2020ರ ನಿಮ್ಮ ಕಾಸ್ಟ್ಯೂಮ್ಸ್ ಗೆ ನಮ್ಮ ಪ್ಲ್ಯಾನ್ ಏನ್ ಗೊತ್ತಾ?

By Anusha ShettyFirst Published Jan 3, 2020, 11:51 AM IST
Highlights

ಹೊಸ ವರ್ಷಕ್ಕೆ ಕಾಲಿಟ್ಟಾಗಿದೆ. ಈಗಾಗಲೇ ನೀವು ಅನೇಕ ವಿಷಯಗಳಿಗೆ ಸಂಬಂಧಿಸಿ ಒಂದಿಷ್ಟು ರೆಸಲ್ಯೂಶನ್‍ಗಳನ್ನು ಕೈಗೊಂಡಿರಬಹುದು. ಅವುಗಳಲ್ಲಿ 2020ರಲ್ಲಿ ನಿಮ್ಮ ಕಾಸ್ಟ್ಯೂಮ್ಸ್ ಹೇಗಿರಬೇಕು ಎಂಬುದೂ ಸೇರಿದೆಯಾ? ಇಲ್ಲವೆಂದಾದ್ರೆ ನಿಮ್ಮ ಈ ವರ್ಷದ ಫ್ಯಾಷನ್ ಪ್ಲ್ಯಾನ್ ಹೇಗಿರಬೇಕು ಎನ್ನುವುದಕ್ಕೆ ಇಲ್ಲಿವೆ 8 ಟಿಪ್ಸ್.

2020ಕ್ಕೆ ಭರ್ಜರಿ ಸ್ವಾಗತ ನೀಡಿದ್ದೇವೆ. ಪಾರ್ಟಿ, ಮಸ್ತಿ ಮೂಡ್‍ನಿಂದ ಈಗ ತಾನೇ ಹೊರಬಂದು ನಿತ್ಯದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಸಮಯದಲ್ಲಿ ಈ ವರ್ಷದ ಟ್ರೆಂಡ್ಸ್, ಫ್ಯಾಷನ್ ಬಗ್ಗೆಯೂ ಸ್ವಲ್ಪ ಯೋಚಿಸುವುದು ಅಗತ್ಯವಲ್ಲವೆ? ಈ ವರ್ಷ ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ಹೇಗಿರಬೇಕು ಎಂಬ ಬಗ್ಗೆ
ಯೋಚಿಸಿದ್ದೀರಾ? ಇಲ್ಲವೆಂದಾದರೆ ಈ ವರ್ಷದ ಫ್ಯಾಷನ್ ರೆಸಲ್ಯೂಶನ್ಸ್ ಕೈಗೊಳ್ಳಲು ಇದೇ ರೈಟ್ ಟೈಮ್.
ಕಳೆದ ದಶಕ ಫ್ಯಾಷನ್ ಲೋಕದಲ್ಲಿನ ಸಾಕಷ್ಟು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಈಗ ಹೊಸ ವರ್ಷಕ್ಕೆ ಪದಾರ್ಪಣೆ ಮಾಡಿದ್ದೇವೆ, ಈ ಸಂದರ್ಭದಲ್ಲಿ ಹೊಸ ಟ್ರೆಂಡ್‍ಗಳ ನಿರೀಕ್ಷೆಯಲ್ಲಿರುವ ನಾವು, ನಮ್ಮ ಉಡುಗೆ-ತೊಡುಗೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ತರುವ ಬಗ್ಗೆ ಫ್ಲ್ಯಾನ್ ಸಿದ್ಧಪಡಿಸಬೇಕಿದೆ. ಹಾಗಾದ್ರೆ
2020ರ ನಿಮ್ಮ ಕಾಸ್ಟ್ಯೂಮ್ಸ್ ಬಗ್ಗೆ ಏನೆಲ್ಲ ಪ್ಲ್ಯಾನ್ ಮಾಡಬಹುದು?
