ಕೊಟ್ಟದ್ದು ಪಡೆದದ್ದು ದಕ್ಕಿದ್ದು ಸಿಕ್ಕಿದ್ದು

By Kannadaprabha NewsFirst Published Sep 3, 2018, 1:52 PM IST
Highlights

ಒಂದೂರಿನಲ್ಲಿ ಪ್ರವಚನ ಕೇಳುತ್ತಾ ಕೂತಿದ್ದಾಗ ನಡೆದ ಒಂದು ಪ್ರಸಂಗವನ್ನು ಗುರುಗಳು ನೆನಪಿಸಿಕೊಂಡರು:

ಆವತ್ತು ಮಹಾಭಾರತದ ಕುರಿತು ಪುರಾಣಿಕರು ಮಾತಾಡುತ್ತಿದ್ದರು. ಅವರು ಪಾಂಡವರ ವನವಾಸದ ಕತೆ ಹೇಳುತ್ತಾ ದ್ರೌಪದಿಗೆ ಅಕ್ಷಯ ಪಾತ್ರೆ ಸಿಕ್ಕ ಕತೆಯನ್ನು ವಿವರಿಸುತ್ತಿದ್ದರು. ದ್ರೌಪದಿಗೆ ಸೂರ್ಯದೇವ ಒಂದು ಅಕ್ಷಯ ಪಾತ್ರೆಯನ್ನು ಕೊಡುತ್ತಾನೆ. ದ್ರೌಪದಿ ಆ ಪಾತ್ರೆಯಿಂದ ಎಷ್ಟು ಮಂದಿಗೆ ಬೇಕಿದ್ದರೂ ಅಡುಗೆ ಮಾಡಿ ಬಡಿಸಬಹುದು ಅನ್ನುವ ವರವನ್ನೂ ಕೊಡುತ್ತಾರೆ. ಒಂದೇ ಒಂದು ಕರಾರು ಎಂದರೆ ದ್ರೌಪದಿ ಊಟ ಮಾಡಿ ಪಾತ್ರೆ ತೊಳೆದಿಟ್ಟ ನಂತರ ಆ ದಿನ ಅದರಿಂದ ಏನೂ ಹುಟ್ಟುವುದಿಲ್ಲ.

ಒಂದು ಸಲ ದ್ರೌಪದಿ ಊಟ ಮಾಡಿ ಪಾತ್ರೆ ತೊಳೆದಿಟ್ಟ ನಂತರ ದೂರ್ವಾಸ ಮುನಿಗಳು ಪಾಂಡವರ ಆಶ್ರಮಕ್ಕೆ ಬರುತ್ತಾರೆ. ಹಸಿವಾಗಿದೆ, ಊಟಕ್ಕೆ ಸಿದ್ಧತೆ ಮಾಡಿ, ನಾವು ಸ್ನಾನ ಮುಗಿಸಿ ಬರುತ್ತೇವೆ ಅನ್ನುತ್ತಾರೆ. ದ್ರೌಪದಿ ಕಂಗಾಲಾಗಿ ಪಾತ್ರೆ ತೊಳೆದಿಟ್ಟಿದ್ದೇನೆ ಅನ್ನುತ್ತಾಳೆ. ಕೃಷ್ಣ ಅದೇ ಪಾತ್ರೆಯನ್ನು ತಾ ಎಂದು ಹೇಳುತ್ತಾನೆ. ಆ ಪಾತ್ರೆಯಲ್ಲಿ ಒಂದು ಅಗುಳು ಅನ್ನ ಅಂಟಿಕೊಂಡಿರುತ್ತದೆ. ಕೃಷ್ಣ ಅದನ್ನೇ ತಿಂದು ತೇಗುತ್ತಾನೆ. ಸ್ನಾನಕ್ಕೆ ಹೋದ ದೂರ್ವಾಸರ ಪರಿವಾರಕ್ಕೆಲ್ಲ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಅವರು ಊಟಕ್ಕೇ ಬರದೇ ಅಲ್ಲಿಂದಲೇ ಹೊರಟು ಹೋಗುತ್ತಾರೆ.

