ಚೊಚ್ಚಲ ಮಗುವಿನ ತಾಯಿ? ಮೂಢನಂಬಿಕೆಗಳಿಗೆ ಗೋಲಿ ಹೊಡಿ!

By Web DeskFirst Published Jun 13, 2019, 6:36 PM IST
Highlights

ತಾಯಿಯಾಗೋ ಸಂತಸ ಬೇರೆಯದೇ. ಅದು ಅನುಭವಿಸಿದವರಿಗೇ ಗೊತ್ತು. ಆದರೆ, ತಾಯಿಯಾಗೋದಂದ್ರೆ ತಲೆನೋವು ಎನ್ನಿಸುವ ಮಟ್ಟಿಗೆ ಸುತ್ತಮುತ್ತಲಿನವರು ತಲೆ ತಿಂದು ಇಲ್ಲಸಲ್ಲದ ನಂಬಿಕೆಗಳನ್ನೆಲ್ಲ ಹೇರಲಾರಂಭಿಸುತ್ತಾರೆ. ಇಂಥ ಮೂಢನಂಬಿಕೆಗಳನ್ನು ಕೊಸರಿ ಮುಂದೆ ಸಾಗಿ. 
 

1. ಕಪ್ಪು ಬಣ್ಣ ವರ್ಜ್ಯ ವರ್ಜ್ಯ ವರ್ಜ್ಯ

ಕಪ್ಪು ಬಣ್ಣದ ಬಟ್ಟೆ ತೊಡಬಾರದು ಎಂಬ ಮಾತು ಹಾಗಿರಲಿ, ಕಪ್ಪು ಬಣ್ಣದಲ್ಲಿರುವ ಯಾವುದನ್ನೂ ತಿನ್ನಬಾರದು ಎಂದು ಕಟ್ಟಪ್ಪಣೆ ಹೊರಡಿಸಿದರೆ ಒಪ್ಪುವುದು ಹೇಗೆ? ಕಪ್ಪು ದ್ರಾಕ್ಷಿ, ಬದನೆ, ಚಾಕೋಲೇಟ್, ರಾಗಿ ... ಹೀಗೆ ಕಪ್ಪಿರುವ ಆಹಾರ ಸೇವಿಸಿದರೆ ಮಗುವೂ ಕಪ್ಪಾಗುತ್ತದೆ ಎಂಬುದು ಹಿರಿಯರು ನೀಡುವ ಕಾರಣ. ಈ ಆಹಾರಗಳನ್ನು ಬಿಟ್ಟರೆ ಕೆಂಪುಕೆಂಪಾದ ಮಗು ಹುಟ್ಟುತ್ತದೆ ಎಂಬುದು ಅವರ ನಂಬಿಕೆ. ಆದರೆ ಜೀನ್ಸ್ ಎಂಬುದು ಒಂದಿರುತ್ತದೆ ಎಂಬ ಕಲ್ಪನೆಯೇ ಅವರಲ್ಲಿರುವುದಿಲ್ಲ.

2. ಗಂಡು ಮಗು ಹುಟ್ಟಿಸೋ ಆಹಾರಗಳು!

ಅವಳಿಜವಳಿ ಮಕ್ಕಳು ಬೇಕೆಂದರೆ ಅಂಟಿಕೊಂಡ ಬಾಳೆಹಣ್ಣು ತಿನ್ನಿ. ಗಂಡು ಮಗು ಬೇಕೆಂದರೆ ಕೆಲ ಆಹಾರಗಳು, ಹೆಣ್ಣು ಮಗುವಿಗೇ ಕೆಲ ಆಹಾರಗಳನ್ನು ಸೇವಿಸಿ ಎಂದು ಈ ಹಿರಿಯರು ಕೆಲವೊಮ್ಮೆ ತಲೆ ತಿನ್ನುವುದಿದೆ. ನೀವು ಪ್ರಗ್ನೆಂಟ್ ಎಂದು ತಿಳಿಯುವ ಮುಂಚೆಯೇ ಮಗುವಿನ ಲಿಂಗ ನಿರ್ಧರಿತವಾಗಿರುತ್ತದೆ. ಅದನ್ನು ಆಹಾರ ಬದಲಿಸುತ್ತದೆಂಬ ಲೆಕ್ಕಾಚಾರಕ್ಕೆ ತಲೆಬುಡವಿಲ್ಲ.

3. ಮಗುವಿಗೆ ಮೈತುಂಬಾ ಕೂದಲಿರಬಾರದೆಂದರೆ ಹಳೆಯ ಆಹಾರ ತಿನ್ನಬಾರದು!

ಹಿಂದಿನ ದಿನದ ಅನ್ನ, ಸಾಂಬಾರ್ ತಿಂದ ಕೂಡಲೇ ಮೈ ತುಂಬಾ ಕೂದಲಿರುವ ಮಗು ಹುಟ್ಟಿದ್ದನ್ನು ಯಾರಾದರೂ ತೋರಿಸಿಕೊಡಿ. ತಾಜಾ ಆಹಾರ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ಸೇವಿಸಬೇಕೇ ಹೊರತು ಕೂದಲಿರದ ಮಗು ಹುಟ್ಟಲಿ ಎಂದಲ್ಲ. 

