ಕೆಲ ತಾಣಗಳು ಏರುವ ಸಮುದ್ರಕ್ಕೆ ಆಹಾರವಾದ್ರೆ, ಮತ್ತೆ ಕೆಲವು ಮಾಲಿನ್ಯಕ್ಕೆ ಬಲಿಯಾಗುತ್ತಿವೆ. ಇನ್ನು ಕೆಲವು ಮಣ್ಣಿನ ಸವಕಳಿಗೆ ಶರಣಾಗುತ್ತಿದ್ದರೆ, ಮತ್ತೊಂದಷ್ಟು ಮಾನವನ ಅಜ್ಞಾನಕ್ಕೆ, ಸ್ವಾರ್ಥಕ್ಕೆ ಕೊಲೆಯಾಗುತ್ತಿವೆ.
ಈ ಸ್ಥಳದಲ್ಲಿ ಯಾವುದಕ್ಕಾದ್ರೂ ಹೋಗೋ ಪ್ಲಾನ್ ನಿಮ್ಮದಿರಬಹುದು. ಹೋದಾಗ ಮರೆಯದೆ ಫೋಟೋ ತೆಗೆದುಕೊಂಡು ಬನ್ನಿ. ಮುಂದೊಂದು ದಿನ ಭೂಮಿ ಮೇಲೆ ಇಂಥ ಸ್ಥಳವಿತ್ತು, ನಾ ಅಲ್ಲಿ ಹೋಗಿದ್ದೆ ಅಂತ ಮಕ್ಕಳಿಗೆ ಕತೆ ಹೇಳುವಾಗ ಬೇಕಾಗುತ್ತದೆ! ಏಕಂದ್ರೆ, ನಿಮ್ಮ ಜೀವಿತಾವಧಿಯಲ್ಲೇ ಈ ಸ್ಥಳಗಳು ಮರೆಯಾಗಿಬಿಡಬಹುದು!
ಹೆಚ್ಚುತ್ತಿರುವ ಜಾಗತಿಕ ತಾಪಮಾನ, ಏರುತ್ತಿರುವ ಸಮುದ್ರ ನೀರಿನ ಮಟ್ಟ, ಮಾಲಿನ್ಯ, ಮಣ್ಣಿನ ಸವಕಲು ಮನುಷ್ಯನ ಈ ಎಲ್ಲ ತಪ್ಪುಗಳಿಗೆ ಪ್ರಕೃತಿ ಹಾಗೂ ಮನಮೋಹಕ ತಾಣಗಳು ಬೆಲೆ ತರುತ್ತಿವೆ. ಇಲ್ಲಿ ಅಂಥ ಕೆಲವು ವಿಶ್ವದ ಅದ್ಭುತ ತಾಣಗಳೆನಿಸಿಕೊಂಡ ಸ್ಥಳಗಳನ್ನು ಕೊಡಲಾಗಿದೆ.
ದಿ ಗ್ರೇಟ್ ಬ್ಯಾರಿಯರ್ ರೀಫ್, ಆಸ್ಟ್ರೇಲಿಯಾ
ಆಸ್ಟ್ರೇಲಿಯಾದಲ್ಲಿರುವ ಹವಳದ ಬಂಡೆ ಭೂಮಿಯ ಮೇಲೆಯೇ ವೈಶಿಷ್ಟ್ಯವಾದುದು. ಏಳು ಪ್ರಾಕೃತಿಕ ಅದ್ಭುತಗಳಲ್ಲಿ ಒಂದೆನಿಸಿರುವ ಗ್ರೇಟ್ ಬ್ಯಾರಿಯರ್ ರೀಫ್, ಮರೆಯಾಗುವ ಹಾದಿಯಲ್ಲಿದೆ. ಇದರ ಅತ್ಯಂತ ವಿಶಿಷ್ಠ ಬಣ್ಣ ಈಗಾಗಲೇ ಬದಲಾಗಿದೆ. ಬಿಬಿಸಿಯ ಪ್ರಕಾರ, 1500 ಕಿಲೋಮೀಟರ್‌ನಷ್ಟು ಗ್ರೇಟ್ ಬ್ಯಾರಿಯರ್ ಈಗಾಗಲೇ ಶಾಶ್ವತವಾಗಿ ಮರೆಯಾಗಿದ್ದು, ಈಗಿನ ಹಾಗೂ ಭವಿಷ್ಯದ ತಾಪಮಾನ ಬದಲಾವಣೆಗೆ ಅಳಿದುಳಿದ ಹವಳದ ಬಂಡೆಗಳು ಕೂಡಾ ಸಂಪೂರ್ಣವಾಗಿ ಕಣ್ಮರೆಯಾಗಲಿದೆ ಎಂಬ ಆತಂಕ ಈಗಿನದು.
