನ್ನು ಆರ್ಡರ್ ಮಾಡಿದ್ದರು. ಇದರಲ್ಲಿ ಅಕ್ಕಿ, ಹಿಟ್ಟು, ಅಡುಗೆ ಎಣ್ಣೆ, ಪನೀರ್, ಕಾಫಿ, ಬೇಳೆ ಮತ್ತು ಸೋಪ್ ಸೇರಿದಂತೆ ಹಲವು ಅಗತ್ಯ ವಸ್ತುಗಳಿದ್ದವು.

ಆದರೆ ಆರ್ಡರ್ ತಲುಪಿಸಲು ಬಂದ ಡೆಲಿವರಿ ಏಜೆಂಟ್ ಮಾತ್ರ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಇಷ್ಟೊಂದು ವಸ್ತುಗಳನ್ನು ಒಂದೇ ಬಾರಿ ಯಾಕೆ ಆರ್ಡರ್ ಮಾಡಿದ್ದೀರಿ? ₹250 ರಿಯಾಯಿತಿ ಪಡೆಯುವುದಕ್ಕಾಗಿಯೇ ಇಷ್ಟೊಂದು ವಸ್ತುಗಳನ್ನು ಖರೀದಿಸಿದ್ದೀರಾ? ಎಂದು ಪ್ರಶ್ನಿಸಿದ್ದಾನೆ ಎನ್ನಲಾಗಿದೆ.

ಅಲ್ಲದೆ, ಇಷ್ಟೊಂದು ವಸ್ತುಗಳನ್ನು ದ್ವಿಚಕ್ರ ವಾಹನದಲ್ಲಿ ತರುವುದು ಕಷ್ಟವಾಗುತ್ತದೆ. ಒಂದೇ ಬಾರಿಗೆ ಇಷ್ಟೊಂದು ಆರ್ಡರ್ ಮಾಡುವ ಬದಲು ಬೇರೆ ಬೇರೆ ಸಮಯದಲ್ಲಿ ಸಣ್ಣ ಸಣ್ಣ ಆರ್ಡರ್ ಮಾಡಬಹುದಿತ್ತು ಎಂದು ಹೇಳಿದ್ದಾನೆ ಎಂದು ಗ್ರಾಹಕ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ.

ಗ್ರಾಹಕನ ಮುಂದೆಯೇ ದಿನಸಿ ವಸ್ತುಗಳನ್ನು ನೆಲಕ್ಕೆ ಎಸೆದನಾ?

ಡೆಲಿವರಿ ಬ್ಯಾಗ್‌ನಿಂದ ವಸ್ತುಗಳನ್ನು ಹೊರತೆಗೆಯುವಂತೆ ಏಜೆಂಟ್ ಕೇಳಿದ್ದಾನೆ. ಅದಕ್ಕೆ ಗ್ರಾಹಕ ಕೂಡ ಒಪ್ಪಿಕೊಂಡಿದ್ದಾನೆ. ಆದರೆ ಡೆಲಿವರಿ ಏಜೆಂಟ್ ಸ್ವತಃ ವಸ್ತುಗಳನ್ನು ಹೊರತೆಗೆದು ನೆಲಕ್ಕೆ ಜೋರಾಗಿ ಎಸೆದಿದ್ದಾನೆ ಎಂದು ಗ್ರಾಹಕ ಆರೋಪಿಸಿದ್ದಾನೆ. ಈ ವರ್ತನೆಯಿಂದ ತಾನು ಆಘಾತಕ್ಕೊಳಗಾಗಿದ್ದಾಗಿ ತಿಳಿಸಿದ್ದಾನೆ.

