ಆಯಾಸವಿಲ್ಲದ ಪ್ರವಾಸಕ್ಕಿವೆ ಹತ್ತಾರು ದಾರಿಗಳು

By Suvarna News  |  First Published Jan 3, 2020, 11:35 AM IST

ಇಂದು ಗೊತ್ತು ಪರಿಚಯವಿಲ್ಲದ ಊರಲ್ಲಿ ನೀವು ಯಾವುದೇ ಗೊಂದಲವಿಲ್ಲದೆ ಆರಾಮವಾಗಿ ಸುತ್ತಾಡಿಕೊಂಡು ಬರಬಹುದು. ಜಗತ್ತಿನ ಯಾವುದೋ ಮೂಲೆಯಲ್ಲಿರುವ ತಾಣದ ಬಗ್ಗೆ ಮನೆಯಲ್ಲೇ ಕುಳಿತು ಮಾಹಿತಿ ಕಲೆ ಹಾಕಿ ಸುತ್ತಾಟಕ್ಕೆ ಯೋಜನೆ ರೂಪಿಸಬಹುದು. ಹೆಣ್ಣೆಂಬ ಕಾರಣಕ್ಕೆ ಟ್ರಾವೆಲಿಂಗ್‍ಗೆ ಒಂಟಿಯಾಗಿ ಹೋಗಬಾರದು ಎನ್ನುವ ಕಾಲ ಈಗಿಲ್ಲ. ಹೆಣ್ಣುಮಕ್ಕಳು ಹೆಗಲಿಗೊಂದು ಬ್ಯಾಗ್ ಏರಿಸಿಕೊಂಡು ಒಂಟಿಯಾಗಿ ವಿಶ್ವ ಪರ್ಯಟನೆಗೆ ಹೊರಡುವಷ್ಟು ಬದಲಾಗಿದೆ ಪ್ರವಾಸೋದ್ಯಮ ಕ್ಷೇತ್ರ.


ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು, ಅಲ್ಲಿನ ನೋಟವನ್ನು ಕಣ್ತುಂಬಿಸಿಕೊಂಡು ವೈವಿಧ್ಯಮಯ ಖಾದ್ಯಗಳ ರುಚಿ ಸವಿಯುವುದೆಂದರೆ ಕೆಲವರಿಗೆ ಅಚ್ಚುಮೆಚ್ಚು. ಅನ್ಯ ದೇಶ, ರಾಜ್ಯಗಳ ಜನರ ಜೀವನಶೈಲಿ, ಆಚಾರ- ವಿಚಾರಗಳ
ಬಗ್ಗೆ ತಿಳಿದುಕೊಂಡು ಜ್ಞಾನ ಹೆಚ್ಚಿಸಿಕೊಳ್ಳುವ ಖಯಾಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ನೀವು ಕೂಡ ಕಾಲಿಗೆ ಗಾಲಿ ಕಟ್ಟಿಕೊಂಡು ಊರೂರು ಸುತ್ತುವವರಾಗಿದ್ದರೆ ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರಗಳಲ್ಲಾಗುತ್ತಿರುವ ಕೆಲವೊಂದು
ಬದಲಾವಣೆಗಳನ್ನು ಗಮನಿಸಿರುತ್ತೀರಿ. ಕಳೆದ ಕೆಲವು ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಾಂತ್ರಿಕ ಕ್ರಾಂತಿಯ ಜೊತೆಗೆ ವಸತಿ ವ್ಯವಸ್ಥೆ ಹಾಗೂ ಸುರಕ್ಷತಾ ಸೌಲಭ್ಯಗಳು ಸುಧಾರಿಸಿವೆ. ಜೊತೆಗೆ ಈ ಕ್ಷೇತ್ರ ಸಾಕಷ್ಟು
ಬಂಡವಾಳವನ್ನು ಆಕರ್ಷಿಸುತ್ತಿರುವ ಜೊತೆಗೆ ತನ್ನ ಆದಾಯವನ್ನೂ ಹೆಚ್ಚಿಸಿಕೊಂಡಿದೆ. ಟ್ರಾವೆಲಿಂಗ್ ಇಷ್ಟಪಡುತ್ತಿರುವವರ ಸಂಖ್ಯೆ ಹೆಚ್ಚಿದಂತೆ ಅಲ್ಲೊಂದಿಷ್ಟು ಬದಲಾವಣೆಗಳು ಕೂಡ ಗೋಚರಿಸುತ್ತಿವೆ.

