
ಡಾ| ಕೆ.ಎಸ್. ಪವಿತ್ರ
ಸಂಸ್ಕೃತದ ‘ಸ್ತನ’, ಕನ್ನಡದ ‘ಮೊಲೆ’ ಎಂದೆಲ್ಲಾ ಕರೆಯುವುದಕ್ಕಿಂತ ಅಮ್ಮನ ಹಾಲು ಕೊಡುವ ದೇಹದ ಭಾಗವನ್ನು ‘ಅಮ್ಮಿ’ ಎನ್ನುವುದೇ ನನಗೆ ಹೆಚ್ಚು ಆಪ್ತ! ‘ಅಮ್ಮ’ ಎನ್ನುವ ಪದಕ್ಕೆ, ಅದಕ್ಕೆ ಅಂಟಿಕೊಂಡಂತೆಯೇ ಇರುವ ಭಾವನಾತ್ಮಕ ನಂಟಿಗೂ, ಮಕ್ಕಳು ಕುಡಿಯುವ ಹಾಲಿಗೂ ಸಂಬಂಧವಿದೆ ಎಂಬುದನ್ನೇನೂ ನಮಗೆ ಯಾವುದೇ ಸಂಶೋಧನೆಗಳು ತೋರಿಸಬೇಕಾಗಿಲ್ಲ.
ಅಮ್ಮನ ‘ಅಮ್ಮಿ’ ಹಾಲು ಸವಿದ ನೆನಪು ನನಗಿಲ್ಲ. ಆದರೆ ಎರಡೂವರೆ ವರ್ಷಗಳ ಕಾಲ ಸಮೃದ್ಧವಾಗಿ ‘ಅಮ್ಮಿ’ ಕುಡಿದೆನೆಂದು ನನ್ನ ಅಮ್ಮ ಈಗಲೂ ನೆನೆಸುತ್ತಾರೆ. ‘ಅಮ್ಮಿ’ ಬಿಡಿಸುವಾಗ ಗಜ್ಜುಗದ ಕಹಿ ಹಚ್ಚಿದರೆ, ಲೋಟದಲ್ಲಿ ನೀರು ತಂದು ‘ತೊಳೆದು ಬಿಡು’ ಎಂದು ತೊದಲು ನುಡಿಯುತ್ತಿದ್ದೆನಂತೆ. ಹಾಗೆ ಮಾಡದಿದ್ದಾಗ ‘ಕಹಿಯಾದರೂ ಪರವಾಗಿಲ್ಲ, ಚೀಪಿದರೆ ಆಮೇಲೆ ಸಿಹಿ ಸಿಕ್ಕೇ ಸಿಕ್ಕುತ್ತದೆ’ ಎಂದು ಕುಡಿದೇ ಬಿಡುತ್ತಿದ್ದೆನಂತೆ! ಅಂತೂ ಹೇಗೋ ಕಷ್ಟಪಟ್ಟು ಅಮ್ಮ ‘ಆಮ್ಮಿ’ ಬಿಡಿಸಿದರಂತೆ. ಒಟ್ಟಿನಲ್ಲಿ ಕೈಯೆತ್ತಿ ‘ನಾನು ತಾಯಿ ಹಾಲು ಕುಡಿದು ಬೆಳೆದವಳು’ ಎಂದು ನಾನು ಧೈರ್ಯದಿಂದ ಹೇಳಿಕೊಳ್ಳಲು ಯಾವ ಅಡ್ಡಿಯೂ ಇಲ್ಲ.
ಮಗು Lefty ನಾ Righty? ತಾಯಿ ಎದೆ ಹಾಲುಣಿಸುವಾಗ್ಲೇ ಗೊತ್ತಾಗುತ್ತೆ!
