ಛತ್ತೀಸ್ಗಢದ ಬಸ್ತರ್ ಪ್ರದೇಶದಲ್ಲಿ ಒಂದು ಕಾಲದಲ್ಲಿ ನಕ್ಸಲ್ ಭಯ ಎಷ್ಟಿತ್ತೆಂದರೆ, ಬುಡಕಟ್ಟು ಜನರು ಬಂದೂಕಿನ ನೆರಳಿನಲ್ಲಿ ಬದುಕು ಸಾಗಿಸಬೇಕಾಗಿತ್ತು. ಹಲವರು ಅನಿವಾರ್ಯವಾಗಿ ನಕ್ಸಲ್ ಸಂಘಟನೆಗಳಿಗೆ ಸೇರಬೇಕಾದ ಪರಿಸ್ಥಿತಿ ಇತ್ತು. ಆದರೆ ಇದೇ ಪ್ರದೇಶದ ಪುಟ್ಟ ಗ್ರಾಮವೊಂದು ನಕ್ಸಲರ ಒತ್ತಡಕ್ಕೆ ಮಣಿಯಲು ನಿರಾಕರಿಸಿತು. ನಕ್ಸಲ್ ಸಿದ್ಧಾಂತದ ಬದಲು ದೇಶಸೇವೆಗಾಗಿ ಖಾಕಿ ಸಮವಸ್ತ್ರ ತೊಡಲು ನಿರ್ಧರಿಸಿದ ಈ ಊರು ಇಂದು 'ಪೊಲೀಸ್ ಗ್ರಾಮ' ಎಂದೇ ಗುರುತಿಸಲ್ಪಡುತ್ತಿದೆ.
ಕಾಂಕೇರ್ ಜಿಲ್ಲೆಯ ಅಂತಾಗಢ್ ಬ್ಲಾಕ್ನಲ್ಲಿರುವ ಕೊಸರೋಂಡಾ ಗ್ರಾಮವನ್ನು ಈಗ 'ಪೊಲೀಸರ ಗ್ರಾಮ' ಎಂದು ಕರೆಯಲಾಗುತ್ತದೆ. ಇಲ್ಲಿನ ಹೆಚ್ಚಿನ ಸಂಖ್ಯೆಯ ಯುವಕರು ಛತ್ತೀಸ್ಗಢ ಪೊಲೀಸ್, ಬಸ್ತರ್ ಫೈಟರ್ಸ್, ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (DRG) ಮತ್ತು ಅರೆಸೇನಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮದ ಬಹುತೇಕ ಪ್ರತಿಯೊಂದು ಕುಟುಂಬವೂ ಒಂದಲ್ಲ ಒಂದು ರೀತಿಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ನಂಟು ಹೊಂದಿದೆ. ಒಂದಾನೊಂದು ಕಾಲದಲ್ಲಿ ಮಾವೋವಾದಿಗಳ ಒತ್ತಡದಲ್ಲಿದ್ದ ಈ ಗ್ರಾಮವು ಇಂದು ಹೊಸ ಪೀಳಿಗೆಯ ಕನಸುಗಳು ಮತ್ತು ಖಾಕಿ ಸಮವಸ್ತ್ರದ ಮೇಲಿನ ಗೌರವಕ್ಕೆ ಜೀವಂತ ಉದಾಹರಣೆಯಾಗಿದೆ.
ಕೊಸರೋಂಡಾ ಗ್ರಾಮದ ಈ ಪಯಣ ಸುಲಭವಾಗಿರಲಿಲ್ಲ. ಬೆಟ್ಟಗುಡ್ಡ, ನದಿ ಮತ್ತು ದಟ್ಟ ಅರಣ್ಯಗಳಿಂದ ಆವೃತವಾಗಿರುವ ಈ ಗ್ರಾಮಕ್ಕೆ ಹಿಂದೆ ಮಾವೋವಾದಿಗಳು ಆಗಾಗ್ಗೆ ಬಂದು ಯುವಕರನ್ನು ತಮ್ಮ ಸಂಘಟನೆಗೆ ಸೇರುವಂತೆ ಒತ್ತಡ ಹೇರುತ್ತಿದ್ದರು. ಆದರೆ ಗ್ರಾಮಸ್ಥರು ಅವರ ನೀತಿಗಳನ್ನು ವಿರೋಧಿಸಿದರು. ಇದಕ್ಕೆ ಅವರು ಭಾರೀ ಬೆಲೆಯನ್ನೂ ತೆರಬೇಕಾಯಿತು. ನಕ್ಸಲರು ಗ್ರಾಮಸ್ಥರಿಗೆ ಬೆದರಿಕೆ ಹಾಕಿ, ವಿರೋಧಿಸಿದ್ದಕ್ಕಾಗಿ 5 ಮಂದಿಯನ್ನು ಹ*ತ್ಯೆ ಮಾಡಿದರು. ಇದರ ನಂತರ ಅನೇಕ ಕುಟುಂಬಗಳು ಮನೆ ತೊರೆದು ಬೇರೆಡೆಗೆ ವಲಸೆ ಹೋಗಬೇಕಾಯಿತು. ಆದರೂ ಗ್ರಾಮಸ್ಥರು ನಕ್ಸಲರಿಗೆ ಬೆಂಬಲ ನೀಡಲಿಲ್ಲ.