ಸೆಲ್ಫಿ ಇಲ್ಲಂದ್ರೆ ಟೂರ್ ಅಪೂರ್ಣ: ನಿಮ್ಮಿಷ್ಟದ ತಾಣಕ್ಕೆ ಭೇಟಿ ನೀಡಿದ ಮೇಲೆ ಸೆಲ್ಫಿ ತೆಗೆದಿಲ್ಲವೆಂದ್ರೆ ನಿಮ್ಮ ಟೂರ್ ಅಪೂರ್ಣವೆಂದೇ ಅರ್ಥ. ಬೇರೆಯವರ ಬಳಿ ನಿಮ್ಮ ಫೋಟೋ ಕ್ಲಿಕಿಸಲು ಹೇಳುವುದು ಓಲ್ಡ್ ಸ್ಟೈಲ್. ಈಗೇನಿದ್ರೂ
ಕುಟುಂಬ ಸದಸ್ಯರು ಅಥವಾ ಸ್ನೇಹಿತರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವುದು ಫ್ಯಾಷನ್. ಈ ಸೆಲ್ಫಿಯಿಂದಾಗಿ ಫೋಟೋ ತೆಗೆಯುತ್ತಿರುವವರು ಫ್ರೇಮ್‍ನಿಂದ ಮಿಸ್ ಆಗುವ ಪ್ರಮೇಯ ಎದುರಾಗುವುದಿಲ್ಲ. ಆದರೆ, ಈ ಸೆಲ್ಫಿ ಚಟಕ್ಕೆ
ಬಿದ್ದು ಅಪಾಯವನ್ನೂ ಲೆಕ್ಕಿಸದೆ ಪ್ರಾಣ ಕಳೆದುಕೊಂಡವರ ಸಂಖ್ಯೆಯೂ ಕಡಿಮೆಯೇನಿಲ್ಲ. ಅಲ್ಲದೆ, ಸೆಲ್ಫಿ ತೆಗೆಯುವ ಗಲಾಟೆ ಉಳಿದ ಪ್ರವಾಸಿಗರಿಗೆ ಕಿರಿಕಿರಿಯನ್ನೂ ಉಂಟು ಮಾಡುತ್ತಿದೆ. ಇದೇ ಕಾರಣಕ್ಕೆ ಜಗತ್ತಿನ ಕೆಲವು
ಪ್ರವಾಸಿತಾಣಗಳಲ್ಲಿ ಸೆಲ್ಫಿ ನಿಷೇಧಿಸಲಾಗಿದೆ. 

