
ನಿಂಬೆ ಹಣ್ಣನ್ನು ನಾವು ಒಂದೇ ಬಾರಿ ಪೂರ್ತಿಯಾಗಿ ಬಳಸೋದಿಲ್ಲ. ಟೀ, ಅಡುಗೆ ಅಥವಾ ಸಲಾಡ್ಗೆ ಕೆಲವೇ ಹನಿಗಳು ಬೇಕಾಗುತ್ತವೆ. ಹೀಗಾಗಿ ಅರ್ಧ ನಿಂಬೆ ಉಳಿಯೋದು ಸಾಮಾನ್ಯ. ಆದರೆ ಅದನ್ನು ಹಾಗೇ ಫ್ರಿಡ್ಜ್ ನಲ್ಲಿ ಇಟ್ಟರೆ, ಕತ್ತರಿಸಿದ ಭಾಗ ಒಣಗಿ ನಿಂಬೆ ಬೇಗ ಹಾಳಾಗಬಹುದು. ಹಾಗಾದರೆ ಉಳಿದ ಅರ್ಧ ನಿಂಬೆಯನ್ನು ತಾಜಾವಾಗಿ ಇಡೋದು ಹೇಗೆ?
ಕತ್ತರಿಸಿದ ನಿಂಬೆ ಹಣ್ಣನ್ನು ನೇರವಾಗಿ ನೀವು ಫ್ರಿಡ್ಜ್ ನಲ್ಲಿ ಇಡಬಾರದು. ಕತ್ತರಿಸಿದ ನಿಂಬೆ ಹಣ್ಣು ತಾಜಾ ಇರಬೇಕು ಅಂದ್ರೆ ನೀವು ಅಲ್ಯೂಮಿನಿಯಂ ಫಾಯಿಲ್ ಬಳಸಬೇಕು. ಅರ್ಧ ನಿಂಬೆ ಉಳಿದಾಗ, ಅದರ ಕತ್ತರಿಸಿದ ಭಾಗವನ್ನು ಅಲ್ಯೂಮಿನಿಯಂ ಫಾಯಿಲ್ನಿಂದ ಬಿಗಿಯಾಗಿ ಮುಚ್ಚಿ. ನಂತರ ಅದನ್ನು ಫ್ರಿಡ್ಜ್ ನಲ್ಲಿ ಇಡಬೇಕು.
ನಿಂಬೆಯನ್ನು ಕತ್ತರಿಸಿದಾಗ ಅದರ ಒಳಭಾಗ ನೇರವಾಗಿ ಗಾಳಿಗೆ ಒಡ್ಡಿಕೊಳ್ಳುತ್ತದೆ. ಇದರಿಂದ ತೇವಾಂಶ ಕಡಿಮೆಯಾಗಿ ಕತ್ತರಿಸಿದ ಭಾಗ ಒಣಗಬಹುದು. ಫಾಯಿಲ್ನಿಂದ ಮುಚ್ಚುವುದರಿಂದ ಗಾಳಿಯ ನೇರ ಸಂಪರ್ಕ ಕಡಿಮೆಯಾಗುತ್ತದೆ. ಜೊತೆಗೆ ಫ್ರಿಡ್ಜ್ ನಲ್ಲಿರುವ ಈರುಳ್ಳಿ, ಬೆಳ್ಳುಳ್ಳಿ ಮತ್ತು ಇತರ ಆಹಾರಗಳ ವಾಸನೆ ನಿಂಬೆಗೆ ತಾಗುವುದೂ ಕಡಿಮೆಯಾಗುತ್ತದೆ.
ನಿಂಬೆಯ ವಿಶೇಷತೆ ಅದರ ತಾಜಾ ಹುಳಿ ಸುವಾಸನೆ. ಮುಚ್ಚದೆ ಫ್ರಿಡ್ಜ್ ನಲ್ಲಿ ಇಟ್ಟರೆ, ಅದರ ವಾಸನೆ ಮತ್ತು ರುಚಿಯ ಮೇಲೆ ಸುತ್ತಮುತ್ತಲಿನ ಆಹಾರಗಳ ಪ್ರಭಾವ ಬೀಳಬಹುದು. ಕತ್ತರಿಸಿದ ಭಾಗವನ್ನು ಮುಚ್ಚಿಡುವುದರಿಂದ ಅದರ ನೈಸರ್ಗಿಕ ಸುವಾಸನೆಯನ್ನು ಸ್ವಲ್ಪ ಸಮಯದವರೆಗೆ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ಅಲ್ಯೂಮಿನಿಯಂ ಫಾಯಿಲ್ ಬಳಸಲು ಇಷ್ಟವಿಲ್ಲದಿದ್ದರೆ, ಗಾಳಿಯಾಡದ ಆಹಾರ ಸಂಗ್ರಹಿಸುವ ಪಾತ್ರೆಯಲ್ಲಿ ಅರ್ಧ ನಿಂಬೆಯನ್ನು ಇಟ್ಟು ಮುಚ್ಚಳವನ್ನು ಬಿಗಿಯಾಗಿ ಹಾಕಬಹುದು. ಇದು ಕೂಡ ನಿಂಬೆ ತಾಜಾ ಇರುವಂತೆ ಮಾಡುತ್ತದೆ. ಮರುಬಳಕೆ ಮಾಡಬಹುದಾದ ಸಿಲಿಕೋನ್ ಫುಡ್ ಕವರ್ಗಳನ್ನೂ ಕೂಡ ನೀವು ಬಳಸಬಹುದು. ಫಾಯಿಲ್ನಲ್ಲಿ ಸುತ್ತಿದ ನಿಂಬೆ ಯಾವಾಗಲೂ ತಾಜಾವಾಗಿರುತ್ತದೆ ಎಂದಲ್ಲ. ಕತ್ತರಿಸಿದ ನಿಂಬೆಯನ್ನು ಸಾಧ್ಯವಾದಷ್ಟು ಬೇಗ ಬಳಸಿ ಮತ್ತು ಯಾವಾಗಲೂ ಫ್ರಿಡ್ಜ್ ನಲ್ಲಿ ಸಂಗ್ರಹಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.