1.ವಾರ್ಡ್‍ರೋಪ್ ತೆರೆದು ನೋಡಿ: ಈ ವರ್ಷ ನೀವು ಯಾವ ವಿನ್ಯಾಸದ ಡ್ರೆಸ್‍ಗಳನ್ನು ಹೆಚ್ಚಾಗಿ ಬಳಸಲು ಇಷ್ಟಪಡುತ್ತೀರಿ ಎಂಬುದನ್ನು ನಿರ್ಧರಿಸುವ ಮುನ್ನ ವಾರ್ಡ್‍ರೋಪ್ ತೆರೆದು ನೋಡಿ. ಎಷ್ಟೋ ಬಾರಿ ನಮ್ಮ ಬಳಿ ಯಾವೆಲ್ಲ ಕಲರ್‍ನ, ವಿನ್ಯಾಸದ ಡ್ರೆಸ್‍ಗಳಿವೆ ಎಂಬುದು ನಮಗೇ ತಿಳಿದಿರುವುದಿಲ್ಲ. ಅಲ್ಲಿರುವ
ಯಾವೆಲ್ಲ ಡ್ರೆಸ್‍ಗಳನ್ನು ಈ ವರ್ಷವೂ ಬಳಸಬಹುದು ಎಂಬುದನ್ನು ನಿರ್ಧರಿಸಿ. ಈ ವರ್ಷ ಅಪ್ಪಿತಪ್ಪಿಯು ಧರಿಸಲೇಬಾರದು ಎಂದೆನಿಸುವ ಡ್ರೆಸ್‍ಗಳಿಗೆ ವಾರ್ಡ್‍ರೋಪ್‍ನಿಂದ ಗೇಟ್‍ಪಾಸ್ ನೀಡಿ. ಆ ಬಳಿ ಉಳಿದ ಎಲ್ಲ ಡ್ರೆಸ್‍ಗಳನ್ನು ನೀಟಾಗಿ ಮಡಚಿ ಜೋಡಿಸಿಡಿ. 
2. ಶೂ ಸ್ಟ್ಯಾಂಡ್‍ನಲ್ಲಿ ಏನಿದೆ?: ಲೇಡಿಸ್‍ಗೆ ಡ್ರೆಸ್‍ನಷ್ಟೇ ಆಕರ್ಷಣೆಯವಾದ ಇನ್ನೊಂದು ವಸ್ತುವೆಂದರೆ ಅದು ಶೂಗಳು. ನಿಮ್ಮ ಶೂ ಸ್ಟ್ಯಾಂಡ್‍ನಲ್ಲಿ ನಾನಾ ವಿನ್ಯಾಸದ ಚಪ್ಪಲಿಗಳಿರುತ್ತವೆ. ಅವುಗಳನ್ನು ನೀಟಾಗಿ ಜೋಡಿಸಿಡಿ. ಈಗಾಗಲೇ ವಾರ್ಡ್‍ರೋಪ್‍ನಲ್ಲಿರುವ ಡ್ರೆಸ್‍ಗಳ ಬಗ್ಗೆ ನಿಮಗೊಂದು ಸ್ಪಷ್ಟವಾದ ಚಿತ್ರಣ
ಸಿಕ್ಕಿದೆ. ಹೀಗಾಗಿ ಯಾವ ಡ್ರೆಸ್‍ಗೆ ಯಾವ ವಿನ್ಯಾಸದ, ಬಣ್ಣದ ಚಪ್ಪಲಿ ಮ್ಯಾಚ್ ಆಗುತ್ತೆ ಎಂಬ ಲೆಕ್ಕಾಚಾರವನ್ನು ಮನಸ್ಸಿನಲ್ಲೇ ಮಾಡಿಟ್ಟುಕೊಳ್ಳಿ.
