
ನೀವು ಸಿಂಗಾಪುರ ನೋಡಬೇಕೆಂದರೆ ಸಾವಿರಾರು ರುಪಾಯಿ ಖರ್ಚು ಮಾಡಿ ಫ್ಲೈಟು ಹತ್ತಬೇಕಿಲ್ಲ. ಮಲ್ನಾಡಲ್ಲೇ ಎರಡ್ಮೂರು ಸಿಂಗಾಪುರಗಳನ್ನು ಕಾಣಬಹುದು. ಹೆಸರಾದದ್ದು ಬೇಕೆಂದರೆ ಶನಿ ಶಿಂಗ್ಣಾಪುರ ಇದೆಯಲ್ಲ ? ಅಯ್ಯೋ ಅದು ಸ್ವಲ್ಪ ಹೆಸರು ಚೇಂಜ್ ಇದೆ ಅಲ್ವಾ? ಆದರೆ ಇಂಥ ಸಣ್ಣ ಚೇಂಜ್ ಕೂಡಾ ಇಲ್ಲದ ಒಂದೇ ಹೆಸರಿನ ಎರಡು ನಗರಗಳು ಎಷ್ಟೊಂದಿವೆ ಗೊತ್ತಾ? ಹೀಗೆ ವಿದೇಶದ ಖ್ಯಾತ ನಗರಗಳ ಹೆಸರು ಹೊತ್ತ ಖ್ಯಾತವಾದಂಥದ್ದೇ ಊರು ನಮ್ಮಲ್ಲಿ ಹಲವಿವೆ. ಉದಾಹರಣೆಗೆ ಲಕ್ನೋ ಹೆಸರಿನ ನಗರ ಉತ್ತರ ಪ್ರದೇಶದಲ್ಲೂ ಇದೆ, ಅಮೆರಿಕದಲ್ಲೂ ಇದೆ. ಯಾರು ಯಾರನ್ನು ಕಾಪಿ ಮಾಡಿದರೋ ಅಥವಾ ಕಾಕತಾಳೀಯವೋ... ಒಟ್ಟಿನಲ್ಲಿ ಈ ವಿಷಯ ಆಸಕ್ತಿ ಕೆರಳಿಸುತ್ತಿರುವುದಂತೂ ಹೌದು. ಹಾಗಿದ್ದರೆ, ಯಾವೆಲ್ಲ ನಗರಗಳು ಒಂದೇ ಹೆಸರನ್ನು ಹಂಚಿಕೊಂಡಿವೆ ನೋಡೋಣ.
ಕೊಚ್ಚಿ, ಕೇರಳ/ ಕೊಚ್ಚಿ, ಜಪಾನ್
ಕೇರಳದ ಎರ್ನಾಕುಲಂನ ರಾಜಧಾನಿ ಕೊಚ್ಚಿ ಯಾರಿಗೆ ಪರಿಚಯವಿಲ್ಲ? 'ಅರೇಬಿಯನ್ ಸಮುದ್ರದ ರಾಣಿ' ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತದೆ. ಈ ರಾಣಿ ತನ್ನ ಹೆಸರನ್ನು ಜಪಾನಿನ ಸಮುದ್ರ ನಗರಿಯೊಂದಿಗೆ ಹಂಚಿಕೊಂಡಿದ್ದಾಳೆ. ಎರಡೂ ನಗರಗಳ ಹೆಸರೂ ಒಂದೇ ಅಲ್ಲದೆ, ಎರಡೂ ಕಡೆಯೂ ಸಮುದ್ರಗಳಿರುವುದು ವಿಶೇಷ.