ಅಮ್ಮನ ‘ಅಮ್ಮಿ’ ಹಾಲು ಕುಡಿದು ಬೆಳೆದ ನನಗೆ ಹುಟ್ಟಿದ ಇಬ್ಬರು ಮಕ್ಕಳು ನನ್ನನ್ನು ನಿಜವಾಗಿ ‘ಅಮ್ಮೀಜಾನ್’ ಮಾಡಿಬಿಟ್ಟರು! ‘ಮಮ್ಮಿ’ಯ ‘ಅಮ್ಮಿ’ ಕುಡಿಯುವುದು ಎಂದರೆ ಅವಕ್ಕೆ ಒಂದು ವರ್ಷದ ಹೊತ್ತಿಗೆ ಚಟವಾಗಿ ಬಿಟ್ಟಿತ್ತು. ‘ಅಮ್ಮಿ ಕುಡಿಸುವುದು’ ಎಂದರೆ ನಮ್ಮ ‘ವೈದ್ಯಕೀಯ’ ಹೇಳುವಷ್ಟುಸುಲಭವಾಗಲೀ ಅಥವಾ ಭಾವನಾಮಯ ಜಗತ್ತು ಹೇಳುವಂತೆ ‘ಧನ್ಯತೆಯ ವಿಷಯವಷ್ಟೇ ಆಗಲಿ ಅಲ್ಲ’ ಎಂಬುದು ಬಹುಬೇಗ ನನಗೆ ಗೊತ್ತಾಗಿಬಿಟ್ಟಿತ್ತು. ಅದರಲ್ಲಿಯೂ ಮಲೆನಾಡ ಚಳಿಗಾಲ-ಮಳೆಗಾಲಗಳಲ್ಲಿ ಹುಟ್ಟಿದ ನನ್ನ ಕಂದಮ್ಮಗಳಿಗೆ ಬಾಯಿಗೆ ಅಮ್ಮಿ, ಬೆಚ್ಚಗಿರಲು ಅಮ್ಮನ ಮೈ ರಾತ್ರಿಯಂತೂ ‘ಫುಲ್ ಟೈಂ’ ಬೇಕಾಗಿತ್ತು.
ಬೆಳಿಗ್ಗೆ ಕೆಲಸಕ್ಕೆ ಹೋಗಿ ರೋಗಿಗಳನ್ನು ನೋಡಿ, ರಾತ್ರಿ ನಿದ್ರಿಸಲೇಬೇಕಾದ ಅನಿವಾರ್ಯ ಅಗತ್ಯವಿದ್ದ ನನಗೆ, ರಾತ್ರಿ ನಿದ್ರೆಯಲ್ಲಿ ಏಳಬೇಕಾದಾಗ, ಎದ್ದು ಹಾಲು ಕುಡಿಸಬೇಕಾದಾಗ ಮುದ್ದು ಮಕ್ಕಳೇ ಆದರೂ ಸಿಟ್ಟು ಬರುತ್ತಿತ್ತು. ಹೊಡೆಯಲಾರದೆ, ಬೈಯ್ಯಲಾರದೆ ಒಳಗೇ ನುಂಗಿಕೊಂಡು ಹಾಲು ಕುಡಿಸುವ ಕಷ್ಟ‘ಅಮ್ಮ’ಂದಿರಿಗೆ ಮಾತ್ರ ಗೊತ್ತಾಗಲು ಸಾಧ್ಯ. ಮುದ್ದು ಮಕ್ಕಳು ‘ಅಮ್ಮಿ’ ಸಿಕ್ಕೊಡನೆ ಕುಡಿಯುತ್ತಾ ಹಾಗೇ ನಿದ್ದೆ ಮಾಡಿಬಿಡುತ್ತಿದ್ದವು. ನಿಧಾನವಾಗಿ ‘ಅಮ್ಮಿ’ ಬಿಡಿಸಿ ಮತ್ತೊಂದೆಡೆ ಮಗ್ಗುಲು ಬದಲಿಸಲಾಗಲೀ, ಮಗುವನ್ನು ಮಲಗಿಸಿ ನಾನೂ ಮಲಗಲಾಗಲಿ ‘ಎಲ್ಲಿ ಮಗು ಮತ್ತೆ ಎದ್ದೀತೋ’ ಎಂಬ ಭಯ! ನಿದ್ರೆಯ ಆಸೆಯಿಂದ, ಮಗುವಿಗೆ ಹಾಲುಣಿಸಬೇಕು ಎಂಬ ಭಾವದಿಂದ ನಾನು ಕಂಡುಕೊಂಡದ್ದು ಮಲಗಿಕೊಂಡೇ ‘ಅಮ್ಮಿ’ ಕುಡಿಸುವ ಉಪಾಯ. ಹಿರಿಯರು ಗದರಿಸಿದರೂ, ಮಕ್ಕಳು ಕೊಸರಾಡಿದರೂ ಕೊನೆಗೂ ನಾನು ಮಲಗಿಕೊಂಡೇ ಮಕ್ಕಳ ಹೊಟ್ಟೆತುಂಬಿಸಿದೆ, ನಾನು ಮಕ್ಕಳು ಇಬ್ಬರೂ ಸುಖ ನಿದ್ರೆ ಮಾಡುವಂತೆ ಸಾಧಿಸಿದೆ.
