
ಮಾಡೋ ಸಾಂಬಾರ್ ಗೆ ಕರಿಬೇವಿ (Curry leaves)ನ ಒಗ್ಗರಣೆ ಹಾಕಿದ್ರೆ ರುಚಿ ಡಬಲ್ ಆಗುತ್ತೆ. ಪಾನಿಪುರಿ ಪಾನಿಗೆ ಪುದೀನಾ (mint) ಇದ್ರೆನೇ ಮಜಾ. ಇನ್ನು ಎಲ್ಲ ಮಸಾಲೆ ಆಹಾರಗಳನ್ನು ಕೊತ್ತಂಬರಿ (Coriander) ಸೊಪ್ಪಿಲ್ಲದೆ ಅಲಂಕಾರ ಮಾಡೋದು ಹೇಗೆ? ಮನೆಯಲ್ಲಿ ಕೊತ್ತಂಬರಿ ಸೊಪ್ಪಿಲ್ಲ, ಕರಿಬೇವಿಲ್ಲ ಅಂದ್ರೆ ಮಾರ್ಕೆಟ್ ಗೆ ಓಡ್ತೇವೆ. ಸೂಪರ್ ಮಾರ್ಕೆಟ್ ನಲ್ಲಿ ಪ್ಲಾಸ್ಟಿಕ್ ಕವರ್ ಸುತ್ತಿರುವ ಸೊಪ್ಪುಗಳನ್ನು ಮನೆಗೆ ತಂದು, ತುಂಬಾ ದಿನ ಹೇಗೆ ಇಡೋದು ಎನ್ನುವ ಟಿಪ್ಸ್ ಸರ್ಚ್ ಮಾಡ್ತೇವೆ. ಹಿಂದೆ ಈ ಎಲ್ಲ ಸೊಪ್ಪುಗಳನ್ನು ಮನೆಯಂಗಳದಲ್ಲಿ ಬೆಳೀತಾ ಇದ್ರು. ಕೆಮಿಕಲ್ ಇಲ್ದೆ, ಈಗ್ಲೂ ನೀವು ನಿಮ್ಮ ಟೆರೆಸ್ ಗಾರ್ಡನ್, ಬಾಲ್ಕನಿಯಲ್ಲಿ ಬೆಳೆಯಬಹುದು.
ಕರಿಬೇವು : ಕರಿಬೇವಿಗೆ ಬಿಸಿಲಿನ ಅಗತ್ಯ ಹೆಚ್ಚಿರುತ್ತದೆ. ಒಂದು ಪಾಟ್ ಗೆ ಮಣ್ಣನ್ನು ತುಂಬಿ, ಅದಕ್ಕೆ ಕರಿಬೇವಿನ ಬೀಜವನ್ನು ಹಾಕಿ. ಪ್ರತಿ ದಿನ ನೀರನ್ನು ಹಾಕ್ತಾ ಬನ್ನಿ. ಅದಕ್ಕೆ ಹೆಚ್ಚು ನೀರಿನ ಅಗತ್ಯವಿರೋದಿಲ್ಲ. ಆದ್ರೆ ಬಿಸಿಲು ಅಗತ್ಯವಿರುವ ಕಾರಣ ಆರು ಗಂಟೆಗಳ ಕಾಲ ಪಾಟನ್ನು ಬಿಸಿಲಿನಲ್ಲಿಡಿ. ಗಿಡ ದೊಡ್ಡದಾಗಿ ಬೆಳೆಯುತ್ತಿದ್ದಂತೆ ಅದನ್ನು ಅಲ್ಲಲ್ಲಿ ಕತ್ತರಿಸುತ್ತಿರಿ. ಹಾಗೆಯೇ ಮಣ್ಣಿಗೆ ಅಗತ್ಯ ಗೊಬ್ಬರ ಸೇರಿಸುತ್ತಿರಿ. ಗಿಡ ದೊಡ್ಡದಾಗ್ತಿದ್ದರೆ ಅದಕ್ಕೆ ತಕ್ಕಂತೆ ನೀವು ಪಾಟ್ ಬದಲಿಸಬೇಕು.
ಪುದೀನಾ : ಪುದೀನಾ ಬಹಳ ಬೇಗನೆ ಬೆಳೆಯುತ್ತದೆ. ಹಾಗಾಗಿ ಸಣ್ಣ ಪಾಟ್ ನಲ್ಲಿ ಇದನ್ನು ಬೆಳೆಯಬೇಡಿ. ಕನಿಷ್ಠ 6-8 ಇಂಚು ಅಗಲವಾದ ಬಾಯಿಯನ್ನು ಹೊಂದಿರುವ ಪಾಟ್ ಆಯ್ಕೆ ಮಾಡಿಕೊಳ್ಳಿ. ಪುದೀನಾಕ್ಕೆ ತೇವಾಂಶವುಳ್ಳ ಮಣ್ಣು ಮತ್ತು ಭಾಗಶಃ ಸೂರ್ಯನ ಬೆಳಕಿನ ಅಗತ್ಯವಿರುತ್ತದೆ. 4-6 ಇಂಚು ಉದ್ದದ ಪುದೀನಾ ಗಿಡ ತೆಗೆದುಕೊಂಡು ಕೆಳಗಿನ ಎಲೆಗಳನ್ನು ಮುರಿದು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಇಡಿ. ನಂತ್ರ ಅದನ್ನು ಕುಂಡದ ಮಣ್ಣಿನಲ್ಲಿ ಸುಮಾರು 2 ಇಂಚು ಆಳದಲ್ಲಿ ನೆಡಬೇಕು. ಅದನ್ನು ಲಘುವಾಗಿ ಒತ್ತಿರಿ. ಬೀಜಗಳಿಂದ ಪುದೀನಾ ನೆಡುತ್ತಿದ್ದರೆ, ಬೀಜಗಳನ್ನು ಮಣ್ಣಿನ ಮೇಲ್ಮೈಯಲ್ಲಿ ಹಾಕಿ, ಸ್ವಲ್ಪ ಮಣ್ಣನ್ನು ಮುಚ್ಚಿ.