ಚೀನಾದ ಮಹಾಗೋಡೆ
ಚಂದ್ರನ ಮೇಲೆ ನಿಂತರೆ ಕಾಣುವ ಭೂಮಿಯ ಒಂದೇ ಒಂದು ಭಾಗವೆಂದರೆ ಅದು ಚೀನಾದ ಮಹಾಗೋಡೆ. ಮಿಂಗ್ ಆಡಳಿತ ಸಂದರ್ಭದಲ್ಲಿ ಕಟ್ಟಿರುವ ಈ ಕೋಟೆಯ ಸುಮಾರು 2000 ಕಿ.ಮೀ. ಉದ್ದದ ಭಾಗ ಈಗಾಗಲೇ ಕಾಣೆಯಾಗಿದೆ. ಪ್ರಾಕೃತಿಕ ಸವಕಳಿ ಹಾಗೂ ಮನುಷ್ಯನ ಹಸ್ತಕ್ಷೇಪಕ್ಕೆ ಜಗತ್ತಿನ ಅದ್ಭುತವೊಂದು ಹೇಳಹೆಸರಿಲ್ಲದಂತಾಗುತ್ತಿದೆ.
ಸೀಶೆಲ್ಸ್
ಪೂರ್ವ ಆಫ್ರಿಕಾದ ದ್ವೀಪ ಸಮೂಹವಾಗಿರುವ ಸೀಶೆಲ್ಸ್ ಏರುತ್ತಿರುವ ಸಮುದ್ರ ಮಟ್ಟಕ್ಕೆ ತನ್ನ ಸುಂದರ ಹವಳಗಳನ್ನೆಲ್ಲ ಸಾಯಗೊಡುತ್ತಿದೆ. ಈ ದ್ವೀಪಗಳು ಕೂಡಾ ಮುಳುಗುತ್ತಿದ್ದು, ಬಹುಬೇಗ ಅವು ಇದ್ದವೆಂಬ ಕುರುಹೇ ಉಳಿಯಂತಾಗುವುದು.
ಕಿರಿಬಾಟಿ
ಸಮುದ್ರ ಮಟ್ಟದಿಂದ ಕೇವಲ 2 ಮೀಟರ್ ಎತ್ತರದಲ್ಲಿರುವ, ಪ್ರಪಂಚದಲ್ಲಿ ಅತಿ ಕೆಳಗಿರುವ ದ್ವೀಪದೇಶ ಕಿರಿಬಾಟಿ. ಏರುತ್ತಿರುವ ಸಮುದ್ರ ಮಟ್ಟಕ್ಕೆ ಈ ದೇಶ ಶೀಘ್ರ ಬಲಿಯಾಗಲಿದೆ.
ಮಾಲ್ಡೀವ್ಸ್
2004ರ ಸುನಾಮಿಯು ಮಾಲ್ಡೀವ್ಸ್‌ನ 3ರಲ್ಲಿ ಎರಡು ಭಾಗವನ್ನು ನುಂಗಿ ನೀರು ಕುಡಿದದ್ದು ನಿಮಗೂ ಗೊತ್ತಿರಬಹುದು. ಅದರಿಂದಾಗಿ ಸುಮಾರು 20 ದ್ವೀಪಗಳು ಶಾಶ್ವತವಾಗಿ ಮ್ಯಾಪ್‌ನಿಂದ ಅಳಿಸಿ ಹೋದವು. ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಐಸ್‌ಬರ್ಗ್ ಹಾಗೂ ಹಿಮಗಡ್ಡೆಗಳು ಕರಗುತ್ತಿದ್ದು, ಇದರಿಂದ ಸಮುದ್ರ ಮಟ್ಟ ಮೇಲೇರುತ್ತಲೇ ಇದೆ. ಇದೇ ಗತಿಯಲ್ಲಿ ಮುಂದುವರಿದರೆ ಇನ್ನು 30 ವರ್ಷಗಳಲ್ಲಿ ಮಾಲ್ಡೀವ್ಸ್ ಮರೆಯಾಗೇ ಬಿಡುತ್ತದೆ.
