ಫ್ಯಾಟ್ ತಿನ್ನಲೇಬಾರದು, ಸಕ್ಕರೆಯಂತೂ ಬೇಡವೇ ಬೇಡ, ಡೈರಿ ಪ್ರಾಡಕ್ಟ್ಸ್‌ನಿಂದ ದೂರವಿರಬೇಕು, ದಿನಕ್ಕೆ 5-6 ಬಾರಿ ಸ್ವಲ್ಪ ಸ್ವಲ್ಪ ಊಟ ಮಾಡಿದರೆ ಮೆಟಾಬಾಲಿಸಂ ಚೆನ್ನಾಗಿರುತ್ತದೆ, ಬರಿ ಮಜ್ಜಿಗೆ ನೀರು ಸೇವಿಸಿ ತೂಕ ಕಳೆದುಕೊಳ್ಳಿ- ಆಹಾರದ ವಿಷಯದಲ್ಲಿ ಇಂಥ ಮುಂತಾದ ಅನಾರೋಗ್ಯಕಾರಿ ಎಡಬಿಡಂಗಿ ಮಾಹಿತಿಗಳು ಜನರ ದಾರಿ ತಪ್ಪಿಸುತ್ತಿವೆ.
ಇತ್ತೀಚೆಗೆ ಎಲ್ಲರೂ ಆಹಾರದ ವಿಷಯದಲ್ಲಿ ಅತಿಯಾದ ಕಾಳಜಿ ಬೆಳೆಸಿಕೊಳ್ಳುತ್ತಿದ್ದಾರೆ. ಈ ಕುರಿತ ಸಾವಿರಾರು ಲೇಖನಗಳನ್ನು ಓದಿ, ಒಬ್ಬೊಬ್ಬರ ಬಾಯಲ್ಲಿ ಒಂದೊಂದು ಮಾತು ಕೇಳಿ ಆಹಾರ ಕುರಿತ ಸತ್ಯ ಯಾವುದು, ಮಿಥ್ಯ ಯಾವುದು ಎಂಬುದೇ ತಿಳಿಯದಷ್ಟು ಗೊಂದಲಕ್ಕೆ ಸಿಲುಕಿದ್ದಾರೆ. ಈ ಗೊಂದಲದಲ್ಲಿ ಹಲವಾರು ಸುಳ್ಳುಗಳು, ಅಥವಾ ಅರ್ಧಸತ್ಯಗಳು ಇಲ್ಲವೇ ಮೂಢನಂಬಿಕೆಗಳು ತಾವೇ ಸತ್ಯವೆಂದು ಜನರ ಮನಸ್ಸಿನಲ್ಲಿ ಬೇರೂರಿವೆ. ಅವುಗಳಲ್ಲಿ ಕೆಲವು ಇಲ್ಲಿವೆ.
ಎಲ್ಲ ಕಾಯಿಲೆಗೂ ಅಜ್ಜಿ ಹೇಳಿದ ಮದ್ದನ್ನೊಮ್ಮೆ ಟ್ರೈ ಮಾಡಿ...