ಕೊತ್ತಂಬರಿ : ಉತ್ತಮ ಹೈಬ್ರಿಡ್ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಿ. ಮೊದಲು ಬೀಜವನ್ನು ಸೂರ್ಯನ ಕಿರಣದಲ್ಲಿ ಒಣಗಿಸಿ. ನಂತ್ರ ಅದನ್ನು ಎರಡು ಭಾಗ ಮಾಡಿ. ಕೊತ್ತಂಬರಿ ಬೀಜ ಪುಡಿಯಾಗಬಾರದು. ಎರಡು ಭಾಗವಾಗಬೇಕು. ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿ, ಬೂದಿ ಅಥವಾ ಮರಳಿನಲ್ಲಿ ಮುಚ್ಚಿಡಿ. ಪ್ರತಿ ದಿನ ಅದಕ್ಕೆ ನೀರು ಹಾಕ್ತಿರಿ. ಮೂರು ದಿನಗಳ ನಂತ್ರ, ಮಣ್ಣು ಹಾಗೂ ಹಸುವಿನ ಗೊಬ್ಬರವನ್ನು ಹಾಕಿ ಪಾಟ್ ಸಿದ್ಧಪಡಿಸಿಕೊಳ್ಳಿ. ಮೊಳಕೆಯೊಡೆದ ಕೊತ್ತಂಬರಿ ಬೀಜವನ್ನು ಅದ್ರಲ್ಲಿ ಹರಡಿ. ಮಣ್ಣನ್ನು ಮುಚ್ಚಿ. ಪ್ರತಿ ದಿನ ನೀರನ್ನು ಸ್ಪ್ರೇ ಮಾಡಿ.
ಮೆಂತ್ಯ ಸೊಪ್ಪು : ಮೆಂತ್ಯ ಸೊಪ್ಪನ್ನು ಪಾಟ್, ಪಾತ್ರೆ ಅಥವಾ ಗ್ರೋ ಬ್ಯಾಗ್ಗಳಲ್ಲಿ ಸುಲಭವಾಗಿ ಬೆಳೆಸಬಹುದು. ಒಂದು ಪಾಟ್ ಗೆ ಗೊಬ್ಬರ ಮಿಶ್ರಿತ ಮಣ್ಣನ್ನು ಹಾಕಿ. ಮೆಂತ್ಯ ಬೀಜವನ್ನು ಇಡೀ ರಾತ್ರಿ ನೆನೆಹಾಕಿ. ನಂತ್ರ ಅದನ್ನು ಪಾಟ್ ಗೆ ಹಾಕಿ, ಸ್ವಲ್ಪ ಮಣ್ಣು ಮುಚ್ಚಿ. ಪ್ರತಿನಿತ್ಯ ನೀರು ಹಾಕ್ತಿದ್ದರೆ ಕೆಲವೇ ದಿನಗಳಲ್ಲಿ ಮೆಂತ್ಯ ಸೊಪ್ಪು ನಿಮ್ಮಗೆ ಸಿಗಲಿದೆ.
ಮೆಣಸಿನಕಾಯಿ : ಹಸಿರು ಮೆಣಸಿನ ಕಾಯಿ, ಆಹಾರದ ರುಚಿ ಹೆಚ್ಚಿಸುತ್ತದೆ. ಇದನ್ನೂ ನೀವು ಪಾಟ್ ನಲ್ಲಿ ಸುಲಭವಾಗಿ ಬೆಳೆಯಬಹುದು. ಒಂದು ಪಾಟ್ ಗೆ ಮಣ್ಣನ್ನು ಹಾಕಿ, ಮೆಣಸಿನಕಾಯಿ ಬೀಜಗಳನ್ನು ಹರಡಿ, ಮಣ್ಣನ್ನು ಮುಚ್ಚಬೇಕು. ನಿಯಮಿತವಾಗಿ ನೀರನ್ನು ಹಾಕ್ತಿರಬೇಕು. ಗಿಡ ದೊಡ್ಡದಾದಂತೆ ಅದಕ್ಕೆ ಕೋಲಿನ ಆಸರೆ ನೀಡಬೇಕು. ಮಜ್ಜಿಗೆ ಅಥವಾ ಮೊಸರನ್ನು ಹಾಕ್ತಿದ್ದರೆ ಗಿಡದಲ್ಲಿ ಬೇಗ ಕಾಯಿ ನೋಡ್ಬಹುದು. 10 ಲೀಟರ್ ನೀರಿಗೆ 500 ಗ್ರಾಂ ಹಳೆಯ ಹುಳಿ ಮೊಸರು ಅಥವಾ 5-7 ದಿನಗಳ ಹಳೆಯ ಮಜ್ಜಿಗೆಯನ್ನು ಸೇರಿಸಿ. ಗಿಡದ ಬೇರಿಗೆ ಹಾಕಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.