ನನ್ನಮ್ಮ ‘ಅಮ್ಮಿ’ ಬಿಡಿಸಿದಾಗ, ಎರಡೂವರೆ ವರ್ಷ ಕುಡಿಸಿದ್ದರಿಂದ ಅವರಿಗೆ ನಿರಾಳವೇ ಆಗಿರಬಹುದು. ಆದರೆ ಮಕ್ಕಳು ಕೊಡುವ ಕಷ್ಟಗಳ ನಡುವೆಯೂ, ನನಗೆ ಮಾತ್ರ ‘ಅಮ್ಮಿ’ ಬಿಡಿಸಬೇಕಾದಾಗ ಆದ ಸಂಕಟ ಅಷ್ಟಿಷ್ಟಲ್ಲ. ‘ನಾನು - ನನ್ನ ಮಗು’ ಎಂಬ ಬೇರಾರಿಗೂ ಸಿಕ್ಕದ ಒಂದು ಬಂಧವನ್ನು ಕಡಿದು ಹಾಕಿದ ಕ್ಷಣಗಳು ಅವು. ಮಗು ಅಮ್ಮ ಹಾಲೂಡುವುದಿಲ್ಲವೆಂದು ಅತ್ತಂತೆ, ಅತ್ತು-ಅತ್ತು ಗಂಟಲು ಕೀರಲಾದಂತೆ ನಾನೂ ಮೌನವಾಗಿ ಮನದಲ್ಲೇ ಅತ್ತಿದ್ದೆ. ಮನೋವಿಜ್ಞಾನ ಮಧ್ಯವಯಸ್ಕ ಮಹಿಳೆಯರಲ್ಲಿ ‘ಬರಿದಾದ ಗೂಡು’ -empty nest Syndrome ಎಂಬ ಭಾವದ ಬಗೆಗೆ ಉಲ್ಲೇಖಿಸುತ್ತದೆ. ಮಕ್ಕಳೆಲ್ಲರೂ ತಮ್ಮ ತಮ್ಮ ಕೆಲಸ, ಮನೆ ಎಂದು ಹೊರಹೋದಾಗ ತಾಯಂದಿರ ‘ಕೈ ಖಾಲಿ’ ಎಂಬ ಅನಿಸಿಕೆ ಮೂಡಿಸುವ ಖಿನ್ನ ಭಾವ ತಾಯಿಯನ್ನು ಕಾಡುತ್ತದೆ. ಅದೇ ತರಹದ ಭಾವ ‘ಅಮ್ಮಿ ಬಿಡಿಸಿದ’ ಆ ಗಳಿಗೆಗಳಲ್ಲಿ ನನ್ನನ್ನು ಕಾಡಿತ್ತು. ಅಲ್ಲಿಯವರೆಗೆ ಮನೆಯ ಬೇರಾರೂ ಮಗುವಿಗೆ ಕೊಡಲಾಗದ ಒಂದು ಅಮೂಲ್ಯ ವಸ್ತು ನನ್ನ ಬಳಿ ಇತ್ತು. ನಾನು ಮಾತ್ರ ಮಗುವಿಗೆ ಅದನ್ನು ಕೊಡಬಹುದಿತ್ತು. ಮಗುವಿಗೆ ಅದು ಬಹು ಪ್ರಿಯವೂ ಆಗಿತ್ತು! ಬಿಡಿಸಿದ ಕ್ಷಣಗಳಲ್ಲಿ ಮಗುವಿಗೆ ನಾನು ಇತರರಂತೆಯೇ ಎನಿಸಿಬಿಡುತ್ತದೆ ಎಂದು ನನಗನ್ನಿಸಿತ್ತು.
ಮಗುವಿಗೆ ಎದೆ ಹಾಲು ಕಮ್ಮಿ ಆಗ್ತಿದ್ಯಾ? ಇದನ್ನು ತಿಂದು ನೋಡಿ...
