
ನಮ್ಮ ಹತ್ತಿರದಲ್ಲೇ ಇದ್ದರೂ ಸುತ್ತಮುತ್ತಲ ಉಳಿದೆಲ್ಲ ರಾಜ್ಯಗಳಿಗಿಂತ ವಿಶಿಷ್ಠವಾದ ಅನುಭವ ನೀಡುವ ತಾಕತ್ತಿರುವುದು ಗೋವಾಗೆ. ಅಲ್ಲಿನ ಸಂಸ್ಕೃತಿ, ಬದುಕೇ ಬೇರೆ. 450 ವರ್ಷಗಳ ಕಾಲ ಪೋರ್ಚುಗೀಸರ ಆಳ್ವಿಕೆಯ ಕಾರಣದಿಂದ ಭಾರತದಿಂದ ದೂರವೇ ಉಳಿದಿದ್ದ ಗೋವಾ, ಇದೇ ಕಾರಣಕ್ಕೆ ಉಳಿದೆಲ್ಲ ರಾಜ್ಯಗಳಿಗಿಂತ ವಿಭಿನ್ನವಾಗಿದೆ.
ಯಾರಾದರೂ ಗೋವಾ ಹೋಗುತ್ತಿದ್ದಾರೆ ಎಂದರೆ ಮಜಾ ಮಾಡಲು ಹೋಗುತ್ತಿದ್ದಾರೆ ಎಂದೇ ಅರ್ಥ. ಭಾರತದಲ್ಲಿ ವಿದೇಶಿಗರ ಹಾಟ್‌ಸ್ಪಾಟ್ ಎನಿಸಿಕೊಂಡಿರುವ ಗೋವಾ ಎಂದರೆ ಬೀಚ್‌ಗಳು, ಎಳನೀರು, ಚರ್ಚ್‌ಗಳು, ಸನ್‌ಬಾತ್, ಹಿಪ್ಪೀಗಳು, ಮದ್ಯ, ಪಾರ್ಟಿಗಳು... ಜನ, ಅದರಲ್ಲೂ ಯುವಜನತೆ ಗೋವಾ ಎಂದರೆ ಜಿಗಿದು ಹಾರಲು ಕಾರಣಗಳೇನು ಗೊತ್ತಾ?
ಆಹಾ... ಏನ್ ಸ್ವಾದ, ಭೌಗೋಳಿಕ ಮಾನ್ಯತೆ ಪಡೆಯಿತು ನಮ್ಮ ಪ್ರಸಾದ!
1. ಸುಂದರ ಬೀಚ್‌ಗಳು
ಗೋವಾದ ಬೀಚ್‌ಗಳು ಬಹಳ ವಿಶೇಷವಾಗಿವೆ. ಒಂದು ಸಂಪೂರ್ಣ ಅರ್ಧ ಚಂದ್ರಾಕೃತಿಯಲ್ಲಿದ್ದರೆ, ಮತ್ತೊಂದು ಪಾಮ್ ಮರಗಳಿಂದ ಅಲಂಕೃತವಾಗಿದೆ. ಮಗದೊಂದು ಬೀಚ್ ಹಟ್‌ಗಳಿಂದ ಸುತ್ತುವರಿದಿದೆ. ಇಲ್ಲಿನ ಬಹುತೇಕ ಬೀಚ್‌ಗಳು ಕೆಂಪು ಮರಳನ್ನು ಹೊಂದಿದ್ದರೆ ಕೆಲವು ಮಾತ್ರ ತೆಳುವಾದ ಬಿಳಿ ಮರಳನ್ನು ಹೊಂದಿವೆ. ಬೀಚ್‌ಗಳ ಸೌಂದರ್ಯ ಹೆಚ್ಚಿಸುವ ಬಂಡೆಗಳು. ಸುಮಾರು 300 ಕಿ.ಮೀ. ಕರಾವಳಿ ಪ್ರದೇಶವನ್ನೇ ಹೊಂದಿರುವ ಗೋವಾ, ಒಬ್ಬೊಬ್ಬರಿಗೆ ಒಂದೇನಾದರೂ ನೆನಪಿನಲ್ಲಿ ಉಳಿಸುವಂಥದನ್ನು ಕಾದಿರಿಸಿಕೊಂಡೇ ಇರುತ್ತದೆ. ಅತಿ ಜನರಿಂದ ತುಂಬಿರುವ ಕ್ಯಲಾಂಗುಟೆ, ಭಾಗಾ, ಕಾಂಡೋಲಿಮ್ ಬೀಚ್‌ಗಳನ್ನು ಅವಾಯ್ಡ್ ಮಾಡಿ. ಉಳಿದೆಡೆ ಮನ ಬಂದಷ್ಟು ಆಟವಾಡಿ. ಇಲ್ಲಿ ಪ್ಯಾರಾಸೇಲಿಂಗ್, ಪ್ಯಾರಾಗ್ಲೈಡಿಂಗ್, ಕಯಕಿಂಗ್, ಬಂಪೀ ರೈಡ್, ಫಿಶಿಂಗ್, ಸ್ಪೀಡ್ ಬೋಟ್, ಸ್ನೋರ್ಕೆಲಿಂಗ್ ಮುಂತಾದ ಜಲಕ್ರೀಡೆಗಳ ಅನುಭವವನ್ನೂ ಪಡೆದುಕೊಳ್ಳಬಹುದು.