ಈ ಕತೆಯ ನೀತಿ ಏನು ಎಂದು ಕೇಳಿದಾಗ ಅಲ್ಲಿದ್ದ ತುಂಟನೊಬ್ಬ ಮಹಾಭಾರತದ ಕಾಲದಲ್ಲೂ ಹೆಣ್ಮಕ್ಕಳು ಸರಿಯಾಗಿ ಪಾತ್ರೆ ತೊಳೀತಿರಲಿಲ್ಲ ಸ್ವಾಮಿಗಳೇ ಎಂದು ಉತ್ತರ ಕೊಟ್ಟ. ನಮ್ಮ ಮನಸ್ಸು ಯೋಚಿಸುವುದೇ ಹೀಗೆ. ನಾವು ಪವಾಡವನ್ನು ಗಮನಿಸುವುದೇ ಇಲ್ಲ. ಎಲ್ಲವನ್ನೂ ನಮ್ಮ ಐಹಿಕ ಬದುಕಿನ ಆಗುಹೋಗುಗಳಿಗೆ ಹೋಲಿಸಿ ನೋಡುತ್ತೇವೆ. ಕೃಷ್ಣ ಒಂದು ಅಗುಳು ಅನ್ನ ತಿಂದ ತಕ್ಷಣ ದೂರ್ವಾಸರು ಮತ್ತು ಅವರ ಪರಿವಾರದ ಹೊಟ್ಟೆ ತುಂಬಿದಂತೆ ಆದದ್ದು ಹೇಗೆ? ಅದು ಎಂಥಾ ಪವಾಡ ಅಲ್ಲವೇ? ಅದನ್ನು ಯೋಚಿಸಿದರೆ ಬೆರಗಾಗುತ್ತೇವೆ. ದ್ರೌಪದಿ ಸರಿಯಾಗಿ ಪಾತ್ರೆ ತೊಳೆಯಲಿಲ್ಲ ಅಂತ ಯೋಚಿಸಿದರೆ ಮತ್ತೆ ಅದೇ ಸಂಸಾರಕ್ಕೆ ಮರಳುತ್ತೇವೆ. ಇಂಥ ಕತೆಗಳಿರುವುದೇ ನಮ್ಮನ್ನು ಈ ಚಕ್ರದಿಂದ ಹೊರಗೆ ತಳ್ಳುವುದಕ್ಕೆ. ಆದರೆ ನಾವು ಮತ್ತೆ ಅಲ್ಲೇ ಬೀಳುತ್ತಿರುತ್ತೇವೆ.

ಶ್ರೀಮಂತನೊಬ್ಬ ದೇವರ ಹತ್ತಿರ ನೀನು ನನಗೇನೂ ಕೊಡಲಿಲ್ಲ. ಎಲ್ಲವನ್ನೂ ನಾನೇ ಕಷ್ಟಪಟ್ಟು ಸಂಪಾದಿಸ ಬೇಕಾಯಿತು. ದುಡಿದು ದುಡಿದೂ ಹೈರಾಣಾಗಿ ಹೋದೆ ಎಂದು ಗೋಳಾಡುತ್ತಿದ್ದನಂತೆ. ಆಗ ದೇವರು ಹೇಳಿದನಂತೆ; ನೀನು ಯಾಕೆ ಒದ್ದಾಡಿದೆಯೋ ನನಗೆ ಅರ್ಥವಾಗುತ್ತಿಲ್ಲ. ನಾನು ನಿನಗೆ ಇಡೀ ಜಗತ್ತನ್ನೇ ಕೊಟ್ಟೆ. ನೀನು ಅರ್ಧ ಎಕರೆ ಜಾಗ ಸಾಕು ಅಂತ ಭಾವಿಸಿಕೊಂಡು ಅದಕ್ಕೆ ಗೋಡೆ ಬಾಗಿಲು ಕಿಟಕಿ ಇಡುವುದಕ್ಕೆ ಕಷ್ಟಪಟ್ಟೆ. ನಾನು ಇಡೀ ಕಾಡನ್ನೇ ನಿನಗೆ ಕೊಟ್ಟೆ, ನೀನು ಪುಟ್ಟ ತೋಟ ಮಾಡಲಿಕ್ಕೆ ಒದ್ದಾಡಿದೆ. ನಾನು ಇಡೀ ಆಕಾಶವನ್ನೇ ನಿನಗೆ ಕೊಟ್ಟೆ, ನೀನು ಬೆಳಕಿಂಡಿಗೋಸ್ಕರ ಕಷ್ಟಪಟ್ಟೆ. ನಾನು ಮಳೆಯನ್ನೇ ಸುರಿಸಿದೆ, ನೀನು ಬಿಂದಿಗೆಗೋಸ್ಕರ ಜೀವ ಸವೆಸಿದೆ. ನಾನು ಸೂರ್ಯನನ್ನೇ ಕೊಟ್ಟರೆ, ನೀನು ದೀಪ ಹಚ್ಚುವುದಕ್ಕೆ ಹೆಣಗಾಡುತ್ತಿದ್ದೆ. ಕೊಟ್ಟದ್ದನ್ನು ಕಾಣದೇ ಹೋದವನು, ಕಂಡಿದ್ದನ್ನು ಪಡೆಯಲಿಕ್ಕೆ
ಜೀವ ತೇಯಬೇಕಾಗುತ್ತದೆ. ನಮ್ಮ ಮುಂದೆ ಇಡೀ ಜೀವನವೇ ಇರುತ್ತದೆ ನಾವು ಈ ಕ್ಷಣವನ್ನು ಹಿಡಿಯಲು ಹೆಣಗಾಡುತ್ತಿರುತ್ತೆವೆ.
 

click me!