ತೂಕ ಇಳಿಸಿಕೊಳ್ಳಲು ದೊಡ್ಡದಾದ ಜಿಮ್, ದುಬಾರಿ ಉಪಕರಣಗಳು ಅಥವಾ ಕಠಿಣ ವರ್ಕೌಟ್‌ಗಳೇ ಬೇಕು ಎಂಬುದು ಹಲವರ ನಂಬಿಕೆ. ಆದರೆ, ನಿಜವಾದ ಅಡಚಣೆ ಜಿಮ್ ಇಲ್ಲದಿರುವುದಲ್ಲ, ಬದಲಾಗಿ ನಾವು ಪ್ರಯತ್ನವನ್ನು ಆರಂಭಿಸದಿರುವುದು ಎಂಬುದನ್ನು ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ಅಂಬಿಕಾ ಸಾಗರ್ ಸಾಬೀತುಪಡಿಸಿದ್ದಾರೆ. ತಮ್ಮದೇ 2BHK ಫ್ಲ್ಯಾಟ್‌ನ ಒಳಗೆ ಪ್ರತಿದಿನ 20,000 ಹೆಜ್ಜೆ ನಡೆಯುವ ಮೂಲಕ ಅವರು 90 ಕೆಜಿಯಿಂದ 76 ಕೆಜಿಗೆ ಇಳಿದಿದ್ದು, ಬರೋಬ್ಬರಿ 14 ಕೆಜಿ ತೂಕ ಕಳೆದುಕೊಂಡಿದ್ದಾರೆ.
ಯಾವುದೇ ಟ್ರೆಡ್‌ಮಿಲ್, ದುಬಾರಿ ಫಿಟ್‌ನೆಸ್ ಉಪಕರಣಗಳು ಅಥವಾ ನಿಯಮಿತ ಜಿಮ್ ಸೆಷನ್‌ಗಳಿಲ್ಲದೆಯೇ, ತಮ್ಮ ಮನೆಯಲ್ಲಿದ್ದ ಜಾಗವನ್ನೇ ಬಳಸಿಕೊಂಡು ನಡಿಗೆಯನ್ನು ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಂಡಿರುವುದು ಅಂಬಿಕಾ ಅವರ ವಿಶೇಷತೆಯಾಗಿದೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, “ಅದೇ ಟಿ-ಶರ್ಟ್, ಆದರೆ ಬೇರೆಯದೇ ಮಹಿಳೆ. 90 ಕೆಜಿಯಿಂದ 76 ಕೆಜಿಗೆ ಇಳಿಕೆ. 14 ಕೆಜಿ ಕಡಿಮೆಯಾಗಿದೆ. ಆದರೆ ಇಂದು ನನ್ನನ್ನು ನಾನು ನೋಡುವ ರೀತಿಯೇ ಅತ್ಯಂತ ದೊಡ್ಡ ಬದಲಾವಣೆ. ನಿರಂತರತೆ, ತಾಳ್ಮೆ ಮತ್ತು ನಿಮ್ಮನ್ನು ನೀವು ನಂಬಿದರೆ ಏನು ಬೇಕಾದರೂ ಬದಲಾಯಿಸಬಹುದು. ನನ್ನಿಂದ ಸಾಧ್ಯವಾದರೆ ನಿಮ್ಮಿಂದಲೂ ಸಾಧ್ಯ” ಎಂದು ಬರೆದುಕೊಂಡಿದ್ದಾರೆ.
ಪತ್ರಿಕೆಯೊಂದರ ಸಂದರ್ಶನವೊಂದರಲ್ಲಿ ಮಾತನಾಡಿದ ಅಂಬಿಕಾ, “ಪ್ರತಿದಿನ 20,000 ಹೆಜ್ಜೆ ನಡೆಯುವುದು ನನ್ನ ತೂಕ ಇಳಿಕೆಯ ಪಯಣದಲ್ಲಿ ಗೇಮ್ ಚೇಂಜರ್ ಆಯಿತು. ಫಿಟ್‌ನೆಸ್‌ಗೆ ಯಾವಾಗಲೂ ದುಬಾರಿ ಉಪಕರಣಗಳು ಅಥವಾ ಸಂಕೀರ್ಣ ವ್ಯಾಯಾಮಗಳೇ ಬೇಕಿಲ್ಲ. ಸರಳ ಅಭ್ಯಾಸಗಳನ್ನು ನಿರಂತರವಾಗಿ ಪಾಲಿಸಿದರೆ ದೊಡ್ಡ ಬದಲಾವಣೆ ತರಬಹುದು” ಎಂದಿದ್ದಾರೆ.