ಕಷ್ಟದ ಪರಿಸ್ಥಿತಿಯಲ್ಲೂ ಗ್ರಾಮದ ಹಿರಿಯರು ಯುವಕರಿಗೆ ತಪ್ಪು ದಾರಿಯಲ್ಲಿ ನಡೆಯದೆ ದೇಶಸೇವೆ ಮಾಡುವಂತೆ ಮಾರ್ಗದರ್ಶನ ನೀಡುತ್ತಿದ್ದರು. ಇದರಿಂದ ಪ್ರೇರಿತರಾದ ಯುವಕರು ಗುಟ್ಟಾಗಿ ಪೊಲೀಸ್ ನೇಮಕಾತಿಗೆ ಸಿದ್ಧತೆ ನಡೆಸಿ ಭದ್ರತಾ ಪಡೆಗಳಿಗೆ ಸೇರಲು ಆರಂಭಿಸಿದರು. ಇಂದು ಈ ಗ್ರಾಮದವರು ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ಗಳಂತಹ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ, ಹಲವರು ಅರೆಸೇನಾ ಪಡೆಗಳು ಮತ್ತು ಇತರ ಸರ್ಕಾರಿ ಇಲಾಖೆಗಳಲ್ಲೂ ಉದ್ಯೋಗ ಪಡೆದಿದ್ದಾರೆ.
ಈ ಕುರಿತು ಮಾತನಾಡಿದ ಕಾಂಕೇರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರಾಖೇಚಾ, "ಈ ಭಾಗದಲ್ಲಿ ನಕ್ಸಲರ ಪ್ರಭಾವ ಪ್ರಬಲವಾಗಿದ್ದ ಕಾಲದಲ್ಲೂ ಕೊಸರೋಂಡಾ ಜನರು ದೇಶಸೇವೆಯ ದಾರಿ ಆರಿಸಿಕೊಂಡರು. ಗ್ರಾಮದ ಆರಂಭಿಕ ಯುವಕರ ಈ ನಿರ್ಧಾರವು ಇತರರಿಗೂ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡಿತು. ಪೊಲೀಸ್ ಇಲಾಖೆಯಿಂದ 'ಮಿಷನ್ ರಕ್ಷಾ' ಅಡಿಯಲ್ಲಿ ಯುವಕರಿಗೆ ನೇಮಕಾತಿಗಾಗಿ ಉಚಿತ ತರಬೇತಿ ನೀಡಲಾಗುತ್ತಿದೆ. ಆಯ್ಕೆಯಾದ ಯುವಕರು ರಜೆಯಲ್ಲಿ ಊರಿಗೆ ಬಂದಾಗ ತಮ್ಮ ಅನುಭವ ಹಂಚಿಕೊಂಡು, ಇತರ ಆಕಾಂಕ್ಷಿಗಳಿಗೆ ಸಿದ್ಧತೆಗೆ ನೆರವಾಗುತ್ತಾರೆ. ಇದರಿಂದ ಹೊಸ ಪೀಳಿಗೆಗೆ ಮುಂದೆ ಸಾಗಲು ಧೈರ್ಯ ಸಿಗುತ್ತದೆ" ಎಂದು ತಿಳಿಸಿದರು.
ಅಂತಾಗಢ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಸರೋಂಡಾ ನಿವಾಸಿ, ಪೊಲೀಸ್ ಸಿಬ್ಬಂದಿ ಮಾಸೂರಾಮ್ ದರ್ರೋ ಮಾತನಾಡಿ, "ಕಾಡುಗಳಿಂದ ಸುತ್ತುವರಿದಿರುವುದರಿಂದ ಗ್ರಾಮದಲ್ಲಿ ನಕ್ಸಲರ ಓಡಾಟ ಹೆಚ್ಚಿತ್ತು. ಸಂಘಟನೆಗೆ ಸೇರುವಂತೆ ಒತ್ತಡ ಹೇರುತ್ತಿದ್ದರು, ಆದರೆ ಗ್ರಾಮಸ್ಥರು ಅದನ್ನು ವಿರೋಧಿಸಿ ಗಂಭೀರ ಪರಿಣಾಮಗಳನ್ನು ಎದುರಿಸಿದರು" ಎಂದರು.
ಇದೇ ಗ್ರಾಮದ ಯುವಕ ಚಾಮ್ರು ರಾಮ್ ಕಾವಡು ಮಾತನಾಡಿ, "ನಾನು 12ನೇ ತರಗತಿವರೆಗೆ ಓದಿದ್ದು, ಪೊಲೀಸ್ ಇಲಾಖೆಗೆ ಸೇರಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. ಎತ್ತರ ಕಡಿಮೆ ಇರುವ ಕಾರಣ ಇದುವರೆಗೆ ಆಯ್ಕೆಯಾಗಿಲ್ಲ. ಆದರೆ ಬುಡಕಟ್ಟು ಯುವಕರಿಗೆ ದೈಹಿಕ ಮಾನದಂಡಗಳಲ್ಲಿ ಸಡಿಲಿಕೆ ನೀಡುವ ಸುದ್ದಿಯಿಂದ ನನಗೆ ಹೊಸ ಭರವಸೆ ಮೂಡಿದೆ" ಎಂದು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.