ಡೆಲ್ಲಿ, ಭಾರತ/ಡೆಲ್ಲಿ, ಯುನೈಟೆಡ್ ಸ್ಟೇಟ್ಸ್
ನಮ್ಮ ದೇಶದ ರಾಜಧಾನಿಯದೇ ಹೆಸರು ಕೆನಡಾದ ಒಂಟಾರಿಯೋದಲ್ಲಿರುವ ಪಟ್ಟಣಕ್ಕಿದೆ. ಆದರೆ, ನಮ್ಮ ಡೆಲ್ಲಿಯಲ್ಲಿರುವ ಮೊಘಲ್ ಸ್ಮಾರಕಗಳು, ಆ ಸೂಪರ್ ಟೇಸ್ಟಿ ನೂರು ವೆರೈಟಿಯ ಸ್ಟ್ರೀಟ್ ಫುಡ್, ಸ್ಟ್ರೀಟ್ ಮಾರ್ಕೆಟ್‌ಗಳು ಕೆನಡಾದಲ್ಲಿರಲು ಸಾಧ್ಯವೇ ಇಲ್ಲ ಬಿಡಿ. ಕೆನಡಾದ ಡೆಲ್ಲಿಯನ್ನು 'ತಂಬಾಕು ದೇಶದ ಹೃದಯ' ಎನ್ನಲಾಗುತ್ತದೆ.
ಲಕ್ನೌ, ಉತ್ತರ ಪ್ರದೇಶ/ ಲಕ್ನೌ, ಯುನೈಟೆಡ್ ಸ್ಟೇಟ್ಸ್
ನವಾಬರ ನಗರ ಎಂದೇ ಖ್ಯಾತಿಯಾಗಿರುವ ಉತ್ತರ ಪ್ರದೇಶದ ಲಕ್ನೌ ಪುರಾತನ ಭಾರತದ ಹೊಳಪನ್ನೂ, ವಾಸ್ತುಶಿಲ್ಪದ ಸೌಂದರ್ಯವನ್ನೂ ಹಬ್ಬಿ ನಿಂತಿದೆ. ಆದರೆ, ಯುನೈಟೆಡ್ ಸ್ಟೇಟ್ಸ್‌ನ ಲಕ್ನೌ 5500 ಎಕರೆಗಳ ಪರ್ವತ ಪ್ರದೇಶದಲ್ಲಿರುವ ಎಸ್ಟೇಟ್ ಮ್ಯಾನ್ಶನ್.
ಬಾಲಿ, ರಾಜಸ್ಥಾನ/ ಬಾಲಿ, ಇಂಡೋನೇಷ್ಯಾ
ನಮ್ಮ ದೇಶದ ನವಜೋಡಿಗಳೆಲ್ಲ ಮುಂಚೆ ಮೈಸೂರು, ಊಟಿಗೆ ಹೋಗುತ್ತಿದ್ದಷ್ಟೇ ಸಲೀಸಾಗಿ ಹನಿಮೂನ್‌ಗೆಂದು ಇಂಡೋನೇಷ್ಯಾದ ಬಾಲಿಗೆ ಹಾರುವುದು ಈಗೀಗ ಕಾಮನ್ ಆಗಿಬಿಟ್ಟಿದೆ. ಈ ಬಾಲಿ ಜನಪ್ರಿಯ ಪ್ರವಾಸಿ ಪ್ರದೇಶವಾಗಿದ್ದರೆ, ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಬಾಲಿ ಪುಟಾಣಿ ಊರಾಗಿದೆ. ಹೆಸರಿನ ಹೊರತಾಗಿ ಇವೆರಡು ಬಾಲಿಗಳ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ ಬಿಡಿ.
