ವಿವಾಹ ಎಂದರೆ ಇಬ್ಬರು ಪ್ರೀತಿಯಿಂದ ಸಹಬಾಳ್ವೆ ನಡೆಸಲು ಮನಸ್ಪೂರ್ವಕವಾಗಿ ಒಪ್ಪಿ ನಿರ್ಧರಿಸುವ ಬಂಧ. ಕಷ್ಟಸುಖಗಳನ್ನು ಹಂಚಿ ಜೀವನದಲ್ಲಿ ಒಟ್ಟಾಗಿ ಹೆಜ್ಜೆಯಿರಿಸುವ ಆಣೆ. ಮನಸ್ಸು ದೇಹಗಳ ಸಮ್ಮಿಲನ. ಆತ್ಮಸಂಗಾತಕ್ಕೆ ಅಣಿ ಇಡುವ ಹೆಜ್ಜೆ. ಆದರೆ, ಸಮಾಜದ ಕೆಲವು ಕಟ್ಟುಪಾಡುಗಳು, ಮನಸ್ಥಿತಿಯಿಂದಾಗಿ ಯಾವುಯಾವುದೋ ತಪ್ಪು ಕಾರಣಗಳಿಗಾಗಿ ಹಲವರು ಮದುವೆಯಾಗಬೇಕಾಗುತ್ತದೆ. ಹೀಗೇ ಸಮಾಜ ಹೇರುವ ಒತ್ತಡಗಳು ಒಂದೆರಡಲ್ಲ... ಅಂಥ ಕೆಲವು ಒತ್ತಡಗಳು ಹಾಗೂ ಅದಕ್ಕಾಗಿ ವಿವಾಹವಾಗುವ ಕಾರಣಗಳು ಯಾವುವು ನೋಡೋಣ...
ಮುರಿದ ಪ್ರೀತಿ
ಪ್ರೀತಿ ಮುರಿದುಬಿದ್ದಿರುತ್ತದೆ. ಹೃದಯ ಒಡೆದು ಚೂರಾಗಿರುತ್ತದೆ. ಆಗ ಆ ಹೃದಯವನ್ನು ಉಳಿಸಿಕೊಳ್ಳಲು, ಬೇರೊಬ್ಬರೊಂದಿಗೆ ಮದುವೆಯನ್ನು ರಿಹ್ಯಾಬಿಲಿಟೇಶನ್ ಸೆಂಟರ್‌ನಂತೆ ಬಳಸಿಕೊಳ್ಳುವವರು ಕೆಲವರು. ಮತ್ತೆ ಕೆಲವರು ಹಳೆಯ ಪ್ರೇಮಿಗೆ ಉರಿಸಬೇಕೆಂದೂ ಮದುವೆಯಾಗುವ ಮಹನೀಯರಿದ್ದಾರೆ! ಇನ್ನು ಕೆಲವರು ಪ್ರೀತಿ ಮಾಡುತ್ತಿದ್ದಾರೆಂದು ತಿಳಿದ ತಕ್ಷಣವೇ ಕುಟುಂಬ ಒತ್ತಾಯಪೂರ್ವಕವಾಗಿ ತಾವು ನೋಡಿದ ವ್ಯಕ್ತಿಯೊಂದಿಗೆ ಮದುವೆ ಮಾಡಿಬಿಡುತ್ತದೆ. ಕುಟುಂಬದವರ ಒತ್ತಡ, ಬೆದರಿಕೆಗೆ ಹೆದರಿ ಬೇರೊಬ್ಬರನ್ನು ಮದುವೆಯಾಗಿಬಿಡುತ್ತಾರೆ.
undefined
ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ 'ಎಸ್' ಆಗಿದ್ದಲ್ಲಿ, ನಿಮ್ಮ ಸಂಬಂಧಕ್ಕೆ ಆಯಸ್ಸು ಜಾಸ್ತಿ!