4. ಜೇನುತುಪ್ಪ ತಿಂದ ಮಕ್ಕಳು ವಿದೇಯರಾಗಿರ್ತಾರೆ!

ಜೇನುತುಪ್ಪವನ್ನು ಪ್ರತಿದಿನ ನವಜಾತ ಶಿಶುವಿನ ನಾಲಿಗೆಗೆ ತಾಕಿಸುತ್ತಾ ಬಂದರೆ ಅಂಥ ಮಕ್ಕಳು ವಿದೇಯತೆ ಕಲಿಯುತ್ತಾರೆ ಎಂಬುದು ಅಜ್ಜಿಯ ನಂಬಿಕೆ. ಜೇನುತುಪ್ಪ ಬಹಳ ಒಳ್ಳೆಯದಿರಬಹುದು. ಆದರೆ ನವಜಾತ ಶಿಶುವಿನ ಆರೋಗ್ಯಕ್ಕಲ್ಲ. ನಿಜವೆಂದರೆ ಪುಟಾಣಿ ಶಿಶುವಿಗೆ ಜೇನುತುಪ್ಪ ಕೊಡಲೇಬಾರದು. 

5. ಮಗುವಿಗೆ ಕನ್ನಡಿ ತೋರಿಸಿದರೆ ಮಾತು ಕಲಿಯುವುದು ನಿಧಾನ

ಅಲ್ಲಾ ಸ್ವಾಮಿ, ಶಿಶುವೇನು ಕನ್ನಡಿ ನೋಡಿಕೊಂಡು, ಇಷ್ಟೊಂದು ಚೆನ್ನಾಗಿದ್ದೇನಲ್ಲ ಎಂದು ಮಂತ್ರಮುಗ್ಧಗೊಂಡು ಮಾತಾನಾಡುವುದನ್ನು ಮರೆಯುತ್ತದೆಯೇ? ಒಂದೊಂದು ಮಗುವೂ ಮಾತನ್ನು ಕಲಿಯುವಲ್ಲಿ ಬೇರೆ ಬೇರೆಯದೇ ಪೊಟೆನ್ಷಿಯಲ್ ಹೊಂದಿರುತ್ತದೆ. ಕನ್ನಡಿ ನೋಡಿದರೂ ಮಾತನಾಡುತ್ತವೆ, ನೋಡದಿದ್ದರೂ ಮಾತನಾಡುತ್ತವೆ. ತಡವಾಗಿ ಮಾತನಾಡುವುದಕ್ಕೆ ಕನ್ನಡಿಯನ್ನು ದೂರುವುದರಲ್ಲಿ ಅರ್ಥವಿಲ್ಲ. 

6. ಮಗುವಿಗೆ ತಣ್ಣೀರು ಸುರಿದರೆ ಅವು ಹೆದರುವುದು ತಪ್ಪುತ್ತದೆ!

ಮಗುವೆಂದ ಮೇಲೆ ಅದಕ್ಕೆ ಈ ಲೋಕ ಹೊಸತು. ಎಲ್ಲ ಮಕ್ಕಳೂ ಆರಂಭದಲ್ಲಿ ಸಣ್ಣಪುಟ್ಟ ಸದ್ದಿಗೂ ಕುಮುಟಿ ಬೀಳುತ್ತಿರುತ್ತವೆ. ಹಾಗಂತ ಅವನ್ನು ಕೂರಿಸಿಕೊಂಡು ಮೈಮೇಲೆ ತಣ್ಣೀರು ಸುರಿಯುವುದು ಕ್ರೂರ ಎನಿಸುತ್ತದೆ. ಹೊಸ ಜಗತ್ತಿಗೆ ಹಳಬರಾದಂತೆಲ್ಲ ಮಕ್ಕಳು ಹೆದರುವುದು ಕಡಿಮೆಯಾಗುತ್ತದೆ. 

ಇನ್ನೂ ಹತ್ತು ಹಲವು ಮೂಢನಂಬಿಕೆಗಳ ಭಾರ ನಿಮ್ಮ ಮೇಲೆ ಬೀಳಬಹುದು. ಆದರೆ, ಎಲ್ಲವನ್ನೂ ಒಂದು ಕಿವಿಯಲ್ಲಿ ಕೇಳಿ ಮತ್ತೊಂದರಲ್ಲಿ ಹೊರಬಿಡಿ. ಚೆನ್ನಾಗಿ ತಿನ್ನಿ, ನಿದ್ರಿಸಿ, ಚಿಂತೆ ಮರೆತು ತಾಯ್ತನವನ್ನು ಅನುಭವಿಸಿ. 

click me!