ಜಗತ್ತಿನ ಮೈ ನವಿರೇಳಿಸುವ ಹೋಟೆಲ್ ಪೂಲ್‌ಗಳಿವು!

By Web DeskFirst Published Sep 20, 2019, 12:54 PM IST
Highlights

ಈ ಹೋಟೆಲ್ ಪೂಲ್‌ಗಳನ್ನು ನೋಡಿದರೆ ದೇವಲೋಕದಲ್ಲಿ ಅಪ್ಸರೆಯರು ಜಲಕ್ರೀಡೆಯಾಡುತ್ತಿದ್ದ ಜಲರಾಶಿ ಕೂಡಾ ಇದರ ಸಮಕ್ಕಿರಲಿಕ್ಕಿಲ್ಲ ಎನಿಸೀತು. ಇದರಲ್ಲಿರುವಷ್ಟು ಹೊತ್ತು ನೀವು ಖಂಡಿತಾ ಈ ಲೋಕದಲ್ಲಿರುವುದಿಲ್ಲ.

ಪರ್ಫೆಕ್ಷನ್ ಅನ್ನೋದು ಅಸ್ಥಿತ್ವದಲ್ಲೇ ಇಲ್ಲ ಎಂಬ ಮಾತಿದೆ. ಆದರೆ, ಈ ಲಕ್ಷುರಿ ಹೋಟೆಲ್‌ಗಳ ಲಕ್ಷುರಿಯ ಅಪ್ಪ ಎನಿಸಿಕೊಳ್ಳುವಂಥ ಸ್ವಿಮ್ಮಿಂಗ್ ಪೂಲ್‌ಗಳನ್ನು ನೋಡಿದರೆ ಈ ಮಾತು ಖಂಡಿತಾ ಸುಳ್ಳೆನಿಸುತ್ತದೆ. ಇದು ಕೇವಲ ಸುಂದರವಾದ ಪೂಲ್ ಮಹಿಮೆಯಲ್ಲ, ಅವು ಯಾವ ಸ್ಥಳದಲ್ಲಿವೆ, ಅದರ ಎದುರು ಏನಿದೆ ಎಲ್ಲವೂ ಸೇರಿ ಜಸ್ಟ್ ಪರ್ಫೆಕ್ಟ್ ಎನಿಸಿಕೊಂಡಿವೆ. 

ಗ್ರೇಸ್ ಸಂಟೋರಿನಿ

ದ್ವೀಪದ ನಡುವಿನ ಹೋಟೆಲ್‌ನಲ್ಲಿರುವ ಗ್ರೇಸ್ ಸಂಟೋರಿನಿಯ ನೀಲಿ ನೀರಿನಲ್ಲಿ ಅತಿಥಿಗಳು ತುದಿಯವರೆಗೂ ಹೋಗಿ ಹಣುಕಿದರೆ ಏಜಿಯನ್ ಸಮುದ್ರದ ನೀಲಿ ಕಣ್ಣಿಗೆ ರಾಚುತ್ತದೆ. ಸುತ್ತಣ ಹರಡಿ ನಿಂತ ಕ್ಯೆಲೆಡ್ರಾದ ಪನೋರಮಾ ವ್ಯೂ ನೋಡಿ ಆನಂದಿಸಬಹುದು. ಅನುಭವವನ್ನು ಮತ್ತಷ್ಟು ವಿಶೇಷವಾಗಿಸಲು ಪೂಲ್‌ಸೈಡ್‌ನಲ್ಲಿರುವ ಬಾರ್ ಏರಿಯಾದಲ್ಲಿ ಸೆಕ್ಸೀ ಕಾಕ್‌ಟೇಲ್ ಹೀರುತ್ತಾ, ಗ್ರೀಕ್‌ನ ಆಲ್ ಫ್ರೆಸ್ಕೋ ತಿನ್ನುತ್ತಾ ಸಮಯ ಕಳೆಯಬಹುದು.