ಕೇವಲ ನಡಿಗೆಯೊಂದೇ ತೂಕ ಇಳಿಕೆಗೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿರುವ ಅವರು, “ತೂಕ ಇಳಿಕೆ ಎಂದರೆ ಹಸಿವಿನಿಂದ ಬಳಲುವುದು ಅಥವಾ ಶಾರ್ಟ್‌ಕಟ್ ಹುಡುಕುವುದಲ್ಲ. ಬದಲಾಗಿ ನಿರಂತರತೆ, ಶಿಸ್ತು ಮತ್ತು ಪ್ರತಿದಿನ ಸಣ್ಣಪುಟ್ಟ ಜೀವನಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು. ನಡಿಗೆಯ ಜೊತೆಗೆ ಎಚ್ಚರಿಕೆಯ ಆಹಾರ ಸೇವನೆ (Mindful Eating) ಮತ್ತು ಕ್ಯಾಲೋರಿ ಕೊರತೆಯನ್ನು (Calorie Deficit) ಕಾಯ್ದುಕೊಂಡಿದ್ದು ನನಗೆ ನೆರವಾಯಿತು. ದೈಹಿಕ ಬದಲಾವಣೆಗಿಂತ ಹೆಚ್ಚಾಗಿ ಆತ್ಮವಿಶ್ವಾಸ, ಶಕ್ತಿ ಮತ್ತು ಸ್ವಯಂ-ಪ್ರೀತಿಯನ್ನು ಗಳಿಸಿದ್ದು ನನ್ನ ದೊಡ್ಡ ಗೆಲುವು” ಎಂದು ತಿಳಿಸಿದ್ದಾರೆ.
ನೆಪಗಳನ್ನು ಹೇಳುವುದನ್ನು ನಿಲ್ಲಿಸಿ ನಮ್ಮ ಮೇಲೆ ನಮಗೆ ನಂಬಿಕೆ ಇಟ್ಟರೆ, ನಾವು ವಾಸಿಸುವ ಕೋಣೆಯಲ್ಲೇ ಶೂ ಧರಿಸಿ ನಡೆಯುವ ಮೂಲಕವೂ ಫಿಟ್‌ನೆಸ್ ಪಯಣವನ್ನು ಆರಂಭಿಸಬಹುದು ಎಂಬುದಕ್ಕೆ ಅಂಬಿಕಾ ಸಾಗರ್ ಅವರ ಜರ್ನಿ ಉತ್ತಮ ಉದಾಹರಣೆಯಾಗಿದೆ.
ನಮ್ಮ ದೇಹವು ದಿನನಿತ್ಯ ಖರ್ಚು ಮಾಡುವ ಕ್ಯಾಲೋರಿಗಿಂತ ಸ್ವಲ್ಪ ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಆಹಾರದ ಮೂಲಕ ಸೇವಿಸುವುದನ್ನು ‘ಕ್ಯಾಲೋರಿ ಡೆಫಿಸಿಟ್’ ಎನ್ನುತ್ತಾರೆ. ಇನ್ನು ಮೊಬೈಲ್ ಅಥವಾ ಟಿವಿ ನೋಡದೆ, ಹಸಿವನ್ನು ಅರಿತು ನಿಧಾನವಾಗಿ ಅಗಿದು ತಿನ್ನುವುದನ್ನು ‘ಮೈಂಡ್‌ಫುಲ್ ಈಟಿಂಗ್’ ಎನ್ನಲಾಗುತ್ತದೆ.
ಗಮನಿಸಿ: ತೂಕ ಇಳಿಸಲು ಹೊಸದಾಗಿ ವಾಕಿಂಗ್ ಆರಂಭಿಸುವವರು ಮೊದಲ ದಿನವೇ 20,000 ಹೆಜ್ಜೆಗಳ ಗುರಿ ಇಟ್ಟುಕೊಳ್ಳಬಾರದು. ಆರಂಭದಲ್ಲಿ ದಿನಕ್ಕೆ 5,000 ದಿಂದ 7,000 ಹೆಜ್ಜೆಗಳಿಂದ ಶುರುಮಾಡಿ, ದೇಹ ಒಗ್ಗಿಕೊಂಡಂತೆ ಹಂತ ಹಂತವಾಗಿ ಹೆಜ್ಜೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಸುರಕ್ಷಿತ.
ಫೋನ್‌ನಲ್ಲಿ ಮಾತನಾಡುವಾಗ ಕುಳಿತುಕೊಳ್ಳುವ ಬದಲು ಕೋಣೆಯಲ್ಲೇ ಅತ್ತಿತ್ತ ನಡೆಯಿರಿ.
ಊಟದ ನಂತರ ಕನಿಷ್ಠ 10–15 ನಿಮಿಷ ಮನೆಯೊಳಗೇ ನಿಧಾನವಾಗಿ ವಾಕ್ ಮಾಡಿ.
ಬೋರ್ ಆಗದಿರಲು ಇಷ್ಟದ ಹಾಡು ಅಥವಾ ಪಾಡ್‌ಕಾಸ್ಟ್ ಕೇಳುತ್ತಾ ನಡೆಯಿರಿ.
ಮನೆಯೊಳಗೆ ನಡೆಯುವಾಗಲೂ ಹಿಮ್ಮಡಿ ಮತ್ತು ಮೊಣಕಾಲಿನ ರಕ್ಷಣೆಗಾಗಿ ಮೆತ್ತಗಿರುವ ವಾಕಿಂಗ್ ಶೂ ಅಥವಾ ಚಪ್ಪಲಿ ಧರಿಸುವುದು ಉತ್ತಮ.
(ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒಳಗೊಂಡಿದ್ದು, ಯಾವುದೇ ಆರೋಗ್ಯ ಅಥವಾ ಆಹಾರ ಪದ್ಧತಿಯನ್ನು ಅನುಸರಿಸುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ).
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.