ಹೈದರಾಬಾದ್, ಭಾರತ/ ಹೈದರಾಬಾದ್, ಪಾಕಿಸ್ತಾನ
ಹೈದರಾಬಾದ್ ನಗರ ಕಟ್ಟಿದ ಸುಲ್ತಾನ ಮೊಹಮ್ಮದ್ ಕ್ವಾಲಿ ಕುತುಬ್ ಶಾಹ್ ಸ್ಥಳೀಯ ನೃತ್ಯಗಾತಿಯಾದ ತನ್ನ ಪ್ರೇಯಸಿ ಭಾಗಮತಿಯ ಹೆಸರನ್ನು ಮೊದಲು ಈ ನಗರಕ್ಕಿಟ್ಟಿದ್ದ. ಆಗ ನಗರದ ಹೆಸರು ಭಾಗ್ಯನಗರ್ ಆಗಿತ್ತು. ತದನಂತರದಲ್ಲಿ ಭಾಗಮತಿಯು ಇಸ್ಲಾಂಗೆ ಮತಾಂತರವಾಗಿ ಹೆಸರನ್ನು ಹೈದರಾ ಎಂದು ಬದಲಿಸಿಕೊಳ್ಳುತ್ತಾಳೆ. ಆಗ ನಗರದ ಹೆಸರನ್ನು ರಾಜ ಹೈದರಾಬಾದ್ ಎಂದು ಬದಲಿಸಿದ ಎನ್ನಲಾಗುತ್ತದೆ. ಆದರೆ, ಪಾಕಿಸ್ತಾನದ ಹೈದರಾಬಾದ್ ಪ್ರವಾದಿ ಮೊಹಮ್ಮದರ ಸೋದರ ಸಂಬಂಧಿ ಹೈದರ್ ಅಲಿಯ ಹೆಸರನ್ನು ಹೊತ್ತಿದೆ. ಎರಡೂ ನಗರಗಳಿಗೂ ರಾಯಲ್ ಇತಿಹಾಸವಿದೆ.
ಬದಲಾದ ಟ್ರಾವೆಲ್ ಟ್ರೆಂಡ್: ನಿಮಗೆ ಯಾವುದು ಇಷ್ಟ?
ಬರೋಡಾ, ಗುಜರಾತ್/ ಬರೋಡಾ, ಯುನೈಟೆಡ್ ಸ್ಟೇಟ್ಸ್
ನವರಾತ್ರಿ ರುಚಿಕರ ಆಹಾರಕ್ಕೆ ಪ್ರಸಿದ್ಧಿಯಾಗಿರುವ ಬರೋಡಾ ಗುಜರಾತ್‌ನಲ್ಲಿದೆ. ಆದರೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಬರೋಡಾಕ್ಕೆ ಮೈಕೆಲ್ ಹೌಸರ್ ಈ ಹೆಸರಿಟ್ಟಿದ್ದಾರೆ. ಮುಂಚೆ ಅವರು ಪೊಮೊನಾ ಹೆಸರಿಡಲು ಬಯಸಿದ್ದರು. ಆದರೆ, ಆ ಹೆಸರಿನ ಸ್ಥಳವದಾಗಲೇ ಇದೆ ಎಂದು ಬರೋಡಾ ಎಂದಿಟ್ಟರು. ಈ ಹೆಸರಿನ ಸ್ಥಳವೂ ಭಾರತದಲ್ಲಿದೆ ಎಂಬುದು ಮೈಕೆಲ್‌ಗೆ ಗೊತ್ತಾಗಿದ್ದರೆ ಏನೋ ಮಾಡುತ್ತಿದ್ದರೋ?
ಸೇಲಂ, ತಮಿಳುನಾಡು/ಸೇಲಂ, ಯುನೈಟೆಡ್ ಸ್ಟೇಟ್ಸ್
ತಮಿಳುನಾಡಿನ ಸೇಲಂ ನಗರದ ಹೆಸರು 1 ಹಾಗೂ 2ನೇ ಶತಮಾನದ ಕೆತ್ತನೆ ಬರಹಗಳಲ್ಲೇ ಕಾಣಬಹುದು. ಯುನೈಟೆಡ್ ಸ್ಟೇಟ್ಸ್‌ನ ಸೇಲಂ ಎಂಬ ಹೆಸರನ್ನು ಹೀಬ್ರೂ ಭಾಷೆಯ ಶಾಂತಿ ಎಂಬ ಪದದಿಂದ ತೆಗೆದುಕೊಳ್ಳಲಾಗಿದೆ. ಅಂದರೆ, ಹೀಬ್ರೂವಿನಲ್ಲಿ ಶಾಂತಿಗೆ ಸೇಲಂ ಎನ್ನಲಾಗುತ್ತದೆ.