ಇಲ್ಲಿ ಯೋಗ ಹಾಗೂ ಪೈಲೇಟ್ಸ್ ಸ್ಟುಡಿಯೋ ಕೂಡಾ ಇದ್ದು ಸೂರ್ಯೋದಯ ಸಮಯದಲ್ಲಿ ಯೋಗ ಬಹಳ ವಿಶಿಷ್ಠ ಅನುಭವ ನೀಡುತ್ತದೆ. ಖಾಸಗಿ ಸ್ಪಾಗಳನ್ನು ಹೊಂದಿದ ವಿಲ್ಲಾಗಳು ಕೂಡಾ ಇಲ್ಲಿವೆ. 
ಸ್ಥಳ:  ಇಮೆಗ್ರೊವೆಲಿ, ಸ್ಯಾಂಟೋರಿನಿಯ ಒಂದು ಹಳ್ಳಿ, ಗ್ರೀಸ್‌ನ ಸೈಕ್ಲೇಡ್ಸ್ ದ್ವೇಪಸಮೂಹ
ರೇಟ್: 650 ಡಾಲರ್‌ನಿಂದ ಪ್ರಾರಂಭ

ಲಕಾಲಾ ದ್ವೀಪ, ಫಿಜಿ

ಇಲ್ಲಿನ ಸ್ವಿಮ್ಮಿಂಗ್ ಪೂಲ್ ಹೊಸತಷ್ಟೇ ಅಲ್ಲ, ವಿನೂತನ ಶೈಲಿಯಲ್ಲಿದೆ. ಈ ಪೂಲ್‌ನ ವಿಸ್ತೀರ್ಣವೇ ನಿಮ್ಮನ್ನು ಬೆರಗುಗೊಳಿಸಬಲ್ಲದು. ರೆಸಾರ್ಟ್‌ನ ಹೃದಯಭಾಗದಲ್ಲಿರುವ ಪೂಲ್ 21,000 ಚದರ ಅಡಿಗಳಷ್ಟು ದೊಡ್ಡದಾಗಿದ್ದು, ಎದುರಿನ ಬೀಚ್‌ಗೆ ಸೌಂದರ್ಯದಲ್ಲಿ ಸವಾಲು ಹಾಕುತ್ತಿದೆ. ಇದರೊಳಗೇ ಒಂದು ಗ್ಲಾಸ್ ಪೂಲ್ ಇದ್ದು, ಲ್ಯಾಪ್ ಸ್ವಿಮ್ಮಿಂಗ್‌ಗೆ ಹೇಳಿ ಮಾಡಿಸಿದಂತಿದೆ.

ಪೂಲ್‌ನ ಸುತ್ತ ಗೂಡುಗಳಂಥ ಲ್ಯಾಂಟರ್ನ್ ದೀಪಗಳು, ಕಾಕ್‌ಟೇಲ್ ಬಾರ್‌ಗಳು ಹಾಗೂ ಮಾನವ ನಿರ್ಮಿತ ಉಷ್ಣವಲಯದ ದ್ವೀಪಗಳು  ಕೂಡಾ ಇದ್ದು, ಕಣ್ಣಿಗೆ ಹಬ್ಬವೆನಿಸುವುದರಲ್ಲಿ ಅನುಮಾನವಿಲ್ಲ. ಇನ್ನು ಇಲ್ಲಿ ಹೆಚ್ಚುವರಿಯಾಗಿ ಗಾಲ್ಫ್ ಕೋರ್ಸ್, ವಾಟರ್ ಸ್ಪೋರ್ಟ್ಸ್ ಸೆಂಟರ್, ಖಾಸಗಿ ಸ್ಪಾ ಚಿಕಿತ್ಸೆ ವಿಲ್ಲಾಗಳಿವೆ. 
ಸ್ಥಳ: ಲಕಾಲ ದ್ವೀಪ, ಫಿಜಿ
ರೇಟ್: $4,600ನಿಂದ ಪ್ರಾರಂಭ