2. ಗೋವನ್ ಫುಡ್
ಹಿಂದೆ ಪೋರ್ಟುಗೀಸರ ವಸಾಹತಾಗಿದ್ದ ಗೋವಾದ ಆಹಾರ ವೈವಿಧ್ಯದಲ್ಲಿ ಈಗಲೂ ಆ ಪ್ರಭಾವ ಹಾಗೇ ಉಳಿದಿದೆ. ಹುಣಸೆ, ಕಾಯಿ, ಕರಿಬೇವು, ಸಾಸಿವೆ ಇತ್ಯಾದಿ ಬಳಸಿ ಅದೇನೋ ಮ್ಯಾಜಿಕ್ ಮಾಡುತ್ತಾರೆ ಗೋವಾದ ಅಡಿಗೆ ಸ್ಪೆಶಲಿಸ್ಟ್ಸ್. ಇಲ್ಲಿನ ಕ್ಸಾಕುಟಿ, ಬಲ್ಚಾವೋ, ಕ್ಯಾಫ್ರಿಯಲ್, ವಿಂಡಾಲೂ ಮುಂತಾದ ಆಹಾರವನ್ನು ಟ್ರೈ ಮಾಡದೆ ಹಿಂದಿರುಗಬೇಡಿ. ಅಲ್ಲದೆ ಇಲ್ಲಿನ ಸೀಫುಡ್ ಕೂಡಾ ಪೂರ್ತಿ ತಾಜಾ ತಾಜಾ. ಬಹುಷಃ ಕೆಟ್ಟ ಊಟವೆಂಬುದು ಗೋವಾದಲ್ಲಿ ಸಿಗಲಾರದು.
ಇವುಗಳನ್ನು ಮಾಡದೇ ಹೋದ್ರೆ ಕೂರ್ಗ್ ಟ್ರಿಪ್ ಕಂಪ್ಲೀಟೇ ಆಗಲ್ಲ!
3. ಶಾಂತಿಯುತ ಮತ್ತು ಸುರಕ್ಷಿತ
ಎಲ್ಲೋ ಒಂದೆರಡು ಬಾರಿ ಬಿಟ್ಟರೆ ಗೋವಾದಲ್ಲಿ ಕೋಮುಗಲಭೆ, ಮಹಿಳೆಯರ ಮೇಲೆ ಅತ್ಯಾಚಾರ, ಕಳ್ಳತನ, ಇತರೆ ಅಪರಾಧಗಳು ಜರುಗುವುದು ಬಹಳ ಅಪರೂಪ. ಭಾರತದ ಶಾಂತಿಯುತ ರಾಜ್ಯಗಳಲ್ಲಿ ಗೋವಾ ಕೂಡಾ ಒಂದೆನಿಸಿಕೊಂಡಿದೆ.
4. ಚರ್ಚ್‌ಗಳು, ಕೋಟೆಗಳು
ಗೋವಾದಲ್ಲಿರುವ ಹಲವು ಚರ್ಚ್‌ಗಳು, ಕೋಟೆಕೊತ್ತಲಗಳು ಹಾಗೂ ಹಳೆಯ ಪೋರ್ಚುಗೀಸರ ಮನೆಗಳು ಆರ್ಕಿಟೆಕ್ಚರ್ ವಿಷಯದಲ್ಲಿ ನಿಮ್ಮಿಂದ ಶಹಬ್ಬಾಸ್‌ಗಿರಿ ತೆಗೆದುಕೊಳ್ಳದೆ ಇರವು. ಓಲ್ಡ್ ಗೋವಾದಲ್ಲಿ ಪೋರ್ಚುಗೀಸರ ಕಾಲದಲ್ಲಿ ಅಂದರೆ 1500-1650ರ ನಡುವೆ ಕಟ್ಟಿದ ಹಲವು ಸುಂದರ ಚರ್ಚ್‌ಗಳಿವೆ. ಇಲ್ಲಿನ ಬ್ಯಾಸಿಲಿಕಾ ಆಫ್ ಬೊಮ್ ಜೀಸಸ್, ಸೆ ಕೆಥೆಡ್ರಾಲ್, ಲೇಡಿ ಆಫ್ ಇಮ್ಯಾಕುಲೇಟ್ ಕಾನ್ಸೆಪ್ಶನ್ ಮುಂತಾದ ಚರ್ಚ್‌ಗಳು ಬಹಳ ಜನಪ್ರಿಯ. ಇನ್ನು ಬೀಚ್‌ಗೆ ಮುಖ ಮಾಡಿ ನಿಂತ ಚಪೋರಾ ಕೋಟೆ, ಅಗ್ವಾಡಾಕೋಟೆ, ಕಾಬೋ ಡೆ ರಾಮಾ ಮುಂತಾದವು ನಿಮ್ಮ ಫೇವರೇಟ್ ಸ್ಥಳಗಳಾಗುವುದರಲ್ಲಿ ಅನುಮಾನವಿಲ್ಲ.