ಎಲ್ಲರಿಗಿಂತ ದೊಡ್ಡ ಮಗಳು/ಮಗ
ಆಕೆಗೆ ಸಾವಿರ ಗುರಿಗಳಿರಬಹುದು. ಆದರೆ, ಭಾರತೀಯ ಪೋಷಕರು ಅದರಲ್ಲೂ ಹೆಣ್ಣು ಮಕ್ಕಳ ಪೋಷಕರು, ಆಕೆಯ ಇಷ್ಟಕಷ್ಟಗಳನ್ನೇನೂ ಕೇಳದೆ, ಅವಳಿಗೆ ವಿವಾಹ ಮಾಡದೆ ಎರಡನೆಯವಳಿಗೆ ಮಾಡುವುದು ಹೇಗೆ ಎಂಬ ಚಿಂತೆಗೆ ಬಿದ್ದು, ಆಕೆಯ ಮೇಲೆ ಒತ್ತಡ ಹೇರಲಾರಂಭಿಸುತ್ತಾರೆ. ತಂಗಿಗೆ ವಿವಾಹ ಮಾಡುವುದರಿಂದ ಅಕ್ಕನಿಗೇನೂ ಸಮಸ್ಯೆ ಇಲ್ಲದಿದ್ದರೂ, ಈಕೆಗೆ ವಿವಾಹ ಇಷ್ಟವಿಲ್ಲದಿದ್ದರೂ, ಅಕ್ಕನ ವಿವಾಹ ಮಾಡದೆ ತಂಗಿಗೆ ಮಾಡಿದರೆ ಸಮಾಜ ಏನಂದೀತು ಎಂಬ ದೂರಾಲೋಚನೆ ಮಾಡುತ್ತಾ ಅಕ್ಕನನ್ನು ಹರಕೆಯ ಕುರಿಯಂತೆ ಹಟಕ್ಕೆ ಬಿದ್ದು ವಿವಾಹ ಬಂಧನಕ್ಕೆ ದೂಡುತ್ತಾರೆ.
ಗೆಳೆಯರ ಒತ್ತಡ
ತಮ್ಮೆಲ್ಲ ಗೆಳೆಯರಿಗೂ ಮದುವೆಯಾಯಿತು, ಮತ್ತೊಬ್ಬನಿಗೆ ಎರಡು ಮಕ್ಕಳು, ಮಗದೊಬ್ಬಗೆ ವಿವಾಹ ಗೊತ್ತಾಗಿದೆ. ಇದೇ ಕಾರಣಕ್ಕೆ ಕೆಲವರು ತಾವು ಹಿಂದೆ ಬಿದ್ದೇವೆಂಬ ವಿಚಿತ್ರ ಆತಂಕದಲ್ಲಿ ಮದುವೆಯಾದರೆ, ಮತ್ತೆ ಕೆಲವರ ಪೋಷಕರು ಇದರಿಂದ ಆತಂಕಗೊಂಡು ಮದುವೆಯ ಒತ್ತಡ ಹೇರುತ್ತಾರೆ. ಹೀಗಾದಾಗ ನೀವು ಗೆಳೆಯರನ್ನು ಬದಲಿಸಬೇಕೇ ಹೊರತು ಮೆರೈಟಲ್ ಸ್ಟೇಟಸ್‌ನಲ್ಲ!
ವಯಸ್ಸಾಯಿತು
ಎಷ್ಟು ವಯಸ್ಸಾದರೆ ವಯಸ್ಸಾಯಿತು ಎಂಬುದಕ್ಕೆ ಯಾವ ಮಾನದಂಡಗಳಿಲ್ಲವಾದರೂ 26 ದಾಟುತ್ತಿದ್ದಂತೆ ಭಾರತೀಯ ಯುವತಿಯರ ಪೋಷಕರಿಗೆ ಆತಂಕ ಕಾಡಲಾರಂಭಿಸುತ್ತದೆ. ಇಷ್ಟು ವಯಸ್ಸಾದರೂ ಮದುವೆ ಮಾಡದಿದ್ದರೆ ಸಮಾಜ ಏನಂದೀತು ಎಂದು ಚಿಂತಿಸುತ್ತಾರೆ. ಯುವತಿ, ಯುವಕರಿಗೂ ಹೋದಲ್ಲಿ ಬಂದಲ್ಲೆಲ್ಲ ಕನಿಷ್ಠ ನೂರು ಮಂದಿ ಅವರ ವಯಸ್ಸನ್ನು ಎಳೆ ತಂದು ಇನ್ನೂ ಯಾವಾಗ ಮದುವೆ, ತಡವಾಯಿತು ಎಂದು ಜ್ಞಾಪಿಸುತ್ತಿರುತ್ತಾರೆ.