undefined
ಕಾರ್ಬೋಹೈಡ್ರೇಟ್ಸ್ ಒಳ್ಳೆಯದಲ್ಲ
ಹಲವಾರು ಜನ ಕಾರ್ಬೋಹೈಡ್ರೇಟ್ ಹೆಚ್ಚಿದೆ ಎಂದು ಕೆಲ ಆಹಾರ ಪದಾರ್ಥಗಳನ್ನು ಅವಾಯ್ಡ್ ಮಾಡುವುದು ಈಗೀಗ ಶುರುವಾಗಿದೆ. ಆದರೆ ನಮ್ಮ ಪ್ರತಿಯೊಂದು ಚಲನೆಗೆ ಶಕ್ತಿ ನೀಡುವುದೇ ಕಾರ್ಬೋಹೈಡ್ರೇಟ್ಸ್. ಮೆದುಳು, ಕೇಂದ್ರೀಯ ನರಮಂಡಲ ಕೆಲಸ ಮಾಡಲು ಬೇಕಾದ ಎನರ್ಜಿ ನೀಡಿ, ದೇಹಕ್ಕೆ ಅಗತ್ಯವಾದ ಪ್ರಮುಖ ಪೋಷಕಸತ್ವಗಳನ್ನು ಒದಗಿಸುತ್ತದೆ. ವೀಟ್ ಬ್ರೆಡ್ ಕಾರ್ಬ್ ಎಂದು ದೂರವಿಡುವವರು ನೀವಾದರೆ, ಅದರಿಂದ ಫೈಬರ್, ಸೆಲೆನಿಯಂ,ಮ್ಯಾಂಗನೀಸ್ ಹಾಗೂ ಫೋಲೇಟ್ ಮುಂತಾದ ಮಿನರಲ್ಸ್‌ಗಳಿಂದ ಕೂಡಾ ವಂಚಿತರಾಗುತ್ತೀರಿ. ಕಾರ್ಬೋಹೈಡ್ರೇಟ್ ಸೇವನೆ ಮಿತವಾಗಿಸುವುದರಿಂದ ಶಕ್ತಿಹೀನತೆ, ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್ ತಿನ್ನುವ ಚಪಲ, ಆಹಾರ ಅಲರ್ಜಿ ಎಲ್ಲವೂ ಶುರುವಾಗುತ್ತವೆ. ಉತ್ತಮ ಗುಣಮಟ್ಟದ ಕಾರ್ಬೋಹೈಡ್ರೇಟ್ ಸೇವನೆ ತಪ್ಪಿಸುವ ಅಗತ್ಯವಿಲ್ಲ.
ಡೈರಿ ಉತ್ಪನ್ನಗಳಿಂದ ಉರಿಯೂತ
ಬಹಳಷ್ಟು ಜನ ಹಾಲು, ಮೊಸರು, ಚೀಸ್‌ನಂಥ ಡೈರಿ ಉತ್ಪನ್ನಗಳನ್ನು ಅವು ಉರಿಯೂತ ತರುತ್ತವೆ ಎಂದು ದೂರವಿಡುತ್ತಾರೆ. ಆದರೆ, ಇದು ನಿಜವಲ್ಲ. ನಿಜವೆಂದರೆ ಮೊಸರು, ಕೆಫಿರ್‌ನಂಥ ಫರ್ಮೆಂಟೆಡ್ ಉತ್ಪನ್ನಗಳು ಆ್ಯಂಟಿ ಇನ್‌ಫ್ಲಮೇಟರಿ ಗುಣ ಹೊಂದಿವೆ. ಅಲ್ಲದೆಡೈರಿ ಉತ್ಪನ್ನಗಳು ಪ್ರೋಟೀನ್, ಪೊಟ್ಯಾಶಿಯಂ, ಕ್ಯಾಲ್ಶಿಯಂ ಹಾಗೂ ವಿಟಮಿನ್ ಡಿಯನ್ನು ಹೇರಳವಾಗಿ ಹೊಂದಿರುವುದರಿಂದ ಅವುಗಳ ಸೇವನೆ ಒಳ್ಳೆಯದು.
ಹಸುವಿನ ಹಾಲಿಗಿಂತ ಬಾದಾಮಿ ಹಾಲು ಹೆಚ್ಚು ಆರೋಗ್ಯಕರ
ಬಹಳ ಸಮಯದಿಂದ ಈ ಕುರಿತ ಚರ್ಚೆಗಳು ನಡೆಯುತ್ತಿವೆ. ಕಡೆಗೆ, ಕ್ಯಾಲೋರಿ ಕಡಿಮೆ ಇರುವ ಬಾದಾಮಿ ಹಾಲೇ ಉತ್ತಮ ಎಂದು ಬಹಳಷ್ಟು ಮಂದಿ ನಂಬುತ್ತಿದ್ದಾರೆ. ಆದರೆ ಹಾಲಿನಿಂದ ಸಿಗುವ ಪ್ರೋಟೀನ್ ಹಾಗೂ ಕ್ಯಾಲ್ಶಿಯಂ ಬಾದಾಮಿ ಹಾಲಿನಲ್ಲಿ ಸಿಗುವುದಿಲ್ಲ. ಅಲ್ಲದೆ, ಪ್ರೊಸೆಸ್ಡ್ ಬಾದಾಮಿ ಹಾಲಾದರೆ ಅದಕ್ಕೆ ಸಕ್ಕರೆ ಹಾಕಿರುತ್ತಾರಲ್ಲದೆಕೆಲವೇ ಕೆಲವು ಬಾದಾಮಿ ಇರುತ್ತದೆ. ಹಾಲು ನಿಮಗೆ ಅಲರ್ಜಿ ಅಲ್ಲದಿದ್ದರೆ ಹಸುವಿನ ಹಾಲನ್ನು ದೂರವಿಡಲು ಬೇರೆ ಕಾರಣಗಳೇ ಇಲ್ಲ.
