ಜಂಟಿ ತಿರುಗಾಡೋರ ಲೈಂಗಿಕ ಬದುಕೂ ಬಿಂದಾಸ್!

By Web Desk  |  First Published Jul 6, 2019, 5:41 PM IST

ತಿರುಗಾಟ ಎಂದರೆ ಎಕ್ಸೈಟ್‌ಮೆಂಟ್, ಎನ್‌ಲೈಟ್ಮೆಂಟ್, ತಿರುಗಾಟ ಎಂದರೆ ಹೊಸ ಪರಿಸರ, ಖಾದ್ಯ ವೈವಿಧ್ಯ, ಜೀವ ವೈವಿಧ್ಯ, ಸಾಹಸ, ಹೊಸ ಅನುಭವಗಳು, ತಿರುಗಾಟ ಎಂದರೆ ಆಕಸ್ಮಿಕ, ಅನಿರೀಕ್ಷಿತ, ತಿರುಗಾಟ ಎಂದರೆ ಕಲಿಕೆ, ತಿಳಿವಳಿಕೆ, ತಿರುಗಾಟವೆಂದರೆ ಮನಸ್ಸಿಗೆ ಹಿತ, ರಿಲ್ಯಾಕ್ಸೇಶನ್, ತಿರುಗಾಟವೆಂದರೆ ನಮ್ಮ ಮಿತಿಯ ಹಿಗ್ಗಿಸುವಿಕೆ, ಸಂಕುಚಿತ ಮನಸ್ಸಿನ ಹಿಗ್ಗಿಸುವಿಕೆ... ಅದರಲ್ಲೂ ಸಂಗಾತಿಯು ಜೊತೆಗಿದ್ದರೆ ತಿರುಗಾಟವೆಂದರೆ ಬದುಕು, ಸಂತೋಷ, ಸಲ್ಲಾಪ, ಅರ್ಥಪೂರ್ಣ.


ಸರ್ವೆಯೊಂದರ ಪ್ರಕಾರ ಶೇ.94ರಷ್ಟು ಜನರು ಸಂಗಾತಿಯೊಂದಿಗಿನ ಅಲೆದಾಟ ತಮ್ಮ ನಡುವಿನ ಬಾಂಡಿಂಗ್ ಹೆಚ್ಚಿಸಿದೆ ಎಂದಿದ್ದಾರೆ. ಒಟ್ಟಿಗೇ ತಿರುಗುವಾಗ ಒಂದೇ ಕಷ್ಟನಷ್ಟ, ಒಂದೇ ಅನುಭವ, ಅಲ್ಲಲ್ಲೇ ಮನಸಿನ ಮಾತುಗಳನ್ನು ಹಂಚಿಕೊಳ್ಳುವ ಅವಕಾಶ, ಸದಾ ಒಬ್ಬರಿಗೊಬ್ಬರ ಒತ್ತಾಸೆ, ಸಮಯ ಕೊಟ್ಟುಕೊಳ್ಳುವುದು ಸೇರಿದಂತೆ ಹಲವಾರು ವಿಷಯಗಳು ಇಬ್ಬರನ್ನೂ ಒಂದುಗೂಡಿಸುತ್ತವೆ. ಜಂಟಿಯಾಗಿ ತಿರುಗುವ ಜೋಡಿಯ ಮಧ್ಯೆ ಪ್ರೀತಿ ಹೆಚ್ಚಿರುತ್ತದೆ, ಅವರು ಸದಾ ಜೊತೆಗಿರುತ್ತಾರೆ. ಏಕೆಂದರೆ,