Tap to resize

Latest Videos

ಪ್ರಕೃತಿ ಪ್ರಿಯರಿಗೆ ಬೆಸ್ಟ್ ಹನಿಮೂನ್ ಸ್ಪಾಟ್ಸ್

ಎಲ್ಲವೂ ಆನ್‍ಲೈನ್‍ಮಯ: ಒಂದೇ ಕ್ಲಿಕ್‍ನಲ್ಲಿ ಈಗ ಜಗತ್ತಿನ ಯಾವುದೇ ಪ್ರವಾಸಿ ತಾಣಕ್ಕೆ ಟಿಕೆಟ್, ಹೋಟೆಲ್ ಬುಕ್ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಆ ನಗರದಲ್ಲಿರುವ ಹೋಟೆಲ್‍ಗಳಲ್ಲಿ ನಿಮ್ಮ ಬಜೆಟ್‍ಗೆ ಯಾವುದು
ಹೊಂದುತ್ತದೆ ಎಂದು ಲೆಕ್ಕಾಚಾರ ಹಾಕಬಹುದು. ಆನ್‍ಲೈನ್‍ನಲ್ಲಿ ನೀವು ಭೇಟಿ ನೀಡಲಿರುವ ಪ್ರದೇಶ ಹಾಗೂ ಅದರ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕುರಿತ ಸಾಕಷ್ಟು ಮಾಹಿತಿ ಕೂಡ ಲಭ್ಯವಾಗುತ್ತದೆ. ಅವುಗಳನ್ನು ಆಧರಿಸಿ
ನೀವು ಯಾವೆಲ್ಲ ತಾಣಗಳಿಗೆ ಭೇಟಿ ನೀಡಬಹುದು ಎಂದು ಮೊದಲೇ ಪ್ಲ್ಯಾನ್ ಸಿದ್ಧಪಡಿಸಬಹುದು.

ಟೂರ್ ಪ್ಯಾಕೇಜ್‍ಗಳಿಗೆ ಡಿಮ್ಯಾಂಡ್: ಈಗ ಗೊತ್ತು ಪರಿಚಯವಿಲ್ಲದ ಸ್ಥಳಗಳಿಗೆ ಹೋಗಲು ಯಾವುದೇ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಟ್ರಾವೆಲ್ ಏಜೆನ್ಸಿಗಳನ್ನು ಸಂಪರ್ಕಿಸಿದರೆ ಸಾಕು, ನೀವು ಬಯಸಿದ ತಾಣಗಳಿಗೆ
ಕರೆದುಕೊಂಡು ಹೋಗಿ, ಸುತ್ತಾಡಿಸಿ ನಿಮ್ಮನ್ನು ಸೇಫಾಗಿ ಮರಳಿ ಮನೆ ಸೇರಿಸುತ್ತಾರೆ. ಟ್ರಾವೆಲ್ ಏಜೆನ್ಸಿಗಳಲ್ಲಿ ವಿವಿಧ ಟೂರ್ ಪ್ಯಾಕೇಜ್‍ಗಳಿರುತ್ತವೆ. ನಿಮ್ಮ ಬಜೆಟ್, ಸಮಯಾವಕಾಶ ಆಧರಿಸಿ ಪ್ಯಾಕೇಜ್‍ಗಳನ್ನು ಆಯ್ಕೆ
ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಪ್ಯಾಕೇಜ್‍ಗಳನ್ನು ಆಧರಿಸಿ ಟ್ರಾವೆಲಿಂಗ್ ಹೋಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 

ಲಿಮಿಟೆಡ್ ಬಜೆಟ್‌ನಲ್ಲಿ ವಿಶ್ವ ಪರ್ಯಟನೆ ಮಾಡೋದು ಹೇಗೆ?

ಹೆಚ್ಚುತ್ತಿರುವ ಒಂಟಿ ಮಹಿಳಾ ಪಯಣಿಗರ ಸಂಖ್ಯೆ: ಮಹಿಳೆಯರು ಒಂಟಿ ಪಯಣಕ್ಕೆ ಮುಂದಾಗುತ್ತಿದ್ದಾರೆ. ಟ್ರಾವೆಲಿಂಗ್‍ನಲ್ಲಿ ಆಸಕ್ತಿಯಿರುವ ಮಹಿಳೆಯರು ಪುಟ್ಟ ಗುಂಪು ಕಟ್ಟಿಕೊಂಡು ವಿಶ್ವ ಪರ್ಯಟನೆಗೆ ಹೋಗುತ್ತಿರುವುದು ಇತ್ತೀಚೆಗೆ
ಫ್ಯಾಷನ್ ಆಗಿದೆ. ಮಹಿಳೆಯರು ಸಂಗಾತಿ ಅಥವಾ ಕುಟುಂಬ ಸದಸ್ಯರನ್ನು ಕಾಯದೆ ಏಕಾಂಗಿಯಾಗಿ ಅಥವಾ ಸ್ನೇಹಿತೆಯರ ಜೊತೆ ಸೇರಿ ಬಯಸಿದ ತಾಣಗಳಿಗೆ ಟೂರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಇದಕ್ಕೆ ತಕ್ಕನ್ನಾಗಿ ಕೆಲವು ಪ್ರವಾಸಿ
ತಾಣಗಳು ಕೂಡ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಪ್ರಾರಂಭಿಸಿವೆ. 

