
ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅನೇಕ ಬಾರಿ ನಿಂಬೆ ಹಣ್ಣನ್ನು ನಾವು ಬಳಸ್ತೇವೆ. ಬೆಳಿಗ್ಗೆ ಬಿಸಿ ನೀರಿಗೆ ನಿಂಬೆಹಣ್ಣಿನ ರಸ ಬೆರೆಸಿ ಕುಡಿಯುವ ಅನೇಕರು, ಅಡುಗೆ ರುಚಿ ಹೆಚ್ಚಿಸಲು ನಿಂಬೆಹಣ್ಣಿನ ರಸ ಬಳಸ್ತೇವೆ. ಆದ್ರೆ ಈ ನಿಂಬೆ ಹಣ್ಣು ಕತ್ತರಿಸೋದು ಒಂದು ಕಲೆ. ಒಳಗೆ ಎಷ್ಟೇ ರಸ ಇದ್ರೂ ಅದನ್ನು ಸರಿಯಾಗಿ ಕತ್ತರಿಸದೆ ಹೋದಾಗ ಸರಿಯಾಗಿ ರಸ ಹಿಂಡೋಕೆ ಸಾಧ್ಯವಾಗೋದಿಲ್ಲ. ಈಗ ವಿದೇಶದಲ್ಲಿ ನಿಂಬೆ ರಸ ತೆಗೆಯಲು ಹೊಸ ಟ್ರಿಕ್ಸ್ ಬಳಕೆ ಮಾಡ್ತಿದ್ದಾರೆ.
ನಿಂಬೆಹಣ್ಣಿನಿಂದ ಸುಲಭವಾಗಿ ಹೆಚ್ಚು ರಸ ತೆಗೆಯಲು ಒಂದು ಸರಳ ಟ್ರಿಕ್ ಸಹಾಯ ಮಾಡುತ್ತದೆ. ಅದುವೇ ನಿಂಬೆಹಣ್ಣನ್ನು ಕೆಲವು ಸೆಕೆಂಡ್ಗಳ ಕಾಲ ಮೈಕ್ರೋವೇವ್ನಲ್ಲಿ ಬಿಸಿ ಮಾಡುವುದು. ನಿಂಬೆಹಣ್ಣಿನ ಒಳಭಾಗದಲ್ಲಿ ಸಣ್ಣ ಸಣ್ಣ ಭಾಗಗಳಲ್ಲಿ ರಸ ಸಂಗ್ರಹವಾಗಿರುತ್ತದೆ. ಈ ಭಾಗಗಳ ಸುತ್ತಲೂ ತೆಳುವಾದ ಪೊರೆಗಳು ಮತ್ತು ಸಸ್ಯಕೋಶಗಳಿರುತ್ತವೆ. ನಿಂಬೆಹಣ್ಣನ್ನು ಸ್ವಲ್ಪ ಬಿಸಿ ಮಾಡಿದಾಗ ಈ ರಚನೆಗಳು ಮೃದುವಾಗಬಹುದು. ಇದರಿಂದ ನಿಂಬೆಹಣ್ಣು ಮೊದಲಿಗಿಂತ ಸ್ವಲ್ಪ ಮೆತ್ತಗಾಗಿ, ಹಿಂಡಲು ಸುಲಭವಾಗುತ್ತದೆ. ಆದರೆ ಮೈಕ್ರೋವೇವ್ನಲ್ಲಿ ಬಿಸಿ ಮಾಡುವುದರಿಂದ ನಿಂಬೆಹಣ್ಣಿನಲ್ಲಿ ಹೊಸದಾಗಿ ರಸ ಉತ್ಪತ್ತಿಯಾಗುವುದಿಲ್ಲ. ಅದರೊಳಗೆ ಈಗಾಗಲೇ ಇರುವ ರಸವನ್ನು ಸುಲಭವಾಗಿ ಹೊರತೆಗೆಯಲು ಇದು ಸಹಾಯ ಮಾಡುತ್ತದೆ. ಅದರಲ್ಲೂ ಫ್ರಿಡ್ಜ್ನಲ್ಲಿ ಇಟ್ಟು ಗಟ್ಟಿಯಾಗಿರುವ ನಿಂಬೆಹಣ್ಣಿಗೆ ಈ ಟ್ರಿಕ್ ಉಪಯುಕ್ತ.
ಈ ವಿಧಾನವನ್ನು ಅನುಸರಿಸಲು ಕೆಲವು ಸರಳ ಹಂತಗಳನ್ನು ಪಾಲಿಸಿದರೆ ಸಾಕು.
1.ಮೊದಲು ನಿಂಬೆಹಣ್ಣನ್ನು ಚೆನ್ನಾಗಿ ತೊಳೆಯಿರಿ.