ಸಂಬಂಧದ ಬಂಧ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Latest Videos

undefined

1. ಒಂದೇ ಗುರಿ, ಒಂದೇ ಉದ್ದೇಶ
ಪ್ರಪಂಚವನ್ನು ನೋಡುವ ಬಯಕೆ, ಹೊಸ ಹೊಸ ಅನುಭವಗಳಿಗೆ ತೆರೆದುಕೊಳ್ಳುವುದು, ಒಟ್ಟಾಗಿ ಎಲ್ಲ ಏರಿಳಿತಗಳನ್ನು ಎದುರಿಸುವುದು, ಮಿತಿಯಿರದ ಸಾಹಸ, ಇಬ್ಬರ ಕನಸೂ ಸುತ್ತಾಟವೇ ಆಗಿದ್ದಾಗ ಒಟ್ಟಿಗಿರುವುದು ಬಹಳ ಸುಲಭ. ಲೈಕ್ ಮೈಂಡೆಡ್ ಜೋಡಿ ಒಬ್ಬರನ್ನೊಬ್ಬರು ಲೈಕ್ ಮಾಡೇಮಾಡುತ್ತಾರೆ. 

2. ಮಿತಿಗಳಿಗೆ ಹೊಂದಾಣಿಕೆ, ಅರ್ಥ ಮಾಡಿಕೊಳ್ಳುವುದು
ಸುತ್ತಾಟದಲ್ಲಿದ್ದಾಗ, ಒಂದೇ ಅನುಭವಗಳನ್ನು ಎದುರಿಸುವಾಗ ಇಬ್ಬರಿಗೂ ಅವರಿಬ್ಬರ ಅತಿ, ಇತಿ, ಮಿತಿಗಳೇನು ಎಂಬುದು ಚೆನ್ನಾಗಿ ಅರ್ಥವಾಗುತ್ತದೆ. ಒಬ್ಬರ ಮಿತಿಯೇ ಮತ್ತೊಬ್ಬರ ಬಲವಾಗಿರುವಂಥ ಸನ್ನಿವೇಶಗಳಲ್ಲಿ ಒಬ್ಬರಿಗೊಬ್ಬರು ಹೆಗಲು ಕೊಡುತ್ತಾರೆ. ಇದರಿಂದ ಸುತ್ತಾಟವೂ ಸುಲಭವಾಗುತ್ತದೆ. ಬದುಕೂ ಬೆಳಕಾಗುತ್ತದೆ. ಹೀಗೆ ಹಾದಿಯ ಏರಿಳಿತಗಳೇ ಬದುಕಿನ ಏರಿಳಿತಗಳಾಗುವ ಅವಕಾಶ ಟ್ರಾವೆಲ್ಲರ್ಸ್‌ಗೆ ದೊರೆಯುತ್ತದೆ. ಬದುಕಿನ ಏರಿಳಿತಗಳನ್ನು ಒಟ್ಟಿಗೇ ಎದುರಿಸುವಾಗ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯ. 

3. ಉತ್ತಮ ಸಂವಹನ
ಅಧ್ಯಯನಗಳ ಪ್ರಕಾರ, ಒಟ್ಟಿಗೆ ಸುತ್ತುವ ಜೋಡಿ ಮಧ್ಯೆ ವಾದವಾಗ್ವಾದಗಳು ಕಡಿಮೆ ಎಂಬುದು ಸಾಬೀತಾಗಿದೆ.  ಟ್ರಾವೆಲಿಂಗ್ ಅವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೂ, ಮತ್ತೊಬ್ಬರ ಮಾತನ್ನು ಕೇಳಿಸುವುದಕ್ಕೂ ತಾಳ್ಮೆ ತಂದುಕೊಡುತ್ತದೆ. ಅಲ್ಲದೆ, ಜೊತೆಯಾಗಿ ಇಬ್ಬರೇ ಸುತ್ತುವಾಗ ಅನಿಸಿದ್ದೆಲ್ಲವನ್ನೂ ಹೇಳಿಕೊಳ್ಳುವ ಸಾಧ್ಯತೆಗಳು, ಅವಕಾಶಗಳು ಜಾಸ್ತಿ. ಇದರಿಂದ ಇಬ್ಬರ ನಡುವಿನ ಸಂವಹನ ಚೆನ್ನಾಗಿರುತ್ತದೆ.