ಕಲ್ಕತ್ತಾ, ಪಶ್ಚಿಮ ಬಂಗಾಳ/ ಕಲ್ಕತ್ತಾ, ಯುನೈಟೆಡ್ ಸ್ಟೇಟ್ಸ್
ಅರೆ! ಈ ಯುನೈಟೆಡ್ ಸ್ಟೇಟ್ಸ್ ಭಾರತದ ನಗರಗಳ ಹೆಸರನ್ನೇ ಕಾಪಿ ಮಾಡಿರಬೇಕೇನೋ ಎಂದು ಅನುಮಾನ ಬರುತ್ತದೆ. ಎಷ್ಟೊಂದು ನಮ್ಮ ನಗರಗಳ ಹೆಸರೇ ಯುನೈಟೆಡ್ ಸ್ಟೇಟ್ಸ್‌ನಲ್ಲಿಯೂ ಇವೆ ಅಲ್ಲವೇ? ಆದರೆ ಬಿಡಿ, ನಮ್ಮ ಕಲ್ಕತ್ತಾದಷ್ಟು ಹೆಸರುವಾಸಿಯೇನಲ್ಲ ಓಹಿಯೋ ಸ್ಟೇಟ್‌ನ ಕಲ್ಕತ್ತಾ. ಹೆಸರಲ್ಲದೆ ಎರಡರ ನಡುವೆ ಮತ್ತೇನೂ ಸಾಮ್ಯತೆಗಳಿಲ್ಲ.
ನಿಮಗಿಂತ ಮೊದಲೇ ಈ ತಾಣಗಳು ಸಾಯಬಹುದು...
ಥಾನೆ, ಮಹಾರಾಷ್ಟ್ರ/ ಥಾನೆ, ಆಸ್ಟ್ರೇಲಿಯಾ
ಮಹಾರಾಷ್ಟ್ರದ ಥಾನೆಗೆ ಇಲ್ಲಿನ ಸುಂದರವಾದ ಬೀಚ್‌ಗಳಿಂದಾಗಿ ಈ ಹೆಸರು ಬಂದಿತು. ಆದರೆ, ಆಸ್ಟ್ರೇಲಿಯಾದ ಥಾನೆಗೆ ಈ ಹೆಸರು ಏಕೆ ಬಂದಿತೋ ಇದುವರೆಗೂ ಯಾರಿಗೂ ಮಾಹಿತಿ ಇಲ್ಲ.
ಪಾಟ್ನಾ, ಬಿಹಾರ/ಪಾಟ್ನಾ, ಸ್ಕಾಟ್‌ಲ್ಯಾಂಡ್
ಇದು ಮಾತ್ರ ಪಕ್ಕಾ ಕಾಪೀನೇ. ಏಕೆಂದರೆ ಬಿಹಾರದ ರಾಜಧಾನಿ ಪಾಟ್ನಾ ಮೇಲಿನ ಪ್ರೀತಿಯಿಂದಲೇ ವಿಲಿಯಂ ಫುಲ್ಲರ್ಟಾನ್ ಸ್ಕಾಟ್‌ಲ್ಯಾಂಡ್‌ನ ಹಳ್ಳಿಗೆ ಈ ಹೆಸರಿಟ್ಟಿದ್ದಾನೆ. ಆತನ ತಂದೆ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ಸೇವೆ ಸಲ್ಲಿಸುತ್ತಿದ್ದರು. ಹಾಗೂ ಪಾಟ್ನಾ ಮೇಲೆ ಅವರಿಗೆ ಎಲ್ಲಿಲ್ಲದ ಪ್ರೀತಿ ಬೆಳೆದಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.