3. ಜ್ಯುವೆಲ್ಲರಿ ಬಾಕ್ಸ್ ತೆರೆದು ನೋಡಿ: ಜ್ಯುವೆಲ್ಲರಿ ಬಾಕ್ಸ್ ತೆರೆದು ಅದರೊಳಗಿರುವ ಬಾಳೆಗಳು, ನೆಕ್ಲೇಸ್‍ಗಳು, ಕಿವಿಯೋಲೆಗಳನ್ನೊಮ್ಮೆ ಪರಿಶೀಲಿಸಿ. ಎಷ್ಟೋ ಬಾರಿ ಯಾವುದೋ ಎಕ್ಸಿಬೀಷನ್‍ಗೆ ಹೋದಾಗ ಇಷ್ಟವಾಯಿತೆಂದು ಖರೀದಿಸಿ ತಂದ ಕಿವಿಯೋಲೆಯನ್ನು ಜೋಪಾನವಾಗಿ ಜ್ಯುವೆಲ್ಲರಿ ಬಾಕ್ಸ್ ನೊಳಗೆ
ಹಾಕಿರುತ್ತೀರಿ. ಆದರೆ, ಅದನ್ನು ಬಳಸಲು ಮರೆತಿರುತ್ತೀರಿ. ಹೀಗೆ ಬಳಸದ ಅನೇಕ ಜ್ಯುವೆಲ್ಲರಿಗಳು ನಿಮ್ಮ ಬಳಿಯಿರಬಹುದು. ಅವುಗಳನ್ನೆಲ್ಲ ಈ ವರ್ಷ ಹೊರತೆಗೆದು ಧರಿಸಿ ಖುಷಿಪಡುವ ಬಗ್ಗೆ ಯೋಚಿಸಿ.
4. ಓಲ್ಡ್ ಈಸ್ ಗೋಲ್ಡ್: ನಿಮ್ಮ ಬಳಿ ಹಳೆಯದಾದ ಜ್ಯುವೆಲ್ಲರಿಗಳಿದ್ದರೆ ಅದನ್ನು ಈ ಬಾರಿ ಧರಿಸಿ. ಅದೇರೀತಿ ಹಬ್ಬ ಅಥವಾ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಅಮ್ಮನ ಹಳೆಯ ಸೀರೆಗಳನ್ನು ಉಡುವ ಬಗ್ಗೆಯೂ ಯೋಚಿಸಬಹುದು. ಈಗಂತೂ ಟ್ರೆಂಡಿಯಾಗಿರುವ ರಂಗುರಂಗಿನ ಬ್ಲೌಸ್‍ಗಳಂತೂ ಎಲ್ಲೆಂದರಲ್ಲಿ
ಸಿಗುತ್ತವೆ. ಹೀಗಿರುವಾಗ ಅಮ್ಮನ ಸೀರೆಗೆ ನೀವೊಂದು ಟ್ರೆಂಡಿ ಬ್ಲೌಸ್ ಮ್ಯಾಚ್ ಮಾಡಿ ಧರಿಸಿದರೆ ಗುಂಪಿನಲ್ಲಿ ಮಿಂಚುವುದಂತೂ ಗ್ಯಾರಂಟಿ.
5. ಲೋಕಲ್ ಡಿಸೈನರ್ಸ್‍ಗೆ ಪ್ರಾಮುಖ್ಯತೆ ನೀಡಿ: ಈ ವರ್ಷ ನೀವು ಡ್ರೆಸ್ ಖರೀದಿಸುವಾಗ  ಸ್ಥಳೀಯ ಡಿಸೈನರ್‍ಗಳು ವಿನ್ಯಾಸ ಪಡಿಸಿದ ಡ್ರೆಸ್‍ಗಳು ಕಣ್ಣಿಗೆ ಬಿದ್ದರೆ ತಪ್ಪದೆ ಖರೀದಿಸಿ. ಖಾದಿ, ಕೈ ಮಗ್ಗದ ಬಟ್ಟೆಗಳು, ಹ್ಯಾಂಡ್‍ಮೇಡ್ ಎಂಬ್ರಾಯಿಡರಿ ಹೊಂದಿರುವ ಉಡುಪುಗಳಿಗೆ ಪ್ರಾಮುಖ್ಯತೆ ನೀಡಿ. ಇದರಿಂದ ಸ್ಥಳೀಯ
ಡಿಸೈನರ್‍ಗಳು,ಆರ್ಟಿಸ್ಟ್ ಗಳಿಗೆ  ಪ್ರೋತ್ಸಾಹ ನೀಡಿದಂತಾಗುತ್ತದೆ.