4. ತೃಪ್ತಿಕರ ಲೈಂಗಿಕ ಸಂಬಂಧ
ಸರ್ವೆಯಲ್ಲಿ ಟ್ರಾವೆಲ್ ಮಾಡದ ಜೋಡಿಗಿಂತ ಟ್ರಾವೆಲ್‌ನಲ್ಲಿರುವ ಜೋಡಿಯು ತಮ್ಮ ಲೈಂಗಿಕ ಸಂಬಂಧದ ಬಗ್ಗೆ ಹೆಚ್ಚು ತೃಪ್ತಿ ವ್ಯಕ್ತಪಡಿಸಿದ್ದಾರೆ. ಟ್ರಾವೆಲ್‌ನಲ್ಲಿ ಕೆಲಸ ಹಾಗೂ ಒತ್ತಡಗಳೆರಡೂ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿರುತ್ತದೆ. ಯಾವುದೇ ತಲೆಬಿಸಿ ಇಲ್ಲದಾಗ ರೊಮ್ಯಾನ್ಸ್ ಹಾಗೂ ಪ್ರೀತಿ ಸರಾಗವಾಗಿ ಹರಿಯುತ್ತದೆ. ಇದರಿಂದ ಲೈಂಗಿಕ ಸಂಬಂಧವೂ ಉತ್ತಮಗೊಳ್ಳುತ್ತದೆ.

5. ಹೊಸತನ್ನು ಒಟ್ಟಾಗಿ ಅನುಭವಿಸುವ ಅವಕಾಶ
ಬದುಕಿನಲ್ಲಿ ಯಾವುದೇ ಅನುಭವ ಮೊದಲ ಬಾರಿ ಅನುಭವಿಸಿದ್ದನ್ನು ಯಾರೂ ಮರೆಯಲಾರರು. ಟ್ರಾವೆಲಿಂಗ್‌ನಲ್ಲಿ ಇಂಥ ಹಲವಾರು ಹೊಸ ಅನುಭವಗಳು ಆಗುವ ಸಾಧ್ಯತೆಗಳು ಹೆಚ್ಚು. ಹೊಸ ಹೊಸ ಪ್ರದೇಶಗಳನ್ನು ನೋಡುವುದು, ಸಾಹಸೀ ಚಟುವಟಿಕೆಗಳು, ಹೊಸ ರುಚಿ, ಕಡಿಮೆ ಖರ್ಚಿನಲ್ಲಿ ಸುತ್ತಾಡಲೂ ಇಬ್ಬರೂ ಸೇರಿ ಮಾಡಿದ ಯೋಜನೆ, ಅಪಾಯದಂಚಿಗೆ ಹೋಗಿ ಹಿಂತಿರುಗಿದ ಅನುಭವ, ಅನಿರೀಕ್ಷಿತವಾಗಿ ಜರುಗುವ ಕಾಮಿಡಿ, ರೊಮ್ಯಾನ್ಸ್ ಆನ್ ವ್ಹೀಲ್ಸ್ ಇಂಥ ಯಾವ ಅನುಭವವನ್ನೂ ಯಾರೂ ಮರೆಯುವುದು ಸಾಧ್ಯವಿಲ್ಲ. ಹೀಗೆ ಒಟ್ಟಾಗಿ ಮರೆಯದ ಅನುಭವಗಳನ್ನು ಕೂಡಿ ಹಾಕುವ ಅವಕಾಶ ಎಷ್ಟು ಜನರಿಗೆ ಸಿಗುತ್ತದೆ? 

6. ಇಬ್ಬರ ಸಂಪೂರ್ಣ ಪರಿಚಯ
ಬಹುತೇಕ ಸಮಯ ನೀವಿಬ್ಬರೂ ಒಟ್ಟಿಗೇ ಇರುವುದರಿಂದ ಯಾರಿಂದ ಯಾರೂ ಏನೂ ಬಚ್ಚಿಡಲು ಸಾಧ್ಯವಿಲ್ಲ, ನಿಮ್ಮ ಪ್ರೇಯಸಿಯ ಶೇವ್ ಮಾಡದ ಕಾಲುಗಳು, ಮೇಕಪ್ ಇಲ್ಲದ ಮುಖ, ಪ್ರಿಯಕರನ ಗೊರಕೆ, ಬೆವರಿನ ವಾಸನೆ.... ಹೀಗೆ ಯಾವ ಅಗ್ಲೀ ಟ್ರೂತ್ ಕೂಡಾ ಮುಚ್ಚಿಹಾಕಲು ಸಾಧ್ಯವಿಲ್ಲ. ಮುಚ್ಚಿಡಲು ಇಬ್ಬರ ನಡುವೆ ಏನೂ ಇಲ್ಲದಾಗಲೂ ಒಬ್ಬರನ್ನೊಬ್ಬರು ಒಪ್ಪಿಕೊಂಡ ಮೇಲೆ ಆ ಸಂಬಂಧ ಕೊನೆವರೆಗೆ ಉಳಿಯಲೇಬೇಕಲ್ಲವೇ?