ಡೆಲಿವರಿ ಕೆಲಸ ಕಷ್ಟಕರ ಎಂಬುದು ತನಗೆ ಅರ್ಥವಾಗುತ್ತದೆ. ಆದರೆ ಗ್ರಾಹಕರು ಆ್ಯಪ್ ಮೂಲಕ ಆರ್ಡರ್ ಮಾಡಿದಾಗ ಅದನ್ನು ಸ್ವೀಕರಿಸಿ ಡೆಲಿವರಿಗೆ ಕಳುಹಿಸುವುದು ಕಂಪನಿಯ ಜವಾಬ್ದಾರಿ. ಇದಕ್ಕಾಗಿ ಗ್ರಾಹಕರನ್ನೇ ತಪ್ಪಿತಸ್ಥರಂತೆ ಕಾಣುವುದು ಸರಿಯಲ್ಲ ಎಂದು ಆತ ಅಭಿಪ್ರಾಯಪಟ್ಟಿದ್ದಾನೆ.

ಆರ್ಡರ್ ಮಾಡಿದ ವಸ್ತುಗಳೇ ನಾಪತ್ತೆ!

ಈ ಘಟನೆ ಇಲ್ಲಿಗೇ ಮುಗಿದಿಲ್ಲ. ನಂತರ ಆರ್ಡರ್ ಪಟ್ಟಿಯನ್ನು ಪರಿಶೀಲಿಸಿದಾಗ ಹಲವು ವಸ್ತುಗಳು ಡೆಲಿವರಿಯಾಗಿಲ್ಲ ಎಂಬುದು ಗ್ರಾಹಕನ ಗಮನಕ್ಕೆ ಬಂದಿದೆ. ಈ ವಿಚಾರ ತಿಳಿದ ಬಳಿಕ ಆತ ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾನೆ.

ರೆಡ್ಡಿಟ್‌ನಲ್ಲಿ ಚರ್ಚೆ ಶುರು

ಗ್ರಾಹಕನ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಕೆಲವರು ಗ್ರಾಹಕನ ಪರ ನಿಂತು, ಇಷ್ಟವಾದ ವಸ್ತುಗಳನ್ನು ಆರ್ಡರ್ ಮಾಡುವ ಹಕ್ಕು ಗ್ರಾಹಕರಿಗಿದೆ ಎಂದಿದ್ದಾರೆ. ಇನ್ನು ಕೆಲವರು ಡೆಲಿವರಿ ಸಿಬ್ಬಂದಿಯ ಕೆಲಸದ ಒತ್ತಡವನ್ನೂ ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ದೊಡ್ಡ ಆರ್ಡರ್‌ಗಳನ್ನು ನಿರ್ವಹಿಸುವ ವ್ಯವಸ್ಥೆಯನ್ನು ಕಂಪನಿಯೇ ಸರಿಯಾಗಿ ರೂಪಿಸಬೇಕು. ಗ್ರಾಹಕರು ಮತ್ತು ಡೆಲಿವರಿ ಸಿಬ್ಬಂದಿ ಇಬ್ಬರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಒಟ್ಟಿನಲ್ಲಿ, ಈ ಘಟನೆ ಆನ್‌ಲೈನ್ ಡೆಲಿವರಿ ಸೇವೆಗಳಲ್ಲಿ ಗ್ರಾಹಕರ ನಿರೀಕ್ಷೆ ಮತ್ತು ಡೆಲಿವರಿ ಸಿಬ್ಬಂದಿಯ ಕೆಲಸದ ಒತ್ತಡದ ನಡುವಿನ ಸಮತೋಲನದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

100 ಕೆಜಿ ಭತ್ತ ಮಿಲ್ ಮಾಡಿದ ಬಳಿಕ ಸಿಗುವ ಅಕ್ಕಿ ಎಷ್ಟು? ವೈಟ್ ರೈಸ್ ಮೊದಲೋ ಬ್ರೌನ್ ಮೊದಲೋ?
ಹಿರಿಯರು ಹೇಳಿದ್ದೆಲ್ಲಾ ಮೂಢನಂಬಿಕೆ ಅಲ್ಲ! ಈ 5 ಸಂಪ್ರದಾಯಗಳ ಹಿಂದಿನ ಸತ್ಯ ತಿಳಿದ್ರೆ ಅಚ್ಚರಿಯಾಗುತ್ತೆ