6. ಗಮನಿಸಿ, ಅನುಸರಿಸಿ: ಫ್ಯಾಷನ್ ಲೋಕದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ನೀವು ಕೂಡ ಅದಕ್ಕೆ ತಕ್ಕದಾಗಿ ಹೆಜ್ಜೆ ಹಾಕಲು ಸಾಧ್ಯ. ಹಾಗಾಗಿ ಈ ವರ್ಷ ಬದಲಾಗುವ ಟ್ರೆಂಡ್‍ಗಳನ್ನು ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸ ಬೆಳೆಸಿಕೊಳ್ಳಿ.
ಇದರಿಂದ ಆ ಟ್ರೆಂಡ್ ಅಳವಡಿಸಿಕೊಳ್ಳುವುದು ನಿಮಗೆ ಸುಲಭವಾಗುತ್ತದೆ.
7. ನಿಮ್ಮ ಕಾಸ್ಟ್ಯೂಮ್ಸ್ ನಿಮ್ಮ ಡಿಸೈನ್: ಇನ್ನೊಬ್ಬರನ್ನು ಅನುಕರಿಸುವ ಬದಲು ನೀವೇ ಏಕೆ ಒಂದು ಟ್ರೆಂಡ್ ಕ್ರಿಯೇಟ್ ಮಾಡಬಾರದು ಎಂಬ ಬಗ್ಗೆ ಯೋಚಿಸಿ. ಅಂದ್ರೆ ನಿಮ್ಮ ಕಾಸ್ಟ್ಯೂಮ್ಸ್ ಹೇಗಿರಬೇಕು ಎಂದು ಸ್ನೇಹಿತರನ್ನು ಅಥವಾ ಸೆಲೆಬ್ರಿಟಿಗಳನ್ನು ನೋಡಿ ನಿರ್ಧರಿಸುವ ಬದಲು ನಿಮ್ಮ ಕ್ರಿಯೇಟಿವಿಟಿ ಬಳಸಿ
ನೀವೇ ಡಿಸೈನ್ ಮಾಡಿ. 
8. ವೇರ್ ಇಟ್ ಆಂಡ್ ಲವ್ ಇಟ್: ಯಾವುದೇ ಕಾಸ್ಟ್ಯೂಮ್ ಚೆನ್ನಾಗಿ ಕಾಣಬೇಕೆಂದರೆ ಅದನ್ನು ಧರಿಸಿದವರ ಮುಖದಲ್ಲಿ ಆತ್ಮವಿಶ್ವಾಸ ಇರಬೇಕು. ನೀವು ಧರಿಸಿರುವ ಕಾಸ್ಟ್ಯೂಮ್ಸ್ ನಿಮ್ಮ ಮನಸ್ಸಿಗೆ ಹಿತ ನೀಡಿದರೆ ಮಾತ್ರ ನಿಮ್ಮಲ್ಲಿ ಆತ್ಮವಿಶ್ವಾಸ ಕಾಣಿಸುತ್ತದೆ. ಹೀಗಾಗಿ ನೀವು ತೊಟ್ಟ ಉಡುಗೆಯನ್ನು ಮನಸಾರೆ
ಮೆಚ್ಚಿಕೊಳ್ಳಿ. 
 

click me!