ಸೋಷಿಯಲ್ ಮೀಡಿಯಾವೇ ಬೆಸ್ಟ್ ಗೈಡ್: ಫೇಸ್‍ಬುಕ್, ಇನ್‍ಸ್ಟ್ರಾಗ್ರಾಂಗಳಲ್ಲಿ ಪೋಸ್ಟ್ ಮಾಡುವ ಫೋಟೋಗಳು ಹಾಗೂ ಅಭಿಪ್ರಾಯಗಳನ್ನು ಆಧರಿಸಿ ವಿವಿಧ ಪ್ರವಾಸಿ ತಾಣಗಳ ಕುರಿತು ಹೆಚ್ಚಿನ ಮಾಹಿತಿ ಲಭಿಸುತ್ತಿದೆ.
ಪ್ರತ್ಯಕ್ಷದರ್ಶಿಗಳ ಅನುಭವ ಆಧರಿಸಿ ಯಾವ ತಾಣಕ್ಕೆ ಭೇಟಿ ನೀಡುವುದು ಸೂಕ್ತ ಎಂಬ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿದೆ. ಇಂದು ಅನೇಕ ಮಂದಿ ಫೇಸ್‍ಬುಕ್ ಅಥವಾ ಇನ್‍ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿರುವ
ಫೋಟೋಗಳನ್ನು ನೋಡಿ ಆ ಸ್ಥಳಕ್ಕೆ ಭೇಟಿ ನೀಡುವ ಯೋಜನೆ ರೂಪಿಸುತ್ತಾರೆ.

ಬಜೆಟ್ ಏರ್ ಲೈನ್ಸ್: ಇಂದು ಮಧ್ಯಮ ವರ್ಗದ ಜನರು ಕೂಡ ವಿದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿರುವುದಕ್ಕೆ ಮುಖ್ಯಕಾರಣ ಬಜೆಟ್ ಏರ್ಲೈನ್ಸ್. ಇವು ಕಡಿಮೆ ದರದಲ್ಲಿ ಟಿಕೆಟ್ ಒದಗಿಸುವ ಮೂಲಕ ವಿದೇಶಿ ತಾಣಗಳನ್ನು
ನೋಡುವ ಅನೇಕರ ಕನಸನ್ನು ನನಸಾಗಿಸುತ್ತಿವೆ. 

ವೈಟ್‌ಹೌಸ್ ರಹಸ್ಯ ಬಯಲು

ಸದ್ದು ಮಾಡುತ್ತಿರುವ ಇಕೋ ಟೂರಿಸಂ: ಇಕೋ ಟೂರಿಸ್‍ಂ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ನಿಸರ್ಗದ ಮಡಿಲಲ್ಲಿ ನಲಿಯುವುದು, ಕಲಿಯುವುದು ಇದರ ಮುಖ್ಯ ಉದ್ದೇಶ. ಕಲಿಕೆ, ಸಂಶೋಧನೆ, ಪರಿಸರಸ್ನೇಹಿ
ಚಟುವಟಿಕೆಗಳಿಗಾಗಿ ನೈಸರ್ಗಿಕವಾಗಿ ಸಂಪದ್ಭರಿತವಾದ ತಾಣಗಳಿಗೆ ಭೇಟಿ ನೀಡುವುದು ವಿದೇಶಗಳಲ್ಲಿ ಹೆಚ್ಚುತ್ತಿದೆ. 

click me!