ಮೊಟ್ಟೆ ಜಾಸ್ತಿ ತಿಂದರೆ ಹೃದಯ ದುರ್ಬಲವಾಗುತ್ತಂತೆ ಹುಷಾರ್!
ಗ್ಲುಟೆನ್ ಫ್ರೀ ಉತ್ಪನ್ನಗಳೇ ಉತ್ತಮ
ಆಹಾರ ಕೊಳ್ಳುವಾಗ ಅವು ಗ್ಲುಟೆನ್ ಫ್ರೀನಾ ಎಂದು ನೋಡುವ ಅಭ್ಯಾಸ ಕೆಲವರಿಗೆ. ಆದರೆ, ಸೆಲಿಯಾಕ್ ರೋಗಿಯಲ್ಲದಿದ್ದಲ್ಲಿ ಈ ಸಸ್ಯಜನ್ಯ ಪ್ರೋಟೀನ್ ಅವಾಯ್ಡ್ ಮಾಡುವ ಅವಶ್ಯಕತೆ ಇಲ್ಲವೇ ಇಲ್ಲ. ಅದೂ ಅಲ್ಲದೆ ಗ್ಲುಟೆನ್ ಫ್ರೀ ಉತ್ಪನ್ನಗಳು ಸಾಮಾನ್ಯವಾಗಿ ಅತಿಯಾಗಿ ಪ್ರೊಸೆಸ್ ಮಾಡಿದಂತವು, ಸಕ್ಕರೆ ಹೆಚ್ಚಿರುವಂಥವು ಹಾಗೂ ಕಡಿಮೆ ಫೈಬರ್ ಉಳ್ಳವು. ಯಾವುದೋ ಉತ್ಪನ್ನದ ಮೇಲೆ ಗ್ಲುಟೆನ್ ಫ್ರೀ ಎಂದಿದ್ದ ಮಾತ್ರಕ್ಕೆ ಅದು ಆರೋಗ್ಯಕರ ಎಂದರ್ಥವಲ್ಲ.
ಸಕ್ಕರೆ ವಿಷಕಾರಿ
ಇತ್ತೀಚಿಗಂತೂ ಸಕ್ಕರೆ ಎಂದರೆ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ದೂರ ಓಡುತ್ತಾರೆ. ಕೆಲವರಂತೂ ಸಕ್ಕರೆ ಎಂದರೆ ವಿಷವೇ ಎನ್ನುವಷ್ಟು ಮುಂದೆ ಹೋಗಿದ್ದಾರೆ. ಆದರೆ ಸಕ್ಕರೆ ವಿಷವಲ್ಲ. ನಮ್ಮ ದೇಹವು ಬ್ಲಡ್ ಗ್ಲೂಕೋಸ್ ರೂಪದಲ್ಲಿ ಸಕ್ಕರೆಯನ್ನು ಬಳಸಿಕೊಂಡು ಕೋಶಗಳ ಎಲ್ಲ ಚಟುವಟಿಕೆಗಳಿಗೆ ಚಾಲನೆ ನೀಡುತ್ತದೆ. ಹಾಗಿದ್ದರೆ ಈ ಮೂಢನಂಬಿಕೆ ಹುಟ್ಟಿದ್ದೆಲ್ಲಿಂದ? ಪ್ರೊಸೆಸ್ಡ್ ಫುಡ್‌ನಲ್ಲಿರುವ ಆ್ಯಡೆಡ್ ಶುಗರ್ ಕೆಟ್ಟದ್ದು ಎಂದು ಆಹಾರತಜ್ಞರು ಹೇಳಿದ್ದನ್ನೇ ಕೇಳಿಕೊಂಡು ಎಲ್ಲ ಸಕ್ಕರೆಯೂ ಕೆಟ್ಟದ್ದು ಎಂಬ ನಂಬಿಕೆ ಬೆಳೆಯುತ್ತಿದೆ. ಇಷ್ಟಕ್ಕೂ ಈ ಆ್ಯಡೆಡ್ ಶುಗರ್ ಕೂಡಾ ವಿಷವಲ್ಲ. ಆದರೆ, ಹೆಚ್ಚಾಗಿ ಸೇವನೆ ಮಾಡಿದರೆ ಒಂದಿಷ್ಟು ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗಬಹುದು. ಆದಷ್ಟು ನೈಸರ್ಗಿಕವಾಗಿ ದೊರೆವ ಸಕ್ಕರೆ ಸೇವನೆ ಉತ್ತಮ. ಉದಾಹರಣೆಗೆ ಹಣ್ಣುಗಳು, ಕೆಲ ತರಕಾರಿಗಳು, ಆಲೂಗಡ್ಡೆ ಇತ್ಯಾದಿ. ಈ ಆಹಾರಗಳಲ್ಲಿ ಸಕ್ಕರೆಯೊಂದಿಗೆ ವಿಟಮಿನ್ಸ್, ಮಿನರಲ್ಸ್, ಫೈಟೋನ್ಯೂಟ್ರಿಯೆಂಟ್ಸ್ ಕೂಡಾ ದೇಹ ಸೇರುತ್ತದೆ.
ಹತ್ತು ರೀತಿಯ ಡಯಟ್ ಟ್ರೈ ಮಾಡಿದರೆ ಸರಿಯಾದ ಒಂದು ಸಿಗುತ್ತದೆ.
ಒಂದೇ ಡಯಟ್ಟನ್ನು ಪದೇ ಪದೇ ಮಾಡಿ ಬೇರೆ ಬೇರೆ ರೀತಿಯ ಫಲಿತಾಂಶ ಬರಬೇಕೆಂದರೆ ಹೇಗೆ ಸಿಗುತ್ತದೆ ಎಂದು ಕೆಲ ಡಯಟಿಶಿಯನ್‌ಗಳು ಹೇಳಿ ನಿಮ್ಮ ಹಾದಿ ತಪ್ಪಿಸಬಹುದು. ತೂಕ ಕಳೆದುಕೊಳ್ಳುವ ಸಲುವಾಗಿ ಕಿಟೋ, ಪೇಲಿಯೋ, ಫ್ರೂಟ್ ಡಯಟ್, ಲಿಕ್ವಿಡ್ ಡಯಟ್... ಹೀಗೆ ಹತ್ತು ಹಲವನ್ನು ಅನುಸರಿಸಿ ನೋಡಲು ಆಸೆಯಾಗಬಹುದು. ಆದರೆ, ಬಹುವಿಧದ ಆಹಾರದಿಂದ ನಿಮ್ಮನ್ನು ದೂರವಿರಿಸುವ ಯಾವ ಡಯಟ್ ಕೂಡಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಬರೀ ಲಿಕ್ವಿಡ್ ಸೇವನೆಯಿಂದ ದೇಹಕ್ಕೆ ಬೇಕಾದ ಕಾರ್ಬ್ಸ್, ನ್ಯೂಟ್ರಿಯೆಂಟ್ಸ್ ದೊರೆಯದೆ ಹೋಗಬಹುದು. ಯಾವಾಗಲೂ ಸಮತೂಕದ ಆಹಾರ ಸೇವನೆ ಅತ್ಯುತ್ತಮ. ಎಲ್ಲ ರೀತಿಯ ಆಹಾರವನ್ನು ಕಡಿಮೆ ಕ್ವಾಂಟಿಟಿಯಲ್ಲಿ ತೆಗೆದುಕೊಳ್ಳುವುದು ಉತ್ತಮ ಅಭ್ಯಾಸ. ಇಲ್ಲದಿದ್ದರೆ ನ್ಯೂಟ್ರಿಯಂಟ್ಸ್ ಕೊರತೆ ಹಾಗೂ ಅತಿಯಾಗಿ ತಿನ್ನುವ ಆಸೆಯಿಂದ ತೊಳಲಾಡುತ್ತೀರಿ.