ಆದರೆ ಅಮ್ಮಿ ಬಿಡಿಸಿದ ನಂತರದ ದಿನಗಳಲ್ಲಿಯೇ ನಾನು ಮಕ್ಕಳನ್ನು ಅತ್ತರೆ ಸುಮ್ಮನಾಗಿಸುವ ಇತರ ತಂತ್ರಗಳನ್ನು ಕಲಿತದ್ದು, ಅಲ್ಲಿಯವರೆಗೆ ಮಗು ಅತ್ತರೆ ಮಗುವನ್ನೆತ್ತಿಕೊಂಡು ಒಂದೆಡೆ ಕುಳಿತು ಹಾಲೂಡುತ್ತಿದ್ದೆ, ಮಗು ಸುಮ್ಮನಾಗುತ್ತಿತ್ತು.ಅಮ್ಮಿ ಬಿಡಿಸಿದ ಮೇಲೆ, ಬೇರೆಯವರಿಗಿಂತ ಮಕ್ಕಳಿಗೆ ನಾನು ‘ಬೇರೆ’ ಎನಿಸಬೇಕು ಎಂಬ ಆಸೆಯಿಂದಲೇ ವಿವಿಧ ರೀತಿಗಳಲ್ಲಿ ಅವರನ್ನು ರಂಜಿಸುವ ಪ್ರಯತ್ನ ಮಾಡುತ್ತಿದ್ದೆ.
ನನ್ನಮ್ಮನ ಕಾಲದಲ್ಲಿ ಅಮ್ಮಿ ಕುಡಿಸುತ್ತಿದ್ದದ್ದು ಸಂಪೂರ್ಣ ಅರಿವಿನಿಂದಲ್ಲ, ಅನಿವಾರ್ಯತೆಯಿಂದ. ಶಿಶು ಆಹಾರದ ದುಬಾರಿ ಖರ್ಚು, ಮಗುವಿನ ಹಠ ಇವು, ಜೊತೆಗೇ ತಾಯಿ ಮನೆಯಲ್ಲಿಯೇ ಇರುವ ಸಾಧ್ಯತೆ ಇವು ಮಕ್ಕಳಿಗೆ ಹಾಲಿನ ಅಮೃತ ಸಿಗುವಂತೆ ಮಾಡುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಸ್ತನ್ಯಪಾನದ ಅವಶ್ಯಕತೆ ತಾಯಿ-ಮಗು ಇಬ್ಬರ ಆರೋಗ್ಯದ ಅಗತ್ಯಗಳಾಗಿ ಬದಲಾಗಿಬಿಟ್ಟಿವೆ.
ಮನೋವೈಜ್ಞಾನಿಕವಾಗಿ ಸಿಗ್ಮಂಡ್ ಫ್ರಾಯ್ಡ್ ಹುಟ್ಟಿನಿಂದ ಒಂದು ವರ್ಷದವರೆಗೆ ಮನೋಲೈಂಗಿಕ (Psychosexual) ಬೆಳವಣಿಗೆಯ ಮೊದಲ ಹಂತವಾಗಿ, ಅದನ್ನು ಬಾಯಿ ಹಂತವಾಗಿ (oral stage ) ಗುರುತಿಸುತ್ತಾನೆ. ಭರವಸೆ, ವಿಶ್ವಾಸ, ನಂಬಿಕೆಗಳು ಮುಂದಿನ ಸಂಬಂಧಗಳಲ್ಲಿ ಬೆಳೆಯಬೇಕಾದರೆ ಈ ಹಂತದ ಪ್ರಾಮುಖ್ಯವನ್ನು ಹೇಳುತ್ತಾನೆ. ಈ ಹಂತದಷ್ಟೇ ಮುಖ್ಯ ‘ಅಮ್ಮಿ ಬಿಡಿಸುವ’ Weaning ಹಂತ. ಇಲ್ಲಿಯೂ ಸ್ವತಂತ್ರವಾಗಿ ಮಗು ಬೆಳೆಯಬೇಕಾದರೆ ತನಗೆ ಬೇಕಾದ್ದನ್ನು ಪಡೆಯುವಾಗ ಕೆಲಕಾಲ ತಡವಾಗುವುದನ್ನು ಸಹಿಸಿಕೊಳ್ಳುವ ಸ್ವಭಾವ ಬೆಳೆಸಿಕೊಳ್ಳಬೇಕಾದರೆ ಈ ಹಂತವೂ ಬಹುಮುಖ್ಯ ಪಾತ್ರ ವಹಿಸುತ್ತದೆ.