ಹೆಚ್ಚು ಆಕರ್ಷಕವಾಗಿ ಕಾಣಲು ವೈಜ್ಞಾನಿಕವಾಗಿ ಸಾಬೀತಾದ ವಿಧಾನಗಳಿವು!
30 ದಾಟಿದರಂತೂ ಅಯ್ಯೋ ಮಕ್ಕಳೇ ಆಗಲ್ಲ ಎನ್ನುವ ಮಟ್ಟಿಗೆ ಮಾತನಾಡುತ್ತಾರೆ. ಇವರಿಗೆ ಮದುವೆ ಬೇಕೋ, ಮಕ್ಕಳು ಬೇಕೋ ಬೇಡವೋ ಯಾವುದನ್ನೂ ಯೋಚಿಸದೆ, ವಯಸ್ಸಾಯಿತೆಂಬ ಕಾರಣಕ್ಕೆ ಮಕ್ಕಳಿಗೆ ಮದುವೆ ಮಾಡುವವರು ಹಲವರು.
ಆರ್ಥಿಕ ಭದ್ರತೆ, ಸೋಷ್ಯಲ್ ಸ್ಟೇಟಸ್
ಆರ್ಥಿಕ ಭದ್ರತೆಗಾಗಿ ವಿವಾಹವಾಗುವವರು ಕೆಲವರು, ಸಮಾಜದಲ್ಲಿ ತಮಗೊಂದು ಸ್ಥಾನ ಸಿಗುತ್ತದೆ ಎಂದು ಮದುವೆಯಾಗುವವರು ಮತ್ತೆ ಕೆಲವರು. ಗಂಡನಾಗುವವನ ಬಳಿ ಸಿಕ್ಕಾಪಟ್ಟೆ ಹಣ, ಆಸ್ತಿ ಇದೆ ಎಂಬ ಒಂದೇ ಕಾರಣಕ್ಕೆ ಮದುವೆಯಾಗುವ ಕೆಲ ಸಣ್ಣ ವಯಸ್ಸಿನ ಹುಡುಗಿಯರಿಗೆ- ಹಣವು ಸಂತೋಷವನ್ನು ಕೊಳ್ಳಲಾರದು ಎಂಬುದು ಅರ್ಥವಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.
ಈ ವಿಚಾರದಲ್ಲಿ ಬಡಪಾಯಿ ಹುಡುಗರನ್ನು ಅರ್ಥ ಮಾಡ್ಕೋಳೋದೆ ಕಷ್ಟ!
ಸಂಪ್ರದಾಯ
ಎಲ್ಲರೂ ಮದುವೆಯಾಗುತ್ತಾರೆ, ಹಿಂದಿನಿಂದ ಇದು ಹೀಗೇ ನಡೆದುಬಂದಿದೆ. ಅದಕ್ಕಾಗಿ ತಾನೂ ಆಗುತ್ತಿದ್ದೇನೆ ಎಂಬ ಉದ್ದೇಶದಲ್ಲಿ ಮದುವೆಯಾಗುವವರೂ ಇದ್ದಾರೆ. ಆದರೆ, ಎಲ್ಲರೂ ಮದುವೆಯಾಗಲೇ ಬೇಕೆಂಬ ನಿಯಮ ಎಲ್ಲೂ ಇಲ್ಲ. ಮದುವೆಯಾಗಬೇಕಲ್ಲಾ ಎಂದು ಮದುವೆಯಾಗುವುದು ಮೂರ್ಖತನವಲ್ಲವೇ?