ರಿಚ್ಚೀ ರಿಚ್ ಫೀಲಿಂಗ್ ಬೇಕೇ? ಕಡಿಮೆ ದುಡ್ಡಿದ್ರೂ ಈ ದೇಶಗಳಲ್ಲಿ ಎಂಜಾಯ್ ಮಾಡ್ಬೋದು!
5. ಶಾಂಪಿಂಗ್
ನೀವು ಶಾಪಿಂಗ್ ಮಾಡಲೇಬಾರದೆಂದು ಎಷ್ಟೇ ದೃಢ ಮನಸ್ಸು ಮಾಡಿರಿ, ಗೋವಾದ ಮಾರುಕಟ್ಟೆಗಳು ನಿಮ್ಮ ನಿರ್ಧಾರವನ್ನು ನಿಮಿಷದಲ್ಲಿ ಕದಲಿಸಿಬಿಡಬಲ್ಲವು. ಆ ವರ್ಣಮಯ ಬಟ್ಟೆಗಳು, ಟ್ರೈಬಲ್ ಜುವೆಲ್ಲರಿ, ದೀಪಗಳು, ಯುವಿ ಬೆಡ್‌ಶೀಟ್ಸ್ ಮುಂತಾದವು ಕಣ್ಣು ಕುಕ್ಕದೆ ಇರಲು ಸಾಧ್ಯವಿಲ್ಲ. ಇಲ್ಲಿನ ಅಂಜುನಾ ಫ್ಲೀ ಮಾರ್ಕೆಟ್, ಅರಂಬೋಲ್‌ನ ಬೀದಿಅಂಗಡಿಗಳು ಹಾಗೂ ಅರ್ಪೊರಾದ ನೈಟ್ ಬಜಾರ್ ಶಾಪಿಂಗ್‌ಗೆ ಬಹಳ ಫೇಮಸ್.
6. ಪಾರ್ಟಿಗಳು
ಪಾರ್ಟಿಯ ವಿಷಯಕ್ಕೆ ಬಂದರೆ ಗೋವಾವನ್ನು ಮೀರಿಸುವ ಮತ್ತೊಂದು ಸ್ಥಳ ಭಾರತದಲ್ಲೆಲ್ಲೂ ಸಿಗಲಿಕ್ಕಿಲ್ಲ. 1960ರ ದಶಕದಲ್ಲಿ ಹಿಪ್ಪಿಗಳು ಗೋವಾಕ್ಕೆ ಬಂದು ನೆಲೆಸಿದರು. ಅವರಿಂದಲೇ ಶುರುವಾದದ್ದು ಗೋವಾ ಟ್ರಾನ್ಸ್ ಪಾರ್ಟೀಸ್. ಇಲ್ಲಿ ಯುವಿ ಪೇಯಿಂಟ್ ಹಾಗೂ ಡೆಕೋರೇಶನ್ ಬಳಸಿ ವಿಧವಿಧವಾಗಿ ಪಾರ್ಟಿಗಳು ನಡೆಯುತ್ತವೆ. ಇಲ್ಲಿನ ಪಾಲೋಲೆಮ್‌ನ ಸೈಲೆಂಟ್ ಹೆಡ್‌ಫೋನ್ ಪಾರ್ಟಿ, ವೆಗಟಾರ್‌ನ ಪಾರ್ಟಿ, ಒಳಗಿನವರಿಗೆ ಮಾತ್ರ ತಿಳಿಯುವ ಸೀಕ್ರೆಟ್ ಪಾರ್ಟಿಗಳು ಲೈಫ್‌ಟೈಂ ಅನುಭವಗಳಾಗುವುದರಲ್ಲಿ ಅನುಮಾನವೇ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.