ದಿ ಕೇಂಬ್ರಿಯನ್, ಸ್ವಿಟ್ಜರ್‌ಲ್ಯಾಂಡ್

ಆಲ್ಪೈನ್ ಕಣಿವೆಯ ಮಧ್ಯದಲ್ಲಿ ನಿಂತಿರುವ ಕೇಂಬ್ರಿಯನ್ ಹೋಟೆಲ್ ಅಡಿಯಿಂದ ಮುಡಿವರೆಗೆ ಗಾಜಿನಲ್ಲೇ ಮನ ಸೆಳೆಯುತ್ತದೆ. ಅಷ್ಟಾಗಿಯೂ ಈ ಹೋಟೆಲ್‌ನ ಮುಖ್ಯ ಆಕರ್ಷಣೆ ಇರುವುದು ಸ್ವಿಸ್‌ನ ಹಿಮ ಪರ್ವತಗಳಿಗೆದುರಾಗಿ ಕುಳಿತ ಥರ್ಮಲ್ ಪೂಲ್‌ನಲ್ಲಿ. ಒಮ್ಮೆ ಪೂಲ್‌ನಲ್ಲಿ ಕುಳಿತು ಸುತ್ತಲಿನ ಪ್ರಕೃತಿ ಸೌಂದರ್ಯ ನೋಡಿದರೆ ಭೂಮಿಯ ಮೇಲೆ ನೀವಿರುವುದನ್ನು ಖಂಡಿತಾ ಮರೆಯುವಿರಿ. 
ರೇಟ್: $195ನಿಂದ ಆರಂಭ

ಮರೀನಾ ಬೇ ಸ್ಯಾಂಡ್ಸ್, ಸಿಂಗಾಪುರ

ಮರೀನಾ ಬೇ ಸ್ಯಾಂಡ್ಸ್ ರೂಫ್‌ಟಾಪ್ ಇನ್ಫಿನಿಟಿ ಪೂಲ್ ಜಗತ್ತಿನ  ಅತಿ ದೊಡ್ಡ ಇನ್ಫಿನಿಟಿ ಪೂಲ್ ಆಗಿದ್ದು, 57 ಮಹಡಿ ಕಟ್ಟಡದ ಮೇಲಿದೆ. ಸುಮಾರು 500 ಅಡಿ ಉದ್ದವಿರುವ ಮರೀನಾ ಬೇ ಸ್ಯಾಂಡ್ಸ್, ಸಿಂಗಾಪೂರ್ ಸ್ಕೈಲೈನ್‌ ಎದುರಿಗೆ ಸ್ಪರ್ಧೆ ನೀಡುತ್ತಾ ನಿಂತಿದೆ. ಅಷ್ಟು ಎತ್ತರದಲ್ಲಿ ಕೂಡಾ ಪಾಮ್ ಮರಗಳು, ಬಾರ್, ಪೂಲ್‌ಸೈಡ್ ಲಾಂಜ್‌ಗಳು, ಸ್ಯಾಂಡ್ಸ್ ಥಿಯೇಟರ್, ವೈಯಕ್ತಿಕ ಶಾಪಿಂಗ್ ಸೇವೆ, ಫ್ಯೂಟರ್ ವರ್ಲ್ಡ್ ಮ್ಯೂಸಿಯಂ ಮುಂತಾದ ಸೌಲಭ್ಯಗಳು ಲಕ್ಷುರಿಗೆ ಹೊಸ ವ್ಯಾಖ್ಯಾನವನ್ನೇ ಬರೆದಿವೆ. 

ರೇಟ್: $380ನಿಂದ ಆರಂಭ.