2.ಮೈಕ್ರೋವೇವ್ನಲ್ಲಿ ಬಳಸಬಹುದಾದ ಪ್ಲೇಟ್ನಲ್ಲಿ ನಿಂಬೆಹಣ್ಣನ್ನು ಇಡಿ.
3.ಸುಮಾರು 10ರಿಂದ 15 ಸೆಕೆಂಡ್ಗಳ ಕಾಲ ಮೈಕ್ರೋವೇವ್ನಲ್ಲಿ ಬಿಸಿ ಮಾಡಿ.
4.ಹೊರತೆಗೆದ ತಕ್ಷಣ ಹಿಂಡಬೇಡಿ. ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ.
5.ಬಳಿಕ ಅಡುಗೆ ಮನೆಯ ಕೌಂಟರ್ ಮೇಲೆ ನಿಂಬೆಹಣ್ಣನ್ನು ಇಟ್ಟು ಅಂಗೈಯಿಂದ 15ರಿಂದ 20 ಸೆಕೆಂಡ್ಗಳ ಕಾಲ ನಿಧಾನವಾಗಿ ಉರುಳಿಸಿ.
6.ನಂತರ ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ ರಸ ಹಿಂಡಿ.
ಹೀಗೆ ಮಾಡುವುದರಿಂದ ನಿಂಬೆಹಣ್ಣನ್ನು ಹಿಂಡುವಾಗ ಹೆಚ್ಚು ಶ್ರಮ ಪಡಬೇಕಾಗುವುದಿಲ್ಲ. ಮೈಕ್ರೋವೇವ್ನ ಸಾಮರ್ಥ್ಯ ಮತ್ತು ನಿಂಬೆಹಣ್ಣಿನ ಗಾತ್ರಕ್ಕೆ ಅನುಗುಣವಾಗಿ ಬಿಸಿ ಮಾಡುವ ಸಮಯ ಬದಲಾಗಬಹುದು. ನಿಂಬೆಹಣ್ಣನ್ನು ಮೈಕ್ರೋವೇವ್ನಲ್ಲಿ ಇಡುವಾಗ ಒಂದು ವಿಷಯ ನೆನಪಿನಲ್ಲಿಡಿ. ಹೆಚ್ಚು ಹೊತ್ತು ಬಿಸಿ ಮಾಡಬಾರದು. ನಿಂಬೆಹಣ್ಣು ಸ್ವಲ್ಪ ಬೆಚ್ಚಗಾಗಿ ಮೆತ್ತಗಾಗುವುದು ಮಾತ್ರ ಈ ಟ್ರಿಕ್ನ ಉದ್ದೇಶ. ತುಂಬಾ ಬಿಸಿಯಾದರೆ ಅದನ್ನು ಕೈಯಲ್ಲಿ ಹಿಡಿಯಲು ಕಷ್ಟವಾಗಬಹುದು. ಹೀಗಾಗಿ ಮೈಕ್ರೋವೇವ್ನಿಂದ ತೆಗೆದ ಬಳಿಕ ಹಿಡಿಯಲು ಸುರಕ್ಷಿತವಾಗುವಷ್ಟು ತಣ್ಣಗಾಗಲು ಬಿಡಿ.
ಈ ಟ್ರಿಕ್ ಪ್ರಯತ್ನಿಸಿ
ನಿಮ್ಮ ಮನೆಯಲ್ಲಿ ಮೈಕ್ರೋವೇವ್ ಇಲ್ಲದಿದ್ದರೂ ಚಿಂತಿಸುವ ಅಗತ್ಯವಿಲ್ಲ. ನಿಂಬೆಹಣ್ಣನ್ನು ಕತ್ತರಿಸುವ ಮೊದಲು ಅಡುಗೆ ಮನೆಯ ಕೌಂಟರ್ ಮೇಲೆ ಇಟ್ಟು ಅಂಗೈಯಿಂದ ಸ್ವಲ್ಪ ಒತ್ತಡ ಹಾಕುತ್ತಾ 15ರಿಂದ 20 ಸೆಕೆಂಡ್ಗಳ ಕಾಲ ಮುಂದಕ್ಕೆ ಮತ್ತು ಹಿಂದಕ್ಕೆ ಉರುಳಿಸಿ. ನಂತರ ಅರ್ಧಕ್ಕೆ ಕತ್ತರಿಸಿ ರಸ ಹಿಂಡಿ. ಈ ವಿಧಾನದಿಂದಲೂ ಒಳಗಿರುವ ರಸವನ್ನು ಸುಲಭವಾಗಿ ಹೊರತೆಗೆಯಲು ಸಹಾಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.