ಕಾಂಗೋ ಬೇಸಿನ್
ಅಮೇಜಾನ್ ಬಿಟ್ಟರೆ ಕಾಂಗೋ ಬೇಸಿನ್ ಅತಿ ದೊಡ್ಡ ಉಷ್ಣವಲಯದ ಕಾಡು. ಆದರೆ ಕೃಷಿ, ರಸ್ತೆ ಅಭಿವೃದ್ಧಿ, ಮರ ಕಡಿತ, ತೈಲ ಗಣಿಗಾರಿಕೆ ಹಾಗೂ ಮೈನಿಂಗ್ ನೆಪದಲ್ಲಿ ಪ್ರತಿ ವರ್ಷ 3.7 ದಶಲಕ್ಷ ಎಕರೆಯಷ್ಟು ಈ ಕಾಡು ನಾಶವಾಗುತ್ತಲೇ ಇದೆ. ಮನುಷ್ಯನ ಸ್ವಾರ್ಥಕ್ಕೆ ಮಿತಿಯೇ ಇಲ್ಲದಿರುವಾಗ ಇನ್ನೆಷ್ಟು ವರ್ಷ ಬೇಕು ಸಂಪೂರ್ಣ ಕಾಂಗೋ ಅರಣ್ಯ ನಾಶವಾಗಲು.
ಸ್ಯಾನ್ ಫ್ರಾನ್ಸಿಸ್ಕೋ
ಸ್ಯಾನ್ ಫ್ರಾನ್ಸಿಸ್ಕೋದ ಬಹು ದೊಡ್ಡ ಕರಾವಳಿ ಪ್ರದೇಶ ಸುಲಭವಾಗಿ ಪ್ರವಾಹಕ್ಕೆ ಈಡಾಗಬಲ್ಲದು. ಅದೂ ಏರುತ್ತಿರುವ ಸಮುದ್ರ ಮಟ್ಟವು ಊರೂರನ್ನೇ ತಿನ್ನಲು ಬಾಯಿ ಕಳೆದುಕೊಂಡು ಬರುತ್ತಿರುವ ಈ ಹೊತ್ತಿನಲ್ಲಿ.
ವೆನೀಸ್
'ತೇಲುವ ನಗರ' ಎಂದೇ ಜನಪ್ರಿಯವಾಗಿರುವ ವೆನೀಸ್ ಇನ್ನು 100 ವರ್ಷಗಳಲ್ಲಿ ಹವಾಮಾನ ಬದಲಾವಣೆಗೆ ಮುಳುಗಿ ಹೋಗಲಿದೆ. ವೆನೀಸ್ ಹಾಗೂ ಇಟಲಿಯ ಆಡ್ರಿಯಾಟಿಕ್ ತೀರಪ್ರದೇಶ ಕಾಣೆಯಾಗುವ ಭಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಆಲ್ಪ್ಸ್
ಪ್ರಖ್ಯಾತ ಯೂರೋಪಿಯನ್ ಆಲ್ಪ್ಸ್ ಪರ್ವತ ಪ್ರದೇಶಕ್ಕಿಂತ ಕಡಿಮೆ ಆಲ್ಟಿಟ್ಯೂಡ್ ಪ್ರದೇಶದಲ್ಲಿವೆ. ಜಾಗತಿಕ ತಾಪಮಾನ ಏರಿಕೆಗೆ ಇಲ್ಲಿನ ಮಂಜುಗಡ್ಡೆಗಳು ಹಾಗೂ ಸ್ಕಿ ರೆಸಾರ್ಟ್ ಬಹಳ ಸುಲಭವಾಗಿ ಬಲಿಯಾಗಬಲ್ಲವು. ಈಗಿನ ಗತಿಯಲ್ಲೇ ಮಂಜು ಕರಗಿದರೆ ಈ ಶತಮಾನದಂತ್ಯದ ಹೊತ್ತಿಗೆ ಸ್ವಿಸ್ ಆಲ್ಪ್ಸ್ ಮೇಲೆ ಯಾವುದೇ ಹಿಮ ಇರುವುದಿಲ್ಲ.