ಬಾಲಿಯ ಹ್ಯಾಂಗಿಂಗ್ ಗಾರ್ಡನ್ಸ್, ಇಂಡೋನೇಶ್ಯಾ

ಉಬುದ್‌ನ ಪಯಂಗಾನ್‌ನಲ್ಲಿರುವ ಹ್ಯಾಂಗಿಂಗ್ ಗಾರ್ಡನ್‌ನ ಪ್ರತಿ ವಿಲ್ಲಾಕ್ಕೂ ಅದರದೇ ಆದ ಖಾಸಗಿ ಪೂಲ್‌ಗಳಿವೆ. ಆದರೆ, ಬಾಸ್ ಪೂಲನ್ನು ನೋಡಿದರೆ ನೀವು ಮತ್ತೆ ಅಲ್ಲಿಂದ ಎದ್ದು ಬರಲು ಮನಸ್ಸು ಮಾಡುವುದು ಸಾಧ್ಯವೇ ಇಲ್ಲ. ರೇನ್‌ಫಾರೆಸ್ಟ್ ನಡುವೆ ಇರುವ ಈ ಟ್ರೀ ಪೂಲ್‌ನಲ್ಲಿ ಈಜುವವರಿಗೆ ಈ ಭಾಗದಲ್ಲಿ ಫೇಮಸ್ ಆದ ಭತ್ತದ ಗದ್ದೆಗಳ ವಿನ್ಯಾಸ ಪೂಲ್‌ನೊಳಗೆ ಎದ್ದು ತೋರುತ್ತದೆ. ಇದಲ್ಲದೆ, ದಟ್ಟ ಕಾಡಿನ ಮಧ್ಯೆ ನದಿಯ ತೀರದಲ್ಲಿ ಸ್ಪಾ ಕೂಡಾ ಇಲ್ಲಿ ಅನುಭವಿಸಬಹುದು. 
ರೇಟ್: $492ನಿಂದ ಆರಂಭ

ಜೇಡ್ ಪರ್ವತ, ಸೇಂಟ್ ಲೂಸಿಯಾ

ಕೆರೆಬಿಯನ್ ದ್ವೀಪರಾಷ್ಟ್ರ ಸೇಂಟ್ ಲೂಸಿಯಾದಲ್ಲಿ ಅತ್ಯದ್ಭುತ ಪೂಲ್‌ನ ಬಗ್ಗೆ ಮಾತನಾಡಿದರೆ, ಅಲ್ಲಿರುವ ಹತ್ತು ಹಲವುಗಳಲ್ಲಿ ಯಾವುದು ಎಂಬ ಪ್ರಶ್ನೆಯೂ ಏಳುತ್ತದೆ. ಈ ಜೇಡ್ ಪರ್ವತದ ರೆಸಾರ್ಟ್‌ನ ಕಣ್ಣು ಕೋರೈಸುವ ಪೂಲ್‌ಗಳು ಭೇಟಿ ನೀಡಿದವರಿಗೆ ದಟ್ಟ ನೀಲಿಯ ಕೆರೆಬಿಯನ್ ಸಮುದ್ರ ಹಾಗೂ ಪೈತಾನ್ ಪರ್ವತದ ಸೌಂದರ್ಯರಾಶಿಯನ್ನು ಎದುರಿಗೆ ತಂದು ನಿಲ್ಲಿಸುತ್ತವೆ. ಅಷ್ಟೇ ಅಲ್ಲದೆ, ಇಲ್ಲಿನ ಪ್ರತಿಯೊಂದು ಪ್ರೈವೇಟ್ ಪೂಲ್‌ಗಳು ಕೂಡಾ ಇದೇ ದೃಶ್ಯವೈಭವ ನೀಡುತ್ತವೆ. ಈ ವೈಯಕ್ತಿಕ ಪೂಲ್‌ಗಳು ಕೂಡಾ 400-900 ಚದರ ಅಡಿ ತೂಗುತ್ತವೆ. ಅಷ್ಟೊಂದು ದೊಡ್ಡ ಪೂಲ್‌ನಲ್ಲಿ ನೀವೊಬ್ಬರೇ ಸಾಕುಬೇಕಾಗುವಷ್ಟು ಹೊತ್ತು ಎಂಜಾಯ್ ಮಾಡುವ ಕಲ್ಪನೆಯೇ  ಎಷ್ಟು ಚೆನ್ನಾಗೆನಿಸುತ್ತದಲ್ಲವೇ? 
ರೇಟ್: $1,110ನಿಂದ ಆರಂಭ

 

click me!