ಮಗು ಅಳ್ತಿದೆ ಎಂದ ಕೂಡಲೇ ಹಾಲುಣಿಸಬೇಡಿ
ಆದರೆ ಮಗುವಿಗೆ ಹಾಲು ಕುಡಿಸುವಾಗ ಅಮ್ಮನಿಗೆ ಮುಖ್ಯ ಎನಿಸುವುದು ತನಗೆ ಅದರಿಂದಾಗುವ ಲಾಭಗಳಾಗಲೀ, ಅಥವಾ ಮಗುವಿನ ಬುದ್ಧಿ-ಮನಸ್ಸುಗಳ ಬೆಳವಣಿಗೆಯಾಗಲೀ ಎನ್ನುವುದಕ್ಕಿಂತ ತನ್ನ, ಮಗುವಿನ ಖಾಸಗೀ ಕ್ಷಣಗಳನ್ನು ಈ ಹಾಲೂಡುವ ಪ್ರಕ್ರಿಯೆ ಸೃಷ್ಟಿಮಾಡುತ್ತದೆ ಎನ್ನುವ ಸತ್ಯದಿಂದ. ಹಲ್ಲು ಬಂದಾಗ ಮಗು ಕೆಲವೊಮ್ಮೆ ‘ಕಟಂ’ ಎಂದು ಕಡಿಯುವ, ಅಮ್ಮಿಯೊಂದಿಗೆ ಆಟವಾಡುವ, ಹಾಲು ಕುಡಿದು ‘ಪುರ್‌್ರ’ ಎಂದು ಹಾರಿಸುವ ಕ್ಷಣಗಳನ್ನು ಹಾಗಾಗಿಯೇ ಅಮ್ಮಂದಿರು ಆನಂದಿಸುತ್ತಾರೆ. ಮಕ್ಕಳಿಗೆ ಹಾಲೂಡಿಸುವುದರಿಂದ ಆಗಬಹುದಾದ ಬಹಳಷ್ಟುಲಾಭಗಳಿಗಿಂತ ಈ ‘ಆನಂದ’ವೇ ಬಹುಮುಖ್ಯವಾದದ್ದು, ತಾಯಂದಿರನ್ನು ಹಾಲೂಡಿಸಲು ಪ್ರೇರೇಪಿಸುವಂತಹದ್ದು ಎಂದು ನನಗನ್ನಿಸುತ್ತದೆ. ಮಗುವಿಗೆ ಸುರಕ್ಷತೆಯ, ಸ್ಪರ್ಶದ ಅವ್ಯಕ್ತ ಅನುಭವದ ಪ್ರಥಮ ಪರಿಚಯವೇ ಅಮ್ಮಿ ಸವಿಯುವ ಮೂಲಕ ಎನ್ನಬಹುದು.
ನಾನು ನನ್ನಮ್ಮನ ‘ಅಮ್ಮಿ’ ಕುಡಿದು, ಈಗ ವೈದ್ಯೆಯಾಗಿದ್ದೇನೆ. ಜೊತೆಗೆ ಮಕ್ಕಳನ್ನು ಹೆತ್ತು ‘ಅಮ್ಮ’ನೂ ಆಗಿದ್ದೇನೆ. ಈಗ ನನ್ನ ಕಾಳಜಿ ‘ಅಮ್ಮಿ ಕುಡಿಸುವ ಆನಂದ’ ಗೊತ್ತಿರದ, ಗೊತ್ತಿರದೆ ಕಷ್ಟಪಡುವ, ಅದರಿಂದ ವಂಚಿತರಾಗುವ ಅಮ್ಮ -ಮಕ್ಕಳ ಬಗೆಗೆ. ‘ವಿಶ್ವ ಸ್ತನ್ಯಪಾನ ಸಪ್ತಾಹ’ ನಡೆಯುತ್ತಿದೆ. ‘ಅಪ್ಪ-ಅಮ್ಮಂದಿರನ್ನು ಸಬಲರನ್ನಾಗಿಸಿ, ಸ್ತನ್ಯಪಾನವನ್ನು ಸಾಧ್ಯ ಮಾಡಿ’ ಎಂಬುದು ಈ ಬಾರಿಯ ಧ್ಯೇಯವಾಕ್ಯ. ಅಂದರೆ ಅಮ್ಮಂದಿರನ್ನು ಮಾನಸಿಕವಾಗಿ ಸಬಲರಾಗಿಸಿ, ಆರೋಗ್ಯವಂತ ಕಾಯವನ್ನು ಕಾಯ್ದುಕೊಳ್ಳುವಂತೆ ಮಾಡಿ ‘ಅಮ್ಮಿ ಕುಡಿಸುವ -ಕುಡಿಯುವ ಆನಂದ’ ತಾಯಿ-ಮಗು ಇಬ್ಬರಿಗೂ ದೊರಕುವಂತೆ ಮಾಡಬೇಕು ಅಲ್ಲವೆ?!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.