7. ಆ ಕ್ಷಣದಲ್ಲಿ ಬದುಕುವ ಕಲೆ
ಟ್ರಾವೆಲ್ ಮಾಡದ ಜೋಡಿಗೆ ಭವಿಷ್ಯದ್ದೇ ಚಿಂತೆಯಾದರೆ, ಟ್ರಾವೆಲ್ ಮಾಡುವ ಜೋಡಿಯು ಮುಂದಿನ ಚಿಂತೆ ಇಲ್ಲದೆ ಆ ಕ್ಷಣವನ್ನು ಅನುಭವಿಸುತ್ತಾ ಬದುಕುತ್ತಿರುತ್ತಾರೆ. ಹೀಗಾಗಿ, ಅವರಲ್ಲಿ ಕಹಿಗಿಂತ ಸಿಹಿ ಅನುಭವಗಳೇ ಹೆಚ್ಚು. ಜೊತೆಯಾಗಿ ಎದುರಿಸಿದ ಕಹಿ ಅನುಭವವೂ ನೆನಪಿನ ಬುತ್ತಿಯಲ್ಲಿ ಸಿಹಿಯಾಗುವ ಸಾಧ್ಯತೆಗಳು ಹೆಚ್ಚು.

8. ಸಂಗಾತಿಯೇ ಬೆಸ್ಟ್‌ಫ್ರೆಂಡ್
ಏನೇ ಆದರೂ ಒಬ್ಬರಿಗೊಬ್ಬರು ನಿಲ್ಲಲೇಬೇಕಾದ್ದರಿಂದ ಹಾಗೂ ಹೊರಗಿನ ಯಾವುದೇ ಅಡ್ಡಿ ಆತಂಕಗಳಿರದ ಕಾರಣ ಅವರಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗುವ ಎಲ್ಲ ಅವಕಾಶಗಳನ್ನೂ ಸುತ್ತಾಟ ನೀಡುತ್ತದೆ. 

9. ಸ್ವತಂತ್ರದ ಸುಖ
ಟ್ರಾವೆಲಿಂಗ್ ಇಬ್ಬರಿಗೂ ಸ್ವಾತಂತ್ರ್ಯದ ಸುಖ ನೀಡುತ್ತದೆ. ಇಬ್ಬರೂ ಮತ್ತೊಬ್ಬರ ಸ್ವತಂತ್ರವನ್ನು, ಏಕಾಂತವನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳುತ್ತಾರೆ. 

ಇಷ್ಟೇ ಅಲ್ಲ, ಟ್ರಾವೆಲಿಂಗ್ ತಾಳ್ಮೆ, ಕ್ಷಮೆ, ಹಾಸ್ಯಪ್ರಜ್ಞೆ, ಮಿತಿಯಲ್ಲಿ ಬದುಕುವ ಕಲೆ ಕಲಿಸುತ್ತದೆ. ಸಂಕುಚಿತ ಮನಸ್ಥಿತಿಯಿಂದ ಹೊರಬರುವ ಅವಕಾಶ ನೀಡುತ್ತದೆ. ಇಷ್ಟಿದ್ದ ಮೇಲೆ ಬದುಕು ಸುಂದರವಾಗಲೇಬೇಕು, ಬಾಂಡಿಂಗ್ ಗಟ್ಟಿಯಾಗಲೇಬೇಕು ಅಲ್ಲವೇ?

click me!